
ಬೆಂಗಳೂರು(ಜೂ.11) ಬೆಂಗಳೂರಿನ ಆಟೋ ಪ್ರಯಾಣ ಹೊಸ ಪ್ರಪಂಚ ತೆರೆಯಲಿದೆ. ಹಲವು ಸ್ಪೂರ್ತಿಯ ಕತೆಗಳು, ಕಣ್ಣೀರ ಕತೆಗಳು ಈಗಾಗಲೇ ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ಬೆಂಗಳೂರಿನಲ್ಲ ಆಟೋ ಚಾಲಕನಾಗಿ ಬದುಕಿನ ಬಂಡಿ ನಡೆಸುತ್ತಿರುವ ಸುರೇಂದ್ರ ಆರ್ ಕತೆ ಇಲ್ಲಿದೆ. ಮಾನವ ಸಂಪನ್ಮೂಲ(ಹೆಆರ್)ವಿಭಾಗ ಮುಖ್ಯಸ್ಥೆ ಗಾಯತ್ರಿ ಗೋಪಕುಮಾರ್ ಲಿಂಕ್ಡ್‌ಇನ್ ಮೂಲಕ ಆಟೋ ಚಾಲಕನ ಹೋರಾಟದ ಕತೆಯನ್ನು ಅನಾವರಣ ಮಾಡಿದ್ದಾರೆ. ಬೆಂಗಳೂರಿನಲ್ಲಿ ಟೆಕ್ಕಿಯಾಗಿದ್ದ ಈ ಆಟೋ ಚಾಲಕನ ಬದುಕಿನ ಪಯಣ ಇದೀಗ ಹಲವು ಸೋಶಿಯಲ್ ಮೀಡಿಯಾ ವೇದಿಕೆಯಲ್ಲಿ ಚರ್ಚೆಯಾಗುತ್ತಿದೆ. ಜೀವನದಲ್ಲಿ ಎದುರಾದ ಕೆಲವು ಅನಿರೀಕ್ಷಿತ ತಿರುವುಗಳಿಂದಾಗಿ ಆಟೋ ಚಾಲಕನಾಗಿ ಬದಕು ಸಾಗಿಸುತ್ತಿದ್ದಾನೆ. ಇದೀಗ ಮತ್ತೆ ತಮ್ಮ ಹಳೆಯ ವೃತ್ತಿಜೀವನಕ್ಕೆ ಮರಳಲು ಹಾತೊರೆಯುತ್ತಿದ್ದಾರೆ.
ಕ್ಷಮಿಸಿ ಮೇಡಂ, ನೀವು ಹೆಚ್ಆರ್? ನನಗೊಂದು ಕೆಲಸ ಕೊಡಿಸಿ
ಎಂದಿನಂತೆ ಗಾಯತ್ರಿ ಗೋಪಕುಮಾರ್ ಕಚೇರಿಗೆ ತೆರಳಲು ಆಟೋ ಹತ್ತಿದ್ದಾರೆ. ಆಟೋ ಪ್ರಯಾಣದ ನಡುವೆ ತನಗೆ ಬಂದ ಒಂದೆರಡು ಫೋನ್ ಕರೆಗಳು ಆಟೋ ಚಾಲಕನ ಬದುಕಿನ ಕತೆಯನ್ನು ತೆರೆದಿಟ್ಟಿದೆ. ಕಾರಣ ಗಾಯತ್ರಿ ಗೋಪಕುಮಾರ್ ಫೋನ್ ಕರೆಯಲ್ಲಿ ಮಾತುಗಳನ್ನು ಕೇಳಿಸಿಕೊಂಡ ಆಟೋ ಚಾಲಕ, ಕ್ಷಮಿಸಿ ನೀವು ಹೆಚ್ಆರ್ ಆಗಿ ಕೆಲಸ ಮಾಡುತ್ತೀದ್ದೀರಾ? ನನಗೊಂದು ಕೆಲಸ ಕೊಡಿಸುವಲ್ಲಿ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾನೆ. ಈ ಕುರಿತು ಗಾಯತ್ರಿ ಗೋಪಕುಮಾರ್ ತಮ್ಮ ಲಿಂಕ್ಡ್ಇನ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಹೋರಾಟದ ಬದುಕು
ಆಟೋ ಚಾಲಕನ ಮಾತುಗಳನ್ನು ಕೇಳಿಸಿಕೊಂಡ ಗಾಯತ್ರಿ ಗೋಪಕುಮಾರ್‌ಗೆ ಕುತೂಹಲ ಹೆಚ್ಚಾಗಿದೆ. ಹೀಗಾಗಿ ಈತನ ಬಗ್ಗೆ ತಿಳಿದುಕೊಳ್ಳಲು ಮಾತು ಮುಂದುವರಿಸಿದ್ದಾರೆ. ಈ ವೇಳೆ ತೆರೆದುಕೊಂಡಿದ್ದೆ ಆಟೋ ಚಾಲಕನ ಕಾರ್ಪೋರೇಟ್ ಜೀವನದ ಕತೆ. ಸದ್ಯ ಸುರೇಂದ್ರ ಬದುಕು ಸಾಗಿಸಲು ಬೇರೆ ದಾರಿ ಕಾಣದೆ ಆಟೋ ಚಾಲಕನಾಗಿ ದುಡಿಯುತ್ತಿದ್ದಾನೆ. ಕುಟುಂಬವನ್ನು ನೋಡಿಕೊಳ್ಳುತ್ತಿದ್ದಾನೆ. ಆದರೆ ಈ ಸುರೇಂದ್ರ ಆರ್ ಟೆಕ್ಕಿ. ಹೌದು, ಕಾಲ್ಪಿಯನ್ ಸಾಫ್ಟ್‌ವೇರ್ ಟೆಕ್ನಾಲಜಿ ಕಂಪಿಯಲ್ಲಿ ಸೀನಿಯರ್ ಅಸೋಸಿಯೇಟ್ ಕ್ವಾಲಿಟಿ ಅನಾಲಿಸ್ಟ್ ಆಗೆ ಕೆಲಸ ಮಾಡಿದ್ದ ಈ ಸುರೇಂದ್ರ OSPROSYS ಕಂಪನಿಯಲ್ಲಿ ಟೀಮ್ ಲೀಡ್ ಆಗಿ ಹಲವು ಪಾಜೆಕ್ಟ್ ನಿರ್ವಿಹಿಸಿದ್ದಾರೆ. ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಸುರೇಂದ್ರಗೆ ಬದುಕಿನಲ್ಲಿ ಎದುರಾದ ಕೆಲ ಸವಾಲು ಕೆಲಸವನ್ನೇ ಕಿತ್ತುಕೊಂಡಿತ್ತು.
ಸುರೇಂದ್ರಗೆ ಎದುರಾದ ಆರೋಗ್ಯ ಸಮಸ್ಯೆ ಅದರಲ್ಲೂ ಸ್ಟ್ರೋಕ್ ಜೀವನನ್ನೇ ತಿರುಗಿಸಿತ್ತು. ಜೊತೆಗೆ ಕುಟುಂಬ ಆರೋಗ್ಯ ಸಮಸ್ಯೆ, ಆರ್ಥಿಕ ಸಂಕಷ್ಟಗಳದಿಂದ ಕೆಲಸ ಕಳೆದುಕೊಳ್ಳಬೇಕಾಯಿತು. ಇದು ಸುರೇಂದ್ರ ಆರ್ ಜೀವನ ಮತ್ತಷ್ಟು ಸಂಕಷ್ಟಕ್ಕೆ ತಳ್ಳಿತ್ತು. ಆರೋಗ್ಯದಿಂದ ಚೇತರಿಸಿಕೊಂಡು ಮರಳಿದಾಗ ಎಲ್ಲೂ ಕೆಲಸ ಸಿಗಲಿಲ್ಲ. ಕೆಲಸಕ್ಕಾಗಿ ಅಲೆದಾಡುವ, ಕಾಯುವ ಪರಿಸ್ಥಿತಿ ಸುರೇಂದ್ರನಿಗೆ ಇರಲಿಲ್ಲ. ಕುಟುಂಬ ನೋಡಿಕೊಳ್ಳಲು ತಕ್ಷಣವೇ ಕೆಲಸ ಬೇಕಿತ್ತು. ಯಾವುದು ಸಿಗದಾಗ ಆಟೋ ಚಾಲಕನಾಗಿ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿದ್ದ. ಇದರಂತೆ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಆದರೆ ಮರಳಿ ತನ್ನ ಅನುಭವ, ಪ್ರತಿಭಗೆ ತಕ್ಕಂತೆ ಕೆಲಸ ಗಿಟ್ಟಿಸಿಕೊಳ್ಳಲು ಹೋರಾಟ ನಡೆಸುತ್ತಲೇ ಇದ್ದಾನೆ.
ತನ್ನ ಅನುಭವ ಹಾಗೂ ಪ್ರತಿಭೆಗೆ ತಕ್ಕ ಯಾವುದೇ ಕೆಲಸ ಮಾಡಲು ಸುರೇಂದ್ರ ತಯಾರಿದ್ದಾರೆ. ಸುರೇಂದ್ರಗೆ ಒಂದು ಅವಕಾಶ ಬೇಕಿದೆ ಅಷ್ಟೇ ಎಂದು ಗಾಯತ್ರಿ ಗೋಪಕುಮಾರ್ ಪೋಸ್ಟ್ ಮಾಡಿದ್ದಾರೆ. ಸುರೇಂದ್ರನಿಗೆ ನೆರವಾಗಲು ಗಾಯತ್ರಿ ಗೋಪಕುಮಾರ್ ನಂಬರ್ ಹಾಗೂ ಇತರ ಮಾಹಿತಿಗಳನ್ನು ನೀಡಿದ್ದಾರೆ. ಈ ಪೋಸ್ಟ್‌ಗೆ ಹಲವರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುರೇಂದ್ರ ಶೀಘ್ರದಲ್ಲೇ ಉತ್ತಮ ಕೆಲಸ ಸಿಗಲಿ ಎಂದು ಹಾರೈಸಿದ್ದಾರೆ.