ಡೆತ್ ನೋಟ್ ಆರೋಪಗಳೂ ಸಾಕ್ಷ್ಯವಲ್ಲ

By Kannadaprabha NewsFirst Published Nov 11, 2019, 8:44 AM IST
Highlights

 ಆತ್ಮಹತ್ಯೆಯ ಪ್ರಚೋದನೆ ಪ್ರಕರಣ ಸಾಬೀತಿಗೆ ಕೇವಲ ಮರಣ ಪತ್ರದ (ಡೆತ್‌ನೋಟ್) ಆರೋಪಗಳು ಸಾಕಾಗುವುದಿಲ್ಲ ಎಂದು ಹೈ ಕೋರ್ಟ್ ಹೇಳಿದೆ. 

ಬೆಂಗಳೂರು [ನ.11]:  ಆತ್ಮಹತ್ಯೆಯ ಪ್ರಚೋದನೆ ಪ್ರಕರಣ ಸಾಬೀತಿಗೆ ಕೇವಲ ಮರಣ ಪತ್ರದ (ಡೆತ್‌ನೋಟ್) ಆರೋಪಗಳು ಸಾಕಾಗುವುದಿಲ್ಲ. ಆರೋಪಿ ಬಹಿರಂಗವಾಗಿ ಅಪರಾಧ ಕೃತ್ಯ ಎಸಗಿರಬೇಕು. ಇಲ್ಲವೇ, ಆರೋಪಿಯೇ ಅಪರಾಧ ಕೃತ್ಯ ಎಸಗಿರುವ ಬಗ್ಗೆ ಸ್ವಯಂ ಹೇಳಿಕೆ ನೀಡಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಮರಣಪತ್ರದಲ್ಲಿ ಹೆಸರು ಉಲ್ಲೇಖವಾದ ಕಾರಣಕ್ಕೆ ಪೊಲೀಸರು ತಮ್ಮ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಜಾಮೀನು ಕೋರಿ ವ್ಯಕ್ತಿಯೊಬ್ಬ ಸಲ್ಲಿಸಿದ ಅರ್ಜಿ ಯನ್ನು ಪುರಸ್ಕರಿಸಿದ ಹೈಕೋರ್ಟ್, ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ, ಆರೋಪಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಕೆಲವು ವ್ಯಕ್ತಿಗಳ ಹೆಸರು ಮರಣಪತ್ರದಲ್ಲಿ ಉಲ್ಲೇಖವಾದ ಮಾತ್ರಕ್ಕೆ ಅವರೇ ಮೃತನು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಹೇಳಲಾಗದು. ಮರಣಪತ್ರದ ಆರೋಪಗಳು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದ ಸಾಬೀತಿಗೆ ಸಾಕಾಗುವುದಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?: ನಾಸಿರ್ ಎಂಬುವವರ ಶವ 2019 ರ ಜೂ. 21 ರಂದು ಬೆಂಗಳೂರಿನ ಬೈಯಪ್ಪನಹಳ್ಳಿ ರೈಲ್ವೆ ಬ್ರಿಡ್ಜ್ ಬಳಿ ಪತ್ತೆಯಾಗಿತ್ತು. ಈ ಕುರಿತು ಕಂಟೋನ್ಮೆಂಟ್ ರೈಲ್ವೆ ಪೊಲೀಸರುಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಮೃತನ ಜೇಬಿನಲ್ಲಿ ಪರ್ಸ್ ದೊರೆತಿತ್ತು. ಅದರಲ್ಲಿ ನೋಟ್ ಪುಸ್ತಕದ ಹಾಳೆ ಸಿಕ್ಕಿತ್ತು. ‘ನಾನು ಸಾಯಲು ಹೋಗುತ್ತಿದ್ದೇನೆ. ನನ್ನ ಸಾವಿಗೆ ಲೋಕೇಶ್, ರಾಜಗೋಪಾಲ್, ನೌಷಾದ್, ಇಕ್ಬಾಲ್, ಮತ್ತು ಅಮ್ಜದ್ (ಗ್ರಿಲ್) ಕಾರಣ. ಅಕ್ಬರ್, ಸತೀಶ್, ಚಿಟ್ ಕುಮಾರ್, ಆದಿಲ್, ವಿಜಯಸೇವ ಮತ್ತು ಆಂಜನಪ್ಪ ಎಂಬುವರಿಂದ ನನಗೆ ಸುಮಾರು 14 ಲಕ್ಷ ರು. ಬಾಕಿ ಬರಬೇಕಿದೆ’ ಎಂದು ಹಾಳೆಯಲ್ಲಿ ಬರೆಯಲಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆ ಮರಣಪತ್ರವನ್ನು ಮೃತ ನಾಸಿರ್ ಮಗ ನದೀಮ್‌ಗೆ ತೋರಿಸಲಾಗಿತ್ತು. ಮರಣಪತ್ರದ ಲ್ಲಿರುವ ಕೈಬರಹ ತಮ್ಮ ತಂದೆಯದ್ದೇ ಎಂದು ನದೀಮ್ ಒಪ್ಪಿದ್ದರು. ಬಳಿಕ ಪೊಲೀಸರಿಗೆ ದೂರು ನೀಡಿ, ತನ್ನ ತಂದೆ ಅಪಾರ್ಟ್‌ಮೆಂಟ್‌ಗಳ ಕಿಟಿಕಿ-ಬಾಗಿಲುಗಳಿಗೆ ಗ್ರಿಲ್ ಹಾಗೂ ರೋಲಿಂಗ್ ಶೆಟರ್ ಅಳವಡಿಸುವ ಕೆಲಸ ಮಾಡಿಕೊಂಡಿದ್ದರು. 

ಈ ಕೆಲಸಕ್ಕಾಗಿ ಅನೇಕ ಕಡೆ ಸಾಲ ಮಾಡಿಕೊಂಡಿದ್ದರು. ಹಣ ಬಾಕಿ ಇರುವುದರಿಂದ ಮಾನಸಿಕವಾಗಿ ನೊಂದು, ಜಿಗುಪ್ಸೆಗೊಂಡು ಯಾವುದೋ ಚಲಿಸುವ ರೈಲು ಗಾಡಿಗೆ ಸಿಕ್ಕಿ ಆತ್ಮಹತ್ಯೆ ಮಾಡಿ ಕೊಂಡಿರುತ್ತಾರೆ. ಆದ್ದರಿಂದ ತಂದೆಯ ಮರಣಪತ್ರದಲ್ಲಿ ಉಲ್ಲೇಖವಾಗಿರುವ ವ್ಯಕ್ತಿಗಳ ವಿರುದ್ಧ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದರು.

click me!