ಬೆಂಗಳೂರು: ಅಭಿವೃದ್ಧಿಪಡಿಸಿದ ಬಡವಾಣೆಗಳಲ್ಲಿನ ಅಂದ್ರೆ 60 ಅಡಿ ಮತ್ತು ಅದಕ್ಕಿಂತ ಹೆಚ್ಚಿನ ಅಳತೆಯ ರಸ್ತೆಗಳಿಗೆ ಹೊಂದಿಕೊಂಡಿರುವ ಎಲ್ಲಾ ಖಾಲಿ ನಿವೇಶನಗಳನ್ನು ಇ-ಹರಾಜಿನ ಮೂಲಕ ಮಾರಾಟ ಮಾಡಲು ಬಿಡಿಎ (Bangalore Development Authority- BDA) ಮುಂದಾಗಿದೆ. ಈ ಖಾಲಿ ನಿವೇಶನಗಳನ್ನು ಸಾರ್ವಜನಿಕ ಹರಾಜಿನ ಮೂಲಕ ಮಾರಾಟ ಮಾಡುವಂತೆ ಪ್ರಾಧಿಕಾರ ನಿರ್ದೇಶನ ನೀಡಿದೆ
ಈ ಖಾಲಿ ನಿವೇಶನಗಳು 60 ಅಡಿ ಮತ್ತು ಅದಕ್ಕಿಂತ ಹೆಚ್ಚಿನ ಅಳತೆಯ ರಸ್ತೆಗಳಿಗೆ ಹೊಂದಿಕೊಂಡಿರುವ ಕಾರಣ ಅತ್ಯಧಿಕ ಬೆಲೆಗೆ ಮಾರಾಟವಾಗಲಿವೆ. ಈ ನಿವೇಶನಗಳು ಬಿಡಿಎಗೆ ಹೆಚ್ಚು ಆದಾಯ ನೀಡಲಿವೆ. ಈ ಸಂಬಂಧ ನವೆಂಬರ್ 11ರಂದು ಬಿಡಿಎ ಆಯುಕ್ತ ಪಿ. ಮಣಿವಣ್ಣನ್ ಸುತ್ತೋಲೆಯನ್ನು ಹೊರಡಿಸಿದ್ದು, ಖಾಲಿ ನಿವೇಶನಗಳನ್ನು ಸಾರ್ವಜನಿಕ ಇ-ಹರಾಜಿನ ಮೂಲಕ ಮಾತ್ರ ವಿಲೇವಾರಿ ಮಾಡುವಂತೆ ಎಲ್ಲಾ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳಿಗೆ ನಿರ್ದೇಶನ ನೀಡಿದ್ದಾರೆ. ಭೂ ನಷ್ಟಕ್ಕೊಳಗಾದವರ ಪರಿಹಾರ ನಿವೇಶನಗಳ ಬೇಡಿಕೆಗಳನ್ನು ಪೂರೈಸಲು ನಾಗರಿಕ ಸೌಲಭ್ಯ (ಸಿಎ) ನಿವೇಶನಗಳು ಸೇರಿದಂತೆ ಪ್ರಮುಖ ಆಸ್ತಿಗಳನ್ನು ಪರಿವರ್ತಿಸುವಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳ ನಡುವೆ ಈ ನಿರ್ದೇಶನವು ಮಹತ್ವ ಪಡೆದುಕೊಂಡಿದೆ.
ನಾಡಪ್ರಭು ಕೆಂಪೇಗೌಡ ಲೇಔಟ್ ಮತ್ತು ಡಾ. ಶಿವರಾಮ ಕಾರಂತ್ ಲೇಔಟ್‌ನಲ್ಲಿ ಅನೇಕ ಭೂ ನಷ್ಟಕ್ಕೊಳಗಾದವರು ಇನ್ನೂ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಕಾರಂತ ಲೇಔಟ್ ಸಂತ್ರಸ್ತರು ಪ್ರತಿಭಟನೆ ನಡೆಸಿ, ಬಿಡಿಎ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಅವರ ನಿರ್ದೇಶನದ ಮೇರೆಗೆ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ವಿವೇಚನಾ ಹಂಚಿಕೆಗಳನ್ನು ತಡೆಯುವುದು ಮತ್ತು ಬೆಲೆಬಾಳುವ ಭೂಮಿಯನ್ನು ವಿಲೇವಾರಿ ಮಾಡಲು ಹೆಚ್ಚು ಪಾರದರ್ಶಕ ಕಾರ್ಯವಿಧಾನವನ್ನು ಖಚಿತಪಡಿಸುವುದು ಇದರ ಉದ್ದೇಶವಾಗಿದ್ದು, "ಇದು ಪ್ರಾಧಿಕಾರಕ್ಕೆ ಹೆಚ್ಚುವರಿ ಆದಾಯವನ್ನು ತರುತ್ತದೆ" ಎಂದು ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: Hebbal To Silkboard Tunnel Update: ಲಾಲ್‌ಬಾಗ್ ಸುರಂಗ ಮಾರ್ಗಕ್ಕೆ ಸಿದ್ಧತೆ; ಯಾವುದೇ ಮಾಹಿತಿ ನೀಡದೇ ಸರ್ಕಾರದ ಗೌಪ್ಯತೆ