
ಬೆಂಗಳೂರು (ನ.4): ಬಿಹಾರದಲ್ಲಿ ವಿಧಾನಸಭೆ ಚುನಾವಣೆ ಅಖಾಡ ಸಿದ್ದವಾಗಿದೆ. ಆಡಳಿತಾರೂಢ ಎನ್‌ಡಿಎ-ಜೆಡಿಯುಗೆ ಕಾಂಗ್ರೆಸ್ ಹಾಗೂ ಆರ್‌ಜೆಡಿ ನೇತೃತ್ವದ ಮಹಾಘಟಬಂದನ್ ಪ್ರಮುಖ ಎದುರಾಳಿ. ಈ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ಕಾಂಗ್ರೆಸ್ ಎಲ್ಲಾ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದೆ. ಬೆಂಗಳೂರಿನಲ್ಲೂ ಬಿಹಾರ ಚುನಾವಣೆ ಪ್ರಚಾರ ನಡೆಸಿದ್ದ ಡಿಕೆ ಶಿವಕುಮಾರ್, ಹೆಬ್ಬಾಳ ಸಮೀಪದ ಕೆಂಪಾಪುರ ಬಳಿ ನಡೆದ ಕಾರ್ಯಕ್ರಮದಲ್ಲಿ ಬಿಹಾರಿಗಳಿಗೆ ಸಮುದಾಯ ಭವನ ನಿರ್ಮಿಸಿ ಕೊಡುವ ಭರವಸೆ ನೀಡಿದ್ದರು.
ಈಗ ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವ ಬಿಹಾರಿಗಳಿಗೆ ಚುನಾವಣೆಯಲ್ಲಿ ಭಾಗವಹಿಸುವ ಸಲುವಾಗಿ ವೇತನ ಸಹಿತ ಮೂರು ದಿನ ರಜೆ ನೀಡಿ ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ. '2025ರ ನವೆಂಬರ್ 6 ಮತ್ತು 11 ರಂದು ನಡೆಯಲಿರುವ ಬಿಹಾರ ರಾಜ್ಯದ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ, ಬೆಂಗಳೂರು ಮತ್ತು ಕರ್ನಾಟಕದಾದ್ಯಂತ ಕೆಲಸ ಮಾಡುತ್ತಿರುವ ಬಿಹಾರದ ಮತದಾರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಎಲ್ಲಾ ಕಂಪನಿಗಳು, ಉದ್ಯಮಿದಾರರು, ಹೋಟೆಲ್‌ಗಳು ಮತ್ತು ಗುತ್ತಿಗೆದಾರರು ಕನಿಷ್ಠ ಮೂರು ದಿನಗಳ ವೇತನ ಸಹಿತ ರಜೆ ನೀಡಿ, ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಹಕರಿಸಬೇಕೆಂದು ವಿನಂತಿ ಮಾಡುತ್ತೇನೆ' ಎಂದು ಹೇಳಿದ್ದಾರೆ.
ನ.2 ರಂದು ಕಾರ್ಯಕ್ರಮದಲ್ಲೀ ಇದೇ ಮಾತನ್ನು ಡಿಕೆ ಶಿವಕುಮಾರ್ ಹೇಳಿದ್ದರು. ಕರ್ನಾಟಕದಲ್ಲಿ ಜಾರಿಗೊಳಿಸಿದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿ, "ನಮ್ಮನ್ನು ಟೀಕಿಸಿದವರೇ ಈಗ ಬೇರೆ ರಾಜ್ಯಗಳಲ್ಲಿ ನಮ್ಮ ಯೋಜನೆಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಕರ್ನಾಟಕವು ದೇಶಕ್ಕೆ ಮಾದರಿಯಾಗಿದೆ" ಎಂದು ಹೇಳಿದ್ದರು.
"ಇಲ್ಲಿ ವಾಸವಿರುವ (ಕರ್ನಾಟಕದಲ್ಲಿ) ಆದರೆ ಬೇರೆ ಕಡೆ ವೋಟ್ ಹೊಂದಿರುವವರೂ ಇದ್ದಾರೆ, ಹಾಗೆಯೇ ಬೇರೆ ಕಡೆ ವಾಸವಿರುವ ಆದರೆ ಇಲ್ಲಿ ವೋಟ್ ಹೊಂದಿರುವವರೂ ಇದ್ದಾರೆ" ಎಂದು ಹೇಳಿದರು. ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ವ್ಯರ್ಥವಾಗಬಾರದು ಎಂದು ಒತ್ತಿ ಹೇಳಿದ ಅವರು, ಮತದಾನ ಮಾಡಲು ಅನುಕೂಲವಾಗುವಂತೆ ಮೂರು ದಿನಗಳ ರಜೆ ನೀಡುವ ಕುರಿತು ಗಮನ ಹರಿಸುವುದಾಗಿ ತಿಳಿಸಿದ್ದರು.
ಇದೇ ವೇಳೆ, ಬಿಹಾರ ರಾಜಕೀಯದ ಕುರಿತು ಮಾತನಾಡಿದ ಅವರು, "ನಿತೀಶ್ ಕುಮಾರ್ ಅವರದ್ದು ಕೊನೆ ಅಧ್ಯಾಯ. ಮಹಾಘಟಬಂಧನ್‌ಗೆ (ಬಿಹಾರದಲ್ಲಿನ ಮೈತ್ರಿ) ನಾವೆಲ್ಲರೂ ಸಹಾಯ ಮಾಡಬೇಕು. ನಿಮ್ಮ ಕೈ ಮುಗಿದು ಕೇಳಿಕೊಳ್ಳಲು ಬಂದಿದ್ದೇನೆ" ಎಂದರು. "ನನಗೆ ದೊಡ್ಡ ಸ್ಥಾನಮಾನ ಬೇಕು ಎಂದು ನೀವು ಹೇಳಿದ್ದೀರಿ, ಅದು ಮುಖ್ಯವಲ್ಲ. ಬಿಹಾರದಲ್ಲಿ ಸರ್ಕಾರ ತನ್ನಿ, ಅದೇ ನೀವು ಮಾಡುವ ದೊಡ್ಡ ಉಪಕಾರ" ಎಂದು ಹೇಳಿದರು.
ಅಂತಾರಾಷ್ಟ್ರೀಯ ನಗರವಾದ ಬೆಂಗಳೂರಿನಲ್ಲಿ ಸುಮಾರು 1.40 ಲಕ್ಷ ಬಿಹಾರದ ಜನರಿದ್ದಾರೆ ಎಂದು ತಿಳಿಸಿದ ಅವರು, ಅದರಲ್ಲೂ ದೊಡ್ಡ ಸಂಖ್ಯೆಯ ಬಿಹಾರದ ಜನಸಂಖ್ಯೆ ಬ್ಯಾಟರಾಯನಪುರದಲ್ಲಿದೆ ಎಂದು ಹೇಳಿದರು. "ಇಲ್ಲಿ ವೋಟ್ ಹೊಂದಿರುವವರೆಲ್ಲರೂ ನಮ್ಮ ಪಕ್ಷಕ್ಕೆ ಬೆಂಬಲವಾಗಿ ನಿಲ್ಲಬೇಕು" ಎಂದು ಅವರು ಮನವಿ ಮಾಡಿದರು.