ಬಿಎಂಟಿಸಿ ಬಸ್‌ ಸ್ಟೇರಿಂಗ್ ಕಿತ್ಕೊಂಡು ಬಂತು ಡ್ರೈವರ್ ಕೈಗೆ, ಪ್ರಯಾಣಿಕರ ಜೀವ ಬಂದಿತ್ತು ಬಾಯಿಗೆ!

Published : Sep 11, 2026, 08:06 AM IST
BMTC Bus

ಸಾರಾಂಶ

ಬೆಂಗಳೂರಿನಲ್ಲಿ ಚಲಿಸುತ್ತಿದ್ದ ಬಿಎಂಟಿಸಿ ಬಸ್‌ನ ಸ್ಟೇರಿಂಗ್ ವೀಲ್ ಏಕಾಏಕಿ ಕಳಚಿ ಚಾಲಕನ ಕೈಗೆ ಬಂದಿದೆ. ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದ್ದು, ಈ ಘಟನೆಯು ಬಿಎಂಟಿಸಿ ನಿರ್ವಹಣಾ ಲೋಪವನ್ನು ಬಯಲು ಮಾಡಿದೆ ಮತ್ತು ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

ಬೆಂಗಳೂರು (ಸೆ.11): ಸಿಲಿಕಾನ್ ಸಿಟಿ ಬೆಂಗಳೂರಿನ ಸಾರ್ವಜನಿಕ ಸಾರಿಗೆ ಸಂಸ್ಥೆ ಬಿಎಂಟಿಸಿ (BMTC) ಬಸ್‌ಗಳ ನಿರ್ವಹಣಾ ಲೋಪ ಮತ್ತೊಮ್ಮೆ ಬಟಾಬಯಲಾಗಿದೆ. ಪ್ರಯಾಣಿಕರನ್ನು ಹೊತ್ತು ವೇಗವಾಗಿ ರಸ್ತೆಯಲ್ಲಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಒಂದರ ಸ್ಟೇರಿಂಗ್ ವೀಲ್ ಏಕಾಏಕಿ ಕಟ್ ಆಗಿ ಚಾಲಕನ ಕೈಗೆ ಬಂದಿರುವ ಬೆಚ್ಚಿಬೀಳಿಸುವ ಘಟನೆ ನಡೆದಿದೆ.

ಅದೃಷ್ಟವಶಾತ್ ಚಾಲಕನ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಪ್ರಯಾಣಿಕರೆಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ. ಚಲಿಸುತ್ತಿದ್ದ ಬಸ್‌ನಲ್ಲೇ ಸ್ಟೇರಿಂಗ್ ಕಳಚಿ ಬಂದಿರುವ ದೃಶ್ಯವನ್ನು ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಬಿಎಂಟಿಸಿ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ಹಾಗೂ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಆರ್.ಆರ್. ನಗರ ಡಿಪೋಗೆ ಸೇರಿದ ಬಸ್:

ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಅವಘಡ ಸಂಭವಿಸಿದ ಬಸ್ ಬೆಂಗಳೂರಿನ ರಾಜರಾಜೇಶ್ವರಿನಗರದ (ಆರ್.ಆರ್. ನಗರ) ಬಿಎಂಟಿಸಿ ಡಿಪೋ-21 ಕ್ಕೆ ಸೇರಿದ್ದಾಗಿದೆ. ಬಸ್‌ನ ಸಾಮರ್ಥ್ಯ ಮತ್ತು ಫಿಟ್‌ನೆಸ್ ಪರಿಶೀಲಿಸದೆ, ಅತ್ಯಂತ ಕೆಟ್ಟ ಸ್ಥಿತಿಯಲ್ಲಿದ್ದ ವಾಹನವನ್ನು ರಸ್ತೆಗೆ ಇಳಿಸಿ ಸಾರ್ವಜನಿಕ ಸೇವೆಯಲ್ಲಿ ಬಳಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಬಿಎಂಟಿಸಿ ಹಿರಿಯ ಅಧಿಕಾರಿಗಳಿಂದ ತನಿಖೆಗೆ ಆದೇಶ:

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಇಲಾಖೆಯ ಮರ್ಯಾದೆ ಹರಾಜಾಗುತ್ತಿದ್ದಂತೆ ಎಚ್ಚೆತ್ತಿರುವ ಬಿಎಂಟಿಸಿ ಹಿರಿಯ ಅಧಿಕಾರಿಗಳು ತಕ್ಷಣ ತನಿಖೆಗೆ ಆದೇಶಿಸಿದ್ದಾರೆ. "ಇಷ್ಟು ಅಪಾಯಕಾರಿ ಸ್ಥಿತಿಯಲ್ಲಿದ್ದ ಬಸ್ ಅನ್ನು ರಸ್ತೆಗೆ ಬಿಟ್ಟವರು ಯಾರು? ಬಸ್‌ನ ತಾಂತ್ರಿಕ ತಪಾಸಣೆ (Fitness Check) ನಡೆಸದೆ ನಿರ್ಲಕ್ಷ್ಯ ವಹಿಸಿದ ಡಿಪೋ ಮ್ಯಾನೇಜರ್, ಮೆಕ್ಯಾನಿಕ್ ಹಾಗೂ ಸಂಬಂಧಪಟ್ಟ ಸಿಬ್ಬಂದಿ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸಲಾಗುವುದು" ಎಂದು ಬಿಎಂಟಿಸಿ ಉನ್ನತ ಮೂಲಗಳು ತಿಳಿಸಿವೆ.

ಮ್ಯಾನೇಜರ್ ವಿರುದ್ಧ ಕ್ರಮ:

ಇನ್ನು ಸುಸ್ಥಿತಿಯಲ್ಲಿ ಇರದ ಬಿಎಂಟಿಸಿ ಬಸ್ ಅನ್ನು ಪ್ರಯಾಣಿಕರ ಸುರಕ್ಷತೆಯನ್ನೂ ಗಮನಿಸದೇ ಕರ್ತವ್ಯಕ್ಕೆ ನಿಯೋಜನೆ ಮಾಡಿದ ಡಿಪೋ ಮ್ಯಾನೇಜರ್ ವಿರುದ್ಧ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಅಪಾಯಕಾರಿ ಬಸ್ ಪ್ರಯಾಣಿಕರ ಸೇವೆ ನೀಡಿದಕ್ಕೆ ಡಿಪೋ ಮ್ಯಾನೇಜರ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಬಿಎಂಟಿಸಿ ಮುಂದಾಗಿದೆ.

PREV
Read more Articles on
click me!

Recommended Stories

2037ರ ವೇಳೆಗೆ $400 ಬಿಲಿಯನ್ ಆರ್ಥಿಕತೆಯತ್ತ ಬೆಂಗಳೂರು: ಮೂಲಸೌಕರ್ಯದ ಸವಾಲು ಮೆಟ್ಟಿ ನಿಲ್ಲುವುದೇ ಸಿಲಿಕಾನ್ ಸಿಟಿ?
ಸರ್ಕಾರದ ಹಣ ಉಳಿಸಲು ಪೊಲೀಸ್ ಇಲಾಖೆಗೆ ಇನ್ನುಂದೆ ಗುತ್ತಿಗೆ ವಾಹನ: ಲೀಸ್ ಮಾದರಿಯಲ್ಲಿ 1,000 ವಾಹನಕ್ಕೆ ಸರ್ಕಾರ ಪ್ಲಾನ್