Bengaluru: ದೊಡ್ಡಬಳ್ಳಾಪುರದ 2 ಗ್ರಾಮದಲ್ಲಿ 369 ಎಕರೆ ಭೂಸ್ವಾಧೀನಕ್ಕೆ ಅಧಿಸೂಚನೆ

Published : Oct 19, 2026, 12:37 PM IST
land acquisition

ಸಾರಾಂಶ

369 ಎಕರೆ ಭೂಮಿಯನ್ನು ಕೈಗಾರಿಕೆಗಳಿಗಾಗಿ ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ನಿರ್ಧಾರವನ್ನು ವಿರೋಧಿಸಿ ಸ್ಥಳೀಯ ರೈತರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ, ಇದು ಅರ್ಕಾವತಿ ನದಿಯ ಜಲಾನಯನ ಪ್ರದೇಶವಾಗಿರುವುದರಿಂದ ಪರಿಸರ ನಾಶದ ಆತಂಕವೂ ಎದುರಾಗಿದೆ.

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಎರಡು ಹಳ್ಳಿಗಳಲ್ಲಿ 369 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು (land acquisition) ಕರ್ನಾಟಕ ಸರ್ಕಾರ ಅಕ್ಟೋಬರ್ 12 ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ ಎಂದು ವರದಿಯಾಗಿದೆ. ಉತ್ತರ ಬೆಂಗಳೂರಿನ (North Bengaluru) ಫಾಕ್ಸ್‌ಕಾನ್ ಸೌಲಭ್ಯಗಳ ಬಳಿ ಕೈಗಾರಿಕೆಗಳನ್ನು ಸ್ಥಾಪಿಸಲು ಭೂಮಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಕರ್ನಾಟಕ ಸರ್ಕಾರದ ಅಧಿಸೂಚನೆಯ ಪ್ರಕಾರ, ಸೊನ್ನಮಾರನಹಳ್ಳಿಯಲ್ಲಿ (Sonnamaranahalli) 51 ಸರ್ವೆ ನಂಬರ್‌ಗಳಲ್ಲಿ 223 ಎಕರೆ 11 ಗುಂಟೆ ಮತ್ತು ದಂಡುದಾಸ ಕೊಡಿಗೆಹಳ್ಳಿಯಲ್ಲಿ (Dandudasa Kodigehalli) 129 ಸರ್ವೆ ನಂಬರ್‌ಗಳಲ್ಲಿ 145 ಎಕರೆ 38 ಗುಂಟೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಉದ್ದೇಶಿಸಿದೆ. ದೊಡ್ಡಬಳ್ಳಾಪುರ (Doddaballapur) ಗಡಿಯಲ್ಲಿರುವ ದೇವನಹಳ್ಳಿ ತಾಲೂಕಿನ ಕೊಯಿರಾ ಗ್ರಾಮದಲ್ಲೂ ಭೂ ಸ್ವಾಧೀನ ಅಧಿಸೂಚನೆ ಹೊರಡಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಸರ್ಕಾರದ ಅಧಿಸೂಚನೆಯಲ್ಲಿರುವ ಮಹತ್ವದ ಅಂಶಗಳು

ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಲಾದ ಭೂಮಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಜಮೀನುಗಳೆರಡೂ ಸೇರಿವೆ. ಸೊನ್ನಮಾರನಹಳ್ಳಿಯ 223 ಎಕರೆ 11 ಗುಂಟೆ ಜಮೀನಿನಲ್ಲಿ 120 ಎಕರೆ 22 ಗುಂಟೆ ಸರ್ಕಾರಿ ಭೂಮಿಯಾಗಿದ್ದು, ಉಳಿದ 102 ಎಕರೆ 29 ಗುಂಟೆ ಖಾಸಗಿ ಭೂಮಾಲೀಕರಿಗೆ ಸೇರಿದೆ. ಹಾಗೆಯೇ, ದಂಡುದಾಸ ಕೊಡಿಗೆಹಳ್ಳಿಯ 145 ಎಕರೆ 38 ಗುಂಟೆಯಲ್ಲಿ 34 ಎಕರೆ 38 ಗುಂಟೆ ಸರ್ಕಾರಿ ಭೂಮಿ ಹಾಗೂ 111 ಎಕರೆ ಖಾಸಗಿ ಜಮೀನಾಗಿದೆ.

ಅಕ್ಟೋಬರ್ 12 ರಿಂದ ಭೂಮಾಲೀಕರು ತಮ್ಮ ಆಸ್ತಿಗಳನ್ನು ಮಾರಾಟ ಮಾಡುವುದು, ಗುತ್ತಿಗೆ ನೀಡುವುದು ಅಥವಾ ಯಾವುದೇ ನಿರ್ಮಾಣ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವುದನ್ನು ಅಧಿಸೂಚನೆಯು ನಿಷೇಧಿಸಿದೆ. ಅಧಿಕಾರಿಗಳ ಕರ್ತವ್ಯಕ್ಕೆ ಅಡಚಣೆ ಉಂಟುಮಾಡದಂತೆ ಎಚ್ಚರಿಸಲಾಗಿದ್ದು, ಈ ಪ್ರಕಟಣೆಯ ನಂತರ ನಿರ್ಮಿಸಲಾದ ಕಟ್ಟಡಗಳಿಗೆ ಯಾವುದೇ ಪರಿಹಾರ ನೀಡಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆಕ್ಷೇಪಣೆ ಸಲ್ಲಿಸಲು ಯಾವುದೇ ನಿರ್ದಿಷ್ಟ ಗಡುವನ್ನು ಅಧಿಸೂಚನೆಯಲ್ಲಿ ನಮೂದಿಸಿಲ್ಲ.

ರೈತರ ತೀವ್ರ ವಿರೋಧ ಮತ್ತು ಪ್ರತಿಭಟನೆ

ಸರ್ಕಾರದ ಈ ಏಕಪಕ್ಷೀಯ ನಿರ್ಧಾರದ ವಿರುದ್ಧ ಸ್ಥಳೀಯ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪ್ರತಿಭಟನೆಗೆ ಧುಮುಕಿದ್ದಾರೆ. ತಮ್ಮ ಐದು ಎಕರೆ ಭೂಮಿಯನ್ನು ಕಳೆದುಕೊಳ್ಳಲಿರುವ ದಂಡುದಾಸ ಕೊಡಿಗೆಹಳ್ಳಿಯ ರೈತ ಮುರಳಿ ಡಿ.ಕೆ. ಮಾತನಾಡಿ, ಬೆಂಗಳೂರು ಹೊರತುಪಡಿಸಿ ಇತರ ಭಾಗಗಳಲ್ಲಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದಾಗಿ ಪದೇ ಪದೇ ಹೇಳುವ ಸರ್ಕಾರ, ನಗರದ ಸುತ್ತಮುತ್ತಲ ಪ್ರದೇಶಗಳಲ್ಲೇ ಭೂಸ್ವಾಧೀನ ಮುಂದುವರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರು ಗ್ರಾಮೀಣ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದ ರೈತರು, ಈ ಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಸಂಪೂರ್ಣವಾಗಿ ಕೈಬಿಡುವವರೆಗೆ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ.

ಪರಿಸರ ಕಾಳಜಿ ಮತ್ತು ಕಾವೇರಿ ಜಲಾನಯನ ಪ್ರದೇಶದ ಆತಂಕ

ಸ್ಥಳೀಯ ನಿವಾಸಿಗಳು ಮತ್ತು ರೈತರ ಪ್ರಕಾರ, ಸ್ವಾಧೀನಕ್ಕೆ ಪ್ರಸ್ತಾಪಿಸಲಾದ ಈ ಜಮೀನು ಕಾವೇರಿ ನದಿಯ ಪ್ರಮುಖ ಉಪನದಿಯಾದ ಅರ್ಕಾವತಿಯ ಜಲಾನಯನ ಪ್ರದೇಶಕ್ಕೆ ಸೇರಿದೆ. ಸೊನ್ನಮಾರನಹಳ್ಳಿಯ ರೈತ ಎಸ್.ಎಂ. ಪ್ರಕಾಶ್ ಮಾತನಾಡಿ, ಅರ್ಕಾವತಿ ನದಿಯನ್ನು ಪುನರುಜ್ಜೀವನಗೊಳಿಸುವ ಬದಲು, ಅದರ ಜಲಾನಯನ ಪ್ರದೇಶದಲ್ಲಿನ ಪ್ರಮುಖ ನೀರಿನ ಮೂಲಗಳನ್ನು ನಾಶಮಾಡಲು ಸರ್ಕಾರ ಯೋಜನೆ ರೂಪಿಸುತ್ತಿದೆ. ಸರ್ಕಾರವು ಈ ಪ್ರದೇಶದ ಅತ್ಯಂತ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಬಾರದು ಮತ್ತು ಬಂಡವಾಳಶಾಹಿ ಉದ್ಯಮಿಗಳ ಹಿತಾಸಕ್ತಿ ಕಾಯುವ ಬದಲು ರೈತ ಪರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರು ನಮ್ಮ ಮೆಟ್ರೋ ಪಿಂಕ್ ಮತ್ತು ಬ್ಲೂ ಲೈನ್ ಹೊಸ ಅಪ್ಡೇಟ್, BMRCL ಟಾರ್ಗೆಟ್ 2027!
ಆಯುಧ ಪೂಜೆಗೆ ಕಾವೇರಿ ನೀರು ಬಳಕೆ ಮಾಡಿದರೆ ಹುಷಾರ್, ಬರೋಬ್ಬರಿ 5 ಸಾವಿರ ರೂ ದಂಡ ಎಚ್ಚರಿಕೆ