
ಬೆಂಗಳೂರು: ಸ್ವಚ್ಛ ರಾಜಕಾರಣ ಮಾಡುತ್ತಿರುವೆ ಎಂದು ಹೇಳಿಕೊಳ್ಳುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ (Bengaluru Urban Development Minister Krishna Byre Gowda) ಅವರು 27 ವಿಧಾನಸಭಾ ಕ್ಷೇತ್ರಗಳ ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳನ್ನು ಕಳೆದ 2 ತಿಂಗಳಿಂದ ಅವರ ಬಳಿಯೇ ಇರಿಸಿಕೊಂಡಿರುವುದು ಏಕೆ? ಈ ಬಗ್ಗೆ ಬಹಿರಂಗ ಉತ್ತರ ನೀಡಬೇಕು ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ (N R Ramesh) ಆಗ್ರಹಿಸಿದ್ದಾರೆ.
ಈ ಸಂಬಂಧ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಬಹಿರಂಗ ಪತ್ರ ಬರೆದಿರುವ ರಮೇಶ್, ಸಚಿವರು ಸಂದರ್ಭ ಸಿಕ್ಕಾಗಲೆಲ್ಲಾ ನಾನು ಸ್ವಚ್ಛ ರಾಜಕಾರಣ ಮಾಡುತ್ತಿದ್ದೇನೆ ಎಂದು ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಾರೆ. ಆದರೆ, ನಿಜವಾಗಿಯೂ ಇದರಲ್ಲಿ ಎಷ್ಟು ಸತ್ಯ ಅಡಗಿದೆ ಎಂಬುದು ಅವರ ಮನಸಾಕ್ಷಿಗೆ ಮಾತ್ರ ತಿಳಿದಿದೆ ಎಂದಿದ್ದಾರೆ.
ಸಚಿವರ ಸ್ವಕ್ಷೇತ್ರ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಸಾವಿರಾರು ಕೋಟಿ ರು. ಮೌಲ್ಯದ ಸರ್ಕಾರಿ ಸ್ವತ್ತುಗಳನ್ನು ಅವರ ಹಿಂಬಾಲಕರು/ಬೆಂಬಲಿಗರು ರಾಜಾರೋಷವಾಗಿ ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿರುವ ಹಗರಣಗಳನ್ನು ದಾಖಲೆ ಸಹಿತ ನಾನು ಬಯಲಿಗೆ ಎಳೆದಿದ್ದೇನೆ. ಈ ಸರ್ಕಾರಿ ಸ್ವತ್ತುಗಳನ್ನು ಕಬಳಿಸಿರುವ ನೆಲಗಳ್ಳರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲು ಮುಂದಾಗುತ್ತಿಲ್ಲ ಏಕೆ? ಆ ಸ್ವತ್ತು ಮರಳಿ ಸರ್ಕಾರದ ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.
ಕಳೆದ ನಾಲ್ಕೈದು ತಿಂಗಳಿಂದ ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರುವ ಕೃಷ್ಣ ಬೈರೇಗೌಡ ಅವರು ನಗರದ 27 ವಿಧಾನಸಭಾ ಕ್ಷೇತ್ರಗಳ ಕಾಮಗಾರಿಗಳ ಪ್ಯಾಕೇಜ್‌ಗಳಿಗೆ ಗಳಿಗೆ ಸಂಬಂಧಿಸಿದ 80ಕ್ಕೂ ಹೆಚ್ಚು ಕಡತಗಳನ್ನು ಕಳೆದ ಎರಡು ತಿಂಗಳುಗಳಿಂದ ಅನುಮೋದನೆ ನೀಡದೆ ಅವರ ಕಚೇರಿಯಲ್ಲಿಯೇ ಉಳಿಸಿಕೊಂಡಿರುವ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.
ಸಚಿವರ ಆಪ್ತ ಕಾರ್ಯದರ್ಶಿ ಸೇರಿ ಅವರ ಕಚೇರಿಯ ಸಿಬ್ಬಂದಿ ವರ್ಗ 5 ನಗರ ಪಾಲಿಕೆಗಳ 5 ಮುಖ್ಯ ಅಭಿಯಂತರರ ಮೂಲಕ ಪ್ರತಿ ಕಡತದ ಅನುಮೋದನೆಗೆ ಶೇ.5ರಷ್ಟು ಕಮಿಷನ್ ತಲುಪಿಸುವಂತೆ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರನ್ನು ರಾಜಾರೋಷವಾಗಿ ಕೇಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ವಿಚಾರ ಸಚಿವರ ಗಮನಕ್ಕೆ ಬಂದಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಅವರೇ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.