
ಬೆಂಗಳೂರು (ಜೂ.29): ಸಿಲಿಕಾನ್ ಸಿಟಿಯ ಪ್ರಮುಖ ವಾಕಿಂಗ್ ತಾಣಗಳಲ್ಲಿ ಒಂದಾದ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜು (Veterinary College, Hebbal) ಆವರಣಕ್ಕೆ ಬರುವ ಸಾರ್ವಜನಿಕರ ಪ್ರವೇಶಕ್ಕೆ ಕಾಲೇಜು ಆಡಳಿತ ಮಂಡಳಿಯು ಹೊಸದಾಗಿ ನಿಯಮ ರೂಪಿಸಿದೆ. ಇನ್ಮುಂದೆ ಈ ವಿಶಾಲವಾದ ಹಸಿರು ಕ್ಯಾಂಪಸ್‌ನಲ್ಲಿ ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡುವ ಸಾರ್ವಜನಿಕರು ಉಚಿತವಾಗಿ ಪ್ರವೇಶಿಸುವಂತಿಲ್ಲ. ಸಾರ್ವಜನಿಕರ ಅನಿಯಂತ್ರಿತ ಪ್ರವೇಶವನ್ನು ನಿಯಂತ್ರಿಸಲು ಮತ್ತು ಶಿಸ್ತು ತರಲು ಆಡಳಿತ ಮಂಡಳಿಯು ಇದೀಗ 'ಪೇಯ್ಡ್ ಪಾಸ್' (Paid Pass System) ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಹೊಸ ನಿಯಮಾವಳಿಗಳ ಪ್ರಕಾರ, ಕಾಲೇಜು ಆವರಣಕ್ಕೆ ಬರುವ ಪ್ರತಿಯೊಬ್ಬ ವ್ಯಕ್ತಿಯು ಒಂದು ವರ್ಷದ ಅವಧಿಗೆ 100 ರೂಪಾಯಿ ಪಾವತಿಸಿ ಕಡ್ಡಾಯವಾಗಿ ಪ್ರವೇಶ ಪಾಸನ್ನು ಪಡೆದುಕೊಳ್ಳಬೇಕಾಗುತ್ತದೆ. ಹೆಬ್ಬಾಳ ಮತ್ತು ಅದರ ಸುತ್ತಮುತ್ತಲಿನ ನಿವಾಸಿಗಳಿಗೆ, ಪರಿಸರ ಪ್ರೇಮಿಗಳಿಗೆ ಹಾಗೂ ಫಿಟ್‌ನೆಸ್ ಆಸಕ್ತರಿಗೆ ವರ್ಷಗಳಿಂದ ಈ ಕ್ಯಾಂಪಸ್ ಅತ್ಯಂತ ನೆಚ್ಚಿನ ಮಾರ್ನಿಂಗ್ ಹಾಗೂ ಇವಿನಿಂಗ್ ವಾಕ್ ತಾಣವಾಗಿತ್ತು. ಆದರೆ ಇನ್ಮುಂದೆ ಈ ಆವರಣವನ್ನು ಬಳಸಿಕೊಳ್ಳಲು ವಾರ್ಷಿಕ ಪಾಸ್ ಅತ್ಯಗತ್ಯವಾಗಿದೆ.
ಕಾಲೇಜು ಆಡಳಿತ ಮಂಡಳಿಯ ಪ್ರಕಾರ, ಕ್ಯಾಂಪಸ್‌ಗೆ ಸಾರ್ವಜನಿಕರು ಬರುವುದನ್ನು ಸಂಪೂರ್ಣವಾಗಿ ನಿಷೇಧಿಸುವ ಬದಲು ಅದನ್ನು ವ್ಯವಸ್ಥಿತಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ. ದಿನದಿಂದ ದಿನಕ್ಕೆ ಕ್ಯಾಂಪಸ್‌ಗೆ ಬರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಇದರಿಂದಾಗಿ ಆವರಣದ ಸ್ವಚ್ಛತೆ, ನಿರ್ವಹಣೆ ಮತ್ತು ಭದ್ರತೆಯನ್ನು ಕಾಪಾಡುವುದು ಕಾಲೇಜು ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ. ಸಾರ್ವಜನಿಕರಿಂದ ಸಂಗ್ರಹಿಸಲಾಗುವ ಈ ಅತ್ಯಲ್ಪ ಶುಲ್ಕವನ್ನು ಕಾಲೇಜಿನ ಆವರಣದಲ್ಲಿನ ಮೂಲಸೌಕರ್ಯಗಳ ಮೇಲ್ವಿಚಾರಣೆ ಹಾಗೂ ಅಚ್ಚುಕಟ್ಟಾದ ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕಾಲೇಜು ಮಂಡಳಿಯ ಈ ದಿಢೀರ್ ನಿರ್ಧಾರಕ್ಕೆ ನಿಯಮಿತವಾಗಿ ಇಲ್ಲಿಗೆ ವಾಕಿಂಗ್ ಬರಸಿಗುತ್ತಿದ್ದ ಜನರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ವರ್ಷಕ್ಕೆ 100 ರೂಪಾಯಿ ಎಂದರೆ ಅದು ಅತ್ಯಂತ ಅತ್ಯಲ್ಪ ಮೊತ್ತವಾಗಿದೆ. ಈ ನಾಮಮಾತ್ರದ ಶುಲ್ಕದಿಂದ ಕ್ಯಾಂಪಸ್‌ನಲ್ಲಿ ಅನಾವಶ್ಯಕವಾಗಿ ಅಡ್ಡಾಡುವವರ ಹಾವಳಿ ತಪ್ಪುತ್ತದೆ, ಭದ್ರತೆ ಹೆಚ್ಚುತ್ತದೆ ಮತ್ತು ವಾಕಿಂಗ್ ಟ್ರ್ಯಾಕ್‌ಗಳು ಸ್ವಚ್ಛವಾಗಿರುತ್ತವೆ ಎಂದು ಕೆಲವು ವಾಕರ್ಸ್ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ವರ್ಷಗಳಿಂದ ಸಾರ್ವಜನಿಕರಿಗಾಗಿ ಮುಕ್ತವಾಗಿದ್ದ ಹಸಿರು ಆವರಣಕ್ಕೆ ದಿಢೀರನೆ ಶುಲ್ಕ ವಿಧಿಸುವುದು ಎಷ್ಟು ಸರಿ ಎಂದು ಕೆಲವರು ಪ್ರಶ್ನಿಸಿದ್ದಾರೆ. ಸಾರ್ವಜನಿಕ ಸಂಸ್ಥೆಗಳು ಇಂತಹ ಮುಕ್ತ ಸ್ಥಳಗಳಿಗೆ ಶುಲ್ಕ ವಿಧಿಸಲು ಆರಂಭಿಸಿದರೆ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಉಚಿತವಾಗಿ ವಾಯುವಿಹಾರ ಮಾಡಲು ಜಾಗವಿಲ್ಲದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.