
ಬೆಂಗಳೂರು (ಜು.10): ಕಳೆದ ವರ್ಷ ಭಾರೀ ವಿವಾದಕ್ಕೆ ಕಾರಣವಾಗಿದ್ದ ಹುಂಡಿ ಹಣ ಕಳವು ಘಟನೆಯ ನಂತರ ಬೆಂಗಳೂರಿನ ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿರುವ ಐತಿಹಾಸಿಕ ಗಾಳಿ ಆಂಜನೇಯ ದೇವಸ್ಥಾನವನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡು ಆದೇಶ ಹೊರಡಿಸಿದೆ.
ಮುಜರಾಯಿ ಇಲಾಖೆ ಸುಪರ್ದಿಗೆ ಗಾಳಿ ಅಂಜನೇಯ ದೇವಸ್ಥಾನ ಬಂದಿದ್ದು, ಮುಜರಾಯಿ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಹುಂಡಿ ಹಣ ಎಣಿಸುವಾಗಲೇ ಆಡಳಿತ ಮಂಡಳಿಯ ಸದಸ್ಯರು ಹಣ ಎಗರಿಸಿದ್ದರು. ಈ ಬಗ್ಗೆ ಸಿಸಿ ಕ್ಯಾಮರಾದಲ್ಲಿ ಮಾಹಿತಿ ದಾಖಲಾಗಿತ್ತು. ಈ ಘಟನೆಯ ಬಗ್ಗೆ ವರದಿ ನೀಡುವಂತೆ ಸರ್ಕಾರ ಸೂಚನೆ ನೀಡಿತ್ತು. ಈ ಘಟನೆಯ ಬಗ್ಗೆ ಇತ್ತೀಚೆಗೆ ಮುಜರಾಯಿ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿತ್ತು.
ಇದರಲ್ಲಿ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ದೇವಸ್ಥಾನವನ್ನ ಮುಜರಾಯಿ ಇಲಾಖೆಗೆ ವರ್ಗಾವಣೆಗೆ ಶಿಫಾರಸು ಮಾಡಲಾಗಿತ್ತು. ಇದನ್ನು ಒಪ್ಪಿರುವ ರಾಜ್ಯ ಸರ್ಕಾರ 1997ರ 42 ಮತ್ತು 43ರನ್ವಯ ಘೋಷಿತ ಸಂಸ್ಥೆ ಎಂದು ಘೋಷಣೆ ಮಾಡಿದೆ.
ಏನಿದು ಘಟನೆ: ಕಳೆದ ವರ್ಷ ಅಕ್ಟೋಬರ್ ವೇಳೆ ವೈರಲ್ ಆಗಿದ್ದ ವಿಡಿಯೋದಲ್ಲಿ ಐತಿಹಾಸಿಕ ಗಾಳಿ ಆಂಜನೇಯ ದೇವಸ್ಥಾನದ ಹುಂಡಿ ಹಣ ಕಳವು ಮಾಡಿರುವ ಮಾಹಿತಿ ಗೊತ್ತಾಗಿತ್ತು. ಇದರ ಬೆನ್ನಲ್ಲಿಯೇ ಟ್ರಸ್ಟಿ ಹಾಗೂ ದೇವಸ್ಥಾನದ ಅರ್ಚಕರ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಅರ್ಚಕರು ಹಾಗೂ ಟ್ರಸ್ಟಿಗಳು ಹಣ ಕದ್ದಿರುವ ದೃಶ್ಯ ಸಿಸಿಟಿಟಿಯಲ್ಲಿ ದಾಖಲಾದ ಬಳಿಕ ದೇವಾಲಯದ ಭಕ್ತ ಮೋಹನ್ ಎನ್ನುವವರು ನೀಡಿದ ದೂರನ್ನು ಆಧರಿಸಿ ಟ್ರಸ್ಟಿಗಳಾಗಿದ್ದ ಹನುಮಂತಪ್ಪ, ನಾಗರಾಜ್, ಶ್ರೀನಿವಾಸ್ ರಾಮಾನುಜ, ಗೋಪಿನಾಥ್, ರಾಮಾನುಜ ಭಟ್ಟಾಚಾರ್ಯ ಮತ್ತು ಸುರೇಶ್ ಮತ್ತಿತರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿತ್ತು.
'1984ರಲ್ಲಿ ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ಟ್ರಸ್ಟ್ ರಚನೆಯಾಗಿತ್ತು. ಆರೋಪಿಗಳೆಲ್ಲರೂ ಟ್ರಸ್ಟಿಗಳಾಗಿದ್ದಾರೆ. ಭಕ್ತರಿಂದ ಬರುವ ದೇಣಿಗೆ ಹಣ ಹಾಗೂ ಬೆಳ್ಳಿ ಸಾಮಗ್ರಿಯನ್ನು ದೇವಾಲಯದ ಅಭಿವೃದ್ಧಿಗೆ ಬಳಸದೇ ಸ್ವಂತ ಲಾಭಕ್ಕಾಗಿ ಉಪಯೋಗಿಸಿಕೊಂಡು ದೇವಸ್ಥಾನದ ಪ್ರಗತಿಗೆ ನಷ್ಟ ಉಂಟು ಮಾಡಿದ್ದಾರೆ' ಎಂದು ಎಫ್‌ಐಆರ್‌ನಲ್ಲಿ ಮೋಹನ್ ಆರೋಪ ಮಾಡಿದ್ದರು.
ದೇವಸ್ಥಾನಕ್ಕೆ ಇತ್ತೀಚೆಗೆ ಕ್ಯೂರ್‌ಕೋಡ್ ಮೂಲಕ ಪಾವತಿ ಮಾಡುವ ಅವಕಾಶ ನೀಡಲಾಗಿತ್ತು. ಆದರೆ, ಈ ಕ್ಯೂ ಆರ್ ಕೋಡ್‌ಅನ್ನು ದವಸ್ಥಾನದ ಖಾತೆಗೆ ಲಿಂಕ್ ಮಾಡದೇ ಅರ್ಚಕರ ಖಾತೆಗಳಿಗೆ ಲಿಂಕ್ ಮಾಡಿಕೊಂಡು ಹಣವನ್ನು ಸ್ವಂತ ಬಳಕೆ ಮಾಡಿಕೊಂಡಿದ್ದಾರೆ. ಇದನ್ನು ಪ್ರರ್ಶನೆ ಮಾಡಿದರೆ ಕೊಲ್ಲುವ ಬೆದರಿಕೆ ಹಾಕಿದ್ದರು ಎಂದು ಮೋಹ್ ತಿಳಿಸಿದ್ದರು.