ಇಡಿಯಿಂದ ಬೆಂಗಳೂರಿನಲ್ಲಿರುವ ಓಝೋನ್ ಅರ್ಬನಾ ಕಂಪನಿಯ ₹702.70 ಕೋಟಿ ಸ್ಥಿರಾಸ್ತಿ ಜಪ್ತಿ

Gowthami K   | Kannada Prabha
Published : Nov 27, 2026, 10:11 AM IST
Ozone Urbana

ಸಾರಾಂಶ

ಬೆಂಗಳೂರಿನ ಓಝೋನ್ ಅರ್ಬನಾ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸೇರಿದ ₹702.70 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಇ.ಡಿ. ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. ಗ್ರಾಹಕರಿಂದ ₹1305 ಕೋಟಿ ಸಂಗ್ರಹಿಸಿ ಫ್ಲ್ಯಾಟ್‌ ನೀಡದೆ ವಂಚನೆ ಆರೋಪ ಇದಾಗಿದೆ.

ಬೆಂಗಳೂರು: ಗ್ರಾಹಕರಿಂದ ಸುಮಾರು 1,305 ಕೋಟಿ ರು. ಸಂಗ್ರಹಿಸಿ ಫ್ಲ್ಯಾಟ್‌ಗಳನ್ನು ನೀಡದೆ ವಂಚಿಸಿದ ಪ್ರಕರಣದಲ್ಲಿ ಓಝೋನ್‌ ಅರ್ಬನಾ ಅನ್ಫ್ರಾ ಡೆವಲಪರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ವಿರುದ್ಧ ₹702.70 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಬೆಂಗಳೂರು ವಲಯದ ಜಾರಿ ನಿರ್ದೇಶನಾಲಯ (ಇ.ಡಿ.) ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.

ಒಟ್ಟು 1,126.07 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಜಪ್ತಿ

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಓಝೋನ್‌ ಅರ್ಬನಾ ಕಂಪನಿ ಮತ್ತು ಇತರರಿಗೆ ಸೇರಿದ ಫ್ಲ್ಯಾಟ್‌ಗಳು ಮತ್ತು ಜಮೀನುಗಳು ಸೇರಿವೆ. ಇದಕ್ಕೂ ಮುನ್ನ ಕಂಪನಿಯ ಪ್ರಮುಖ ಪ್ರವರ್ತಕ ಎಸ್‌.ವಾಸುದೇವನ್‌ ಹಾಗೂ ಅವರ ಕುಟುಂಬಕ್ಕೆ ಸೇರಿದ 423.37 ಕೋಟಿ ರು. ಮೌಲ್ಯದ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಲಾಗಿತ್ತು. ಇದರೊಂದಿಗೆ ಈ ಪ್ರಕರಣದಲ್ಲಿ ಈವರೆಗೆ ಒಟ್ಟು 1,126.07 ಕೋಟಿ ರು. ಮೌಲ್ಯದ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿದಂತಾಗಿದೆ.

ಈ ವಂಚನೆ ಸಂಬಂಧ ಕರ್ನಾಟಕ ಪೊಲೀಸರು ಮತ್ತು ಸಿಬಿಐ ದಾಖಲಿಸಿದ್ದ ಎಫ್‌ಐಆರ್‌ಗಳನ್ನು ಆಧರಿಸಿ ಇ.ಡಿ. ತನಿಖೆ ಆರಂಭಿಸಿದೆ. ಕಂಪನಿಯ ಪ್ರವರ್ತಕ ಎಸ್‌.ವಾಸುದೇವನ್‌ ಅವರ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿರುವ ಓಝೋನ್‌ ಗ್ರೂಪ್‌ ಸಂಸ್ಥೆಗಳು ಮನೆ ಖರೀದಿದಾರರನ್ನು ಆಕರ್ಷಿಸಲು ಸಬ್‌ವೆನ್ಷನ್‌, ಬೈಬ್ಯಾಕ್‌, ಶೂನ್ಯ ಮುಂಗಡ ಪಾವತಿಸಿ ಮತ್ತು ಇತರೆ ಯೋಜನೆಗಳನ್ನು ಬಳಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಆರಂಭದಲ್ಲಿ ಆಸ್ತಿ ಹಸ್ತಾಂತರಿಸುವವರೆಗೂ ಮುಂಗಡ ಕಂತುಗಳು ಅಥವಾ ಕಂತುಗಳನ್ನು ತಾವೇ ಪಾವತಿಸುವುದಾಗಿ ಗ್ರಾಹಕರನ್ನು ಪ್ರೇರಿಪಿಸಲಾಗಿದೆ. ಓಝೋನ್ ಅರ್ಬನಾ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್‌ನ ಆಕ್ವಾ 2, ಅವೆನ್ಯೂ, ಪ್ರೈಮ್‌, ಮೆಟ್ರೋ ಜೋನ್‌, ಡಬ್ಲ್ಯೂಎಫ್‌ 48, ಪಾಲಿಸ್ಟರ್‌ ಯೋಜನೆಗಳ ಹೆಸರಿನಲ್ಲಿ ಓಝೋನ್‌ ಗ್ರೂಪ್‌ನ ಸಿಎಂಡಿ ಎಸ್‌.ವಾಸುದೇವನ್‌ ಗ್ರಾಹಕರಿಂದ ಸುಮಾರು 1,305.11 ಕೋಟಿ ರು. ಸಂಗ್ರಹಿಸಿ ಬಳಿಕ ವಂಚಿಸಲಾಗಿದೆ.

ಗ್ರಾಹಕರಿಂದ ಸಂಗ್ರಹಿಸಲಾದ ಕೋಟ್ಯಂತರ ರು. ಹಣವನ್ನು ಓಝೋನ್‌ ಗ್ರೂಪ್‌ನ ವಿವಿಧ ಸಂಸ್ಥೆಗಳ ನಡುವೆ ಅಂತರ್‌ ಕಾರ್ಪೊರೇಟ್‌ ಠೇವಣಿಗಳು, ಇತರೆ ಹಣಕಾಸು ವಹಿವಾಟುಗಳ ಮೂಲಕ ವರ್ಗಾಯಿಸಲಾಗಿದೆ. ಈ ಹಣವನ್ನು ಯೋಜನೆಗಳ ಅನುಷ್ಠಾನ ಹಾಗೂ ಪೂರ್ಣಗೊಳಿಸಲು ಬಳಸುವ ಬದಲು ಸಾಲ ಮರು ಪಾವತಿ, ಬಡ್ಡಿ, ಹಣಕಾಸು ವೆಚ್ಚಗಳು, ಹೂಡಿಕೆದಾರರಿಗೆ ಹಣ ಮರು ಪಾವತಿ, ಕಾರ್ಪೊರೇಟ್‌ ವೆಚ್ಚಗಳು ಹಾಗೂ ಇತರೆ ಹೊಣೆಗಾರಿಕೆಗಳ ತೀರಿಸಲು ಬಳಸಿರುವುದು ತನಿಖೆಯಲ್ಲಿ ಬಯಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಇ.ಡಿ. ತಿಳಿಸಿದೆ.

PREV
Read more Articles on
click me!

Recommended Stories

ಬೆಂಗಳೂರು ಅರಮನೆ ಮೈದಾನದ ಸುತ್ತಮುತ್ತ ಇಂದು, ನಾಡಿದ್ದು ಸಂಚಾರ ಮಾರ್ಪಾಡು, ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ
ಇದೇ ಮೊದಲ ಬಾರಿಗೆ ಕೆಎಎಸ್ ಪರೀಕ್ಷೆಯ 11 ದಿನದಲ್ಲೇ ರಿಸಲ್ಟ್‌, ಎಲ್ಲರ ಅಂಕ ಬಹಿರಂಗ! ಪಾರದರ್ಶಕತೆಯತ್ತ ಮಹತ್ವದ ಹೆಜ್ಜೆ