ಬೆಂಗಳೂರು ಅಭಿವೃದ್ಧಿಗೆ ₹11,198 ಕೋಟಿ ಮೀರದಂತೆ ಸಂಪುಟ ತೀರ್ಮಾನ, ₹2.321 ಕೋಟಿಯಲ್ಲಿ ವೈಟ್‌ಟಾಪಿಂಗ್‌ ಗೆ ಸಮ್ಮತಿ

Gowthami K   | Kannada Prabha
Published : Nov 20, 2026, 09:02 AM IST
White topping

ಸಾರಾಂಶ

ನಗರಾಭಿವೃದ್ಧಿಗೆ , ನಾಗರಿಕ ಸೌಲಭ್ಯಗಳ ಸುಧಾರಣೆಗೆ ಸಂಬಂಧಿಸಿದಂತೆ ₹11,198 ಕೋಟಿ ಮೀರದ ಮೊತ್ತದ ಯೋಜನೆಗಳನ್ನು ರೂಪಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಕರ್ನಾಟಕ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ. ಬೆಂಗಳೂರಿನಲ್ಲಿ ₹2,321 ಕೋಟಿ ವೆಚ್ಚದಲ್ಲಿ ವೈಟ್‌ಟಾಪಿಂಗ್‌ ರಸ್ತೆ ಕಾಮಗಾರಿ

ಬೆಂಗಳೂರು: ಕೇಂದ್ರ ಸರ್ಕಾರವು ರಾಜ್ಯದ ನಗರಾಭಿವೃದ್ಧಿಗೆ ಸಂಬಂಧಿಸಿದಂತೆ 11,198 ಕೋಟಿ ರು.ಗೆ ಮೀರದಂತೆ ವೆಚ್ಚ ಮಾಡಲು ಯೋಜನೆಗಳನ್ನು ಸಿದ್ಧಪಡಿಸಿ ಕಳುಹಿಸಲು ಸೂಚಿಸಿದ್ದು, ಇದರಂತೆ ಯೋಜನೆಗಳನ್ನು ಸಿದ್ಧಪಡಿಸಲು ಸಚಿವ ಸಂಪುಟ ತೀರ್ಮಾನಿಸಿದೆ.

ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ನ ನೆರವಿನ 2,300 ಕೋಟಿ ರು. ಸೇರಿದಂತೆ ಒಟ್ಟು 11,198 ಕೋಟಿ ರು. ಬಳಕೆಗೆ ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಈ ನಿಧಿಯಲ್ಲಿ ಯಾವ ರೀತಿಯ ಯೋಜನೆಗಳನ್ನು ಮಾಡುತ್ತೇವೆ ಎಂದು ವರದಿ ನೀಡಲು ಸಂಪುಟ ನಿರ್ಧಾರ ಮಾಡಿದೆ.

ಇದೇ ವೇಳೆ ಬೆಂಗಳೂರು ಪಶ್ಚಿಮ ನಗರ ಪಾಲಿಕೆ 71ನೇ ವಾರ್ಡ್‌ನಲ್ಲಿರುವ ಬಾಲಗಂಗಾಧರ ನಾಥ ಸ್ವಾಮೀಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಶಾಖೆ ಆರಂಭಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

2,321 ಕೋಟಿ ರು. ವೆಚ್ಚದಲ್ಲಿ ವೈಟ್‌ ಟ್ಯಾಪಿಂಗ್‌:

2,321.17 ಕೋಟಿ ರು. ಅಂದಾಜು ವೆಚ್ಚದಲ್ಲಿ 12 ಪ್ಯಾಕೇಜ್‌ಗಳಲ್ಲಿ 130.85 ಕಿ.ಮೀ. ಉದ್ದದ ವೈಟ್‌ ಟಾಪಿಂಗ್‌ ರಸ್ತೆ ಕಾಮಗಾರಿ ಮಾಡಲು ತೀರ್ಮಾನಿಸಲಾಗಿದೆ.

ಜತೆಗೆ ಬಿ-ಸ್ಮೈಲ್‌ ವತಿಯಿಂದ ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಿಂದ ಕೆ.ಆರ್‌.ಪುರಂ ಮೆಟ್ರೋ ನಿಲ್ದಾಣದವರೆಗೆ ಹೊರ ವರ್ತುಲ ರಸ್ತೆಯನ್ನು ಜಾಗತಿಕ ಮಟ್ಟದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿ ಪಡಿಸಲು 486.79 ಕೋಟಿ ರು. ವೆಚ್ಚದ ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಶೇ.50 ರಷ್ಟು ರಾಜ್ಯ ಸರ್ಕಾರ ಹಾಗೂ ಶೇ.50 ರಷ್ಟನ್ನು ಬೆಂಗಳೂರು ನಗರ ಪಾಲಿಕೆಗಳು ಭರಿಸಬೇಕು ಎಂದು ತಿಳಿಸಲಾಗಿದೆ.

1,379 ಕೋಟಿ ರು. ಪರಿಷ್ಕೃತ ಕಸದ ಟೆಂಡರ್‌ಗೆ ಒಪ್ಪಿಗೆ:

ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯ, ರಸ್ತೆ ಗುಡಿಸುವಿಕೆ, ತ್ಯಾಜ್ಯದ ಸಂಗ್ರಹಣೆ, ಪ್ರಾಥಮಿಕ ಸಾಗಾಣಿಕೆ ಮತ್ತು ದ್ವಿತೀಯ ಹಂತದ ಸಾಗಾಣಿಕೆ ಸೇವೆಯನ್ನು ಸಮರ್ಪಕವಾಗಿ ನಿರ್ವಹಿಸುವ ಸಲುವಾಗಿ 1,379 ಕೋಟಿ ರು. ಗಳ ಪರಿಷ್ಕೃತ ಆಂದಾಜು ವೆಚ್ಚದಲ್ಲಿ 10 ಪ್ಯಾಕೇಜ್‌ಗಳ ಟೆಂಡರ್‌ ನೀಡಲು ತೀರ್ಮಾನಿಸಲಾಗಿದೆ.

ಸ್ಟಾರ್‌ ಹೋಟೆಲ್‌ಗಳಿಗೆ ಆಸ್ತಿ ತೆರಿಗೆ ವಿನಾಯಿತಿ ಇಲ್ಲ:

ಗ್ರೇಟರ್‌ ಬೆಂಗಳೂರು ಪ್ರದೇಶದಲ್ಲಿ 5 ಬೆಂಗಳೂರು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಸ್ಟಾರ್‌ ವರ್ಗೀಕೃತ ಹೋಟೆಲ್‌ಗಳಿಗೆ ಆಸ್ತಿ ತೆರಿಗೆ ವಿನಾಯಿತಿ ಹಿಂಪಡೆಯಲು ತೀರ್ಮಾನಿಸಲಾಗಿದೆ.

2021 ರಿಂದ ಪೂರ್ವನಾನ್ವಯವಾಗುವಂತೆ ತೀರ್ಮಾನ ಮಾಡಿದ್ದು, ಇದರಿಂದ 42 ಸ್ಟಾರ್‌ ಹೋಟೆಲ್‌ಗಳಿಂದ ಬೆಂಗಳೂರು ನಗರ ಪಾಲಿಕೆಗಳಿಗೆ ಈಗಾಗಲೇ ಪಾವತಿಯಾಗಿರುವ 285 ಕೋಟಿ ರು. ಉಳಿತಾಯ ಆಗಲಿದೆ.

PREV
Read more Articles on
click me!

Recommended Stories

ಮತ್ತೆ ಶುರುವಾಯ್ತು HMT ಕ್ರೇಜ್: ‘ಕನ್ನಡಿಗ’ ವಾಚ್‌ಗೆ ಭಾರಿ ಡಿಮ್ಯಾಂಡ್, ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ನಿರ್ಧಾರ
ಬೆಂಗಳೂರಿನ ಐಷಾರಾಮಿ ಸಂಕೀರ್ಣ ಯುಬಿ ಸಿಟಿಯ 21 ಸ್ವತ್ತುಗಳಿಂದ ₹2.65 ಕೋಟಿ ತೆರಿಗೆ ವಸೂಲಿ