ನಮ್ಮನ್ನ ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳಬೇಡಿ - ದಿಢೀರ್ ಸುದ್ದಿಗೋಷ್ಠಿ ನಡೆಸಿ ಪ್ರಕಾಶ್ ರಾಜ್ ಆಕ್ರೋಶ!

Published : Aug 14, 2026, 06:21 PM IST
Prakash Raj Latest Viral Video

ಸಾರಾಂಶ

ಮತದಾರರ ಪಟ್ಟಿ ಪರಿಷ್ಕರಣೆ (SIR) ಹೆಸರಿನಲ್ಲಿ ಅರ್ಹರ ಹೆಸರುಗಳನ್ನು ಕೈಬಿಡುತ್ತಿರುವ ಚುನಾವಣಾ ಆಯೋಗದ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿ, ಇದನ್ನು 'ಜನರನ್ನು ಹೊರಗಿಡುವ ಷಡ್ಯಂತ್ರ' ಎಂದು ಕರೆದರು. ಮತದಾನದ ಹಕ್ಕಿಗಾಗಿ ಜನರನ್ನು ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಈ ಪ್ರಕ್ರಿಯೆಗೆ ಕನಿಷ್ಠ ಆರು ತಿಂಗಳ ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿದರು.

ಬೆಂಗಳೂರು: ಮತದಾನದ ಹಕ್ಕನ್ನು ಖಚಿತಪಡಿಸಿಕೊಳ್ಳಲು ನಮ್ಮನ್ನು ಅಧಿಕಾರಿಗಳ ಹಿಂದೆ ಅಲೆಯುವಂತೆ ಮಾಡುತ್ತಿದ್ದೀರಿ. ನಮ್ಮ ಮೂಲಭೂತ ಹಕ್ಕಿಗಾಗಿ ನಮ್ಮನ್ನು ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳಬೇಡಿ ಎಂದು ಚುನಾವಣಾ ಆಯೋಗದ ವಿರುದ್ಧ ನಟ ಪ್ರಕಾಶ್ ರಾಜ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಸಂಬಂಧ ಸುದ್ದಿಗೋಷ್ಠಿ ನಡೆಸಿದ ಅವರು, ಆಯೋಗದ ನಡೆಯನ್ನು 'ಜನರನ್ನು ಹೊರಗುಳಿಸುವ ಕುತಂತ್ರ' ಎಂದು ಕರೆದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶ್ ರಾಜ್, ಹಿಂದೆ ರಾಜಕೀಯ ನಾಯಕರು ವೋಟ್ ಹಾಕಿ ಎಂದು ಜನರ ಬಳಿ ಬೇಡಿಕೊಳ್ಳುತ್ತಿದ್ದರು. ಆದರೆ ಇಂದು ಮತದಾರ ತನ್ನ ವೋಟು ಉಳಿಸಿಕೊಡಿ ಎಂದು ಅಧಿಕಾರಿಗಳ ಮುಂದೆ ಬೇಡುವ ಸ್ಥಿತಿ ಬಂದಿದೆ. ನೋಟ್ ಬ್ಯಾನ್ ಮತ್ತು ಕೊರೊನಾ ಸಮಯದಲ್ಲಿ ಜನ ಕ್ಯೂ ನಿಂತು ಪರದಾಡಿದ್ದು ಸಾಕು, ಈಗ SIR ಹೆಸರಿನಲ್ಲಿ ಜನರಿಗೆ ಮತ್ತೆ ನೋವು ಕೊಡಬೇಡಿ ಎಂದು ಕಿಡಿಕಾರಿದರು.

ಮತದಾರರ ಪಟ್ಟಿ ಪರಿಷ್ಕರಣೆಯ ಕ್ರಮವನ್ನು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಮುಂದಿನ ಎರಡು ವರ್ಷ ಯಾವುದೇ ಚುನಾವಣೆ ಇಲ್ಲದಿದ್ದರೂ ಇಷ್ಟೊಂದು ಅವಸರದಲ್ಲಿ ಪರಿಷ್ಕರಣೆ ಮಾಡುತ್ತಿರುವುದು ಏಕೆ? ಇದರ ಹಿಂದೆ ಎನ್‌ಆರ್‌ಸಿ (NRC) ಹುನ್ನಾರ ಇದೆಯೇ? ದಲಿತರು, ಹಿಂದುಳಿದವರು, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತಗಳನ್ನು ಗುರಿಯಾಗಿಸಿ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಸ್ಥಳಾಂತರಗೊಂಡವರಿಗೆ ವಿಳಾಸ ಬದಲಾವಣೆ ಮಾಡಲು ಫಾರಂ ನಂ. 8 ಕೊಡಬೇಕು. ಅದನ್ನು ಬಿಟ್ಟು ಹೆಸರನ್ನೇ ಡಿಲೀಟ್ ಮಾಡಿ ಮತ್ತೆ ಹೊಸದಾಗಿ ಫಾರಂ ನಂ. 6 ತುಂಬಲು ಹೇಳುವುದು ಯಾವ ನ್ಯಾಯ? ಜನರು ಬಾಡಿಗೆ ಮನೆ ಬದಲಾಯಿಸುವುದು ಅಥವಾ ಹೆಣ್ಣುಮಕ್ಕಳು ಮದುವೆಯಾಗಿ ತವರು ಮನೆಗೆ ಹೋಗುವುದು ಅಪರಾಧವೇ? ಕೇವಲ ಬಾಡಿಗೆ ಮನೆ ಬದಲಿಸಿದ ಕಾರಣಕ್ಕೆ ಅವರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡುವುದು ಖಂಡನೀಯ ಎಂದು ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದರು.

ತಮಗಾದ ಅನುಭವ ಬಿಚ್ಚಿಟ್ಟ ನಟ

ನನ್ನ ಹೆಸರನ್ನೂ ಕೂಡ ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿತ್ತು. ನಾನು ಈ ಬಗ್ಗೆ ವಿಡಿಯೋ ಮಾಡಿ ಆಕ್ರೋಶ ಹೊರಹಾಕಿದ ಮೇಲೆ ಬಿಎಲ್‌ಒ (BLO) ಗಳು ನನ್ನ ಮನೆಗೆ ಬಂದು ಮಾಹಿತಿ ಪಡೆದಿದ್ದಾರೆ. ನಾನು ಸೆಲೆಬ್ರಿಟಿ ಎಂದು ನನ್ನ ಮನೆಗೆ ಬಂದರು, ಆದರೆ ಸಾಮಾನ್ಯ ಜನರ ಕಥೆಯೇನು? ಪ್ರತಿಯೊಬ್ಬ ಮತದಾರನಿಗೂ ಮಾಹಿತಿ ತಲುಪುವಂತೆ ಮಾಡಿ, ಕಾಲಾವಕಾಶ ನೀಡಿ ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಎಸ್‌ಐಆರ್ ವಿರೋಧಿ ಕರ್ನಾಟಕ ಮುಖಂಡ ನೂರ್ ಶ್ರೀಧರ್ ಮಾತನಾಡಿ, ಅಲ್ಪ ಅವಧಿಯಲ್ಲಿ ಈ ಪ್ರಕ್ರಿಯೆ ಮುಗಿಸಲು ಅಧಿಕಾರಿಗಳ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದೆ. ಕರ್ನಾಟಕದಲ್ಲಿ ಈಗಾಗಲೇ 5 ಜನ ಬಿಎಲ್‌ಒಗಳು ಒತ್ತಡ ತಾಳಲಾರದೆ ಮೃತಪಟ್ಟಿದ್ದಾರೆ. ದೇಶಾದ್ಯಂತ ಈ ಸಂಖ್ಯೆ 40 ದಾಟಿದೆ" ಎಂದು ಕಳವಳ ವ್ಯಕ್ತಪಡಿಸಿದರು.

PREV
Read more Articles on
click me!

Recommended Stories

Mangaluru To Palakkad train: ಮಂಗಳೂರು ಮರಳಿ ಪಾಲಕ್ಕಾಡ್‌ಗೆ ಬೇಡ; ಕೇರಳ ಲಾಭಿ ವಿರುದ್ಧ ಧ್ವನಿ ಎತ್ತಿದ ಕನ್ನಡಪರ ಸಂಘಟನೆಗಳು!
ನಮ್ಮ ಮೆಟ್ರೋದಲ್ಲಿ ಸಿಂಪಲ್‌ ಆಗಿ ಪ್ರಯಾಣ ಮಾಡಿದ ಮೈಸೂರು ಎಕ್ಸ್‌ಪ್ರೆಸ್‌ ಜಾವಗಲ್‌ ಶ್ರೀನಾಥ್‌