
ವೆಂಕಟೇಶ್ ಕಲಿಪಿ
ಕನ್ನಡಪ್ರಭ ವಾರ್ತೆ ಬೆಂಗಳೂರು (ಅ.3): ಒಂದೇ ಘಟನೆಗೆ ಸಂಬಂಧಿಸಿ ದೂರು-ಪ್ರತಿದೂರು ದಾಖಲಾದ ಹಿನ್ನೆಲೆಯಲ್ಲಿ ಒಂದು ದೂರನ್ನು ಇನ್ಸ್‌ಪೆಕ್ಟರ್, ಮತ್ತೊಂದನ್ನು ಸಬ್ ಇನ್ಸ್‌ಪೆಕ್ಟರ್ ತನಿಖೆ ನಡೆಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್, ಇನ್ನು ಮುಂದೆ ಒಂದೇ ಘಟನೆಗೆ ಸಂಬಂಧಿಸಿ ದಾಖಲಾದ ಎರಡು ದೂರುಗಳನ್ನು ಒಬ್ಬನೇ ತನಿಖಾಧಿಕಾರಿ ತನಿಖೆ ನಡೆಸುವುದನ್ನು ಖಾತರಿಪಡಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಆಸ್ತಿ ವಿವಾದ ಸಂಬಂಧ ಹಲ್ಲೆ, ಅತಿಕ್ರಮ ಪ್ರವೇಶ, ಶಾಂತಿ ಭಂಗ ಪ್ರಚೋದಿಸಲು ಉದ್ದೇಶಪೂರ್ವಕವಾಗಿ ಅವಮಾನಿಸಿರುವುದು ಸೇರಿ ಇನ್ನಿತರ ಆರೋಪಗಳ ಮೇಲೆ ತಮ್ಮ ವಿರುದ್ಧ ಚಿಕ್ಕಮಗಳೂರಿನ ಬಿಲ್ಲೂರು ಗ್ರಾಮದ ನಿವಾಸಿ ಎಂ.ಮಂಜುನಾಥ್ ದಾಖಲಿಸಿರುವ ದೂರು ರದ್ದುಪಡಿಸುವಂತೆ ಕೋರಿ ಪುಟ್ಟಸ್ವಾಮಿ ಗೌಡ ಹಾಗೂ ಇತರೆ 12 ಮಂದಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರ ಪೀಠ ಈ ಆದೇಶ ಮಾಡಿದೆ.
ಪ್ರಕರಣ ಸಂಬಂಧ ಚಿಕ್ಕಮಗಳೂರು ಜಿಲ್ಲೆಯ ಬನಕಲ್ ಠಾಣೆಯಲ್ಲಿ ಅರ್ಜಿದಾರರ ವಿರುದ್ಧ ಮಂಜುನಾಥ್ ಹಾಗೂ ಮಂಜುನಾಥ್ ವಿರುದ್ಧ ಅರ್ಜಿದಾರರು ಎರಡು ಪ್ರತ್ಯೇಕ ದೂರು ದಾಖಲಿಸಿದ್ದಾರೆ. ಆದರೆ ಎರಡೂ ಬಣಗಳು ಒಂದೇ ಘಟನೆಗೆ ಸಂಬಂಧಿಸಿ ದೂರು-ಪ್ರತಿ ದೂರು ದಾಖಲಿಸಿವೆ. ಮಂಜುನಾಥ್ ದೂರನ್ನು ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಅರ್ಜಿದಾರರ ದೂರನ್ನು ಸಬ್ ಇನ್ಸ್‌ಪೆಕ್ಟರ್ ತನಿಖೆ ನಡೆಸಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ಆದೇಶದಲ್ಲಿ ಪೀಠ ವಿವರಿಸಿದೆ.
ಅರ್ಜಿದಾರರು ತಮ್ಮ ವಿರುದ್ಧದ ಎಫ್‌ಐಆರ್ ರದ್ದತಿಗೆ ಕೋರಿದ್ದಾರೆ. ಅವರ ಆಕ್ಷೇಪ ತಮ್ಮ ಮೇಲಿನ ಆರೋಪಗಳು ಸುಳ್ಳು ಎಂಬುದಷ್ಟೇ ಅಲ್ಲ. ಬದಲಾಗಿ ಒಂದೇ ಘಟನೆಗೆ ಸಂಬಂಧಿಸಿದ ಎರಡು ದೂರುಗಳಲ್ಲಿನ ವಿಭಿನ್ನ ರೀತಿಯ ಆರೋಪಗಳನ್ನು ಬೇರೆ ಬೇರೆ ತನಿಖಾಧಿಕಾರಿಗಳು ಪ್ರತ್ಯೇಕವಾಗಿ ನಡೆಸಿ ಪ್ರತ್ಯೇಕ ಅಂತಿಮ ವರದಿ ಸಲ್ಲಿಸಿರುವ ಬಗ್ಗೆ ಆಕ್ಷೇಪಿಸಿದ್ದಾರೆ. ವಿಭಿನ್ನ ಆರೋಪಗಳನ್ನು ಒಟ್ಟಾಗಿ ಪರಿಶೀಲಿಸಿದಾಗ ಮಾತ್ರ ತನಿಖಾಧಿಕಾರಿ ಘಟನೆಯ ಮೂಲ, ಎರಡೂ ಕಡೆಯ ವೈದ್ಯಕೀಯ ಸಾಕ್ಷ್ಯ ಸಂಗ್ರಹ, ಸಾಕ್ಷಿಗಳ ಹೇಳಿಕೆ ದಾಖಲಿಸಲು ಮತ್ತು ಸಂಪೂರ್ಣ ವಾಸ್ತವಾಂಶಗಳನ್ನು ಸಮರ್ಥವಾಗಿ ನ್ಯಾಯಾಲಯದ ಮುಂದೆ ಮಂಡಿಸಲು ಸಾಧ್ಯವಾಗುತ್ತಿತ್ತು ಎಂದು ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.
ಮೇಲ್ನೋಟಕ್ಕೆ ದೂರಿನಲ್ಲಿನ ಅಪರಾಧಗಳನ್ನು ಸಾಬೀತುಪಡಿಸುವಂತಹ ಸಾಕ್ಷ್ಯಾಧಾರಗಳ ಅಸ್ತಿತ್ವ, ತನಿಖೆಯ ಕಾನೂನುಬದ್ಧತೆ ಮತ್ತು ಸಮಗ್ರತೆ ಪ್ರತ್ಯೇಕ ವಿಷಯಗಳಾಗಿವೆ. ಆ ಬಗ್ಗೆ ಈ ಹಂತದಲ್ಲಿ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಆದರೆ, ಒಂದೇ ಘಟನೆಯಿಂದ ಉದ್ಭವಿಸಿರುವ ಎರಡು ಪ್ರತ್ಯೇಕ ದೂರುಗಳನ್ನು ಇಬ್ಬರು ವಿಭಿನ್ನ ತನಿಖಾಧಿಕಾರಿಗಳು ನಡೆಸಿದರೆ, ಅದರ ಆಧಾರದ ಮೇಲೆ ಎರಡು ಸಮಾನಾಂತರ ಅಭಿಯೋಜನೆಗೆ ಅನುಮತಿಸುವುದಿಲ್ಲ ಮತ್ತು ವಿಚಾರಣಾ ಪ್ರಕ್ರಿಯೆ ಮುಂದುವರಿಸುವುದು ನ್ಯಾಯಯುತವಲ್ಲ ಎಂದು ಆಕ್ಷೇಪಿಸಿರುವ ಪೀಠ, ಈ ಲೋಪವನ್ನು ತನಿಖಾ ಹಂತದಲ್ಲೇ ಸರಿಪಡಿಸಬೇಕಾದ ಅಗತ್ಯವಿದೆ. ಹಾಗಾಗಿ, ಎರಡೂ ದೂರುಗಳ ತನಿಖೆ, ದೋಷಾರೋಪ ಪಟ್ಟಿ ರದ್ದುಪಡಿಸಲಾಗುತ್ತಿದೆ ಎಂದು ತಿಳಿಸಿದೆ.
ಅಂತಿಮವಾಗಿ ಎರಡೂ ದೂರುಗಳನ್ನು ಪೊಲೀಸ್ ಇನ್ಸ್‌ಪೆಕ್ಟರ್ ಶ್ರೇಣಿಯ ಒಂದೇ ತನಿಖಾಧಿಕಾರಿ ಕಾನೂನು ಪ್ರಕಾರ ಹೊಸದಾಗಿ ತನಿಖೆ ನಡೆಸಬೇಕು. ಘಟನೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ಕೃತ್ಯ ಪರಿಶೀಲಿಸಿ ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು. ಅದರ ಆಧಾರದಲ್ಲಿ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯ ಮುಂದಿನ ಕ್ರಮ ಜರುಗಿಸಬೇಕೆಂದು ಪೀಠ ಆದೇಶಿಸಿದೆ.
2025ರ ಫೆ.4ರಂದು ಮಂಜುನಾಥ್ (76) ಅವರು ದೂರು ನೀಡಿ, ಅಂದು ಬೆಳಗ್ಗೆ 10ಕ್ಕೆ ನನ್ನ ಮನೆ ಮುಂದೆ ಕಾಫಿ ಬೀಜ ಒಣಗಿಸುತ್ತಿದ್ದಾಗ ಅರ್ಜಿದಾರರು ಬಂದು ನನಗೆ ಅಶ್ಲೀಲವಾಗಿ ಬೈದು ಹಲ್ಲೆ ನಡೆಸಿದರು ಎಂದು ಆರೋಪಿಸಿದ್ದರು. ಅಂದೇ ಅರ್ಜಿದಾರ ಪುಟ್ಟಸ್ವಾಮಿ ಗೌಡ, ನಾನು ಕಾಫಿ ತೋಟಕ್ಕೆ ಬೇಲಿ ಹಾಕುತ್ತಿರುವುದನ್ನು ಆಕ್ಷೇಪಿಸಿ ಮಂಜನಾಥ್ ಅಶ್ಲೀಲ ಶಬ್ದಗಳಿಂದ ನನಗೆ ನಿಂದಿಸಿ, ಕಲ್ಲಿನಿಂದ ಹಲ್ಲೆ ನಡೆಸಿದರು ಎಂದು ಆರೋಪಿಸಿ ಪ್ರತ್ಯೇಕ ದೂರು ದಾಖಲಿಸಿದ್ದರು.