Bengaluru: ಕಾಕ್ರೋಚ್‌ ಜನತಾ ಪಕ್ಷದ ಮೊದಲ ಬಹಿರಂಗ ಸಭೆಗೆ ಬೆಂಗಳೂರು ಪೊಲೀಸರ ನಿರ್ಬಂಧ

Published : May 23, 2026, 05:58 AM IST
 Cockroach Janata Party

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ 'ಕಾಕ್ರೋಚ್ ಜನತಾ ಪಾರ್ಟಿ'ಯು ಬೆಂಗಳೂರಿನ ಪುರಭವನದ ಮುಂದೆ ಮಾನವ ಸರಪಳಿ ಪ್ರತಿಭಟನೆಗೆ ಕರೆ ನೀಡಿತ್ತು. ಆದರೆ, ಈ ಕಾರ್ಯಕ್ರಮಕ್ಕೆ ಯಾವುದೇ ಅನುಮತಿ ನೀಡಿಲ್ಲ ಮತ್ತು ಅಕ್ರಮವಾಗಿ ಗುಂಪು ಸೇರಿದರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು: ರಾಷ್ಟ್ರ ವ್ಯಾಪ್ತಿ ಭಾರಿ ಬಿರುಗಾಳಿ ಎಬ್ಬಿಸಿರುವ ‘ಕಾಕ್ರೋಚ್‌ ಜನತಾ ಪಾರ್ಟಿ’ (ಸಿಎಲ್‌ಪಿ) ಭಾನುವಾರ ವಿವಿಧ ಸಾಮಾಜಿಕ ಸಮಸ್ಯೆಗಳ ವಿರುದ್ಧ ನಡೆಸಲುದ್ದೇಶಿಸಿದ್ದ ಪ್ರಥಮ ಬಹಿರಂಗ ಸಾರ್ವಜನಿಕ ಸಭೆಗೆ ರಾಜಧಾನಿ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.

ಮನವಿ ಪತ್ರ ಸಲ್ಲಿಕೆಯಾಗಿಲ್ಲ

ನಗರದ ಪುರಭವನ ಮುಂದೆ ನಡೆಯಲಿರುವ ‘ಮಾನವ ಸರಪಳಿ’ ಕಾರ್ಯಕ್ರಮಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಪೊಲೀಸರು ಅನುಮತಿ ನೀಡಿಲ್ಲ. ಅಲ್ಲದೆ, ಈ ಬಗ್ಗೆ ಯಾರಿಂದಲೂ ಅನುಮತಿ ಕೋರಿ ಮನವಿ ಪತ್ರ ಕೂಡ ಸಲ್ಲಿಕೆಯಾಗಿಲ್ಲ ಎಂದು ನಗರ ಪೊಲೀಸ್ ಆಯುಕ್ತರ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ ಶುಕ್ರವಾರ ಸ್ಪಷ್ಟಪಡಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ ಕರ್ನಾಟಕ’ ಹೆಸರಿನಲ್ಲಿ ನೀಡಿರುವ ಕರೆಗೆ ಸಾರ್ವಜನಿಕರು ಕಿವಿಗೊಡಬಾರದು. ಅಕ್ರಮವಾಗಿ ಗುಂಪು ಸೇರಿದರೆ ಕ್ರಮ ಜರುಗಿಲಾಗುತ್ತದೆ ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿಗೆ ನಿರುದ್ಯೋಗಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವಾಗ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಸೂರ್ಯಕಾಂತ್ ಅವರು ‘ಕಾಕ್ರೋಚ್‌’ ಎಂಬ ಟೀಕೆ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಉದಯಿಸಿತು. ದೇಶಾದ್ಯಂತ ರಾಜಕೀಯವಾಗಿ ಬಿರುಗಾಳಿಯನ್ನೇ ಜಿರಲೆ ಪಕ್ಷ ಎಬ್ಬಿಸಿತು. ‘ಎಕ್ಸ್‌’ ಹಾಗೂ ‘ಇನ್‌ಸ್ಟಾಗ್ರಾಂ’ ತಾಣಗಳಲ್ಲಿ ಪಾರ್ಟಿಯ ಅಧಿಕೃತ ಖಾತೆಗೆ ರಾತ್ರೋರಾತ್ರಿ ಸುಮಾರು 2 ಕೋಟಿ ಫಾಲೋವರ್ಸ್‌ ಆಗಿದ್ದಾರೆ. ಈಗ ಜಿರಲೆ ಪಕ್ಷವು ಕರುನಾಡಿಗೂ ಕಾಲಿಟ್ಟಿದ್ದು, ಮೇ.24 ರಂದು ಮಾನವ ಸರಪಳಿ ಮೂಲಕ ಬೆಂಬಲ ಕೋರಿದೆ.

ಕಾಕ್ರೋಚ್ ಪ್ರತಿಭಟನೆ ಯಾಕೆ?

ನಾನಾ ಸಾಮಾಜಿಕ ಸಮಸ್ಯೆಗಳ ವಿರುದ್ಧ ಮಾನವ ಸರಪಳಿ ನಿರ್ಮಿಸಿ ಆಡಳಿತರೂಢರಿಗೆ ಬಿಸಿ ಮುಟ್ಟಿಸಲು ಕಾಕ್ರೋಚ್ ಜನತಾ ಪಾರ್ಟಿ ಹೆಸರಿನಲ್ಲಿ ಕರೆ ನೀಡಲಾಗಿದೆ. ಯುವಕರಿಗೆ ಭವಿಷ್ಯವಿಲ್ಲ, ಬೆಲೆ ಏರಿಕೆಯಿಂದ ಬದುಕಿಲ್ಲ, ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಇಲ್ಲ, ನಮ್ಮ ಮತ ಕದಿಯುತ್ತಿದ್ದಾರೆ, ಬಿಟ್ಟಿ ದುಡ್ಡಲ್ಲಿ ವಿದೇಶದಲ್ಲಿ ತಿರುಗುತ್ತಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿ ಹೇಳಿದೆ.

ಸಾಮಾಜಿಕ ಜಾಲತಾಣದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಹೆಸರಿನಲ್ಲಿ ಭಾನುವಾರ ಪುರಭವನದ ಮುಂದೆ ಆಯೋಜಿಸಿರುವ ಮಾನವ ಸರಪಳಿಗೆ ಸಾರ್ವಜನಿಕರಿಗೆ ಆಹ್ವಾನ ನೀಡಲಾಗಿತ್ತು. ಈ ರೀತಿ ಕಾರ್ಯಕ್ರಮಕ್ಕೆ ಯಾವುದೇ ಯಾವ ವ್ಯಕ್ತಿ ಅಥವಾ ಸಂಘಟನೆಯಿಂದ ಅನುಮತಿ ಕೋರಿ ಅರ್ಜಿ ಬಂದಿಲ್ಲ. ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ. ಜಿಬಿಬಿಯಿಂದಲೂ ಜಾಗಕ್ಕೆ ಅನುಮತಿ ಇಲ್ಲ ಎಂದು ಆಯುಕ್ತ ಕಚೇರಿ ಸ್ಪಷ್ಟಪಡಿಸಿದೆ.

ಪೊಲೀಸರ ಎಚ್ಚರಿಕೆ

ನಗರದಲ್ಲಿ ಹೈಕೋರ್ಟ್ ಆದೇಶದಂತೆ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಡೆ ಪ್ರತಿಭಟನೆ ಹಾಗೂ ಧರಣಿ ನಡೆಸಲು ಅವಕಾಶವಿಲ್ಲ. ಈ ಹಿನ್ನಲೆಯಲ್ಲಿ ಟೌನ್‌ಹಾಲ್ ಮುಂದೆ ಗುಂಪು ಸೇರಿದರೆ ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಮಾನವ ಸರಪಳಿ ಕಾರ್ಯಕ್ರಮದ ಸಂದೇಶವನ್ನು ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟರ್‌ನಲ್ಲಿ ಸಾರ್ವಜನಿಕರು ಅರಿತು ಅಥವಾ ಅರಿಯದೆ ಹಂಚಿಕೊಳ್ಳದಂತೆ ಸಹ ಪೊಲೀಸರು ತಾಕೀತು ಮಾಡಿದ್ದಾರೆ.

ಅಲ್ಲದೆ ಸಾಮಾಜಿಕ ಮಾಧ್ಯಮಗಳ ಹರದಾಡಿರುವ ಸಂದೇಶ ನಂಬಿ ಭಾನುವಾರ ಪುರಭವನ ಮುಂದೆ ಗುಂಪು ಸೇರದಂತೆ ಸಹ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ.

PREV
Read more Articles on
click me!

Recommended Stories

ಗ್ಲೋಬಲ್ ವಾಟರ್ ಸಮಿಟ್‌ನಲ್ಲಿ ವಿಶ್ವದ ಗಮನ ಸೆಳೆದ ಬೆಂಗಳೂರಿನ ಜಲಮಂಡಳಿಯ ಪಂಚಸೂತ್ರ
Rain: ರಾಜಧಾನಿ ಬೆಂಗಳೂರಿನಲ್ಲಿ ಸುರಿದ 1 ಗಂಟೆಯ ಮಳೆಗೆ 150ಕ್ಕೂ ಹೆಚ್ಚು ಮರ ಧರೆಗೆ