ಬೆಂಗಳೂರಿನ 4 ಕ್ಷೇತ್ರಗಳಿಗೆ ‘ಹೊಸ ಕಸ ವಿಲೇವಾರಿ ಸೂತ್ರ’: ವಾಹನಗಳಿಗೆ GPS ಕಡ್ಡಾಯ, ಗಾಡಿ ಓಡದಿದ್ದರೆ ಬಿಲ್ ಕಟ್!

Published : Nov 07, 2026, 07:43 PM IST
Krishna Byre Gowda

ಸಾರಾಂಶ

ಬೆಂಗಳೂರಿನ ಕಸದ ಸಮಸ್ಯೆಗೆ ಮುಕ್ತಿ ನೀಡಲು ಸರ್ಕಾರ ಹೊಸ ಡಿಜಿಟಲ್ ಕಸ ವಿಲೇವಾರಿ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಕಸ ಸಂಗ್ರಹಣಾ ವಾಹನಗಳಿಗೆ ಜಿಪಿಎಸ್ ಕಡ್ಡಾಯಗೊಳಿಸಲಾಗಿದ್ದು, ಜಿಪಿಎಸ್ ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ.

ಬೆಂಗಳೂರು (ನ.07): ಬೆಂಗಳೂರಿನ ಬಹುದಿನಗಳ ತಲೆನೋವಾದ ಕಸದ ಸಮಸ್ಯೆಗೆ ಮುಕ್ತಿ ಹಾಡಲು ಸರ್ಕಾರ ಹೊಸ ಡಿಜಿಟಲ್ ಹೆಜ್ಜೆ ಇಟ್ಟಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ನೂತನ ಟೆಂಡರ್ ಪ್ರಕಾರ ಕಸ ವಿಲೇವಾರಿ ವ್ಯವಸ್ಥೆ ಜಾರಿಗೆ ಬರಲಿದ್ದು, ಮೊದಲ ಹಂತದಲ್ಲಿ ನಗರದ ಪ್ರಮುಖ 4 ವಿಧಾನಸಭಾ ಕ್ಷೇತ್ರಗಳಲ್ಲಿ ನವೆಂಬರ್ ಅಂತ್ಯದೊಳಗೆ ಈ ಹೊಸ ನಿಯಮಗಳು ಕಾರ್ಯಾರಂಭ ಮಾಡಲಿವೆ.

ವಿಕಾಸಸೌಧದಲ್ಲಿ ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಈ ಮಹತ್ವದ ಆದೇಶ ನೀಡಿದ್ದಾರೆ. 'ಕಸ ಸಂಗ್ರಹಣಾ ವಾಹನಗಳಿಗೆ ಜಿಪಿಎಸ್ (GPS) ಇರಲೇಬೇಕು, ಇಲ್ಲದಿದ್ದರೆ ಗುತ್ತಿಗೆದಾರರಿಗೆ ಬಿಲ್ ಪಾವತಿಸುವುದಿಲ್ಲ' ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಯಾವೆಲ್ಲಾ ಕ್ಷೇತ್ರಗಳಲ್ಲಿ ಮೊದಲು ಜಾರಿ?

ಹೊಸ ಟೆಂಡರ್ ಅಡಿಯಲ್ಲಿ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ಮೊದಲ ಹಂತದಲ್ಲಿ ಈ ಕೆಳಗಿನ ಕ್ಷೇತ್ರಗಳಲ್ಲಿ ನವೆಂಬರ್ ಅಂತ್ಯದಿಂದಲೇ ಹೊಸ ಮಾದರಿಯ ಕಸ ವಿಲೇವಾರಿ ಆರಂಭವಾಗಲಿದೆ:

  1. ಗೋವಿಂದರಾಜನಗರ
  2. ಮಹಾಲಕ್ಷ್ಮಿ ಲೇಔಟ್
  3. ವಿಜಯನಗರ
  4. ಚಾಮರಾಜಪೇಟೆ

ಇದಲ್ಲದೆ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಡಿಸೆಂಬರ್ ತಿಂಗಳಿನಿಂದ ಈ ನೂತನ ವ್ಯವಸ್ಥೆ ಅನುಷ್ಠಾನಗೊಳ್ಳಲಿದೆ.

ಹೊಸ ನಿಯಮದಲ್ಲೇನಿದೆ? ಕಸದ ಗಾಡಿಗಳಿಗೆ ಬಿಗ್ ಶಾಕ್!

ಜಿಪಿಎಸ್ ದತ್ತಾಂಶ ಇದ್ದರೆ ಮಾತ್ರ ಹಣ: ಇನ್ಮುಂದೆ ಕಸದ ಗಾಡಿಗಳು ರಸ್ತೆಗಿಳಿಯದೆ ಸುಳ್ಳು ಬಿಲ್ ಮಾಡಲು ಸಾಧ್ಯವೇ ಇಲ್ಲ. ವಾಹನಗಳು ನಿಗದಿತ ಮಾರ್ಗದಲ್ಲಿ ಸಂಚರಿಸಿವೆಯೇ ಎಂಬುದನ್ನು ಜಿಪಿಎಸ್ ಮೂಲಕ ಟ್ರ್ಯಾಕ್ ಮಾಡಲಾಗುತ್ತದೆ. ಜಿಪಿಎಸ್ ಡೇಟಾ ಆಧರಿಸಿ ಸಾಫ್ಟ್‌ವೇರ್ ಮೂಲಕ ಜನರೇಟ್ ಆಗುವ (System Generated) ಬಿಲ್‌ಗಳಿಗೆ ಮಾತ್ರ ಹಣ ಸಂದಾಯವಾಗಲಿದೆ.

ಜಿಪಿಎಸ್ ಇಲ್ಲದಿದ್ದರೆ ದಂಡ: ಯಾವುದೇ ವಾಹನದಲ್ಲಿ ಜಿಪಿಎಸ್ ಆಫ್ ಆಗಿದ್ದರೆ ಅಥವಾ ಕಾರ್ಯನಿರ್ವಹಿಸದಿದ್ದರೆ, ಆ ದಿನದ ಪೂರ್ತಿ ಬಿಲ್ ರದ್ದು ಮಾಡುವುದರ ಜೊತೆಗೆ ಗುತ್ತಿಗೆದಾರರಿಗೆ ದಂಡ (Penalty) ವಿಧಿಸಲಾಗುತ್ತದೆ.

ವಾಹನ, ಸಿಬ್ಬಂದಿಗೆ ಹೊಸ ಲುಕ್: ಕಸ ಸಂಗ್ರಹಣೆ ವಾಹನಗಳು ಏಕರೂಪದ ಬ್ರ್ಯಾಂಡಿಂಗ್, ಸೂಕ್ತ ಸ್ಟಿಕ್ಕರಿಂಗ್ ಹೊಂದಿರಬೇಕು. ಜೊತೆಗೆ ಕಸ ಸಂಗ್ರಹಿಸುವ ಪೌರಕಾರ್ಮಿಕರು ಹಾಗೂ ಸಿಬ್ಬಂದಿಗೆ ನೂತನ ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ.

‘ಬ್ಲ್ಯಾಕ್ ಸ್ಪಾಟ್‌’ಗಳಿಗೆ ಕಠಿಣ ಬ್ರೇಕ್: ರಸ್ತೆ ಬದಿಗಳಲ್ಲಿ ಕಸ ಸುರಿದು ‘ಬ್ಲ್ಯಾಕ್ ಸ್ಪಾಟ್’ ಮಾಡುವ ಕಿಡಿಗೇಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈ ಜಾಗಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ನಿರ್ಮೂಲನೆ ಮಾಡಲು ಸಚಿವರು ಸೂಚಿಸಿದ್ದಾರೆ.

33 ಪ್ಯಾಕೇಜ್‌ಗಳ ಮೆಗಾ ಪ್ಲಾನ್!

ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಒಟ್ಟು 33 ಪ್ಯಾಕೇಜ್‌ಗಳನ್ನು ರೂಪಿಸಲಾಗಿದೆ.

5 ಪ್ಯಾಕೇಜ್‌ಗಳಿಗೆ ಈಗಾಗಲೇ ವರ್ಕ್ ಆರ್ಡರ್ ನೀಡಲಾಗಿದೆ.

13 ಪ್ಯಾಕೇಜ್‌ಗಳಿಗೆ ಗುತ್ತಿಗೆ ಒಪ್ಪಿಗೆ ಪತ್ರ (LoA) ನೀಡಲಾಗಿದೆ.

10 ಪ್ಯಾಕೇಜ್‌ಗಳು ಸರ್ಕಾರದ ಅನುಮೋದನೆಗೆ ಕಾಯುತ್ತಿವೆ.

ಇನ್ನುಳಿದ 5 ಪ್ಯಾಕೇಜ್‌ಗಳು ಕೋರ್ಟ್ ಹಾಗೂ ತಾಂತ್ರಿಕ ಪ್ರಕ್ರಿಯೆಗಳ ಬಳಿಕ ಚಾಲನೆ ಪಡೆಯಲಿವೆ.

ಮನೆ-ಮನೆ ಸಮೀಕ್ಷೆಯ (Door-to-door survey) ಚೆಕ್‌ಲಿಸ್ಟ್ ವರದಿಯ ಆಧಾರದ ಮೇಲೆಯೇ ಈ ಇಡೀ ಯೋಜನೆಯನ್ನು ವೈಜ್ಞಾನಿಕವಾಗಿ ಜಾರಿಗೆ ತರಲಾಗುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

PREV
Read more Articles on
click me!

Recommended Stories

ಕರುನಾಡ ಸಾಧಕರಿಗೆ 'ಪುನೀತ್ ರಾಜ್‌ಕುಮಾರ್ ಪ್ರಶಸ್ತಿ' ಗರಿ: ಕನ್ನಡ ನವೆಂಬರ್ ಆಚರಣೆಯಾಗದೆ ನಿತ್ಯೋತ್ಸವವಾಗಲಿ-ನಾಗಾಭರಣ!
ದೀಪಾವಳಿ ಶಾಪಿಂಗ್‌ಗೆ ಬೆಂಗಳೂರಿನ ಈ 8 ಮಾರ್ಕೆಟ್‌ಗಳು ಬೆಸ್ಟ್: ಕಡಿಮೆ ಬೆಲೆಗೆ ಸಿಗುತ್ತೆ ಎಲ್ಲವೂ!