ಬೆಂಗಳೂರು ನಮ್ಮ ಮೆಟ್ರೋ ಪಿಂಕ್ ಮತ್ತು ಬ್ಲೂ ಲೈನ್ ಹೊಸ ಅಪ್ಡೇಟ್, BMRCL ಟಾರ್ಗೆಟ್ 2027!

Published : Oct 19, 2026, 12:24 PM IST
Metro

ಸಾರಾಂಶ

ಬೆಂಗಳೂರಿನ ನಮ್ಮ ಮೆಟ್ರೋದ ಪಿಂಕ್ ಮತ್ತು ಬ್ಲೂ ಲೈನ್ ಮಾರ್ಗಗಳ ಪ್ರಾಯೋಗಿಕ ಸಂಚಾರ ಮುಂಬರುವ ನವೆಂಬರ್‌ನಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ. ಈ ಎರಡೂ ಪ್ರಮುಖ ಮಾರ್ಗಗಳನ್ನು 2027 ರ ಮೇ ವೇಳೆಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಗುರಿಯನ್ನು ಬಿಎಮ್‌ಆರ್‌ಸಿಎಲ್ ಹೊಂದಿದೆ. ಇದರಿಂದ ರಾಜಧಾನಿಯ ಸಂಚಾರ ದಟ್ಟಣೆಗೆ ಬಹುದೊಡ್ಡ ಪರಿಹಾರ ಸಿಗಲಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಬೆಸ್ಟ್ ಸಾರಿಗೆ ವ್ಯವಸ್ಥೆಗೆ ಎಂದು ಹೆಸರು ಪಡೆದುಕೊಂಡಿರುವ 'ನಮ್ಮ ಮೆಟ್ರೋ' ಯೋಜನೆಯ ಎರಡು ಪ್ರಮುಖ ಮಾರ್ಗಗಳ ಕಾಮಗಾರಿ ಭರದಿಂದ ಸಾಗುತ್ತಿದೆ. ಈಗ ಒಂದು ಖುಷಿಯ ಸುದ್ದಿ ಸಿಕ್ಕಿದೆ. ದಕ್ಷಿಣ ಮತ್ತು ಉತ್ತರ ಬೆಂಗಳೂರನ್ನು ಸಂಪರ್ಕಿಸುವ ಪಿಂಕ್ ಲೈನ್ ಭೂಗತ ವಿಭಾಗ ಹಾಗೂ ಸಿಲಿಕಾನ್ ಸಿಟಿಯ ಐಟಿ ಹಬ್‌ಗಳನ್ನು ಸಂಪರ್ಕಿಸುವ ಬ್ಲೂ ಲೈನ್ ಹೊರ ವರ್ತುಲ ರಸ್ತೆ ಕಾರಿಡಾರ್‌ಗಳಲ್ಲಿ ಪ್ರಾಯೋಗಿಕ ಸಂಚಾರ ಮುಂಬರುವ ನವೆಂಬರ್‌ನಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ. ಈ ಎರಡೂ ಯೋಜನೆಗಳನ್ನು 2027 ರ ಮೇ ವೇಳೆಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಸ್ಪಷ್ಟ ಗುರಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಹಮ್ಮಿಕೊಂಡಿದೆ.

ಡೈರಿ ಸರ್ಕಲ್‌ನಿಂದ ಶಿವಾಜಿನಗರದವರೆಗೆ ಭೂಗತ ರೈಲು

ಒಟ್ಟು 21 ಕಿಲೋಮೀಟರ್ ಉದ್ದದ ಪಿಂಕ್ ಲೈನ್ ಮಾರ್ಗವು ದಕ್ಷಿಣ ಬೆಂಗಳೂರಿನ ಕಾಳೇನ ಅಗ್ರಹಾರದಿಂದ ಉತ್ತರ ಭಾಗದ ನಾಗವಾರವನ್ನು ಸಂಪರ್ಕಿಸುತ್ತದೆ. ಈ ಪೈಕಿ ಡೈರಿ ಸರ್ಕಲ್‌ನಿಂದ ಶಿವಾಜಿನಗರದವರೆಗಿನ ಸುರಂಗ ಮಾರ್ಗದಲ್ಲಿ ಅಕ್ಟೋಬರ್ ಅಂತ್ಯ ಅಥವಾ ನವೆಂಬರ್ ವೇಳೆಗೆ ಪ್ರಾಯೋಗಿಕವಾಗಿ ರೈಲು ಓಡಿಸುವ ಸಿದ್ಧತೆಗಳು ನಡೆಯುತ್ತಿವೆ ಎಂದು ಬಿಎಮ್‌ಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿಸಿ ಜಾಫರ್ ಸ್ಪಷ್ಟಪಡಿಸಿದ್ದಾರೆ.

ಇನ್ನು ಅಗ್ರಹಾರದಿಂದ ತಾವರೆಕೆರೆಯವರೆಗಿನ 7.5 ಕಿ.ಮೀ ಎತ್ತರಿಸಿದ ಮಾರ್ಗದ ಸುರಕ್ಷತಾ ಪರಿಶೀಲನೆಯನ್ನು ಮೆಟ್ರೋ ರೈಲ್ವೆ ಸುರಕ್ಷತಾ ಪರೀಕ್ಷೆ ಪೂರ್ಣಗೊಳಿಸಿದ್ದಾರೆ. ಈ ಎತ್ತರದ ಮಾರ್ಗದ ಉದ್ಘಾಟನೆಗೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪತ್ರ ಬರೆದಿದ್ದು, ಇದು ಕಾರ್ಯಾರಂಭಗೊಂಡರೆ ಬೆಂಗಳೂರು ಮೆಟ್ರೋದ ಒಟ್ಟು ಕಾರ್ಯಾಚರಣೆಯ ಜಾಲವು 96.1 ಕಿ.ಮೀ ನಿಂದ 103.6 ಕಿ.ಮೀ ಗೆ ವಿಸ್ತರಣೆಯಾಗಲಿದೆ. ಈ ಮಾರ್ಗಕ್ಕಾಗಿ ಬಿಇಎಂಎಲ್ ಈಗಾಗಲೇ 11 ರೈಲು ಸೆಟ್‌ಗಳನ್ನು ಪೂರೈಸಿದೆ.

ಹೊರ ವರ್ತುಲ ರಸ್ತೆಯ ಟೆಕ್ ಹಬ್‌ಗಳಿಗೆ ಬ್ಲೂ ಲೈನ್ ಸಂಪರ್ಕ

ಕೆ.ಆರ್. ಪುರಂ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವಿನ ಹೊರ ವರ್ತುಲ ರಸ್ತೆ ಕಾರಿಡಾರ್‌ನಲ್ಲಿ ನಿರ್ಮಿಸಲಾಗುತ್ತಿರುವ ಬ್ಲೂ ಲೈನ್, ಬೆಂಗಳೂರಿನ ಪ್ರಮುಖ ತಂತ್ರಜ್ಞಾನ ವಲಯಗಳನ್ನು ಬೆಸೆಯಲಿದೆ. ನವೆಂಬರ್ 15 ರೊಳಗೆ ಬೈಯಪ್ಪನಹಳ್ಳಿ ಡಿಪೋದಿಂದ ಕೆ.ಆರ್. ಪುರಂ ಮತ್ತು ಮಾರತಹಳ್ಳಿ ನಡುವೆ ಪ್ರಾಯೋಗಿಕ ಸಂಚಾರ ನಡೆಸುವ ಗುರಿಯನ್ನು ಬಿಎಮ್‌ಆರ್‌ಸಿಎಲ್ ಹೊಂದಿದೆ.

ಪ್ರಸ್ತುತ ಮಾರ್ಗದಲ್ಲಿ ಹಳಿ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಕೇವಲ 2 ಕಿ.ಮೀ ಕಾಮಗಾರಿ ಬಾಕಿಯಿದೆ. ಸಿಲ್ಕ್ ಬೋರ್ಡ್ ಹೊರತುಪಡಿಸಿ ಉಳಿದೆಲ್ಲಾ ನಿಲ್ದಾಣಗಳ ನಿರ್ಮಾಣ ಕಾರ್ಯ ನವೆಂಬರ್ ವೇಳೆಗೆ ಅಂತಿಮ ಹಂತ ತಲುಪಲಿದೆ. ಬ್ಲೂ ಲೈನ್‌ಗಾಗಿ ಬಿಇಎಂಎಲ್ ಎರಡು ರೈಲು ಸೆಟ್‌ಗಳನ್ನು ಸಬರಾಜು ಮಾಡಿದ್ದು, ಪ್ರಾಯೋಗಿಕ ಪರೀಕ್ಷೆಗೆ ಇದು ಸಾಕಷ್ಟಿದೆ.

ಸಿಗ್ನಲಿಂಗ್ ಏಕೀಕರಣ ಹಾಗೂ ಮೇ 2027 ರ ಕಾಲಮಿತಿ

ಸಿವಿಲ್ ಕಾಮಗಾರಿಗಳು ಪೂರ್ಣಗೊಂಡರೂ ಸಹ ಸಿಗ್ನಲಿಂಗ್ ವ್ಯವಸ್ಥೆ, ಪ್ಲಾಟ್‌ಫಾರ್ಮ್ ಸ್ಕ್ರೀನ್ ಬಾಗಿಲುಗಳ ಸ್ಥಾಪನೆ ಹಾಗೂ ರೋಲಿಂಗ್ ಸ್ಟಾಕ್‌ನೊಂದಿಗೆ ಸೂಕ್ತ ಸಮನ್ವಯ ಸಾಧಿಸುವುದು ಕಡ್ಡಾಯವಾಗಿದೆ. ಸಿಗ್ನಲಿಂಗ್ ಏಕೀಕರಣ ಪ್ರಕ್ರಿಯೆಯು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಎಲ್ಲಾ ಶಾಸನಬದ್ಧ ಅನುಮತಿಗಳು ಮತ್ತು ಪರೀಕ್ಷೆಗಳು ಯಶಸ್ವಿಯಾಗಿ ಮುಗಿದರೆ, 2027 ರ ಮಾರ್ಚ್ ವೇಳೆಗೆ ಪ್ರಮುಖ ಕಾಮಗಾರಿ ಮುಗಿಸಿ, ಮೇ 2027 ರೊಳಗೆ ಎರಡೂ ಕಾರಿಡಾರ್‌ಗಳನ್ನು ಸಾರ್ವಜನಿಕ ಸೇವೆಗೆ ನೀಡಲಾಗುವುದು" ಎಂದು ಬಿಎಮ್‌ಆರ್‌ಸಿಎಲ್ ತಿಳಿಸಿದೆ.

ಸದ್ಯ ಪ್ರತಿದಿನ ಸುಮಾರು 10 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ತಲುಪಿಸುತ್ತಿರುವ ನಮ್ಮ ಮೆಟ್ರೋ ಜಾಲಕ್ಕೆ ಈ ಎರಡು ಪ್ರಮುಖ ಮಾರ್ಗಗಳು ಸೇರ್ಪಡೆಯಾಗುವುದರಿಂದ ರಾಜಧಾನಿಯ ಸಂಚಾರ ದಟ್ಟಣೆಗೆ ಶೀಘ್ರದಲ್ಲೇ ಬಹುದೊಡ್ಡ ಪರಿಹಾರ ಸಿಗಲಿದೆ.

PREV
Read more Articles on
click me!

Recommended Stories

ಆಯುಧ ಪೂಜೆಗೆ ಕಾವೇರಿ ನೀರು ಬಳಕೆ ಮಾಡಿದರೆ ಹುಷಾರ್, ಬರೋಬ್ಬರಿ 5 ಸಾವಿರ ರೂ ದಂಡ ಎಚ್ಚರಿಕೆ
ಬೆಂಗಳೂರಿನ ರಸ್ತೆಯ ಚಿತ್ರಣವೇ ಬದಲು! ಕೆನಡಾ ವ್ಯಕ್ತಿಯ ಪ್ರಯತ್ನಕ್ಕೆ ಕಿರಣ್ ಮಜುಂದಾರ್ ಶಾ ಮೆಚ್ಚುಗೆ