ಬೆಂಗಳೂರಲ್ಲಿ ಪಟಾಕಿ ಸಿಡಿದು 47 ಮಂದಿಗೆ ಕಣ್ಣಿಗೆ ಗಾಯ

By Web DeskFirst Published Oct 29, 2019, 7:45 AM IST
Highlights

3 ಮಕ್ಕಳ ಸ್ಥಿತಿ ಗಂಭೀರ| ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ| ಜಾಗೃತಿ ಮೂಡಿಸಿದರೂ ಕಡಿಮೆಯಾಗದ ಅನಾಹುತ| ಬಹುತೇಕ ಮಕ್ಕಳು ಪಟಾಕಿ ಸಿಡಿತದಿಂದ ಗಾಯಗೊಂಡಿದ್ದಾರೆ| 

ಬೆಂಗಳೂರು(ಅ.29): ಬೆಳಕಿನ ಹಬ್ಬ ದೀಪಾವಳಿ ಹಲವು ಚಿಣ್ಣರ ಬಾಳಲ್ಲಿ ಕತ್ತಲು ಆವರಿಸುವಂತೆ ಮಾಡಿದ್ದು, ಪಟಾಕಿ ಸಿಡಿದು 47 ಮಂದಿಯ ಕಣ್ಣಿಗೆ ಪೆಟ್ಟಾಗಿದ್ದು, ಇದರಲ್ಲಿ ಮೂರು ಮಕ್ಕಳ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳು ನಗರದ ವಿವಿಧ ಕಣ್ಣಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಪಟಾಕಿ ಸಿಡಿಸುವ ವೇಳೆ ಎಚ್ಚರಿಕೆ ವಹಿಸುವಂತೆ ಸಾಕಷ್ಟು ಪ್ರಚಾರ ಕಾರ್ಯಗಳು ನಡೆಸಿರುವುದರಿಂದ ಪಟಾಕಿ ಸಿಡಿಸುವವರ ಸಂಖ್ಯೆ ಕಡಿಮೆಯಾಗುತ್ತಿದ್ದರೂ, ಅನಾಹುತ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ.
ನಗರದ ವಡ್ಡರಪಾಳ್ಯದ ನೆಲೆಸಿರುವ ಆಂಧ್ರಪ್ರದೇಶ ಮೂಲದ ದಂಪತಿಯ ಆರು ವರ್ಷದ ವೆಂಕಟೇಶ್‌ ಮನೆ ಮುಂದಿನ ಮೈದಾನದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಅಪರಿಚಿತರು ಪಟಾಕಿ ಸಿಡಿಸುತ್ತಿದ್ದನ್ನು ನೋಡುತ್ತಿದ್ದ. ಈ ವೇಳೆ ಹಾರಿ ಬಂದಿರುವ ಬೆಂಕಿಯ ಕಿಡಿ ಕಣ್ಣಿಗೆ ಬಿದ್ದಿದೆ. ಪ್ರಕರಣ ಗಂಭೀರವಾಗಿದ್ದು ಮಿಂಟೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಇನ್ನೂ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ಸಲಹೆ ನೀಡಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹನುಮಂತನಗರ ನಿವಾಸಿ 13 ವರ್ಷದ ಬಾಲಕಿ ಪಿ.ಪುಣ್ಯ, ಹೂಕುಂಡ ಸರಿಯಾಗಿ ಹೊತ್ತಿಕೊಳ್ಳಲಿಲ್ಲ ಎಂದು ಪುನಃ ಹಚ್ಚಲು ಹೋದಾಗ ಸಿಡಿದು ಕಿಡಿ ಕಣ್ಣಿಗೆ ತಾಗಿದ್ದು ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಸ್ನೇಹಿತರೊಂದಿಗೆ ಪಟಾಕಿ ಸಿಡಿಸಲು ಹೋಗಿ ಈ ಅವಾಂತರ ಮಾಡಿಕೊಂಡಿದ್ದಾಳೆ ಎಂದು ತಂದೆ ಪ್ರಕಾಶ್‌ ತಿಳಿಸಿರುವುದಾಗಿ ವೈದ್ಯರು ಹೇಳಿದ್ದಾರೆ.

ಮನೆಯ ಬಳಿ ಹುಡುಗರು ಪಟಾಕಿ ಹಚ್ಚುತ್ತಿದ್ದದ್ದನ್ನು ನೋಡುತ್ತಾ ನಿಂತಿದ್ದ ಏಳು ವರ್ಷದ ಮದನ್‌, ಹಚ್ಚಿದ ಪಟಾಕಿ ಹೊತ್ತಿಕೊಳ್ಳದ್ದನ್ನು ನೋಡಿ ಅದನ್ನು ಕೈಗೆ ಎತ್ತಿಕೊಂಡಾಗ ಅದು ಸಿಡಿದು ಎಡಗಣ್ಣಿಗೆ ಗಾಯವಾಗಿದೆ. ನಾಗೇಂದ್ರ ಬ್ಲಾಕ್‌ನ ನಿವಾಸಿ ವಿಜಯಕುಮಾರ್‌ ಅವರ ಎರಡೂವರೆ ವರ್ಷದ ಮಗಳು ಯುಕ್ತಶ್ರೀ ಹೂ ಕುಂಡ ಉರಿಯುವುದನ್ನು ನೋಡಲು ಹೋಗಿ ಕಿಡಿ ಹಾರಿ ಕಣ್ಣಿಗೆ ಗಾಯವಾಗಿದ್ದು, ಮುಖ ಸಹ ಸುಟ್ಟಿದೆ. ಮಿಂಟೋದಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ ಎಂದು ವೈದ್ಯರು ವಿವರಿಸಿದ್ದಾರೆ. ಅಪರಿಚಿತರು ಹಚ್ಚಿದ ಪಟಾಕಿ ಹೊತ್ತಿಕೊಂಡಿಲ್ಲ ಎಂದು ಅದನ್ನು ಕೈಯಲ್ಲಿ ಎತ್ತಿಕೊಂಡಾಗ ಪಟಾಕಿ ಸಿಡಿದು ಚಾಮರಾಜಪೇಟೆಯ 7 ವರ್ಷದ ಮದನ್‌ ಕಣ್ಣಿಗೆ ಗಾಯವಾಗಿದೆ.

ಪಟಾಕಿ ಸಿಡಿತದಿಂದ ಗಾಯಗೊಂಡವಲ್ಲಿ ಬಹುತೇಕರು ಮಕ್ಕಳಾಗಿದ್ದು, ಮನೆಯವರು ಜೊತೆಯಲ್ಲಿ ಇಲ್ಲದ ವೇಳೆ ಪಟಾಕಿ ಹಚ್ಚಲು ಹೋಗಿ ಅನಾಹುತ ಮಾಡಿಕೊಂಡಿದ್ದಾರೆ. ಇನ್ನುಳಿದಂತೆ ರಸ್ತೆಯಲ್ಲಿ ಹಾದು ಹೋಗುತ್ತಿದ್ದವರು, ಮನೆಯ ಹೊರಗೆ ಕೂತಿದ್ದವರು, ಅಪರಿಚಿತರು ಹಚ್ಚಿದ ಪಟಾಕಿಯ ಕಿಡಿಗಳಯ ತಾಗಿ ಗಾಯಗೊಂಡಿರುವ ಕುರಿತು ವರದಿಯಾಗಿದೆ.

ಪಟಾಕಿ ಸಿಡಿತ ಪ್ರಕರಣ

ಮಿಂಟೋ ಕಣ್ಣಿನ ಆಸ್ಪತ್ರೆ 12, ನಾರಾಯಣ ನೇತ್ರಾಲಯ 15, ಶಂಕರ ಕಣ್ಣಿನ ಆಸ್ಪತ್ರೆ 10, ನೇತ್ರಧಾಮ ಕಣ್ಣಿನ ಆಸ್ಪತ್ರೆ 02, ವಿಕ್ಟೋರಿಯಾ 03, ಶೇಖರ್‌ ಆಸ್ಪತ್ರೆ 05, ಒಟ್ಟು 47.
 

click me!