ರಾಜಕೀಯ ವಾಕ್ಸಮರಕ್ಕೆ ನಾಂದಿ ಹಾಡಿದ ಬಹುನಿರೀಕ್ಷಿತ ಜಿಟಿಎ 6 ಗೇಮ್ ತಯಾರಾಗಿದ್ದು ಬೆಂಗಳೂರಲ್ಲಿ!

Gowthami K   | Kannada Prabha
Published : Nov 20, 2026, 10:14 AM IST
GTA 6

ಸಾರಾಂಶ

ಈ ಗೇಮ್‌ ನಿರ್ಮಾಣದ ಹಿಂದೆ ಬೆಂಗಳೂರಿನ 1,600 ಡೆವಲಪರ್‌ಗಳ ಪರಿಶ್ರಮಜಿಟಿಎ 5, ಜಿಟಿಎ 6 ಹೋಲಿಕೆ ಮೂಲಕ ಭಾರತದ ಅಭಿವೃದ್ಧಿ ವಿವರಿಸಿದ ಮೋದಿಗೇಮ್‌ನಲ್ಲೂ ಅಪರಾಧಿ ಜೋಡಿ ಕಥೆಯಿದೆ: ಮೋದಿ, ಶಾ ವಿರುದ್ಧ ಕಾಂಗ್ರೆಸ್‌ ಕಿಡಿ2013ರಲ್ಲಿ ಗೇಮ್‌ನ ಜಿಟಿಎ 5 ಆವೃತ್ತಿ ಬಿಡುಗಡೆ, 13 ವರ್ಷ ಬಳಿಕ ಹೊಸ ಆವೃತ್ತಿ

ನವದೆಹಲಿ: ಕಳೆದ 13 ವರ್ಷಗಳಿಂದ ಗೇಮಿಂಗ್‌ ಪ್ರಿಯರು ಕಾತರದಿಂದ ಕಾಯುತ್ತಿದ್ದ ಗ್ರ್ಯಾಂಡ್ ಥೆಫ್ಟ್ ಆಟೋ 6 (ಜಿಟಿಎ 6) ಗೇಮ್‌ ಗುರುವಾರ ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಬೆಂಗಳೂರಿನ 1,600ಕ್ಕೂ ಅಧಿಕ ಡೆವಲಪರ್‌ಗಳ ಪರಿಶ್ರಮದಿಂದ ಸಿದ್ಧವಾಗಿರುವ ಈ ಗೇಮ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದು, 2013ರಲ್ಲಿ ಬಂದ ‘ಜಿಟಿಎ 5’ ಮತ್ತು ಈಗಿನ ‘ಜಿಟಿಎ 6’ ನಡುವಿನ 13 ವರ್ಷಗಳ ಅವಧಿಯನ್ನು ಭಾರತದ ಅಭಿವೃದ್ಧಿಯ ಪಯಣಕ್ಕೆ ಹೋಲಿಸಿದ್ದಾರೆ.

ಮೋದಿ ತಮ್ಮ ಎಕ್ಸ್ ಮತ್ತು ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ‘ಭಾರತ ಹೊಸ ಆಟ ಆಡುತ್ತಿದೆ!’ ಎಂಬ ಶೀರ್ಷಿಕೆಯೊಂದಿಗೆ ಗ್ರಾಫಿಕ್ಸ್ ಹಂಚಿಕೊಂಡು, ಜಿಟಿಎ 5 ಬಿಡುಗಡೆಯಾದ 2013ರಿಂದ ಜಿಟಿಎ 6 ಬಿಡುಗಡೆಯಾದ 2026 ರವರೆಗೆ ಭಾರತದಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದ್ದಾರೆ.

ಏನಿದು ಜಿಟಿಎ 6 ಗೇಮ್?:

ಜಿಟಿಎ 6 ಎಂಬುದು ರಾಕ್‌ಸ್ಟಾರ್ ಗೇಮ್ಸ್ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಅತ್ಯಂತ ಜನಪ್ರಿಯ ಓಪನ್-ವರ್ಲ್ಡ್ ಆ್ಯಕ್ಷನ್-ಅಡ್ವೆಂಚರ್ ವಿಡಿಯೋ ಗೇಮ್ ಆಗಿದ್ದು, ಇದು 13 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಬುಧವಾರ ಮಧ್ಯರಾತ್ರಿ 12 ಗಂಟೆಗೆ ಬಿಡುಗಡೆ ಮಾಡಲಾಗಿದೆ. ಈ ಗೇಮ್‌ನಲ್ಲಿ ಲೂಸಿಯಾ ಕ್ಯಾಮಿನೋಸ್ ಮತ್ತು ಜೇಸನ್ ಡುವಾಲ್ ಎಂಬ ಇಬ್ಬರು ಮುಖ್ಯ ಪಾತ್ರಗಳಿವೆ. ಅಮೆರಿಕದ ಫ್ಲೋರಿಡಾ ರಾಜ್ಯದಿಂದ ಪ್ರೇರಿತವಾದ ಕಾಲ್ಪನಿಕ ಲಿಯೋನಿಡಾ ರಾಜ್ಯ ಮತ್ತು ವರ್ಣರಂಜಿತ ವೈಸ್ ಸಿಟಿ ನಗರದ ಬೀದಿಗಳಲ್ಲಿ ಈ ಗೇಮ್ ನಡೆಯುತ್ತದೆ.

ಪ್ರಸ್ತುತ ಈ ಗೇಮ್ ಪ್ಲೇಸ್ಟೇಷನ್ 5 ಮತ್ತು ಎಕ್ಸ್‌ಬಾಕ್ಸ್ ಸೀರೀಸ್ ಎಕ್ಸ್‌/ಎಸ್‌ ಕನ್ಸೋಲ್‌ಗಳಲ್ಲಿ ಮಾತ್ರ ಲಭ್ಯವಿದ್ದು, ಪಿಸಿ ಆವೃತ್ತಿಯ ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಈ ಗೇಮ್‌ನಲ್ಲಿ ಆಟಗಾರರು ಕಾರು, ಬೈಕ್, ಬೋಟ್ ಮತ್ತು ವಿಮಾನಗಳನ್ನು ಚಲಾಯಿಸುತ್ತಾ ವಿಶಾಲವಾದ ಪ್ರಪಂಚವನ್ನು ಮುಕ್ತವಾಗಿ ಸುತ್ತಾಡಬಹುದು ಮತ್ತು ವಿವಿಧ ಅಪರಾಧ ಕಾರ್ಯಾಚರಣೆಗಳಲ್ಲಿ ಭಾಗವಹಿಸಬಹುದು. ಈ ಗೇಮ್ ಡೌನ್ಲೋಡ್‌ ಮಾಡಲು ಸುಮಾರು 212 ಜಿಬಿ ಸ್ಟೋರೇಜ್‌ ಅಗತ್ಯವಿದ್ದು, ಭಾರತದಲ್ಲಿ ಇದರ ಸ್ಟ್ಯಾಂಡರ್ಡ್ ಆವೃತ್ತಿಯ ಬೆಲೆ 5,999 ರು. ಆಗಿದೆ.

ಗೇಮ್ ಬಗ್ಗೆ ಆತಂಕ:

ಜಿಟಿಎ 6 ಗೇಮ್‌ನಲ್ಲಿರುವ ತೀವ್ರ ಹಿಂಸಾಚಾರ, ಅಶ್ಲೀಲ ದೃಶ್ಯಗಳು ಮತ್ತು ಅಪರಾಧವನ್ನು ವೈಭವೀಕರಿಸುವ ಅಂಶಗಳು ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬ ಆತಂಕ ಸೃಷ್ಟಿಯಾಗಿದೆ. ಈ ಗೇಮ್ ಕೇವಲ ವಯಸ್ಕರಿಗಾಗಿ (ಮೆಚೂರ್‌ 17+) ರೇಟ್ ಆಗಿದ್ದರೂ, ಸಾಮಾಜಿಕ ಜಾಲತಾಣಗಳ ಅಬ್ಬರದಿಂದಾಗಿ ಚಿಕ್ಕ ಮಕ್ಕಳು ಮತ್ತು ಹದಿಹರೆಯದವರು ಇದರತ್ತ ಆಕರ್ಷಿತರಾಗುತ್ತಿದ್ದಾರೆ. ಇದು ಅಮಾಯಕರ ಮೇಲೆ ಹಲ್ಲೆ, ದರೋಡೆ, ಪೊಲೀಸರೊಂದಿಗೆ ಗುಂಡಿನ ಚಕಮಕಿ, ನಗ್ನತೆ, ಮಾದಕವಸ್ತುಗಳ ಸೇವನೆ ಮತ್ತು ರಕ್ತಸಿಕ್ತ ದೃಶ್ಯಗಳನ್ನು ಒಳಗೊಂಡಿದೆ.

ಬೆಂಗಳೂರಿಗರ ಕೊಡುಗೆ:

ಜಿಟಿಎ 6 ನಿರ್ಮಾಣದಲ್ಲಿ ಬೆಂಗಳೂರಿನ ರಾಕ್‌ಸ್ಟಾರ್ ಇಂಡಿಯಾ ಸ್ಟುಡಿಯೋದ ಸುಮಾರು 1,615 ಡೆವಲಪರ್‌ಗಳು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್‌ ಮಾಡಿದ್ದಾರೆ. ಗೇಮ್‌ನ ಕಾಲ್ಪನಿಕ ರಾಜ್ಯವಾದ ಲಿಯೊನಿಡಾದ ಆಕರ್ಷಕ ತಾಣವಾದ ವೈಸ್ ಬೀಚ್ ವಿಭಾಗವನ್ನು ವಿನ್ಯಾಸಗೊಳಿಸುವಲ್ಲಿ ಮತ್ತು ಗೇಮ್‌ನ ವಿಶಾಲವಾದ ಓಪನ್-ವರ್ಲ್ಡ್ ಪರಿಸರ, 3ಡಿ ಮಾಡೆಲಿಂಗ್, ಅನಿಮೇಷನ್ ನಿರ್ಮಾಣದಲ್ಲಿ ಬೆಂಗಳೂರು ತಂಡ ಪ್ರಮುಖ ಪಾತ್ರ ವಹಿಸಿದೆ.

ಕಾಂಗ್ರೆಸ್‌ ಕಿಡಿ:

ಪ್ರಧಾನಿ ನರೇಂದ್ರ ಮೋದಿ ಜಿಟಿಎ 6 ಬಿಡುಗಡೆಯನ್ನು ಪ್ರಸ್ತಾಪಿಸಿ ಪೋಸ್ಟ್‌ ಮಾಡಿದ್ದರ ವಿರುದ್ಧ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ಈ ವಿಡಿಯೋ ಗೇಮ್‌ನಲ್ಲಿ ‘ಅಪರಾಧಿ ಜೋಡಿ’ಯ ಕಥೆ ಇರುವುದರಿಂದ, ಪ್ರಧಾನಿಯವರ ಈ ಉಲ್ಲೇಖ ಬಹಳ ಸೂಕ್ತವಾಗಿದೆ ಎಂದು ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ವ್ಯಂಗ್ಯವಾಡಿದೆ.

PREV
Read more Articles on
click me!

Recommended Stories

ಮತ್ತೆ ಶುರುವಾಯ್ತು HMT ಕ್ರೇಜ್: ‘ಕನ್ನಡಿಗ’ ವಾಚ್‌ಗೆ ಭಾರಿ ಡಿಮ್ಯಾಂಡ್, ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ನಿರ್ಧಾರ
ಬೆಂಗಳೂರಿನ ಐಷಾರಾಮಿ ಸಂಕೀರ್ಣ ಯುಬಿ ಸಿಟಿಯ 21 ಸ್ವತ್ತುಗಳಿಂದ ₹2.65 ಕೋಟಿ ತೆರಿಗೆ ವಸೂಲಿ