ಕಲ್ಯಾಣ ಕರ್ನಾಟಕದಲ್ಲಿ ವರುಣನ ಆರ್ಭಟ: ಇಬ್ಬರು ಸಾವು

By Web Desk  |  First Published Sep 25, 2019, 7:51 AM IST

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕದ ಐದು ಜಿಲ್ಲೆಗಳೂ ಸೇರಿದಂತೆ ರಾಜ್ಯದ ವಿವಿಧೆಡೆ ಸೋಮವಾರ ರಾತ್ರಿಯಿಂದೀಚೆಗೆ ಭಾರೀ ಮಳೆ। ಮಳೆ ಸಂಬಂಧಿ ಕಾರಣಗಳಿಗೆ ಇಬ್ಬರು ಬಲಿ।  ವ್ಯಾಪಕ ಮಳೆಯಿಂದ ಅನೇಕ ಗ್ರಾಮಗಳು ಜಲಾವೃತ। ಗ್ರಾಮೀಣ ಭಾಗಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಸಾವಿರಾರು ಎಕರೆ ಹೊಲಗದ್ದೆಗಳಿಗೆ ನೀರು ನುಗ್ಗಿದ್ದು ಬೆಳೆನಷ್ಟವಾಗಿದೆ। 



ಬೆಂಗಳೂರು:(ಸೆ. 25)  ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕದ ಐದು ಜಿಲ್ಲೆಗಳೂ ಸೇರಿದಂತೆ ರಾಜ್ಯದ ವಿವಿಧೆಡೆ ಸೋಮವಾರ ರಾತ್ರಿಯಿಂದೀಚೆಗೆ ಭಾರೀ ಮಳೆಯಾಗುತ್ತಿದ್ದು, ಮಳೆ ಸಂಬಂಧಿ ಕಾರಣಗಳಿಗೆ ಬಾಲಕಿಯೂ ಸೇರಿದಂತೆ ಇಬ್ಬರು ಮೃತಪಟ್ಟಿರುವ ಪ್ರತ್ಯೇಕ ಘಟನೆಗಳು ವರದಿಯಾಗಿವೆ.

ನಿರಂತರ ಸುರಿಯುತ್ತಿರುವ ಮಳೆಗೆ ಮನೆ ಗೋಡೆ ಕುಸಿದು ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಸಾಲಹಳ್ಳಿಗ್ರಾಮದ ಕುಮಾರಿ ಸಂಗೀತಾ(16), ಬಳ್ಳಾರಿ ಜಿಲ್ಲೆ ಹೊಸವಪೇಟೆ ತಾಲೂಕಿನ ಹನುಮನಹಳ್ಳಿಯ ಎಚ್. ದ್ಯಾವಪ್ಪ(77) ಎಂಬವರು ಮೃತಪಟ್ಟಿದ್ದಾರೆ. ಇದೇ ವೇಳೆ ಸಿರಗುಪ್ಪ ತಾಲೂಕಿನ ಭೈರಾಪುರದಲ್ಲಿ ಮನೆ ಕುಸಿದ ಪರಿಣಾಮ ಹನುಮಂತಗೌಡ(60) ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಸಪೇಟೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಯನ್ನು ಲೆಕ್ಕಿಸದೆ ಅತಿವೇಗದಲ್ಲಿ ಬರುತ್ತಿದ್ದ ಖಾಸಗಿ ಬಸ್ಸೊಂದು ಪಲ್ಟಿಯಾಗಿದೆ. ಚಾಲಕ ಸೇರಿ ಮೂವರು ಗಾಯಗೊಂಡಿದ್ದು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಲ್ಯಾಣ ಕರ್ನಾಟಕ ಜಿಲ್ಲೆಗಳಾದ ಕಲಬುರಗಿ, ಬಳ್ಳಾರಿ, ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಗಳ  ವಿವಿಧ ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಅನೇಕ ಗ್ರಾಮಗಳು ಜಲಾವೃತವಾಗಿದೆ. ಗ್ರಾಮೀಣ ಭಾಗಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಸಾವಿರಾರು ಎಕರೆ ಹೊಲಗದ್ದೆಗಳಿಗೆ ನೀರು ನುಗ್ಗಿದ್ದು ಬೆಳೆನಷ್ಟವಾಗಿದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿ ಒಟ್ಟು ಆರು ಮನೆಗಳು ಮಳೆಯಿಂದ ಕುಸಿದು ಬಿದ್ದಿವೆ. ಇದೇವೇಳೆ ಗದಗ ನಗರದಲ್ಲಿ ಅನೇಕ ಮನೆಗಳಿಗೆ ಚರಂಡಿ ನೀರು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.


ಇದೇ ವೇಳೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲೂ ಎರಡು ದಿನದಿಂದ ಮಳೆಯಾಗುತ್ತಿದ್ದು ಸೋಮವಾರ ರಾತ್ರಿ ಮುರುಂಡಿ ಬಿ.ತಾಂಡ್ಯದಲ್ಲಿ ಮನೆಯ ಗೋಡೆ ಅದೃಷ್ಟವಶಾತ್ ಹೊರಮುಖವಾಗಿ ಬಿದ್ದಿದ್ದರಿಂದ ಮನೆಯ ಒಳಗೆ ಮಲಗಿದ್ದ ದಂಪತಿ ಹಾಗೂ ಅವರ ಮೂವರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಇನ್ನುಳಿದಂತೆ ತುಮಕೂರು ಜಿಲ್ಲೆಯ ತುರುವೇಕೆರೆ, ಪಾವಗಡ, ಮಂಡ್ಯ ಜಿಲ್ಲೆಯ ಮದ್ದೂರು, ಭಾರತೀನಗರ, ಹಲಗೂರು, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿದಿದೆ.

ರಾಜ್ಯದಲ್ಲಿ ಆರೆಂಜ್ ಅಲರ್ಟ್

ಮುಂದಿನ ಎರಡು ದಿನ ರಾಜ್ಯಾದ್ಯಂತ ಭಾರಿ ಮಳೆಯಾಗುವ ನಿರೀಕ್ಷೆ ಇದ್ದು, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಐದು ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ‘ಆರೆಂಜ್ ಅಲರ್ಟ್’ನ ಎಚ್ಚರಿಕೆ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯಾದ್ಯಂತ ಮುಂಗಾರು ಚುರುಕುಗೊಂಡಿದ್ದು, ಸೋಮವಾರ ಕೊಪ್ಪಳ, ತುಮಕೂರು, ಬೆಂಗಳೂರು, ಮಂಡ್ಯ, ಬಳ್ಳಾರಿ, ಕಲಬುರಗಿ ಸೇರಿದಂತೆ ರಾಜ್ಯದ ಹಲವೆಡೆ ಭರ್ಜರಿ ಮಳೆಯಾಗಿದೆ. ಇನ್ನು ಎರಡರಿಂದ ಮೂರು ದಿನ ರಾಜ್ಯದಲ್ಲಿ ಮಳೆ ಮುಂದುವರೆಯಲಿದ್ದು, ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಹಾಗೂ ಕೊಡಗು ಜಿಲ್ಲೆಯಲ್ಲಿ ಮುಂದಿನ 48 ಗಂಟೆಗಳಲ್ಲಿ 115 ರಿಂದ 204 ಮಿ.ಮೀ.ವರೆಗೆ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆ ‘ಆರೆಂಜ್ ಅಲರ್ಟ್’ ಎಚ್ಚರಿಕೆ ನೀಡಿದೆ.

ಬುಧವಾರ ಮತ್ತು ಗುರುವಾರ ಉತ್ತರ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು,ರಾಮನಗರ, ತುಮಕೂರು ಕೋಲಾರ,ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರದಲ್ಲಿ ೬೫ರಿಂದ 115 ಮಿ.ಮೀ.ವರೆಗೆ ಮಳೆ ಬೀಳುವ ಸಾಧ್ಯತೆ ಇರುವುದರಿಂದ ‘ಯಲ್ಲೋ ಅಲರ್ಟ್’ನ ಎಚ್ಚರಿಕೆ
ನೀಡಲಾಗಿದೆ.

ಈಗಾಗಲೇ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಗುರುವಾರದಿಂದ ಎರಡು ದಿನ ಮಳೆಯ ತೀವ್ರತೆ ಹೆಚ್ಚಾಗಲಿದೆ. ಹಾಗಾಗಿ ಸೆ.26 ಮತ್ತು 27ರಂದು ಕರಾವಳಿ ಜಿಲ್ಲೆಗಳಿಗೆ ‘ಎಲ್ಲೋ ಅಲರ್ಟ್’ನ ಮುನ್ಸೂಚನೆ ನೀಡಲಾಗಿದೆ ಎಂದು ಹವಾಮಾ ಇಲಾಖೆ ಮಾಹಿತಿ ನೀಡಿದೆ.

 

click me!