
ಬೆಂಗಳೂರು: ತಾವರೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದ ನಕಲಿ ಔಷಧಿ ಜಾಲದ ಬೆನ್ನತ್ತಿರುವ ಕರ್ನಾಟಕ ಸರ್ಕಾರದ ವಿಶೇಷ ತನಿಖಾ ತಂಡ ಹಾಗೂ ಔಷಧ ನಿಯಂತ್ರಣ ಇಲಾಖೆ (Drugs Control Department), ಜಂಟಿಯಾಗಿ ಬೃಹತ್ ಕಾರ್ಯಾಚರಣೆ ನಡೆಸಿವೆ. ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ಅವರ ನೇತೃತ್ವದಲ್ಲಿ ರಚನೆಗೊಂಡಿರುವ ಎಸ್‌ಐಟಿ ತಂಡವು ಏಕಕಾಲಕ್ಕೆ ಕರ್ನಾಟಕ ಸೇರಿದಂತೆ ದೇಶದ 6 ರಾಜ್ಯಗಳ 10ಕ್ಕೂ ಹೆಚ್ಚು ಸ್ಥಳಗಳ ಮೇಲೆ ಭಾರಿ ದಾಳಿ ನಡೆಸಿ, ಪರಿಶೀಲನೆ ನಡೆಸಿದೆ.
ಕರ್ನಾಟಕ, ಹರಿಯಾಣ, ಹಿಮಾಚಲ ಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿರುವ ನಕಲಿ ಫಾರ್ಮ್‌ಗಳು, ನಕಲಿ ಔಷಧಿ ಪೂರೈಸುತ್ತಿದ್ದ ಕಂಪನಿಗಳ ಫಾರ್ಮ್ ಹೌಸ್‌ಗಳು ಹಾಗೂ ಗೋಡೌನ್‌ಗಳ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಪ್ರಕರಣದ ಮುಖ್ಯ ಕಿಂಗ್‌ಪಿನ್ ಪ್ರಶಾಂತ್ ಹಾಗೂ ಆತನ ಗ್ಯಾಂಗ್ ಅನ್ನು ಬಳಸಿಕೊಂಡು ನಕಲಿ ಔಷಧಿ, ನಕಲಿ ಬಾಟಲ್ ಹಾಗೂ ಪ್ರತಿಷ್ಠಿತ ಡ್ರಗ್ ಕಂಪನಿಗಳ ನಕಲಿ ಲೇಬಲ್‌ಗಳನ್ನು ಅಂಟಿಸಿ ಮಾರಾಟ ಮಾಡುತ್ತಿದ್ದ ದಂಧೆಯನ್ನು ಭೇದಿಸಲಾಗಿದೆ. ತಾವರೆಕೆರೆಯ ಗೋಡೌನ್ ಒಂದರಲ್ಲಿ ನಕಲಿ ಔಷಧಿಗಳನ್ನು ಸಂಗ್ರಹಿಸಿ, ಅಲ್ಲಿಂದಲೇ ರಾಜ್ಯ ಹಾಗೂ ಹೊರರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಈ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಜಾಗೃತರಾದ ಸರ್ಕಾರ, ಎಸ್‌ಐಟಿ ತಂಡವನ್ನು ರಚಿಸಿ ಶೋಧ ಕಾರ್ಯಕ್ಕೆ ಆದೇಶಿಸಿತ್ತು.
ಕಾರ್ಯಾಚರಣೆಯ ಭಾಗವಾಗಿ ಬೆಂಗಳೂರಿನ ವಿ.ವಿ.ಪುರಂನ ಮಿನರ್ವ ಸರ್ಕಲ್‌ನಲ್ಲಿರುವ 'ಕೃಪಾ ಫಾರ್ಮಾ/ಕೃಪಾ ಹೆಲ್ತ್‌ಕೇರ್' ಸಂಸ್ಥೆಯ ಮಾಲೀಕ ವೀರೇಶ್ ಅವರ ಮನೆ ಹಾಗೂ ಗೋಡೌನ್ ಮೇಲೆಯೂ ಎಸ್‌ಐಟಿ ದಾಳಿ ನಡೆಸಿದೆ. ಎಸ್‌ಐಟಿ ಇನ್‌ಸ್ಪೆಕ್ಟರ್, ಡಿವೈಎಸ್‌ಪಿ, ಸಬ್-ಇನ್‌ಸ್ಪೆಕ್ಟರ್ ಹಾಗೂ ಮೂವರು ಔಷಧ ನಿಯಂತ್ರಣಾಧಿಕಾರಿಗಳನ್ನೊಳಗೊಂಡ ತಂಡವು ಸತತ ಮೂರು ಗಂಟೆಗೂ ಹೆಚ್ಚು ಕಾಲ ಸುದೀರ್ಘ ತನಿಖೆ ನಡೆಸಿದೆ. ಪರಿಶೀಲನೆಯ ವೇಳೆ ಕಂಪನಿಯ ಪ್ರಮುಖ ದಾಖಲೆಗಳು, ಮಾಲೀಕ ವೀರೇಶ್ ಅವರ ಮೊಬೈಲ್ ಫೋನ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ವೀರೇಶ್ 2021ರಲ್ಲಿ ಕೃಪಾ ಹೆಲ್ತ್‌ಕೇರ್ ಕಂಪನಿಯನ್ನು ನೋಂದಾಯಿಸಿದ್ದು, ಕಳೆದ ಐದು ವರ್ಷಗಳಿಂದ ನಗರದ ಬಹುತೇಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಮತ್ತು ಮೆಡಿಕಲ್ ಶಾಪ್‌ಗಳಿಗೆ ಔಷಧಿ ಪೂರೈಸುತ್ತಿದ್ದ. ಕಿಂಗ್‌ಪಿನ್ ಪ್ರಶಾಂತ್ ಸೇರಿದಂತೆ ವಿವಿಧ ಅಕ್ರಮ ಡೀಲರ್‌ಗಳಿಂದ ನಕಲಿ ಔಷಧಿಗಳನ್ನು ತರಿಸಿಕೊಳ್ಳುತ್ತಿದ್ದ ಈತ, ಮಿನರ್ವ ಸರ್ಕಲ್ ಬಳಿಯ ಗೋಡೌನ್ ಮೂಲಕ ಮುಂಬೈ ಹಾಗೂ ಗುಜರಾತ್ ಮುಂತಾದ ಹೊರರಾಜ್ಯಗಳಿಗೂ ಸರಬರಾಜು ಮಾಡುತ್ತಿದ್ದ.
ಮಾರುಕಟ್ಟೆಯ ಇತರೆ ಡೀಲರ್‌ಗಳಿಗಿಂತ ಅತಿ ಕಡಿಮೆ ಬೆಲೆಗೆ ಔಷಧಿಗಳು ಸಿಗುತ್ತವೆ ಎಂಬ ಕಾರಣಕ್ಕೆ ಹಲವು ಖಾಸಗಿ ಆಸ್ಪತ್ರೆಗಳು ಹಾಗೂ ಮೆಡಿಕಲ್ ಶಾಪ್‌ಗಳು ಇವನಿಂದ ಔಷಧಿಗಳನ್ನು ಖರೀದಿ ಮಾಡುತ್ತಿದ್ದವು. ತನ್ನ ಜಾಲವನ್ನು ವಿಸ್ತರಿಸಲು ವೀರೇಶ್ 15ಕ್ಕೂ ಹೆಚ್ಚು ಮೆಡಿಕಲ್ ರೆಪ್ರೆಸೆಂಟೇಟಿವ್‌ಗಳನ್ನು (MR) ನೇಮಿಸಿಕೊಂಡಿದ್ದ. ಅವರಿಗೆ ಅತಿ ಹೆಚ್ಚಿನ ಕಮಿಷನ್ ಆಸೆ ತೋರಿಸಿ, ಆಸ್ಪತ್ರೆಗಳಿಗೆ ನಕಲಿ ಔಷಧಿ ಸಪ್ಲೈ ಮಾಡಿಸುತ್ತಿದ್ದ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಈ ಜಾಲವು, ಪ್ರಮುಖವಾಗಿ ಅತ್ಯಂತ ಸೂಕ್ಷ್ಮ ಹಾಗೂ ದುಬಾರಿಯಾದ ಕ್ಯಾನ್ಸರ್ ರೋಗದ ಔಷಧಿಗಳು, ಥೈರಾಯ್ಡ್, ವಿಟಮಿನ್ ಮಾತ್ರೆಗಳು ಹಾಗೂ ಹಲವು ಪ್ರಮುಖ ಇಂಜೆಕ್ಷನ್‌ಗಳನ್ನು ನಕಲಿ ರೂಪದಲ್ಲಿ ಪೂರೈಸುತ್ತಿತ್ತು. ಪ್ರಸ್ತುತ ಎಸ್‌ಐಟಿ ಅಧಿಕಾರಿಗಳು ಗೋಡೌನ್‌ನಲ್ಲಿಯೇ ಮಾಲೀಕ ವೀರೇಶ್‌ನನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ಈ ಜಾಲದ ಹಿಂದೆ ಇರುವ ಇತರೆ ಬೃಹತ್ ಉದ್ಯಮಿಗಳು ಹಾಗೂ ಆಸ್ಪತ್ರೆಗಳ ಲಿಂಕ್‌ಗಳ ಕುರಿತು ಜಾಲಾಡುತ್ತಿದ್ದಾರೆ.