ಹಾಕಿ ದಂತಕಥೆ ಎಂ.ಎಂ.ಸೋಮಯ್ಯ ಬೆಂಗಳೂರು ಮನೆಗೆ ಕನ್ನ, 1980ರ ಒಲಿಂಪಿಕ್ಸ್ ಚಿನ್ನದ ಪದಕವೇ ಕಳವು!

Published : Nov 04, 2026, 04:49 PM IST
mm somaya

ಸಾರಾಂಶ

ಭಾರತೀಯ ಹಾಕಿ ದಂತಕಥೆ ಎಂ.ಎಂ. ಸೋಮಯ್ಯ ಅವರ ಬೆಂಗಳೂರಿನ ಮನೆಯಲ್ಲಿ ಭಾರಿ ಕಳ್ಳತನವಾಗಿದೆ. ಅವರು ಕುಟುಂಬ ಸಮೇತ ಕೊಡಗಿಗೆ ತೆರಳಿದ್ದಾಗ ಕಳ್ಳರು ಒಲಿಂಪಿಕ್ಸ್ ಚಿನ್ನದ ಪದಕ ಸೇರಿದಂತೆ ಹಲವು ಐತಿಹಾಸಿಕ ಪದಕಗಳು ಮತ್ತು ಚಿನ್ನಾಭರಣಗಳನ್ನು ದೋಚಿದ್ದಾರೆ. ಇಂದಿರಾನಗರ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.

ಭಾರತೀಯ ಹಾಕಿ ದಂತಕಥೆ, 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಹಿರಿಮೆಗೆ ಪಾತ್ರರಾಗಿದ್ದ ಕರ್ನಾಟಕದ ಹೆಮ್ಮೆಯ ಪುತ್ರ, ಮಾಜಿ ನಾಯಕ ಎಂ.ಎಂ. ಸೋಮಯ್ಯ ಅವರ ಬೆಂಗಳೂರಿನ ಮನೆಯಲ್ಲಿ ಭಾರಿ ಕಳ್ಳತನವಾಗಿದೆ. ಕುಟುಂಬ ಸಮೇತರಾಗಿ ಹುಟ್ಟೂರಾದ ಕೊಡಗಿಗೆ ತೆರಳಿದ್ದ ಸಂದರ್ಭ ದಲ್ಲಿ ಸೋಮಯ್ಯ ಅವರ ಅಂತರರಾಷ್ಟ್ರೀಯ ಕ್ರೀಡಾ ವೃತ್ತಿಜೀವನದ ಬೆಲೆಕಟ್ಟಲಾಗದ ಐತಿಹಾಸಿಕ ಪದಕಗಳು, ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಸೋಮಯ್ಯ ಅವರ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ತಿಪ್ಪಸಂದ್ರದಲ್ಲಿರುವ ನಿವಾಸದಲ್ಲಿ ಘಟನೆ ನಡೆದಿದ್ದು, ಕ್ರೀಡಾಲೋಕ ಮತ್ತು ಸಾರ್ವಜನಿಕರಲ್ಲಿ ತೀವ್ರ ಬೇಸರ ಮೂಡಿಸಿದೆ.

ಅಕ್ಟೋಬರ್ 25 ರಂದು ಸಂಜೆ 5 ಗಂಟೆಯ ಸುಮಾರಿಗೆ ಎಂ.ಎಂ. ಸೋಮಯ್ಯ ಮತ್ತು ಅವರ ಕುಟುಂಬದವರು ತಮ್ಮ ನಿವಾಸಕ್ಕೆ ಬೀಗ ಹಾಕಿ ಕೊಡಗಿಗೆ ಪ್ರಯಾಣ ಬೆಳೆಸಿದ್ದರು. ಅಕ್ಟೋಬರ್ 28 ರಂದು ಬೆಳಿಗ್ಗೆ ಪಕ್ಕದ ಮನೆಯ ನಿವಾಸಿ ನಾರಾಯಣ್ ಅವರು ನೋಡಿದಾಗ ಸೋಮಯ್ಯ ಅವರ ಮನೆಯ ಮುಖ್ಯದ್ವಾರದ ಬೀಗ ಒಡೆದು ಬಾಗಿಲು ತೆರೆದಿರುವುದು ಕಂಡುಬಂದಿದೆ. ಸಂಶಯಗೊಂಡು ಒಳಹೋಗಿ ಪರಿಶೀಲಿಸಿದಾಗ, ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು ಬೀರುಗಳು ತೆರೆದುಕೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಅವರು ಕೊಡಗಿನಲ್ಲಿದ್ದ ಸೋಮಯ್ಯ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ಅಕ್ಟೋಬರ್ 28 ರಂದೇ ಬೆಂಗಳೂರಿಗೆ ಹಿಂತಿರುಗಿದ ಸೋಮಯ್ಯ ಕುಟುಂಬಸ್ಥರು, ಮನೆಗೆ ಕನ್ನ ಬಿದ್ದಿರುವುದನ್ನು ಖಚಿತಪಡಿಸಿಕೊಂಡು ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಳವಾದ ಐತಿಹಾಸಿಕ ಪದಕಗಳು:

ಕಳ್ಳರು ಸೋಮಯ್ಯ ಅವರ ಕ್ರೀಡಾ ಜೀವನದ ಅಮೂಲ್ಯ ನೆನಪುಗಳಾಗಿದ್ದ ಬಹುತೇಕ ಎಲ್ಲಾ ಪ್ರಮುಖ ಪದಕಗಳನ್ನು ಎಗರಿಸಿದ್ದಾರೆ.

1980ರ ಮಾಸ್ಕೋ ಒಲಿಂಪಿಕ್ಸ್ ಭಾರತಕ್ಕೆ ಲಭಿಸಿದ ಐತಿಹಾಸಿಕ ಚಿನ್ನದ ಪದಕ, 1982ರ ನವದೆಹಲಿ ಏಷ್ಯನ್ ಗೇಮ್ಸ್ ಸಿಕ್ಕ ಬೆಳ್ಳಿ ಪದಕ, 1986ರ ಸಿಯೋಲ್ ಏಷ್ಯನ್ ಗೇಮ್ಸ್ ಸಿಕ್ಕ ಕಂಚಿನ ಪದಕ. 1982ರ ಆಮ್ಸ್‌ಟರ್‌ಡ್ಯಾಮ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಂಚಿನ ಪದಕ.

ಇವುಗಳ ಜೊತೆಗೆ ಮನೆಯಲ್ಲಿದ್ದ ಚಿನ್ನದ ನಾಣ್ಯಗಳು, ಬಳೆಗಳು ಸೇರಿದಂತೆ ಚಿನ್ನಾಭರಣ, ಬೆಳ್ಳಿ ಕಪ್‌, ಬೆಳ್ಳಿ ಚಮಚ ಹಾಗೂ ಪಾತ್ರೆಗಳು ಮತ್ತು ₹30,000 ನಗದು ಹಣವನ್ನು ಕದ್ದೊಯ್ಯಲಾಗಿದೆ. ಕಳವಾದ ಒಟ್ಟು ವಸ್ತುಗಳ ಮೌಲ್ಯ ಸುಮಾರು ₹4 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದ್ದರೂ, ಕಳುವಾಗಿರುವ ದೇಶದ ಹೆಮ್ಮೆಯ ಪದಕಗಳು ಕೋಟ್ಯಂತರ ರೂಪಾಯಿ ನೀಡಿದರೂ ಸಿಗದಷ್ಟು ಅತ್ಯಮೂಲ್ಯವಾಗಿವೆ.

ಸಿಸಿಟಿವಿ ದೃಶ್ಯಾವಳಿ, ತನಿಖೆ:

ಘಟನೆ ಸಂಬಂಧ ಇಂದಿರಾನಗರ ಪೊಲೀಸರು ಅಪರಿಚಿತ ಇಬ್ಬರು ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಪರಿಶೀಲಿಸಿದಾಗ, ಮುಂಜಾನೆ 2:45 ರ ಸುಮಾರಿಗೆ ಇಬ್ಬರು ಕಳ್ಳರು ಮನೆಗೆ ನುಗ್ಗಿರುವುದು ಪತ್ತೆಯಾಗಿದೆ. ಕೃತ್ಯ ಎಸಗಿದವರ ಪೈಕಿ ಒಬ್ಬಾತ ಗಾಢ ನೀಲಿ ಹಾಗೂ ಮತ್ತೊಬ್ಬ ಕೆಂಪು ಬಣ್ಣದ ಟೀ-ಶರ್ಟ್ ಧರಿಸಿದ್ದ ಎಂಬುದು ತಿಳಿದುಬಂದಿದೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

PREV
Read more Articles on
click me!

Recommended Stories

Breaking: ದರ್ಶನ್‌ ವಿರುದ್ಧ ಮಾಫಿ ಸಾಕ್ಷಿ ನುಡಿದ ಪ್ರದೂಷ್‌ಗೆ ಕೋರ್ಟ್‌ ರಿಲೀಫ್‌, ತಂದೆಯ ಪಿತೃಕಾರ್ಯದಲ್ಲಿ ಭಾಗವಹಿಸಲು ಅನುಮತಿ
KSRTC ಬಡವರಿಗೆ ಇಲ್ಲದ ಹಾಗಾಯ್ತು, ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗಲು ಕರಾವಳಿಗರಿಗೆ ರೈಲ್ವೇಸ್‌ನಿಂದ ಸ್ಪೆಷಲ್‌ ಟ್ರೇನ್‌!