
ಬೆಂಗಳೂರು (ನ.07): 'ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಬಳಸಬೇಕು. ಪಾಲಿಕೆ ಆಡಳಿತದಲ್ಲಿ ಕನ್ನಡಕ್ಕೆ ಎಂದಿಗೂ ಪ್ರಥಮ ಆದ್ಯತೆ' ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮುಖ್ಯ ಆಯುಕ್ತರಾದ ಎಂ. ಮಹೇಶ್ವರರಾವ್ ಸ್ಪಷ್ಟವಾಗಿ ಕರೆ ನೀಡಿದ್ದಾರೆ.
ಜಿಬಿಎ ಕೇಂದ್ರ ಕಚೇರಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಪಾಲಿಕೆಗಳ ನೌಕರರ ಕನ್ನಡ ಸಂಘದ ವತಿಯಿಂದ ಆಯೋಜಿಸಲಾಗಿದ್ದ 71ನೇ ಕನ್ನಡ ರಾಜ್ಯೋತ್ಸವ ಹಾಗೂ ಕರುನಾಡ ಸಾಧಕರಿಗೆ ‘ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಅದ್ಧೂರಿಯಾಗಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಆಯುಕ್ತ ಮಹೇಶ್ವರರಾವ್, 'ಕನ್ನಡ ಕೇವಲ ಭಾಷೆಯಲ್ಲ, ನಮ್ಮ ಬದುಕು. ಪಾಲಿಕೆಯ ಆಡಳಿತ ಕಚೇರಿಗಳಲ್ಲಿ ಕನ್ನಡವೇ ಸಾರ್ವಭೌಮ. ಕಲೆ, ಸಾಹಿತ್ಯ ಹಾಗೂ ಪಾಲಿಕೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ನೌಕರರನ್ನು ಗುರುತಿಸಿ ‘ಅಪ್ಪು’ ಅವರ ಹೆಸರಿನಲ್ಲಿ ಪುರಸ್ಕರಿಸುತ್ತಿರುವುದು ಹೆಮ್ಮೆಯ ಸಂಗತಿ. ಇಂದು ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದರೆ ಅದಕ್ಕೆ ಪಾಲಿಕೆ ಅಧಿಕಾರಿಗಳು ಮತ್ತು ಪೌರಕಾರ್ಮಿಕರ ನಿಸ್ವಾರ್ಥ ಶ್ರಮವೇ ಕಾರಣ' ಎಂದರು.
ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣ ಮಾತನಾಡಿ, "ಕನ್ನಡ ಕೇವಲ ನವೆಂಬರ್ ತಿಂಗಳ ಆಚರಣೆಯಾಗದೆ ‘ನಿತ್ಯೋತ್ಸವ’ವಾಗಬೇಕು. ಇಂದಿನ ದಿನಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ವ್ಯಾಮೋಹ ಹೆಚ್ಚಾಗಿದೆ. ಆದರೆ, ಪಾಲಿಕೆ ಶಾಲೆಗಳಲ್ಲಿ ಕನ್ನಡದ ಬೇರುಗಳನ್ನು ಗಟ್ಟಿಗೊಳಿಸುವ ಅದ್ಭುತ ಶಕ್ತಿಯಿದೆ. ಅನ್ಯಭಾಷಿಕರ ಮೇಲೆ ದ್ವೇಷ ಬೇಡ, ಬದಲಿಗೆ ಅವರಿಗೆ ಪ್ರೀತಿಯಿಂದ ಕನ್ನಡ ಕಲಿಸಿ, ಶಿಕ್ಷಣ, ಉದ್ಯೋಗ ಹಾಗೂ ನಿತ್ಯ ವ್ಯವಹಾರದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ಮಾಡಬೇಕು" ಎಂದು ಕಿವಿಮಾತು ಹೇಳಿದರು.
ಖ್ಯಾತ ನಟ-ನಿರ್ದೇಶಕ ಎಸ್. ನಾರಾಯಣ್ ಮಾತನಾಡಿ, 'ಬೆಂಗಳೂರು ಸ್ವಚ್ಛವಾಗಿರಲು ಹಗಲಿರುಳು ದುಡಿಯುವ ಪೌರಕಾರ್ಮಿಕರೇ ನಿಜವಾದ ಸ್ವಚ್ಛತಾ ವಾರಿಯರ್ಸ್. ಕನ್ನಡಿಗರು ಮನೆಯಲ್ಲಿ ಮೊದಲು ಕನ್ನಡ ಬಳಸುವ ಅಭ್ಯಾಸ ಮಾಡಿಕೊಳ್ಳಬೇಕು. ಅಪ್ಪು ಅವರು ಕೇವಲ ನಟನಾಗಿರಲಿಲ್ಲ, ಅವರಲ್ಲಿ ದೈವಿಕ ಅಂಶವಿತ್ತು. ಅದಕ್ಕಾಗಿಯೇ ಇಡೀ ಕರುನಾಡು ಅವರನ್ನು ಇಂದಿಗೂ ಆರಾಧಿಸುತ್ತದೆ. ರಾಜ್‌ಕುಮಾರ್ ಕುಟುಂಬದ ಸರಳತೆ ಎಲ್ಲರಿಗೂ ಮಾದರಿ' ಎಂದು ಭಾವುಕರಾಗಿ ಸ್ಮರಿಸಿದರು.
ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಗಣ್ಯರಿಗೆ ಪ್ರತಿಷ್ಠಿತ ‘ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ನಟ ಶರತ್ ಲೋಹಿತಾಶ್ವ, ಖ್ಯಾತ ಜಾನಪದ ಗಾಯಕ ಗುರುರಾಜ್ ಹೊಸಕೋಟೆ, ಹಿರಿಯ ನಟ ಬಾಲರಾಜ್, ನಟಿ ಭವಾನಿ ಪ್ರಕಾಶ್, ಕನ್ನಡ ಪರ ಹೋರಾಟಗಾರರು, ಸಾಹಿತಿಗಳು, ಪತ್ರಕರ್ತರು ಹಾಗೂ ಪಾಲಿಕೆಯ ಉತ್ತಮ ಅಧಿಕಾರಿಗಳು ಮತ್ತು ನೌಕರರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಮಹಾಪೌರರಾದ ಜೆ. ಹುಚ್ಚಪ್ಪ, ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್, ಜಿಬಿಎ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ಅಮೃತ್ ರಾಜ್, ಕನ್ನಡ ಸಂಘದ ಅಧ್ಯಕ್ಷ ಹೆಚ್. ನಂಜಪ್ಪ, ಗೌರವ ಕಾರ್ಯದರ್ಶಿ ಪಿ. ದಯಾನಂದ್ ಹಾಗೂ ಹಾಸ್ಯನಟ ಮೂ.ಗು. ಸುರೇಶ್ ಉಪಸ್ಥಿತರಿದ್ದರು.