'ಜೀವನ ನೋಡುವ ದೃಷ್ಟಿಕೋನವೇ ಬದಲಾಯ್ತು..' ಬೆಂಗಳೂರು ಬ್ಯೂಟಿ ಬಗ್ಗೆ ಯುವತಿಯ ಭಾವುಕ ಪೋಸ್ಟ್ ವೈರಲ್

Published : Aug 12, 2026, 10:08 PM ISTUpdated : Aug 12, 2026, 10:09 PM IST
Women On bengaluru City

ಸಾರಾಂಶ

ಕಂಟೆಂಟ್ ಕ್ರಿಯೇಟರ್ ಸುರುಚಿ, ಗುರುಗ್ರಾಮ್‌ನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಾಗ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಒಂಟಿತನ ಮತ್ತು ಮನೆ ನೆನಪಿನಿಂದ ಬಳಲಿದ ಅವರು, ನಂತರ ಬೆಂಗಳೂರಿನ ಫಿಲ್ಟರ್ ಕಾಫಿ, ಹವಾಮಾನ ಮತ್ತು ಸ್ವತಂತ್ರ ಬದುಕನ್ನು ಪ್ರೀತಿಸಲು ಆರಂಭಿಸಿದ್ದಾರೆ.

ಬೆಂಗಳೂರು (ಆ.12): 'ನಾನು ಕೇವಲ ನಗರವನ್ನು ಮಾತ್ರ ಬದಲಾಯಿಸುತ್ತಿದ್ದೇನೆ ಎಂದು ಭಾವಿಸಿದ್ದೆ. ಆದರೆ, ಕಳೆದ ಐದು ವರ್ಷಗಳಿಂದ ನಾನು ಜೀವಿಸಿದ್ದ ನನ್ನ ಜೀವನದ ಸಂಪೂರ್ಣ ಅಧ್ಯಾಯವನ್ನೇ ಹಿಂದಿಟ್ಟು ಬರುತ್ತಿದ್ದೇನೆ ಎಂಬ ಅರಿವು ನನಗಿರಲಿಲ್ಲ..' ಗುರುಗ್ರಾಮ್‌ನ ಗಾಜಿನ ಗೋಪುರಗಳ ಕಚೇರಿಯನ್ನು ತೊರೆದು, ಬೆಂಗಳೂರಿನ ಉದ್ಯಾನನಗರಿಗೆ ಹೆಜ್ಜೆ ಇಟ್ಟ 10 ತಿಂಗಳ ನಂತರ ಕಂಟೆಂಟ್ ಕ್ರಿಯೇಟರ್ ಸುರುಚಿ (Suruchi) ಎಂಬ ಯುವತಿ ಹಂಚಿಕೊಂಡಿರುವ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನ ವಿಚಾರವಿದು..

ಆಗಸ್ಟ್ 9ರಂದು ಅವರು ಹಂಚಿಕೊಂಡಿರುವ ಈ ವೈರಲ್ ಪೋಸ್ಟ್, ವೃತ್ತಿಜೀವನಕ್ಕಾಗಿ ಸ್ವಂತ ಊರು ತೊರೆದು ಹೊಸ ನಗರಗಳಿಗೆ ಗುಳೆ ಹೋಗುವ ಸಾವಿರಾರು ಯುವಜನರ, ವಿಶೇಷವಾಗಿ ಸ್ವತಂತ್ರ ಬದುಕು ಕಟ್ಟಿಕೊಳ್ಳುವ ಯುವತಿಯರ ಅಂತರಂಗದ ಭಾವನೆಗಳಿಗೆ ಕನ್ನಡಿ ಹಿಡಿದಿದೆ.

ದೂರವಾದ ಮನೆ, ಬಿಡುವಿಲ್ಲದ ಕೆಲಸ ಮತ್ತು ವಾರಾಂತ್ಯದ ಒಂಟಿತನ

ಉದ್ಯೋಗಕ್ಕಾಗಿ ಹೊಸ ನಗರಕ್ಕೆ ಬಂದಾಗ ದೂರದ ಊರಿನಲ್ಲಿರುವ ಸ್ವಂತ ಮನೆ ತಲುಪುವುದು ಅಷ್ಟು ಸುಲಭವಲ್ಲ. "ಮನೆಯ ನೆನಪು (Homesickness) ಕಾಡುವುದು ತೀರಾ ಸಹಜ. ಗುರುಗ್ರಾಮ್‌ನಲ್ಲಿದ್ದಾಗ ರಾತ್ರಿ ಓವರ್‌ನೈಟ್ ಬಸ್ ಬುಕ್ ಮಾಡಿ ಸುಲಭವಾಗಿ ಮನೆಗೆ ಹೋಗುತ್ತಿದ್ದೆ. ಆದರೆ ಈಗ ಬೆಂಗಳೂರಿನಿಂದ ಮನೆಗೆ ಹೋಗಬೇಕೆಂದರೆ ಸಾಕಷ್ಟು ಪ್ಲಾನಿಂಗ್, ರಜೆಗಳ ಹೊಂದಾಣಿಕೆ ಮತ್ತು ಮುಂಚಿತವಾಗಿಯೇ ಫ್ಲೈಟ್ ಟಿಕೆಟ್ ಬುಕ್ ಮಾಡುವುದು ಅನಿವಾರ್ಯವಾಗಿದೆ" ಎಂದು ಸುರುಚಿ ತಮ್ಮ ಕಷ್ಟವನ್ನು ತೋಡಿಕೊಂಡಿದ್ದಾರೆ.

ಕೆಲಸದ ಬದಲಾವಣೆಯೇ ನಗರ ತೊರೆಯಲು ಮುಖ್ಯ ಕಾರಣವಾಗಿರುವುದರಿಂದ, ದೈನಂದಿನ ಜೀವನ ಸಂಪೂರ್ಣವಾಗಿ ಕೆಲಸಮಯವಾಗುತ್ತದೆ. "ವಾರಾಂತ್ಯಗಳಿಗಿಂತ ವಾರದ ಕೆಲಸದ ದಿನಗಳನ್ನೇ ಎದುರು ನೋಡುವ ಮಟ್ಟಿಗೆ ದಿನವಿಡೀ ಕೆಲಸದಲ್ಲೇ ಮುಳುಗಿಹೋಗುತ್ತೇವೆಯೇ ಎಂಬ ಅನುಮಾನ ಕಾಡುತ್ತದೆ. ಗುರುಗ್ರಾಮ್‌ನಲ್ಲಿದ್ದಾಗ ವಾರಾಂತ್ಯಗಳಲ್ಲಿ ಸದಾ ಸ್ನೇಹಿತರು, ಜನರ ನಡುವೆ ಇರುತ್ತಿದ್ದೆ, ವೀಕೆಂಡ್ ಲೈವ್ಲಿಯಾಗಿರುತ್ತಿತ್ತು. ಆದರೆ ಬೆಂಗಳೂರಿನಲ್ಲಿ ಈಗ ಆಲೋಚಿಸಲು ಸಾಕಷ್ಟು ಸಮಯ ಸಿಗುತ್ತದೆ, ಕೆಲವೊಮ್ಮೆ ಇದು ಅತಿಯಾದ ಮೌನ ಮತ್ತು ಒಂಟಿತನ ನೀಡುತ್ತದೆ" ಎಂದಿದ್ದಾರೆ.

ಫಿಲ್ಟರ್ ಕಾಫಿ, ದೋಸೆ ಮತ್ತು ಸಿಕ್ಕ ಸ್ವತಂತ್ರ ಬದುಕು!

ನಗರದ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದಂತೆ ಹೊಸ ಬದುಕು ಸುಂದರವೆನಿಸಲು ಪ್ರಾರಂಭವಾಗಿದೆ. "ನಮಗಾಗಿಯೇ ಒಂದು ಜಾಗವನ್ನು ಸೃಷ್ಟಿಸಿಕೊಳ್ಳುವುದು, ನಮಗೆ ಇಷ್ಟ ಬಂದಂತೆ ಅದನ್ನು ಅಲಂಕರಿಸಿಕೊಂಡು 'ಸ್ವಂತ ಮನೆ'ಯಂತೆ ಮಾಡಿಕೊಳ್ಳುವ ಆ ಸ್ವಾತಂತ್ರ್ಯ ಮತ್ತು ಖುಷಿಯೇ ಬೇರೆ" ಎಂದು ಸುರುಚಿ ಬರೆದುಕೊಂಡಿದ್ದಾರೆ.

ಬೆಂಗಳೂರಿನ ಕ್ರೇಜ್‌ಗಳಾದ 'ಮಸಾಲ ದೋಸೆ ಮತ್ತು ಫಿಲ್ಟರ್ ಕಾಫಿ', ಹಾಗೂ ಇಲ್ಲಿನ ಪ್ರಸಿದ್ಧ 'ವೆದರ್' ಅವರನ್ನು ಸಂಪೂರ್ಣವಾಗಿ ಮೋಡಿ ಮಾಡಿದೆ. "ಸಂಜೆ ಸೂರ್ಯಾಸ್ತದ ಸುಂದರ ದೃಶ್ಯವನ್ನು ನೋಡುತ್ತಾ ಫಿಲ್ಟರ್ ಕಾಫಿ ಹೀರಿದಾಗಲೇ 'ಬೆಂಗಳೂರು ಮಾಸಮ್ ಸೂಪರ್ ಯಾರ್' (ಹವಾಮಾನ ಅದ್ಭುತವಾಗಿದೆ) ಎಂದು ಪ್ರತಿಯೊಬ್ಬರೂ ಏಕೆ ಹೇಳುತ್ತಾರೆ ಎಂಬ ಸತ್ಯದ ಅರಿವಾಯಿತು" ಎಂದು ಬರೆದುಕೊಂಡಿದ್ದಾರೆ.

ಹಳೆಯ ನೆನಪು ಮತ್ತು ಪ್ರಸ್ತುತ ಜೀವನದ ನಡುವಿನ ಸಮತೋಲನ

ಬೆಂಗಳೂರಿನಲ್ಲಿ ತಮ್ಮದೇ ಆದ ಸ್ವತಂತ್ರ ಬದುಕು ಕಟ್ಟಿಕೊಳ್ಳುವ ಈ ಪ್ರಯಾಣದಲ್ಲಿ, ಹೊಸ ಜೀವನಕ್ಕೆ ಕಾಲಿಡುವುದೆಂದರೆ ಹಳೆಯ ನೆನಪುಗಳನ್ನು ಮರೆಯುವುದು ಎಂದರ್ಥವಲ್ಲ ಎಂಬುದನ್ನು ಅವರು ಕಂಡುಕೊಂಡಿದ್ದಾರೆ. "ಹಿಂದಿನ ಜೀವನ, ಅಲ್ಲಿದ್ದ ಜಾಗಗಳು ಹಾಗೂ ಜನರನ್ನು ನಾನು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳುತ್ತೇನೆ. ಆದರೆ ಅದೇ ಸಮಯದಲ್ಲಿ, ಬೆಂಗಳೂರಿನಲ್ಲಿ ನಾನು ಕಟ್ಟಿಕೊಂಡಿರುವ ಈ ಹೊಸ ಬದುಕನ್ನೂ ಪ್ರೀತಿಸುತ್ತಿದ್ದೇನೆ. ಕೊನೆಗೆ, ಈ ಎರಡೂ ಭಾವನೆಗಳು ಒಟ್ಟಿಗೆ ಅಸ್ತಿತ್ವದಲ್ಲಿರಲು ಸಾಧ್ಯ ಎಂಬ ಸತ್ಯ ನನಗೀಗ ಅರ್ಥವಾಗಿದೆ" ಎಂದು ಅವರು ತಮ್ಮ ಪೋಸ್ಟ್ ಮುಗಿಸಿದ್ದಾರೆ.

PREV
Read more Articles on
click me!

Recommended Stories

'2 ವರ್ಷದ ಮಗನನ್ನು ಹೊರಗೆ ನಿಲ್ಲಿಸಿ, ಲ್ಯಾಪ್‌ಟಾಪ್‌ ಕೊಟ್ಟು ಬಂದೆ..' ಲೇಆಫ್ ಬೆನ್ನಲ್ಲೇ ಆಫೀಸ್‌ನಲ್ಲಿ ಬೆಂಗಳೂರು ಉದ್ಯೋಗಿಗೆ ಕಹಿ ಅನುಭವ!
ನೆಟ್‌ವರ್ಕ್ ಕಂಪನಿಗಳ ಬುಡಕ್ಕೆ ತಂದಿಟ್ಟ ಪ್ರಜ್ವಲ್ ರೇವಣ್ಣ -ಏರ್‍‌ಟೆಲ್ ಕಂಪನಿಗೆ ಅಲೋಕ್ ಕುಮಾರ್ ಎಚ್ಚರಿಕೆ