ರಾಜ್ಯದಲ್ಲಿ ಮತ್ತೆ ವರುಣಾರ್ಭಟ: ಬೆಂಗಳೂರಿಗೆ ಎಲ್ಲೋ ಅಲರ್ಟ್, 3 ದಿನ ಜೋರು ಮಳೆ, ಅಕ್ಟೋಬರ್ 15ರವರೆಗೆ ಮುಂದುವರಿಕೆ!

Published : Sep 29, 2026, 11:24 AM IST
Rain

ಸಾರಾಂಶ

ಭಾರತೀಯ ಹವಾಮಾನ ಇಲಾಖೆಯು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 1 ರವರೆಗೆ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ನೆಚ್ಚರಿಕೆ ನೀಡಿದ್ದು, 'ಎಲ್ಲೋ ಅಲರ್ಟ್' ಘೋಷಿಸಿದೆ. ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತ ಹಾಗೂ ತೇವಾಂಶಭರಿತ ಗಾಳಿಯ ಪ್ರಭಾವದಿಂದ ಅಕ್ಟೋಬರ್ 6ರವರೆಗೆ ಮಳೆ ಮುಂದುವರಿಯಲಿದ್ದು, ಅಕ್ಟೋಬರ್ 15ರ ಸುಮಾರಿಗೆ ಮುಂಗಾರು ಸಂಪೂರ್ಣ ನಿರ್ಗಮಿಸುವ ಸಾಧ್ಯತೆಯಿದೆ.

ಬೆಂಗಳೂರು: ಭಾರತೀಯ ಹವಾಮಾನ ಇಲಾಖೆ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 1 ರವರೆಗೆ ಕರ್ನಾಟಕದ ದಕ್ಷಿಣ ಒಳನಾಡು ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಮುನ್ನೆಚ್ಚರಿಕೆ ನೀಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಿಗೆ ಇಲಾಖೆಯು 'ಎಲ್ಲೋ ಅಲರ್ಟ್' ಘೋಷಿಸಿದೆ.

ಕೇರಳ, ತಮಿಳುನಾಡು, ಪುದುಚೇರಿ, ಕಾರೈಕಲ್, ಅಂಡಮಾನ್-ನಿಕೋಬಾರ್ ದ್ವೀಪಗಳು ಹಾಗೂ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾಗಳಲ್ಲೂ ಸೆಪ್ಟೆಂಬರ್ 29 ರಂದು ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಮತ್ತು ಚಂಡಮಾರುತದ ಎಚ್ಚರಿಕೆ

ಐಎಂಡಿ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ, ಉತ್ತರ ಅಂಡಮಾನ್ ಸಮುದ್ರ ಮತ್ತು ಕಯಿಕ್ಕೆ ಬಳಿಯ ಮ್ಯಾನ್ಮಾರ್ ಕರಾವಳಿಯಲ್ಲಿ ಸೃಷ್ಟಿಯಾಗಿದ್ದ ಆಳವಾದ ವಾಯುಭಾರ ಕುಸಿತವು ಕರಾವಳಿ ದಾಟಿದೆ. ಮುಂದಿನ ಎರಡು ದಿನಗಳಲ್ಲಿ ಇದು ವಾಯುವ್ಯ ದಿಕ್ಕಿನಲ್ಲಿ ಬಾಂಗ್ಲಾದೇಶದ ಕಡೆಗೆ ಚಲಿಸಲಿದೆ. ಪರಿಣಾಮವಾಗಿ ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶ ಕರಾವಳಿಯಲ್ಲಿ ಗಂಟೆಗೆ 45 ರಿಂದ 65 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಮೀನುಗಾರರು ಈಶಾನ್ಯ ಬಂಗಾಳಕೊಲ್ಲಿ ಮತ್ತು ಬಾಂಗ್ಲಾದೇಶ ಕರಾವಳಿಗೆ ತೆರಳದಂತೆ ಸೂಚಿಸಲಾಗಿದೆ.

ಕರ್ನಾಟಕದಲ್ಲಿ ಹವಾಮಾನ ಸ್ಥಿತಿಗತಿ

ನೈಋತ್ಯ ಮಾನ್ಸೂನ್ (ಮುಂಗಾರು) ರಾಜ್ಯದಿಂದ ಕ್ರಮೇಣ ಹಿಂದಕ್ಕೆ ಸರಿಯುವ ಪ್ರಕ್ರಿಯೆ ಆರಂಭವಾಗಿದ್ದರೂ, ಅರಬ್ಬಿ ಸಮುದ್ರದಿಂದ ಶ್ರೀಲಂಕಾ ಮತ್ತು ತಮಿಳುನಾಡಿನ ಕರಾವಳಿಯ ಮೂಲಕ ಬರುವ ತೇವಾಂಶಭರಿತ ಗಾಳಿಯ ಪ್ರಭಾವದಿಂದ ರಾಜ್ಯದ ಹಲವೆಡೆ ಮಳೆ ಮುಂದುವರಿಯಲಿದೆ.

ಬೆಂಗಳೂರು, ತುಮಕೂರು, ಪಾವಗಡ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ಗುಡುಗು, ಮಿಂಚು ಮತ್ತು ಗಂಟೆಗೆ 30 ರಿಂದ 40 ಕಿ.ಮೀ వేಗದಲ್ಲಿ ಗಾಳಿ ಸಹಿತ ಭಾರೀ ಮಳೆಯಾಗಲಿದೆ. ಈ ಭಾಗಗಳಲ್ಲಿ ಅಕ್ಟೋಬರ್ 6 ರವರೆಗೆ ಮಳೆಯ ವಾತಾವರಣ ಮುಂದುವರಿಯುವ ನಿರೀಕ್ಷೆಯಿದೆ.

ಕರಾವಳಿ ಮತ್ತು ಮಲೆನಾಡು ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಕಾಸರಗೋಡು ಸೇರಿ ಹಗಲಿನಲ್ಲಿ ಶುಷ್ಕ ವಾತಾವರಣವಿದ್ದರೂ, ಸಂಜೆಯ ವೇಳೆಗೆ ಘಟ್ಟ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಕೊಡಗು, ಸಕಲೇಶಪುರ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಂಜೆ ವೇಳೆಗೆ ಗುಡುಗು ಸಹಿತ ಚದುರಿದ ಮಳೆಯಾಗಬಹುದು.

ಉತ್ತರ ಒಳನಾಡು ಪ್ರದೇಶಗಳಾದ ಹಾವೇರಿ, ಧಾರವಾಡ, ಬಳ್ಳಾರಿ ಮತ್ತು ಉತ್ತರ ಕನ್ನಡ ಹಾಗೂ ಶಿವಮೊಗ್ಗದ ಗಡಿ ಪ್ರದೇಶಗಳಲ್ಲಿ ಸಂಜೆ ವೇಳೆ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.

ಮಾನ್ಸೂನ್ ನಿರ್ಗಮನ ಯಾವಾಗ?

ಅರಬ್ಬಿ ಸಮುದ್ರದ ತೇವಾಂಶದ ಕಾರಣದಿಂದಾಗಿ ಅಕ್ಟೋಬರ್ 6 ರವರೆಗೆ ಹಲವು ಭಾಗಗಳಲ್ಲಿ ಮಳೆಯಾಗಲಿದೆ. ಅಕ್ಟೋಬರ್ 15 ರ ಸುಮಾರಿಗೆ ನೈಋತ್ಯ ಮಾನ್ಸೂನ್ ಕರ್ನಾಟಕದಿಂದ ಸಂಪೂರ್ಣವಾಗಿ ನಿರ್ಗಮಿಸುವ ಸಾಧ್ಯತೆಯಿದೆ.

ಸಾರ್ವಜನಿಕರಿಗೆ ಮತ್ತು ರೈತರಿಗೆ ಎಚ್ಚರಿಕೆ ಕರೆ

ಸಂಜೆಯ ಸಮಯದಲ್ಲಿ ಗುಡುಗು ಮತ್ತು ಮಿಂಚಿನ ತೀವ್ರತೆ ಹೆಚ್ಚಿರಲಿದ್ದು, ಸಾರ್ವಜನಿಕರು ಮತ್ತು ರೈತರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಮಳೆಯ ಸಮಯದಲ್ಲಿ ತೆರೆದ ಪ್ರದೇಶಗಳಲ್ಲಿ ನಿಲ್ಲದೆ ಸುರಕ್ಷಿತ ಕಟ್ಟಡಗಳಲ್ಲಿ ಆಶ್ರಯ ಪಡೆಯಲು ಹಾಗೂ ಹೊಲಗಳಲ್ಲಿ ಕೆಲಸ ಮಾಡುವಾಗ ಮಿಂಚು, ಗುಡುಗು ಅಪಾಯದ ಕುರಿತು ಎಚ್ಚರದಿಂದಿರಲು ಹವಾಮಾನ ಇಲಾಖೆ ಸೂಚಿಸಿದೆ.

PREV
Read more Articles on
click me!

Recommended Stories

Bengaluru: ಮರದ ಕೊಂಬೆ ಬಿದ್ದು ಗಾಯಗೊಂಡ ವ್ಯಕ್ತಿಗೆ ₹2.77 ಕೋಟಿ ಪರಿಹಾರ, GBAಗೆ ಹೈಕೋರ್ಟ್ ಆದೇಶ
AC ಆಫೀಸ್‌ ಬಿಟ್ಟು ಆಟೋ ಸ್ಟೇರಿಂಗ್ ಹಿಡಿದಿದ್ದೇಕೆ ಸಾಫ್ಟ್‌ವೇರ್ ಎಂಜಿನಿಯರ್? ಕಾರಣ ಕೇಳಿದ್ರೆ ಮನಸ್ಸು ಭಾರವಾಗುತ್ತೆ!