ಯುವತಿ ಮೇಲೆ ಬಸ್‌ ಹತ್ತಿಸಲು ಹೋದ ಬಿಎಂಟಿಸಿ ಚಾಲಕ ಅಮಾನತು

Kannadaprabha News   | Kannada Prabha
Published : Jun 02, 2025, 05:38 AM IST
BMTC Bus Driver

ಸಾರಾಂಶ

ಬಿಎಂಟಿಸಿ ಚಾಲಕನೊಬ್ಬ ಎದುರು ನಿಂತ ಯುವತಿ ಮೇಲೆ ಬಸ್ ಹತ್ತಿಸಿಕೊಂಡು ಹೋಗಲು ಮುಂದಾದ ಘಟನೆ ಬೆಳಕಿಗೆ ಬಂದಿದ್ದು, ದುರ್ವರ್ತನೆ ತೋರಿದ ಚಾಲಕನನ್ನು ಅಮಾನತು ಮಾಡಲಾಗಿದೆ.

ಬೆಂಗಳೂರು (ಜೂ.02): ಬಿಎಂಟಿಸಿ ಚಾಲಕನೊಬ್ಬ ಎದುರು ನಿಂತ ಯುವತಿ ಮೇಲೆ ಬಸ್ ಹತ್ತಿಸಿಕೊಂಡು ಹೋಗಲು ಮುಂದಾದ ಘಟನೆ ಬೆಳಕಿಗೆ ಬಂದಿದ್ದು, ದುರ್ವರ್ತನೆ ತೋರಿದ ಚಾಲಕನನ್ನು ಅಮಾನತು ಮಾಡಲಾಗಿದೆ. ಚಂದ್ರಾ ಲೇಔಟ್ ಡಿಪೋ ನಂಬರ್ 17 ಡಿಪೋಗೆ ಸೇರಿದ ಬಸ್ (ಕೆಎ 57 ಎಫ್‌2046) ಚಾಲಕ ಪ್ರಶಾಂತ್‌ ಅಮಾನತುಗೊಂಡಿದ್ದಾರೆ.

ಕಬ್ಬನ್‌ ಪೇಟೆ ಸಿಗ್ನಲ್‌ನಲ್ಲಿ ಮೇ 23ರಂದು ಸಂಜೆ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಸ್‌ ತನ್ನ ಮೇಲೆಯೇ ಬರುತ್ತಿದ್ದಂತೆ ಯುವತಿ ತಕ್ಷಣ ಪಕ್ಕಕ್ಕೆ ಸರಿದು ಜೀವ ಉಳಿಸಿಕೊಂಡಿರುವುದು ದೃಶ್ಯದಲ್ಲಿದೆ. ಏಕಾಏಕಿ ಯುವತಿಯ ಮೇಲೆ ಬಸ್ ಹತ್ತಿಸಲು ಹೊರಟಿದ್ದ ಚಾಲಕನ ವಿರುದ್ಧ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂ ಸರ್ಕಲ್‌ ಬಳಿ ಕಾರು ಹಾಗೂ ಬಸ್‌ ನಡುವೆ ಡಿಕ್ಕಿಯಾದ ಬಗ್ಗೆ ಮಾತ್ರ ಕಬ್ಬನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಪ್ಪು ಮಾಡಿಲ್ಲ ಎಂದ ಚಾಲಕ: ಸುದ್ದಿಗಾರರ ಜತೆ ಮಾತನಾಡಿರುವ ಚಾಲಕ, ಹಡ್ಸನ್ ಸಿಗ್ನಲ್‌ನಲ್ಲಿ ಲಾರಿ ಹಾಗೂ ಬಿಎಂಟಿಸಿ ಬಸ್ ನಡುವೆ ಯುವತಿ ಕಾರು ಓಡಿಸಿಕೊಂಡು ಬಂದಿದ್ದಾರೆ. ಆಗ ಆಕೆಗೆ ಲಾರಿ ಡ್ರೈವರ್ ಬೈದಿದ್ದರು. ಬಳಿಕ ಕಾರ್ಪೋರೇಷನ್ ಸಿಗ್ನಲ್‌ನಲ್ಲಿ ಜನ ಹತ್ತಿಸಿಕೊಳ್ಳುವಾಗ ನಿಮ್ಮ ಜಗಳದಲ್ಲಿ ನಮಗೆ ಒಂದು ಸಿಗ್ನಲ್ ಹೋಯ್ತು ಎಂದು ನಾನು ಬೈದಿದ್ದೆ. ಆಗ ಯುವತಿ ಬಿಎಂಟಿಸಿ ಬಸ್ ಮುಂದಕ್ಕೆ ಹೋಗದ ಹಾಗೆ ಅಡ್ಡಾದಿಡ್ಡಿ ಚಾಲನೆ ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿದರು.

ಕಬ್ಬನ್‌ಪೇಟೆ ಸರ್ಕಲ್‌ಗೆ ಬಂದಾಗ ಯುವತಿ ಕಾರಿನಿಂದ ಇಳಿದು ಬಂದು ಬಸ್‌ನಿಂದ ಇಳಿಯುವಂತೆ ನನಗೆ ಹೇಳಿದ್ದಾಳೆ. ನಾನು ತಪ್ಪು ಮಾಡಿಲ್ಲ ಎಂದು ಉತ್ತರಿಸಿದೆ, ಆದರೆ, ಸಿಗ್ನಲ್‌ ಬಿಡುತ್ತಿದ್ದಂತೆ ನಾನು ಬಸ್ ಅನ್ನು ಎಡಭಾಗಕ್ಕೆ ಚಾಲನೆ ಮಾಡಿದ್ದೆ ಹೊರತು, ಮಹಿಳೆಯ ಮೇಲೆ ನುಗ್ಗಿಸಲು ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಹೇಳಿದರು. ಆದರೆ, ಯುವತಿ ಎದುರು ನಿಂತಿದ್ದರೂ ಬಸ್ ಚಾಲನೆ ಮಾಡಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಯುವತಿ ಮೇಲೆ ಬಸ್ ನುಗ್ಗಿಸ ಹೋಗಿದ್ದು ಸಿಸಿಟಿವಿಯಲ್ಲಿ ಕಾಣ್ತಿದೆ: ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಯುವತಿಯ ಮೇಲೆ ಬಸ್ ಹತ್ತಿಸಲು ಹೋಗಿರುವುದು ಸಿಸಿಟಿವಿ ವಿಡಿಯೋದಲ್ಲಿ ಕಾಣಿಸುತ್ತಿದೆ. ಚಾಲಕರ ಇಂತಹ ವರ್ತನೆ ಸರಿಯಲ್ಲ. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ. ನಗರದಲ್ಲಿ ಪ್ರತಿನಿತ್ಯ 40 ಸಾವಿರ ಟ್ರಿಪ್ಸ್ ಬಿಎಂಟಿಸಿ ಓಡಾಟ ನಡೆಸುತ್ತದೆ. ಸಾಕಷ್ಟು ಚಾಲಕರು ಸೌಜನ್ಯಯುತವಾಗಿ ನಡೆದುಕೊಳ್ಳುತ್ತಾರೆ. ಯಾರೂ ಈ ರೀತಿಯಾಗಿ ನಡೆದುಕೊಳ್ಳದಂತೆ ಸೂಚಿಸಲಾಗುವುದು ಎಂದು ಹೇಳಿದರು.

PREV
Read more Articles on
click me!

Recommended Stories

ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !
ಇಂಡಿಗೋ ವಿಮಾನ ರದ್ದು, ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ನೂಕು ನುಗ್ಗಲು, ಟಿಕೆಟ್ ಬೆಲೆ 15ರಿಂದ 80,000ಕ್ಕೆ ಏರಿಕೆ