
ಬೆಂಗಳೂರು (ಜೂ. 1): ಬೆಂಗಳೂರಿನ ಹೊರವಲಯ ನೆಲಮಂಗಲದಲ್ಲಿ ಕಾರು ನಿಲ್ಲಿಸಿ ಮಿಕ್ಸಿ ರಿಪೇರಿ ಮಾಡಿಸಲು ಹೋದಾಗ, ಕಾರಿನ ಗ್ಲಾಸ್ ಒಡೆದು 11.5 ಲಕ್ಷ ರೂ. ನಗದು ಹಣ ಕದ್ದೊಯ್ದಿದ್ದಾರೆ.
ಈ ಘಟನೆ ನೆಲಮಂಗಲ ಪಟ್ಟಣದಲ್ಲಿ ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಭಾನುವಾರ ನಡೆದಿದೆ. ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಈ ಕೃತ್ಯ ಎಸಗಿದ್ದು, ಸಿಸಿಟಿವಿ ಕಣ್ಗಾವಲಿನಲ್ಲಿ ದೃಶ್ಯ ಸೆರೆಯಾಗಿದೆ. ಇನ್ನು ಹಣ ಕಳೆದುಕೊಂಡ ವ್ಯಕ್ತಿ ಅತೀಕ್ ರೆಹಮಾನ್ ಆಗಿದ್ದಾರೆ. ಅತೀಕ್ ರೆಹಮಾನ್ ದಾಬಸ್ ಪೇಟೆಯಲ್ಲಿ ಲಾಜಿಸ್ಟಿಕ್ಸ್ ವ್ಯವಹಾರ ನಡೆಸುತ್ತಿದ್ದು, ತಮ್ಮ ಅಣ್ಣನ ಸೂಚನೆಯಂತೆ ಬ್ಯಾಂಕ್‌ನಿಂದ ಹಣವನ್ನು ತೆಗೆದು ತಂದಿದ್ದರು. ಅತೀಕ್ ಅವರು ಕಾರಿನಲ್ಲಿ ₹11.5 ಲಕ್ಷ ನಗದು ಇರುವ ಹಣದ ಬ್ಯಾಗ್ ಇಟ್ಟು, ನೆಲಮಂಗಲದಲ್ಲಿ ಮಿಕ್ಸಿ ರಿಪೇರಿ ಮಾಡಲು ಗಾಡಿಯನ್ನು ನಿಲ್ಲಿಸಿದ್ದರು. ಅದನ್ನು ಬಹುಶಃ ಮೊದಲೇ ನೋಡಿಕೊಂಡು ಸಂಚು ಹಾಕಿಕೊಂಡಿದ್ದ ಕಳ್ಳರು, ತಮ್ಮನ್ನು ಬೆನ್ನಟ್ಟಿಕೊಂಡು ಬಂದಂತೆ ಕಾಣುತ್ತಿತ್ತು. ಕೆಲ ನಿಮಿಷಗಳ ಕಾಲ ಕಾರನ್ನು ನಿಲ್ಲಿಸಿ ಹೋಗಿದ್ದಕ್ಕೆ ಗ್ಲಾಸ್ ಒಡೆದು ಹಣದ ಬ್ಯಾಗ್ ಕದ್ದೊಯ್ದಿದ್ದಾರೆ.
ಸಿಸಿಟಿವಿ ದೃಶ್ಯದಲ್ಲಿ ಕಳ್ಳತನ ಸ್ಪಷ್ಟವಾಗಿ ಸೆರೆಯಾಗಿದೆ
ಅಂಬೇಡ್ಕರ್ ಭವನದ ಸುತ್ತಮುತ್ತ ಇದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ಘಟನೆ ಸ್ಪಷ್ಟವಾಗಿ ದಾಖಲಾಗಿದೆ. ಇಬ್ಬರು ಯುವಕರು ಬೈಕ್‌ನಲ್ಲಿ ಆಗಮಿಸಿ, ಕೆಲವೇ ಕ್ಷಣಗಳಲ್ಲಿ ಗ್ಲಾಸ್ ಒಡೆದು ಬ್ಯಾಗ್‌ನ್ನು ಎತ್ತಿಕೊಂಡು ಪರಾರಿಯಾಗಿರುವುದು ದೃಶ್ಯದಲ್ಲಿದೆ. ಅತೀಕ್ ರೆಹಮಾನ್ ಅವರು ಬ್ಯಾಂಕ್‌ನಿಂದ ಹಣ ತೆಗೆದುಕೊಂಡು ತರುವ ವೇಳೆಯಿಂದಲೇ ಈ ಕಳ್ಳರು ಅವರನ್ನು ಗಮನಿಸಿದ್ದಾರೋ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಲ್ಲಿನ ಸಿಸಿಟಿವಿ ಹಾಗೂ ಗ್ರಾಹಕರ ಚಲನಾಚಲನೆಯನ್ನು ಪರಿಶೀಲಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು
ಈ ಕುರಿತು ಅತೀಕ್ ರೆಹಮಾನ್ ಅವರು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭವಾಗಿದೆ. ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ವಿಸ್ತೃತವಾಗಿ ಪರಿಶೀಲಿಸುತ್ತಿದ್ದು, ಕಳ್ಳರನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಲಾಗಿದೆ. ನಗರದಲ್ಲಿ ಈ ರೀತಿಯ ಧೈರ್ಯದ ಕಳ್ಳತನದ ಘಟನೆ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದ್ದು, ಸೂಕ್ತ ಭದ್ರತೆ ಹಾಗೂ ಎಚ್ಚರಿಕೆಯಿಂದ ನಡೆದುಕೊಳ್ಳುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಎಚ್ಚರಿಕೆ ಅಗತ್ಯ:
ಹಣದ ದೊಡ್ಡ ಮೊತ್ತವನ್ನು ಖಾಸಗಿ ವಾಹನಗಳಲ್ಲಿ ಸಾಗಿಸುವ ವೇಳೆ ಹೆಚ್ಚು ಎಚ್ಚರಿಕೆಯಿಂದ ನಡೆದುಕೊಳ್ಳುವುದು ಅಗತ್ಯ. ಬ್ಯಾಂಕ್ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ದೊಡ್ಡ ಮೊತ್ತ ಕೊಂಡೊಯ್ಯುವವರು ಸಿಸಿಟಿವಿ ಮತ್ತು ಭದ್ರತಾ ವ್ಯವಸ್ಥೆ ಇದ್ದರೂ, ಅಪರಿಚಿತ ವಾಹನಗಳ ಚಲನವಲನದ ಮೇಲೆ ಗಮನ ಹರಿಸಬೇಕಾಗುತ್ತದೆ.