
ಬೆಂಗಳೂರು: ರಾಜ್ಯ ಸರ್ಕಾರ ಬೆಂಗಳೂರಿನ ಸರ್ಕಾರಿ ಶಾಲೆಗಳ ಸಮಯ (ವೇಳಾಪಟ್ಟಿ) ಪರಿಷ್ಕರಿಸುವ ಸಾಧ್ಯತೆಗಳಿವೆ. ಶಾಲೆಗಳ ಆರಂಭ ಮತ್ತು ಮುಕ್ತಾಯದ ಸಮಯವನ್ನು ಪರಿಷ್ಕರಣೆ ಮಾಡುವಂತೆ ಶಿಕ್ಷಣ ಸಚಿವರ ಮಧು ಬಂಗಾರಪ್ಪ ಅವರಿಗೆ ಶಿಕ್ಷಕರು ಮನವಿ ಮಾಡಿಕೊಂಡಿದ್ದರು. ಮನವಿ ಸ್ಪೀಕರಿಸಿರುವ ಶಿಕ್ಷಣ ಸಚಿವರು, ಈ ವಿಷಯದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸೋದಾಗಿ ಭರವಸೆಯನ್ನು ನೀಡಿದ್ದಾರೆ.
ಬೆಂಗಳೂರಿನ ಟ್ರಾಫಿಕ್‌ನಿಂದ ಶಾಲೆಗೆ ನಿಗಧಿತ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಶಾಲೆಯ ಸಮಯದಲ್ಲಿ ಬದಲಾವಣೆಯಾದ್ರೆ ಸೂಕ್ತ ಎಂದು ಸರ್ಕಾರಿ ಶಾಲೆ ಶಿಕ್ಷಕರು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಸರ್ಕಾರಿ ಶಾಲೆಗಳು ಬೆಳಗ್ಗೆ 10.30ಕ್ಕೆ ಆರಂಭವಾಗಿ ಸಂಜೆ 4.30ಕ್ಕೆ ಕೊನೆಯಾಗುತ್ತವೆ. ಆದ್ರೆ ಖಾಸಗಿ ಶಾಲೆಗಳು ಬೆಳಗ್ಗೆ 8.45 ರಿಂದ ಮಧ್ಯಾಹ್ನ 3.45ರವರೆಗೆ ಕಾರ್ಯನಿರ್ವಹಿಸುತ್ತವೆ.
ಸರ್ಕಾರಿ ಶಾಲೆಗಳು 10.30ಕ್ಕೆ ಆರಂಭವಾಗುವ ಕಾರಣ ಎಲ್ಲಾ ದಿನಗಳಲ್ಲಿಯೂ ಬೆಂಗಳೂರಿನ ಟ್ರಾಫಿಕ್ ಎದುರಿಸಬೇಕಾಗುತ್ತದೆ. ಕೆಲ ಶಿಕ್ಷಕರಂತೂ ಬೆಳಗ್ಗೆ ಮತ್ತು ಸಜೆ ಸೇರಿ ದಿನಕ್ಕೆ ಎರಡೂವರೆಯಿಂದ ಮೂರು ಗಂಟೆಯಷ್ಟು ಸಮಯವನ್ನು ಟ್ರಾಫಿಕ್‌ನಲ್ಲಿ ಕಳೆಯುವಂತಾಗಿದೆ. ಟ್ರಾಫಿಕ್‌ನಿಂದ ಬೆಳಗ್ಗೆ ಕನಿಷ್ಠ ಒಂದೂವರೆ ಗಂಟೆ ಮುಂಚೆಯೇ ಮನೆಯಿಂದ ಹೊರಡಬೇಕಾಗುತ್ತದೆ ಎಂದು ಶಿಕ್ಷಕರೊಬ್ಬರು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.
ಈಗಿನ ವೇಳಾಪಟ್ಟಿ ತರಗತಿಗಳ ಮೇಲೆಯೂ ಪರಿಣಾಮ ಬೀರುತ್ತಿದೆ ಎಂದು ಶಿಕ್ಷಕರು ಹೇಳುತ್ತಾರೆ. ಮಕ್ಕಳಿಗೆ ಹಾಲು, ಮೊಟ್ಟೆ ಮತ್ತು ಬಿಸಿಯೂಟ ವಿತರಣೆ ಮಾಡಲು ಕನಿಷ್ಠ 1 ಗಂಟೆ ಬೇಕಾಗುತ್ತದೆ. ಬೆಂಗಳೂರಿನ ಶಾಲೆಗಳಿಗೆ ಬೆಳಗ್ಗೆ 8.30 ರಿಂದ ಮಧ್ಯಾಹ್ನ3.30 ಸೂಕ್ತ ಸಮಯವಾಗಿದೆ. ಟ್ರಾಫಿಕ್ ಹೆಚ್ಚಾಗುವ ಮುನ್ನವೇ ಮಕ್ಕಳು ಸಹ ಮನೆ ಸೇರಿಕೊಳ್ಳುತ್ತಾರೆ ಎಂದು ಮತ್ತೋರ್ವ ಶಿಕ್ಷಕರು ಹೇಳುತ್ತಾರೆ.
ಈ ನಡುವೆ ಖಾಸಗಿ ಶಾಲೆಗಳ ಸಿಬ್ಬಂದಿಯನ್ನು ರಾಜ್ಯ ಸರ್ಕಾರ ನೀಡುವ ಅತ್ಯುತ್ತಮ ಪ್ರಶಸ್ತಿಗೆ ಪರಿಗಣಿಸಬೇಕು ಎಂಬ ಬೇಡಿಕೆ ಇದೆ. ಈ ಸಂಬಂಧ ಸರ್ಕಾರಮಟ್ಟದಲ್ಲಿ ಚರ್ಚೆ ನಡೆಸಲಾಗುವುದು. ಈ ಕುರಿತು ಶೀಘ್ರದಲ್ಲಿಯೇ ತೀರ್ಮಾನ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಈ ರಸ್ತೆಯಲ್ಲಿ ಓಡಾಡೋಕೆ ಆಗ್ತಾನೇ ಇಲ್ಲ ಸ್ವಾಮಿ! ದುರಸ್ತಿ ಮಾಡುವಂತೆ ಪಿಎಂ ಮೋದಿಗೆ ಪತ್ರ