ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ ಅಂದ್ರೆ, ಶಾಸಕರು-ಸಚಿವರು ಸಂಬಳ ತೆಗೆದುಕೊಳ್ಳೋದು ಬಿಡಲಿ: ದರ ಏರಿಕೆಗೆ ಜನಾಕ್ರೋಶ

Published : Nov 06, 2026, 10:30 AM IST
BMTC

ಸಾರಾಂಶ

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ದರ ಏರಿಕೆಯಾಗಿದ್ದು, ಇದು ನಮ್ಮ ಮೆಟ್ರೋಗಿಂತಲೂ ದುಬಾರಿಯಾಗಿದೆ. ಇದರಿಂದಾಗಿ ಸಾರ್ವಜನಿಕರು ತೀವ್ರ ಅಸಮಾಧಾನಗೊಂಡಿದ್ದು, ಶಕ್ತಿ ಯೋಜನೆಯ ನಷ್ಟವನ್ನು ಮಧ್ಯಮ ವರ್ಗದ ಮೇಲೆ ಹೊರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ನ.6): ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್ ದರಗಳನ್ನು ಏರಿಕೆ ಮಾಡಿದ ಬೆನ್ನಲ್ಲೇ, ಸಾರ್ವಜನಿಕ ಸಾರಿಗೆಯ ದರ ವ್ಯವಸ್ಥೆಯಲ್ಲಿಆತಂಕಕಾರಿ ವ್ಯತ್ಯಾಸ ಬೆಳಕಿಗೆ ಬಂದಿದೆ. ದೇಶದಲ್ಲೇ ಅತ್ಯಂತ ದುಬಾರಿ ರೈಲು ಆಧಾರಿತ ಸಾರಿಗೆ ವ್ಯವಸ್ಥೆ ಎಂದು ಹೆಸರು ಪಡೆದಿರುವ 'ನಮ್ಮ ಮೆಟ್ರೋ' (Namma Metro) ಪ್ರಯಾಣಕ್ಕಿಂತಲೂ, ರಸ್ತೆಯಲ್ಲಿ ನಿಧಾನವಾಗಿ ಸಾಗುವ ಸಾಮಾನ್ಯ ಬಿಎಂಟಿಸಿ ಬಸ್‌ಗಳ ಪ್ರಯಾಣವೇ ಇದೀಗ ದುಬಾರಿಯಾಗಿದೆ. ಬಿಎಂಟಿಸಿ ಇತ್ತೀಚೆಗೆ ಕೈಗೊಂಡಿರುವ ದರ ಏರಿಕೆಯಿಂದಾಗಿ ನಗರದ ನಿತ್ಯ ಪ್ರಯಾಣಿಕರು ತೀವ್ರ ಅಸಮಾಧಾನಗೊಂಡಿದ್ದಾರೆ. ವೇಗವಾಗಿ ಗುರಿ ತಲುಪಿಸುವ ನಮ್ಮ ಮೆಟ್ರೋಗಿಂತ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಲು ಹೆಚ್ಚಿನ ದರ ತೆರಬೇಕಾಗಿರುವುದು ಸಾರಿಗೆ ತಜ್ಞರು ಹಾಗೂ ಪ್ರಯಾಣಿಕರ ಅಚ್ಚರಿಗೆ ಕಾರಣವಾಗಿದೆ.

ಮೆಟ್ರೋ ವರ್ಸಸ್ ಬಿಎಂಟಿಸಿ ದರಗಳ ಭಾರಿ ವ್ಯತ್ಯಾಸ

ದಿನನಿತ್ಯದ ಪ್ರಯಾಣದ ಮಾರ್ಗಗಳನ್ನು ಹೋಲಿಸಿ ನೋಡಿದರೆ ದರ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ. ಬೆನ್ನಿಗಾನಹಳ್ಳಿ (ಟಿನ್ ಫ್ಯಾಕ್ಟರಿ) ಸ್ಥಳದಿಂದ ಇಂದಿರಾನಗರಕ್ಕೆ ನಮ್ಮ ಮೆಟ್ರೋದಲ್ಲಿ ಪ್ರಯಾಣಕ್ಕೆ ತಗುಲುವ ವೆಚ್ಚ ಕೇವಲ ₹20 ಹಾಗೂ ಪ್ರಯಾಣದ ಅವಧಿ ಕೇವಲ 8 ನಿಮಿಷ. ಆದರೆ, ಇದೇ ಮಾರ್ಗದಲ್ಲಿ ಬಿಎಂಟಿಸಿ ನಾನ್-ಎಸಿ ಬಸ್‌ನಲ್ಲಿ ಪ್ರಯಾಣಿಸಿದರೆ ₹25 ಟಿಕೆಟ್ ದರ ನೀಡಬೇಕು ಮತ್ತು ಸಮಯ ಮೆಟ್ರೋಗಿಂತ ಮೂರು ಪಟ್ಟು ಹೆಚ್ಚು ತಗುಲುತ್ತದೆ. ಇದೇ ರೀತಿ ಜೆಪಿ ನಗರದಿಂದ ಲಾಲ್‌ಬಾಗ್‌ಗೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಕ್ಕೆ ₹35 ವೆಚ್ಚವಾಗುತ್ತಿದ್ದರೆ, ನಮ್ಮ ಮೆಟ್ರೋದಲ್ಲಿ ಪ್ರಯಾಣದ ದರ ಕೇವಲ ₹25 ಆಗಿದೆ.

ಸಾರ್ವಜನಿಕ ಸಾರಿಗೆಯ ಉದ್ದೇಶಕ್ಕೇ ಧಕ್ಕೆ: ಪ್ರಯಾಣಿಕರ ಆಕ್ರೋಶ

ದರ ಏರಿಕೆಯ ಪರಿಣಾಮದ ಕುರಿತು ಪ್ರಯಾಣಿಕ ಕೃಷ್ಣ ಪ್ರಸಾದ್ ಎಂಬುವರು ಮಾತನಾಡಿ, "ಬಿಎಂಟಿಸಿ ಎಂಬುದು ಸಾಮಾನ್ಯ ಜನರ ಸಾರಿಗೆಯಾಗಬೇಕಿತ್ತು. ಆದರೆ ದೇಶದಲ್ಲೇ ಅತ್ಯಂತ ದುಬಾರಿ ಎನ್ನಲಾದ ಸಾರಿಗೆ ವ್ಯವಸ್ಥೆಗೆ (ಮೆಟ್ರೋ) ಸಮಾನವಾಗಿ ಬಿಎಂಟಿಸಿ ದರಗಳು ಬಂದು ನಿಂತಿವೆ. ಬೆಂಗಳೂರಿನಲ್ಲಿ ಟ್ರಾಫಿಕ್ ಕಡಿಮೆ ಮಾಡಲು ಜನರನ್ನು ಸಾರ್ವಜನಿಕ ಸಾರಿಗೆಯತ್ತ ಸೆಳೆಯುವುದು ಸರ್ಕಾರದ ಉದ್ದೇಶವಾಗಿತ್ತು. ಆದರೆ ಇಂತಹ ಭಾರಿ ದರ ಏರಿಕೆಯಿಂದ ಜನರು ಮರಳಿ ತಮ್ಮ ಸ್ವಂತ ದ್ವಿಚಕ್ರ ವಾಹನಗಳ ಬಳಕೆಗೆ ಮುಂದಾಗಲಿದ್ದಾರೆ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕ ರಾಘವೇಂದ್ರ ಹೆಚ್. ಮಾತನಾಡಿ, ಈಗಿನ ಸ್ಥಿತಿಯಲ್ಲಿ ಬಿಎಂಟಿಸಿಗಿಂತ ಮೆಟ್ರೋ ಎಲ್ಲ ರೀತಿಯಲ್ಲೂ ಮೇಲು. ರಸ್ತೆಗಳು ಕೆಟ್ಟಿವೆ, ಬಸ್‌ಗಳ ಸ್ಥಿತಿ ಹಿಂದಿನಂತಿಲ್ಲ, ಮಾಲಿನ್ಯವೂ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಮೆಟ್ರೋ ಲೈನ್‌ಗಳು ಪೂರ್ಣಗೊಂಡು ಕೊನೆಯ ಹಂತದ ಸಂಪರ್ಕ (Last-mile connectivity) ಸರಿಹೋದರೆ, ರಸ್ತೆ ಸಾರಿಗೆ ನಿಗಮಗಳು ಮತ್ತಷ್ಟು ಭಾರಿ ನಷ್ಟಕ್ಕೆ ಸಿಲುಕುವುದು ಖಚಿತ ಎಂದಿದ್ದಾರೆ.

ಬಸ್ ಕಂಡಕ್ಟರ್‌ಗಳ ಜೊತೆ ಪ್ರಯಾಣಿಕರ ಜಗಳ

ಮೆಜೆಸ್ಟಿಕ್‌ನಲ್ಲಿ ಕೆಎಸ್‌ಆರ್‌ಟಿಸಿ (KSRTC) ಬಸ್ ಏರುವ ಪ್ರಯಾಣಿಕರು, ತಾವು ಗೆಲ್ಲಿಸಿದ ಸರ್ಕಾರವೇ ಬಡವರ ಮೇಲೆ ಈ ರೀತಿ ದರ ಹೇರಿಕೆ ಮಾಡಿ ದೌರ್ಜನ್ಯ ಎಸಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಪಿ.ಎಸ್. ಬೀರೇಂದ್ರ ಕುಮಾರ್ ತಮ್ಮ ಅನುಭವ ಹಂಚಿಕೊಂಡು, ಪ್ರಯಾಣಿಕರು ಟಿಕೆಟ್ ದರ ವ್ಯತ್ಯಾಸವನ್ನು ನೋಡಿ ತೀವ್ರ ಆಘಾತಗೊಂಡಿದ್ದಾರೆ. ಬಸ್ ಏರುತ್ತಿದ್ದಂತೆ ನಮ್ಮ ಜೊತೆ ಜಗಳಕ್ಕೆ ಇಳಿಯುತ್ತಿದ್ದಾರೆ, ದರದಲ್ಲಿ ಇಷ್ಟೊಂದು ವ್ಯತ್ಯಾಸವೇಕೆ ಎಂದು ಪ್ರಶ್ನಿಸುತ್ತಿದ್ದಾರೆ. ಮುಂಬರುವ ಕೆಲ ದಿನಗಳ ಕಾಲ ನಾವು ಪ್ರಯಾಣಿಕರ ಆಕ್ರೋಶವನ್ನು ಎದುರಿಸಬೇಕಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಶಕ್ತಿ ಯೋಜನೆಯ ನಷ್ಟವನ್ನು ಮಧ್ಯಮ ವರ್ಗದ ಮೇಲೆ ಹೊರಿಸಲಾಗುತ್ತಿದೆ

ಸರ್ಕಾರಕ್ಕೆ ದರ ಹೆಚ್ಚಳ ಮಾಡುವುದು ಅನಿವಾರ್ಯವೇ ಆಗಿದ್ದರೂ, ಸಾರ್ವಜನಿಕರ ಹಿತದೃಷ್ಟಿಯಿಂದ ಸಣ್ಣ ಮಟ್ಟದ ಏರಿಕೆ ಮಾಡಬೇಕಿತ್ತು ಎಂಬುದು ಬಹುತೇಕರ ಅಭಿಪ್ರಾಯವಾಗಿದೆ. ಮಧುಗಿರಿಯಿಂದ ಬೆಂಗಳೂರಿಗೆ ನಿತ್ಯ ಪ್ರಯಾಣಿಸುವ ಗಿರೀಶ್ ಎಂಬ ಪ್ರಯಾಣಿಕರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, 'ಇದು ಯಾವುದೇ ಸರ್ಕಾರ ಮಾಡಿದ ಅತ್ಯಂತ ಕೆಟ್ಟ ದರ ಏರಿಕೆ. ರಾಜ್ಯದ ಯಾವೊಬ್ಬ ಮಹಿಳೆಯೂ 'ಶಕ್ತಿ ಯೋಜನೆ' (Shakti Scheme) ಬೇಕು ಎಂದು ಕೇಳಿರಲಿಲ್ಲ. ಸರ್ಕಾರದ ಬಳಿ ಹಣವಿಲ್ಲದಿದ್ದರೆ ಸಚಿವರು ತಮ್ಮ ವೇತನದಲ್ಲಿ ಕಡಿತ ಮಾಡಿಕೊಳ್ಳುತ್ತಿದ್ದಾರೆಯೇ ಅಥವಾ ಪ್ರಯಾಣಕ್ಕೆ ಹಣ ನೀಡುತ್ತಿದ್ದಾರೆಯೇ? ಸರ್ಕಾರದ ಈ ಎಲ್ಲಾ ಉಚಿತ ಯೋಜನೆಗಳ ನಷ್ಟದ ಹೊರೆಯನ್ನು ಕೇವಲ ಮಧ್ಯಮ ವರ್ಗದ ಜನರ ಮೇಲೆ ಹೊರಿಸಲಾಗುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ದರ ಏರಿಕೆಯು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದ್ದು, ಜನರು ಆಟೋ ಹಾಗೂ ಸ್ವಂತ ವಾಹನಗಳತ್ತ ಮುಖ ಮಾಡುತ್ತಿರುವುದರಿಂದ ಸಾರಿಗೆ ನಿಗಮಗಳಿಗೆ ಪ್ರಯಾಣಿಕರ ಸಂಖ್ಯೆ ಕುಸಿಯುವ ಭೀತಿ ಎದುರಾಗಿದೆ.

PREV
Read more Articles on
click me!

Recommended Stories

ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರು-ಬೆಳಗಾವಿ ನಡುವೆ ವಿಶೇಷ ರೈಲು, ದಿನ, ಸಮಯ ಎಲ್ಲೆಲ್ಲಿ ನಿಲುಗಡೆ? ಮಾಹಿತಿ ಇಲ್ಲಿದೆ
ಖಾಸಗಿ ವಾಹನಗಳಿಗೆ ಕೋಟಿಗಟ್ಟಲೆ ಮೇಲ್ಸೇತುವೆ, ಬಡವರ ಬಸ್‌ಗೆ ಭಾರಿ ದರ: ಸರ್ಕಾರದ ಸಾರಿಗೆ ನೀತಿಗೆ ಪ್ರಯಾಣಿಕರ ವೇದಿಕೆ ತೀವ್ರ ಖಂಡನೆ