ಜೈಲಿನಲ್ಲಿ ದರ್ಶನ್‌ ಆ*ತ್ಮಹ*ತ್ಯೆ ಯತ್ನ ವದಂತಿ ಬಗ್ಗೆ ಪರಮೇಶ್ವರ್‌ ಹೇಳಿದ್ದೇನು?

Published : May 23, 2026, 10:38 AM IST
g parameshwara On Darshan

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಈ ಸುದ್ದಿ ಸಂಪೂರ್ಣ ಸುಳ್ಳು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಕಾರಾಗೃಹ ಇಲಾಖೆ ಸ್ಪಷ್ಟಪಡಿಸಿದ್ದು, ಇಂತಹ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಬೆಂಗಳೂರು (ಮೇ.23): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ತೂಗುದೀಪ ಅವರು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಆ*ತ್ಮಹ*ತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿಗಳಿಗೆ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಅಧಿಕೃತವಾಗಿ ತೆರೆ ಎಳೆದಿದ್ದಾರೆ. "ದರ್ಶನ್ ಆ*ತ್ಮಹ*ತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿ ಹರಡಿದ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣವೇ ನಾನು ಕಾರಾಗೃಹದ ಹಿರಿಯ ಅಧಿಕಾರಿಗಳಿಂದ ಮೌಖಿಕವಾಗಿ ಮಾಹಿತಿ ಪಡೆದಿದ್ದೇನೆ. ಜೈಲಿನಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಅಧಿಕಾರಿಗಳು ನನಗೆ ಸ್ಪಷ್ಟಪಡಿಸಿದ್ದಾರೆ. ಇದರ ಹೊರತಾಗಿ ಅಲ್ಲಿ ಬೇರೇನೂ ವಿಚಾರ ಇಲ್ಲ" ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಭಾನುವಾರ ರಾತ್ರಿಯಿಂದಲೇ ಸೋಶಿಯಲ್‌ ಮೀಡಿಯಾದಲ್ಲಿ ಈ ಆಘಾತಕಾರಿ ವದಂತಿ ಹರಡಿದ್ದು, ಸೋಮವಾರ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸುತ್ತಮುತ್ತ ತೀವ್ರ ಉದ್ವಿಗ್ನ ಪರಿಸ್ಥಿತಿ ಹಾಗೂ ದರ್ಶನ್ ಅಭಿಮಾನಿಗಳಲ್ಲಿ ಭಾರಿ ಆತಂಕ ಮೂಡಿಸಿತ್ತು.

ಜೈಲು ಅಧಿಕಾರಿಗಳಿಂದ ತಕ್ಷಣದ ತಪಾಸಣೆ; ವದಂತಿ ಎಂದ ಡಿಜಿಪಿ ಅಲೋಕ್ ಕುಮಾರ್

ಆ*ತ್ಮಹ*ತ್ಯೆ ಯತ್ನದ ವದಂತಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಎಚ್ಚೆತ್ತ ಜೈಲಿನ ಹಿರಿಯ ಅಧಿಕಾರಿಗಳ ತಂಡವು ತಕ್ಷಣವೇ ನಟ ದರ್ಶನ್ ಇರುವ ಬ್ಯಾರಕ್‌ಗೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿತು. ತದನಂತರ ಈ ವರದಿಗಳು ಕೇವಲ ವದಂತಿ ಎಂದು ಅಧಿಕಾರಿಗಳು ದೃಢಪಡಿಸಿದರು.

ಈ ಕುರಿತು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಸಂದೇಶ ನೀಡಿರುವ ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು, "ನಟ ದರ್ಶನ್ ಆ*ತ್ಮಹ*ತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿಗಳು ಸಂಪೂರ್ಣ ಆಧಾರರಹಿತ ಮತ್ತು ಸತ್ಯಕ್ಕೆ ದೂರವಾಗಿವೆ. ಇಂತಹ ಸುಳ್ಳು ವದಂತಿಗಳನ್ನು ನಂಬಿ ಯಾರೂ ಪರಪ್ಪನ ಅಗ್ರಹಾರ ಕೇಂದ್ರ ಜೈಲಿನ ಬಳಿ ಅನಗತ್ಯವಾಗಿ ಬರಬಾರದು" ಎಂದು ಸ್ಪಷ್ಟಪಡಿಸಿದ್ದಾರೆ.

ಪೊಲೀಸ್ ಠಾಣೆಗೂ ತಲುಪಿದ ಹೈ ಟೆನ್ಷನ್; ಹಳೇ ಹೇಳಿಕೆಯಿಂದ ಸೃಷ್ಟಿಯಾದ ಆತಂಕ

ಈ ವದಂತಿಯ ತೀವ್ರತೆ ಎಷ್ಟಿತ್ತೆಂದರೆ, ಸ್ವತಃ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸಹ ತಕ್ಷಣವೇ ಜೈಲಿನ ಸ್ಥಿರ ದೂರವಾಣಿಗೆ (ಲ್ಯಾಂಡ್‌ಲೈನ್) ಕರೆ ಮಾಡಿ ಸತ್ಯಾಸತ್ಯತೆಯನ್ನು ವಿಚಾರಿಸುವಂತಾಯಿತು ಎಂದು ಹಿರಿಯ ಜೈಲು ಸಿಬ್ಬಂದಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಮೈಸೂರಿನ ಖ್ಯಾತ ಮನೋರೋಗ ತಜ್ಞ ಡಾ. ಅಭಿಜಿತ್ ಹನಹೋಡು ಅವರು ಮಾಧ್ಯಮಗಳೊಂದಿಗೆ ಮಾತನಾಡುವಾಗ, "ನಟ ದರ್ಶನ್ ಅವರು ಜೈಲಿನ ವಾತಾವರಣದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಆ*ತ್ಮಹ*ತ್ಯೆಗೆ ಯತ್ನಿಸುವ ಸಾಧ್ಯತೆ ಇರುತ್ತದೆ. ಅವರಿಗೆ ತಕ್ಷಣವೇ ಸೂಕ್ತ ಮನೋರೋಗ ಚಿಕಿತ್ಸೆಯ ಅಗತ್ಯವಿದೆ" ಎಂದು ಎಚ್ಚರಿಸಿದ್ದರು. ವೈದ್ಯರ ಈ ಹಳೆಯ ಹೇಳಿಕೆಯ ಹಿನ್ನೆಲೆಯಲ್ಲೇ ಭಾನುವಾರ ರಾತ್ರಿ ಹರಡಿದ ಈ ಹೊಸ ವದಂತಿಯು ದರ್ಶನ್ ಅಭಿಮಾನಿ ವಲಯದಲ್ಲಿ ತೀವ್ರ ಆಘಾತ ಹಾಗೂ ಗೊಂದಲ ಸೃಷ್ಟಿಸಲು ಪ್ರಮುಖ ಕಾರಣವಾಯಿತು. ಸದ್ಯ ಗೃಹ ಸಚಿವರು ಹಾಗೂ ಜೈಲು ಮಹಾನಿರ್ದೇಶಕರು ನೀಡಿರುವ ಅಧಿಕೃತ ಸ್ಪಷ್ಟನೆಯಿಂದ ಈ ವಿವಾದಕ್ಕೆ ಸದ್ಯಕ್ಕೆ ಪೂರ್ಣವಿರಾಮ ಬಿದ್ದಿದೆ.

 

PREV
Read more Articles on
click me!

Recommended Stories

Bengaluru: ಮೆಜೆಸ್ಟಿಕ್‌ನಲ್ಲಿ ಮತ್ತೊಂದು ಹೊಸ ಬಸ್ ನಿಲ್ದಾಣ: ಸಚಿವ ರಾಮಲಿಂಗಾ ರೆಡ್ಡಿ
Bengaluru: ಕಾಕ್ರೋಚ್‌ ಜನತಾ ಪಕ್ಷದ ಮೊದಲ ಬಹಿರಂಗ ಸಭೆಗೆ ಬೆಂಗಳೂರು ಪೊಲೀಸರ ನಿರ್ಬಂಧ