ಎಂಆರ್‌ ಪೂವಮ್ಮಗೆ ಅಭಿನಂದಿಸುವ ಪೋಸ್ಟ್‌ನಲ್ಲಿ ಭಾರತದ ಬದಲು ಹಂಗೆರಿ ದೇಶದ ಧ್ವಜ ಬಳಸಿ HDK ಎಡವಟ್ಟು!

Published : Oct 03, 2026, 01:07 PM IST
HD Kumaraswamy Social Media Post

ಸಾರಾಂಶ

ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಅಥ್ಲೀಟ್ ಎಂ.ಆರ್. ಪೂವಮ್ಮ ಅವರಿಗೆ ಅಭಿನಂದನೆ ಸಲ್ಲಿಸುವಾಗ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಎಕ್ಸ್ ಖಾತೆಯಲ್ಲಿ ಭಾರತದ ಬದಲು ಹಂಗೆರಿ ದೇಶದ ಧ್ವಜ ಬಳಸಿ ಎಡವಟ್ಟು ಮಾಡಲಾಗಿದೆ.

ಬೆಂಗಳೂರು (ಅ.3): 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಮಹಿಳೆಯರ 4x400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಹಾಗೂ ಮಿಶ್ರ 4x400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡು ತಾಯ್ನಾಡಿಗೆ ಮರಳಿದ ಕರ್ನಾಟಕದ ಹೆಮ್ಮೆಯ ಅಥ್ಲೀಟ್ ಎಂ.ಆರ್. ಪೂವಮ್ಮ ಅವರಿಗೆ ಅಭಿನಂದನೆ ಸಲ್ಲಿಸುವ ಭರದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HDK) ಅವರ ಅಧಿಕೃತ 'ಎಕ್ಸ್' (ಟ್ವಿಟರ್) ಖಾತೆಯಿಂದ ದೊಡ್ಡ ಎಡವಟ್ಟು ನಡೆದಿದೆ.

ಪೂವಮ್ಮ ಅವರನ್ನು ಶ್ಲಾಘಿಸಿ ಹಾಕಲಾದ ಪೋಸ್ಟ್‌ನಲ್ಲಿ ಭಾರತದ ತ್ರಿವರ್ಣ ಧ್ವಜದ (🇮🇳) ಇಮೋಜಿ ಬಳಸುವ ಬದಲಾಗಿ, ದಕ್ಷಿಣ ಯುರೋಪ್ ದೇಶವಾದ 'ಹಂಗೆರಿ' (Hungary) ದೇಶದ ರಾಷ್ಟ್ರಧ್ವಜದ (🇭🇺) ಇಮೋಜಿ ಬಳಸಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಹಾಗೂ ಟ್ರೋಲ್‌ಗೆ ಗ್ರಾಸವಾಗಿದೆ.

ಹೆಚ್‌ಡಿಕೆ ಪೋಸ್ಟ್‌ನಲ್ಲಿ ಏನಿತ್ತು?

ಕೇಂದ್ರ ಸಚಿವರ ಅಧಿಕೃತ ಖಾತೆಯಲ್ಲಿ, "2026ರ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4x400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಹಾಗೂ ಮಿಶ್ರ 4x400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಹೆಮ್ಮೆಯ ಸಾಧನೆ ಮಾಡಿರುವ ಕರ್ನಾಟಕದ ಅಥ್ಲೀಟ್ ಎಂ.ಆರ್. ಪೂವಮ್ಮ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಐತಿಹಾಸಿಕ ಸಾಧನೆಯ ನಂತರ ಅವರು ತಾಯ್ನಾಡಿಗೆ ವಾಪಸ್ಸು ಬಂದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸುತ್ತಾ ಭವಿಷ್ಯದಲ್ಲಿ ಅವರು ಇನ್ನೂ ಎತ್ತರದ ಸಾಧನೆಗಳನ್ನು ಮಾಡಲಿ ಎಂದು ಹಾರೈಸುತ್ತೇನೆ. ಅಲ್ಲದೆ, ಪೂವಮ್ಮ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದೇನೆ. ಯುವಜನರಿಗೆ ಈ ಹೆಣ್ಣುಮಗಳು ಮಾದರಿ. ಅವರ ಸಾಧನೆ, ಪರಿಶ್ರಮ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ" ಎಂದು ಬರೆದುಕೊಳ್ಳಲಾಗಿತ್ತು.

ಆದರೆ, ಈ ಅಭಿನಂದನಾ ಸಂದೇಶದ ಜೊತೆಗೆ ಹೆಚ್‌ಡಿಕೆ ಅವರ ಖಾತೆಯನ್ನು ನಿರ್ವಹಿಸುವ ಸೋಶಿಯಲ್ ಮೀಡಿಯಾ ಟೀಮ್ ಭಾರತದ ಧ್ವಜದ ಬದಲಾಗಿ ಹಂಗೆರಿ ದೇಶದ ಧ್ವಜದ ಇಮೋಜಿಯನ್ನು ಸೇರಿಸಿತ್ತು.

ಯಾವ್ ದೇಶಕ್ಕೆ ಜೈಹಿಂದ್ ಕುಮಾರಣ್ಣ?: ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ಕೇಂದ್ರ ಸಚಿವರೊಬ್ಬರ ಅಧಿಕೃತ ಖಾತೆಯಿಂದ ದೇಶದ ಧ್ವಜವೇ ತಪ್ಪಾಗಿ ಪ್ರಕಟವಾಗಿದ್ದನ್ನು ತಕ್ಷಣವೇ ಗುರುತಿಸಿದ ನೆಟ್ಟಿಗರು, ಕಮೆಂಟ್ ಬಾಕ್ಸ್‌ನಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ ಮಾಡುವವರ ವಿರುದ್ಧ ಸರಣಿ ಕಮೆಂಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

"ಭಾರತದ ಧ್ವಜ ತಪ್ಪಾಗಿದೆ ಕುಮಾರಣ್ಣ. ದಯಮಾಡಿ ಬದಲಿಸಿ..." ಎಂದು ಬಳಕೆದಾರರೊಬ್ಬರು ಎಚ್ಚರಿಸಿದರೆ, "ಯಾವ್‌ ದೇಶಕ್ಕೆ ಜೈಹಿಂದ್‌ ಕುಮಾರಣ್ಣ?" ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.

ಖಾತೆಯ ಆಡ್ಮಿನ್‌ಗೆ ಕ್ಲಾಸ್‌ ತೆಗೆದುಕೊಂಡ ಇನ್ನೊಬ್ಬ ನೆಟ್ಟಿಗ, 'ಹೇ ಆಡ್ಮಿನ್, ನೀನು ಯಾವ ಕ್ಲಾಸ್‌ನಲ್ಲಿ ಓದುತ್ತಿದ್ದೀಯಾ? ಭಾರತದ ಧ್ವಜಕ್ಕೂ 🇮🇳 ಮತ್ತು ಹಂಗೆರಿ ಧ್ವಜಕ್ಕೂ 🇭🇺 ಇರುವ ವ್ಯತ್ಯಾಸ ಗೊತ್ತಿಲ್ವಾ? ಈ ಅಕೌಂಟ್ ಹ್ಯಾಂಡಲ್ ಮಾಡ್ತಿರೋದು ಯಾರು?" ಎಂದು ಪ್ರಶ್ನಿಸಿದ್ದಾರೆ. 'Flag ತಪ್ಪಾಗಿದೆ. ಇದಲ್ಲ 🇭🇺, ಇದು ಇರಬೇಕಿತ್ತು 🇮🇳! ಸ್ವಲ್ಪ ನೋಡ್ಕೊಳ್ರಪ್ಪ. Union minister account ಅದು. ಈ ತರ ಎಡವಟ್ಟು ಆದ್ರೆ ಕಷ್ಟ..." ಎಂದು ಕಳಕಳಿಯ ಜೊತೆಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಇನ್ನು ಕೆಲವರು, "ಕೇಂದ್ರ ಸಚಿವರೊಬ್ಬರು ಭಾರತದ ರಾಷ್ಟ್ರಧ್ವಜವನ್ನು ಪರಿಶೀಲಿಸದೆ ಪೋಸ್ಟ್ ಮಾಡುವುದು ಸಣ್ಣ ತಪ್ಪು ಖಂಡಿತ ಅಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪೂವಮ್ಮಗೆ ನಗದು ಬಹುಮಾನ ನೀಡಲು ಆಗ್ರಹ

ಅನೇಕ ಕ್ರೀಡಾಭಿಮಾನಿಗಳು ಪ್ರಸ್ತುತ ರಾಜ್ಯ ಸರ್ಕಾರದ ಕ್ರೀಡಾ ನೀತಿಯ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ. 'ಕರ್ನಾಟಕ ಸರ್ಕಾರವು ಕಣ್ಣು ಮುಚ್ಚಿ ಕುಳಿತಿದ್ದು, ಕ್ರೀಡಾಪಟುಗಳ ಪರಿಶ್ರಮಕ್ಕೆ ಸೂಕ್ತ ಗೌರವ ನೀಡುತ್ತಿಲ್ಲ. ಪಕ್ಕದ ತಮಿಳುನಾಡು ಸರ್ಕಾರವು ಸ್ವರ್ಣ ಪದಕ ಗೆದ್ದ ತನ್ನ ಅಥ್ಲೀಟ್ ವಿತ್ಯಾ ರಾಮರಾಜ್ ಅವರಿಗೆ 75 ಲಕ್ಷ ರೂಪಾಯಿ ನಗದು ಬಹುಮಾನ ಪ್ರಕಟಿಸಿದೆ. ಹೀಗಾಗಿ ನಮ್ಮ ಹೆಮ್ಮೆಯ ಸಾಧಕಿ ಪೂವಮ್ಮ ಅವರಿಗೂ ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ಸೂಕ್ತ ನಗದು ಬಹುಮಾನವನ್ನು ತಕ್ಷಣವೇ ಘೋಷಿಸಬೇಕು' ಎಂದು ಹೆಚ್‌ಡಿಕೆ ಅವರಿಗೆ ಮನವಿ ಮಾಡಿದ್ದಾರೆ. ಕೇಂದ್ರ ಸಚಿವರ ಮಟ್ಟದ ಖಾತೆಯಲ್ಲಿ ನಡೆದ ಈ ಇಮೋಜಿ ಎಡವಟ್ಟು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಆಡ್ಮಿನ್‌ಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

PREV
Read more Articles on
click me!

Recommended Stories

Bengaluru: ಬೇಡ್ತಿ-ಅಫನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ಬೆಂಗಳೂರಿನಲ್ಲಿ ಅ.10ಕ್ಕೆ ಧರಣಿ
ಒಂದೇ ಘಟನೆಯ ದೂರು-ಪ್ರತಿದೂರಿಗೆ ಇಬ್ಬರು ಪೊಲೀಸರಿಂದ ತನಿಖೆ ಸಲ್ಲ: ಹೈಕೋರ್ಟ್‌