
ಬೆಂಗಳೂರಿನ ಜೀವನಶೈಲಿ, ಟ್ರಾಫಿಕ್ ಮತ್ತು ಸಾಮಾಜಿಕ ಸಂಪರ್ಕದ ಬಗ್ಗೆ ನ್ಯೂಟ್ರಿಷನಿಸ್ಟ್ ರೆಬೆಕ್ಕಾ ಪಿಂಟೋ ಹಂಚಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೋವಿಡ್ ಸಮಯಕ್ಕಿಂತಲೂ ಈಗ ಕಡಿಮೆ ಜನರೊಂದಿಗೆ ಸಂಪರ್ಕ ಹೊಂದಿರುವ ಅನುಭವವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಒಂಟಿತನ ಏಕೆ ಹೆಚ್ಚುತ್ತಿದೆ?
ರೆಬೆಕ್ಕಾ ಪಿಂಟೋ ಅವರ ಪ್ರಕಾರ, ಬೆಂಗಳೂರಿನ ದೀರ್ಘ ಪ್ರಯಾಣದ ಸಮಯ ಮತ್ತು ಭಾರೀ ಟ್ರಾಫಿಕ್ ಜನರು ಪರಸ್ಪರ ಭೇಟಿಯಾಗುವುದನ್ನೇ ಕಷ್ಟವಾಗಿಸುತ್ತಿದೆ. ಚಿಕ್ಕದೊಂದು ಭೇಟಿಗೂ ಹೆಚ್ಚು ಸಮಯ ಬೇಕಾಗುವುದರಿಂದ ಸ್ನೇಹಿತರು ಮತ್ತು ಪರಿಚಿತರನ್ನು ನಿಯಮಿತವಾಗಿ ಭೇಟಿಯಾಗುವ ಅವಕಾಶ ಕಡಿಮೆಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಸಾಮಾಜಿಕ ಜೀವನಕ್ಕೂ ಹಣ ಖರ್ಚು ಮಾಡಬೇಕೇ?’
ಬೆಂಗಳೂರಿನಲ್ಲಿ ಜನರು ಒಟ್ಟಾಗಿ ಸಮಯ ಕಳೆಯಲು ಸಾಕಷ್ಟು ಚಟುವಟಿಕೆಗಳಿದ್ದರೂ, ಹಣ ಖರ್ಚು ಮಾಡದೆ ಕುಳಿತು ಮಾತನಾಡಲು ಅಥವಾ ಸಮಯ ಕಳೆಯಲು ಸಾರ್ವಜನಿಕ ಸ್ಥಳಗಳ ಕೊರತೆ ಇದೆ ಎಂಬುದು ಅವರ ಮತ್ತೊಂದು ವಾದ.
ಕೆಫೆ, ರೆಸ್ಟೋರೆಂಟ್ ಸೇರಿದಂತೆ ಹಣ ಪಾವತಿಸಬೇಕಾದ ಸ್ಥಳಗಳೇ ಭೇಟಿಯ ಪ್ರಮುಖ ತಾಣಗಳಾಗುತ್ತಿವೆ ಎಂದು ಅವರು ಹೇಳಿದ್ದಾರೆ.
ವಲಸೆ ಜನಸಂಖ್ಯೆಯೂ ಒಂದು ಕಾರಣ?
ಬೆಂಗಳೂರಿನ ಮತ್ತೊಂದು ವೈಶಿಷ್ಟ್ಯವೆಂದರೆ ದೇಶದ ವಿವಿಧ ಭಾಗಗಳಿಂದ ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ಬರುವ ಜನರ ದೊಡ್ಡ ಸಂಖ್ಯೆಯಾಗಿದೆ. ನಗರದ ಈ ತಾತ್ಕಾಲಿಕ ಅಥವಾ ವಲಸೆ ಸ್ವರೂಪವೂ ಜನರು ಆಳವಾದ ಸಾಮಾಜಿಕ ಬಾಂಧವ್ಯ ಬೆಳೆಸಿಕೊಳ್ಳುವುದಕ್ಕೆ ಸವಾಲಾಗಬಹುದು ಎಂದು ಪಿಂಟೋ ಹೇಳಿದ್ದಾರೆ.
‘ಒಟ್ಟಾಗಿ ಆಚರಿಸುವ ಸಂಸ್ಕೃತಿ ಕಡಿಮೆಯೇ?’
ಕೋಲ್ಕತ್ತಾದ ದುರ್ಗಾ ಪೂಜೆ, ಮುಂಬೈನ ಗಣೇಶ ವಿಸರ್ಜನೆ ಮತ್ತು ಅಹಮದಾಬಾದ್‌ನ ಉತ್ತರಾಯಣದಂತಹ ದೊಡ್ಡ ಸಮುದಾಯ ಆಚರಣೆಗಳು ಜನರನ್ನು ಒಟ್ಟುಗೂಡಿಸುತ್ತವೆ. ಆದರೆ ಬೆಂಗಳೂರಿನಲ್ಲಿ ಇಂತಹ ನಗರವ್ಯಾಪಿ ಸಾಮೂಹಿಕ ಸಾಂಸ್ಕೃತಿಕ ಅನುಭವ ಕಡಿಮೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನೆಟ್ಟಿಗರಿಂದ ಭಿನ್ನಾಭಿಪ್ರಾಯ!
ವಿಡಿಯೋ ವೈರಲ್ ಆದ ಬೆನ್ನಲ್ಲೇ ಬೆಂಗಳೂರಿನ ನಿವಾಸಿಗಳಲ್ಲಿ ಪರ-ವಿರೋಧದ ಚರ್ಚೆ ಶುರುವಾಗಿದೆ. ಕೆಲವರು ಟ್ರಾಫಿಕ್ ಮತ್ತು ಸಂಪರ್ಕದ ಸಮಸ್ಯೆಗಳು ನಿಜವೆಂದು ಒಪ್ಪಿಕೊಂಡರೆ, ಇನ್ನು ಕೆಲವರು ಬೆಂಗಳೂರಿನಲ್ಲಿ ಸಾಮಾಜಿಕವಾಗಿ ಬೆರೆಯಲು ಸಾಕಷ್ಟು ಉಚಿತ ಸಾರ್ವಜನಿಕ ಸ್ಥಳಗಳಿವೆ ಎಂದು ಹೇಳಿದ್ದಾರೆ.
‘ಬೆಂಗಳೂರು ಅಷ್ಟೊಂದು ಒಂಟಿ ನಗರವಲ್ಲ!’
ಕಬ್ಬನ್ ಪಾರ್ಕ್, ಲಾಲ್‌ಬಾಗ್ ಸೇರಿದಂತೆ ಸಾರ್ವಜನಿಕ ಸ್ಥಳಗಳು, ಬೀದಿ ಮೇಳಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜನರು ಹಣ ಖರ್ಚು ಮಾಡದೆ ಪರಸ್ಪರ ಬೆರೆಯಲು ಅವಕಾಶ ನೀಡುತ್ತವೆ ಎಂದು ಕೆಲ ನೆಟ್ಟಿಗರು ವಾದಿಸಿದ್ದಾರೆ.
ಬೆಂಗಳೂರು ದೇಶದ ಅತ್ಯಂತ ಕಾಸ್ಮೋಪಾಲಿಟನ್ ನಗರಗಳಲ್ಲಿ ಒಂದಾಗಿದ್ದು, ವಿವಿಧ ರಾಜ್ಯಗಳ ಜನರು ಹಲವು ಹಬ್ಬಗಳನ್ನು ಒಟ್ಟಾಗಿ ಆಚರಿಸುತ್ತಾರೆ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.
ವೈಯಕ್ತಿಕ ಅನುಭವದಿಂದ ಹುಟ್ಟಿದ ಪ್ರಶ್ನೆ..?
ತಮ್ಮ ಅಭಿಪ್ರಾಯಗಳು ವೈಯಕ್ತಿಕ ಒಂಟಿತನದ ಅನುಭವದಿಂದ ಪ್ರಭಾವಿತವಾಗಿರಬಹುದು ಎಂದು ಪಿಂಟೋ ಅವರೇ ಒಪ್ಪಿಕೊಂಡಿದ್ದಾರೆ. ಇದೇ ಕಾರಣಕ್ಕೆ ತಮ್ಮ ದೃಷ್ಟಿಕೋನವನ್ನು ಪ್ರಶ್ನಿಸುವಂತೆ ಅವರು ಇತರರಿಗೂ ಆಹ್ವಾನ ನೀಡಿದ್ದಾರೆ.