
ಬೆಂಗಳೂರು : ರಾಜ್ಯ ರಾಜಕಾರಣದ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದ್ದ ಬೆಂಗಳೂರಿನ ಪ್ರತಿಷ್ಠಿತ 'ಕುಮಾರ ಕೃಪಾ' ಅತಿಥಿಗೃಹದ ರೂಪವೇ ಈಗ ಬದಲಾಗಿದೆ. ಹಲವು ದಶಕಗಳಿಂದ ಗಣ್ಯರ ವಾಸ್ತವ್ಯಕ್ಕೆ ಮೀಸಲಾಗಿದ್ದ ಈ ಪಾರಂಪರಿಕ ಬಂಗಲೆಯನ್ನು ನವೀಕರಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ನಿವಾಸವಾಗಿ ಸಜ್ಜುಗೊಳಿಸಲಾಗಿದೆ. ಈ ನವೀಕೃತ ಬಂಗಲೆಗೆ ಅಧಿಕೃತವಾಗಿ 'ಗಂಗಾ' ಎಂದು ಹೊಸ ನಾಮಕರಣ ಮಾಡಲಾಗಿದೆ. ಕಟ್ಟಡದ ಮುಂಭಾಗದಲ್ಲಿ 'ಗಂಗಾ' ಎಂಬ ನೂತನ ನಾಮಫಲಕ ಅಳವಡಿಸಲಾಗಿದ್ದು, ಬಿಗಿ ಪೊಲೀಸ್ ಭದ್ರತೆಯೊಂದಿಗೆ ಶಾಸ್ತ್ರೋಕ್ತವಾಗಿ ಇವತ್ತು ಗೃಹಪ್ರವೇಶ ನೆರವೇರಲಿದೆ.
ಇಷ್ಟು ದಿನ ಸುದ್ದಿಯ ಕೇಂದ್ರಬಿಂದುವಾಗಿದ್ದ 'ಕುಮಾರ ಕೃಪಾ' ಎಂದರೇನು? ಈ ಕಟ್ಟಡವನ್ನು ಕಟ್ಟಿಸಿದವರು ಯಾರು? ಗಾಂಧೀಜಿ, ದಲೈ ಲಾಮಾ, ರಾಜೀವ್ ಗಾಂಧಿ ಅವರಂತಹ ಮಹನೀಯರಿಗೂ ಈ ಬಂಗಲೆಗೂ ಏನು ನಂಟು? ಇದರ ಸಂಪೂರ್ಣ ಇತಿಹಾಸ ಮತ್ತು ರಾಜಕೀಯ ಪರಂಪರೆಯ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಬೆಂಗಳೂರಿನ ಹೃದಯಭಾಗವಾದ ಹೈಗ್ರೌಂಡ್ಸ್‌ನ ಕುಮಾರ ಕೃಪಾ ರಸ್ತೆಯಲ್ಲಿ ಸುಂದರ ಕಟ್ಟಡವಿದೆ. ಬೆಂಗಳೂರು ಗಾಲ್ಫ್ ಕ್ಲಬ್ ಎದುರು ಮತ್ತು ವಿಧಾನಸೌಧದಿಂದ ಕೂಗಳತೆಯ ದೂರದಲ್ಲಿರುವ ಬಂಗಲೆ, ಸುತ್ತಲೂ ಹಚ್ಚ ಹಸಿರಿನಿಂದ ಕೂಡಿದ ವಿಶಾಲ ಪ್ರದೇಶದ ಮಧ್ಯೆ ತಲೆ ಎತ್ತಿ ನಿಂತಿದೆ. ಮೂಲತಃ ಇದು ಸರ್ಕಾರಿ ಅತಿಥಿಗೃಹವಾಗಿರಲಿಲ್ಲ! ಮೈಸೂರು ಸಂಸ್ಥಾನದಲ್ಲಿ ಅತ್ಯಂತ ದೀರ್ಘಕಾಲ ದಿವಾನರಾಗಿ ಸೇವೆ ಸಲ್ಲಿಸಿದ ಮತ್ತು 'ಆಧುನಿಕ ಬೆಂಗಳೂರಿನ ನಿರ್ಮಾಪಕ' ಎಂದು ಕರೆಯಲ್ಪಡುವ ಸರ್ ಕೆ. ಶೇಷಾದ್ರಿ ಅಯ್ಯರ್ (1883–1901) ಅವರು ತಮ್ಮ ಸ್ವಂತ ವಾಸಕ್ಕಾಗಿ ಕಟ್ಟಿಸಿದ ಖಾಸಗಿ ಬಂಗಲೆ ಇದು. ಕೇರಳದ ಪಾಲಕ್ಕಾಡ್‌ನ ಕುಮಾರಪುರಂ ಮೂಲದವರಾದ ಶೇಷಾದ್ರಿ ಅಯ್ಯರ್ ಅವರಿಗೆ ಸುಬ್ರಹ್ಮಣ್ಯ ಸ್ವಾಮಿ (ಕುಮಾರಸ್ವಾಮಿ) ಕುಲದೇವರಾಗಿದ್ದರು. ತಮ್ಮ ಕುಲದೇವರ ಆಶೀರ್ವಾದದಿಂದ ಕಟ್ಟಿಸಿದ ಮನೆ ಎಂಬ ಅರ್ಥದಲ್ಲಿ, 1897ರ ಸುಮಾರಿಗೆ ನಿರ್ಮಾಣವಾದ ಭವ್ಯ ಬಂಗಲೆಗೆ 'ಕುಮಾರ ಕೃಪಾ' ಎಂದು ಹೆಸರಿಟ್ಟರು.
19ನೇ ಶತಮಾನದ ಕೊನೆಯಲ್ಲಿ ಬೆಂಗಳೂರಿನ ಬಹುತೇಕ ದೊಡ್ಡ ಕಟ್ಟಡಗಳನ್ನು ಬ್ರಿಟಿಷ್ ಅಥವಾ ಯುರೋಪಿಯನ್ ಶೈಲಿಯಲ್ಲಿ ಕಟ್ಟಲಾಗುತ್ತಿತ್ತು. ಆದರೆ ಶೇಷಾದ್ರಿ ಅಯ್ಯರ್ ತಮ್ಮ ಮನೆ ಸಂಪೂರ್ಣವಾಗಿ ಭಾರತೀಯ ಶೈಲಿಯಲ್ಲೇ ಇರಬೇಕು ಎಂದು ಬಯಸಿದ್ದರು. ಅರಮನೆಯ ಆಸ್ತಿಗಳ ನಿಯಂತ್ರಕರಾಗಿದ್ದ ಈರೋಡ್ ಸುಬ್ಬರಾವ್ ಎರಡು ಅಂತಸ್ತಿನ ಕಲ್ಲಿನ ಕಟ್ಟಡ ನಿರ್ಮಿಸಿದರು.
1901ರ ಮಾರ್ಚ್‌ನಲ್ಲಿ ನಿವೃತ್ತರಾದ ಶೇಷಾದ್ರಿ ಅಯ್ಯರ್ ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ನಿಧನರಾದರು. ಅವರ ಅಂತ್ಯಕ್ರಿಯೆಯೂ ಕುಮಾರ ಕೃಪಾ ಬಳಿಯ ಮೈದಾನದಲ್ಲೇ ನೆರವೇರಿತು. ಆ ಬಳಿಕ ಅವರ ಕುಟುಂಬದವರು ಹೊರ ರಾಜ್ಯ ಮತ್ತು ವಿದೇಶಗಳಲ್ಲಿ ನೆಲೆಸಿದ್ದರಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಅವಧಿಯಲ್ಲಿ (ಸುಮಾರು 1915-1918ರ ನಡುವೆ) ಮೈಸೂರು ಸರ್ಕಾರವು ಶೇಷಾದ್ರಿ ಅಯ್ಯರ್ ಅವರ ಪುತ್ರರಿಂದ ಈ ಬಂಗಲೆಯನ್ನು ಖರೀದಿಸಿತು. ಬ್ರಿಟಿಷರ ಆಳ್ವಿಕೆ ಅಂತ್ಯಗೊಂಡ ನಂತರ ಸರ್ಕಾರವು ಇದನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆದು, ಗಣ್ಯರಿಗಾಗಿ ಅಧಿಕೃತ ರಾಜ್ಯ ಅತಿಥಿಗೃಹ (VIP State Guest House) ಆಗಿ ಬದಲಾಯಿಸಿತು.