ಬಳ್ಳಾರಿ, ಕೊಪ್ಪಳದಲ್ಲಿ ಭರ್ಜರಿ ಮಳೆ: ಕಾರಟಗಿಯಲ್ಲಿ ಗೋಡೆ ಕುಸಿದು ಮಗು ಸಾವು

By Web DeskFirst Published Oct 29, 2019, 8:16 AM IST
Highlights

ಮಲೆನಾಡು, ಕರಾವಳಿಯಲ್ಲಿ ಕ್ಷೀಣ| 3 ಕಿ.ಮೀ ಈಜಿ ಬದುಕಿದ ಯುವಕ| ಬಳ್ಳಾರಿಯಲ್ಲೂ ಉತ್ತಮ ಮಳೆ| ಮನೆಗೋಡೆ ಕುಸಿದು ಕೊಪ್ಪಳ ಜಿಲ್ಲೆಯಲ್ಲಿ ಮಗು ಸಾವು| ಬಳ್ಳಾರಿ ತಾಲೂಕಿನ ವಿವಿಧೆಡೆ ಮನೆಗಳಿಗೆ ನುಗ್ಗಿದ ಚರಂಡಿ ನೀರು|

ಬೆಂಗಳೂರು(ಅ.29): ಕ್ಯಾರ್‌ ಚಂಡಮಾರುತದಿಂದ ತತ್ತರಿಸಿದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆ ಮತ್ತಷ್ಟು ಕ್ಷೀಣಿಸಿದರೆ, ಬಳ್ಳಾರಿ, ಕೊಪ್ಪಳ ಜಿಲ್ಲೆಯ ವಿವಿಢೆದೆ ಭಾನುವಾರ ರಾತ್ರಿ ಮತ್ತು ಸೋಮವಾರ ಬೆಳಗ್ಗೆ ಭರ್ಜರಿ ಮಳೆಯಾಗಿದೆ. ಮನೆಯೊಂದರ ಗೋಡೆ ಕುಸಿದು ಕೊಪ್ಪಳ ಜಿಲ್ಲೆಯಲ್ಲಿ ಮಗುವೊಂದು ಸಾವನ್ನಪ್ಪಿದೆ. ಯಾದಗಿರಿ ಜಿಲ್ಲೆಯಲ್ಲಿ ನದಿಯಲ್ಲಿ ಕೊಚ್ಚಿ ಹೋದವ 3 ಕಿ.ಮೀ. ಈಜಿ ಬದುಕುಳಿದಿದ್ದಾನೆ. ಬಳ್ಳಾರಿ ತಾಲೂಕಿನ ವಿವಿಧೆಡೆ ಮನೆಗಳಿಗೆ ಚರಂಡಿ ನೀರು ನುಗ್ಗಿದೆ.

ಗೋಡೆ ಕುಸಿದು ಮಗು ಸಾವು:

ಕೊಪ್ಪಳ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಧಾರಾಕಾರ ಮಳೆ ಸುರಿಯಿತು. ಕಾರಟಗಿ ಪಟ್ಟಣದಲ್ಲಿ ಕೆಲವು ಮನೆಗಳಿಗೆ ಚರಂಡಿ ನೀರು ನುಗ್ಗಿತ್ತು. ಈ ಸಮಯದಲ್ಲಿ ನಿವಾಸಿಗಳು ರಸ್ತೆಗಿಳಿದು ಕಸ ಗಡ್ಡಿಗಳಿಂದ ತುಂಬಿದ್ದ ಚರಂಡಿಯನ್ನು ಸ್ವಚ್ಛಗೊಳಿಸಿ ನೀರು ಹರಿಯುವಂತೆ ಮಾಡಿದ್ದಾರೆ. ಮನೆಯ ಗೋಡೆ ಕುಸಿದು ಮಗು ಮೌನೇಶ್‌(2) ಮೃತಪಟ್ಟಿದ್ದಾರೆ. ಕಾರಟಗಿ ಪಟ್ಟಣದ 3ನೇ ವಾರ್ಡಿನ ದುರುಗಪ್ಪ ಮತ್ತು ಲಕ್ಷ್ಮೀ ದಂಪತಿ ತಮ್ಮ ಮಗುವಿನೊಂದಿಗೆ ಮಲಗಿದ್ದಾಗ ಗೋಡೆ ಕುಸಿದಿದೆ. ಗಾಯಗೊಂಡ ದಂಪತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಗೆ ಕಳುಹಿಸಲಾಗಿದೆ. ಮಗು ಕಳೆದುಕೊಂಡ ತಾಯಿ ಲಕ್ಷ್ಮೀ 8 ತಿಂಗಳ ಗರ್ಭಿಣಿಯಾಗಿದ್ದಾಳೆ.

ಬಳ್ಳಾರಿಯಲ್ಲೂ ಉತ್ತಮ ಮಳೆ:

ಭಾರೀ ಮಳೆಗೆ ಬಳ್ಳಾರಿ ತಾಲೂಕಿನ ಕಮ್ಮರಚೇಡು, ಮಿಂಚೇರಿ, ಅಸುಂಡಿ, ವಿಜಯಪುರ ಕ್ಯಾಂಪ್‌, ಬೆಂಚ್‌ ಕೊಟ್ಟಾಲ್‌, ಬುರ್ರನಾಯಕನಹಳ್ಳಿ ಇಬ್ರಾಹಿಂಪುರ, ಬೊಬ್ಬಕುಂಟ, ಸಂಜೀವರಾಯನ ಕೋಟೆ ಪ್ರದೇಶದ ನಿವಾಸಿಗಳು ತತ್ತರಿಸಿ ಹೋಗಿದ್ದಾರೆ. ಅನೇಕ ಮನೆಗಳಿಗೆ ನೀರು ಹೊಕ್ಕಿದೆ. ಮನೆಯಲ್ಲಿದ್ದ ಆಹಾರ ಧಾನ್ಯಗಳು ನೀರು ಪಾಲಾಗಿವೆ.

3 ಕಿ.ಮೀ ಈಜಿ ಬದುಕಿದ ಯುವಕ:

ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದ ಕೃಷ್ಣಾ ಭೀಮಾ ಸಂಗಮದಲ್ಲಿ ಕಾಲು ಜಾರಿ ಬಿದ್ದ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಶಿವಪುರದ ಬಸವರಾಜ್‌(20) ಪವಾಢ ಸದೃಷ್ಯವಾಗಿ ಬದುಕುಳಿದಿದ್ದಾರೆ. ಪುಣ್ಯಸ್ನಾನ ಮಾಡಲೆಂದು ಇಳಿದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದ. ಗಂಟೆಗಳ ಕಾಲ ಹುಡುಕಾಟ ನಡೆಸಿದರೂ, ಬಸವರಾಜ್‌ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಮನೆಯವರು, ಸ್ನೇಹಿತರೆಲ್ಲ ಬಸವರಾಜ್‌ ಸಾವನ್ನಪ್ಪಿದ್ದಾನೆ ಎಂದು ದುಃಖಿತರಾಗಿದ್ದರು. ಆದರೆ, ಬಸವರಾಜ್‌ ಮೂರು ಕಿ.ಮೀ. ದೂರ ಈಜಿ ತೆಲಂಗಾಣದ ಗಡಿ ಭಾಗದಲ್ಲಿರುವ ರೈಲು ಸೇತುವೆಯ ಕಂಬಗಳನ್ನು ಹಿಡಿದುಕೊಂಡಿದ್ದನು. ಸ್ಥಳೀಯರು ನೋಡಿ ರಕ್ಷಿಸಿದ್ದಾರೆ.

ಚಿಂಚೋಳಿ ತಾಲೂಕಿನಲ್ಲಿ ಭಾನುವಾರ ರಾತ್ರಿ ಗುಡುಗು ಸಿಡಿಲಿನ ಆರ್ಭಟದಿಂದ ಮಳೆ ಸುರಿದಿದೆ. ಕೆಳದಂಡೆ ಮುಲ್ಲಾಮಾರಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದಿರುವುದರಿಂದ ಗೇಟಿನ ಮೂಲಕ ನದಿಗೆ 375 ಕ್ಯುಸೆಕ್‌ ನೀರು ಹರಿಬಿಡಲಾಗಿದೆ.

click me!