
ಬೆಂಗಳೂರು: ಪ್ರತಿ ವರ್ಷ ನಮ್ಮ ಮೆಟ್ರೋ ಪ್ರಯಾಣ ದರವನ್ನು ಶೇ.5ರಷ್ಟು ಹೆಚ್ಚಿಸಬೇಕೆಂಬ ದರ ಪರಿಷ್ಕರಣಾ ಸಮಿತಿಯ ವರದಿ ಅನ್ವಯ ಬೆಂಗಳೂರು ಮೆಟ್ರೋ ರೈಲು ನಿಗಮ ದರ ಏರಿಕೆಗೆ ಮುಂದಾದಲ್ಲಿ ತೀವ್ರವಾಗಿ ಪ್ರತಿಭಟಿಸುವುದಾಗಿ ಮೆಟ್ರೋ ಪ್ರಯಾಣಿಕರು, ಸಂಘಟನೆಗಳು ಎಚ್ಚರಿಕೆ ನೀಡಿವೆ.
ಕಳೆದ ವರ್ಷ ಮೆಟ್ರೋ ರೈಲು (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ, 2002 ರ ಸೆಕ್ಷನ್ 33 ರ ಅಡಿಯಲ್ಲಿ ದರ ಪರಿಷ್ಕರಣಾ ಸಮಿತಿ ಶಿಫಾರಸುಗಳನ್ನು ಅಂಗೀಕರಿಸಿ ಬಿಎಂಆರ್‌ಸಿಎಲ್ ಪರಿಷ್ಕರಣೆಯನ್ನು ಜಾರಿಗೆ ತಂದಿತ್ತು. 2024ರಲ್ಲಿ ಈ ವರದಿ ಸ್ವೀಕರಿಸಿದ್ದ ಸಂಸ್ಥೆ ಫೆಬ್ರವರಿಯಲ್ಲಿ ಟಿಕೆಟ್ ದರ ಶೇ. 71ರಷ್ಟು ಏರಿಸಿತ್ತು.
ನಮ್ಮ ಮೆಟ್ರೋ ಕೊನೆಯ ಬಾರಿಗೆ ಜೂನ್ 2017 ರಲ್ಲಿ ತನ್ನ ಪ್ರಯಾಣ ದರವನ್ನು ಹೆಚ್ಚಿಸಿತ್ತು. ಮಾರ್ಚ್ 2017 ಮತ್ತು ಮಾರ್ಚ್ 2024 ರ ನಡುವೆ ಬಿಎಂಆರ್‌ಸಿಎಲ್ ನ ಸಿಬ್ಬಂದಿ ವೆಚ್ಚ ಶೇ. 42, ಇಂಧನ ವೆಚ್ಚ ಶೇ. 34 ರಷ್ಟು ಹೆಚ್ಚಾಗಿದೆ. ನಿರ್ವಹಣೆ ಮತ್ತು ಆಡಳಿತ ವೆಚ್ಚಗಳು ಶೇ. 366 ರಷ್ಟು ದುಬಾರಿಯಾಗಿತ್ತು. 2024-25 ರಿಂದ 2029-30 ರ ನಡುವೆ ಬಿಎಂಆರ್‌ಸಿಎಲ್ ₹ 10,422.2 ಕೋಟಿ ಸಾಲವನ್ನು ಪಾವತಿಸಬೇಕಾಗುತ್ತದೆ. ಜತೆಗೆ ಮೆಟ್ರೋ ನಿಗಮದ ಸಾಲ ಪಾವತಿ ಬಾಧ್ಯತೆ ಪೂರೈಸಲು, ಹೆಚ್ಚುತ್ತಿರುವ ಕಾರ್ಯಾಚರಣೆ ವೆಚ್ಚವನ್ನು ನಿರ್ವಹಿಸಲು ದರ ಪರಿಷ್ಕರಣೆ ಅನಿವಾರ್ಯವಾಗಿತ್ತು.
ಈ ವರದಿಯಲ್ಲಿ ಮೆಟ್ರೋ ನಿರ್ವಹಣೆಗೆ ಪ್ರತಿವರ್ಷ ಶೇ. 5ರಷ್ಟು ದರ ಪರಿಷ್ಕರಣೆ ಮಾಡುವ ಅನಿವಾರ್ಯತೆಯನ್ನು ಉಲ್ಲೇಖಿಸಲಾಗಿದೆ. ದರ ಏರಿಕೆಯಾಗಿ ಒಂದು ವರ್ಷ ಕಳೆಯುತ್ತಿರುವ ಹಿನ್ನೆಲೆಯಲ್ಲಿ ಹೊಸ ಆರ್ಥಿಕ ವರ್ಷದಿಂದ ಬಿಎಂಆರ್‌ಸಿಎಲ್ ದರ ಪರಿಷ್ಕರಿಸಿ ಶೇ. 5ರಷ್ಟು ಹೆಚ್ಚಿಸಲಿದೆಯೆ ಎಂಬ ಆತಂಕ ಮೆಟ್ರೊ ಪ್ರಯಾಣಿಕರನ್ನು ಕಾಡುತ್ತಿದೆ.
ಜನ ವಿರೋಧ
ಕಳೆದ ವರ್ಷ ಜನ ವಿರೋಧದ ನಡುವೆಯೂ ಮೆಟ್ರೋ ದರಗಳನ್ನು ಶೇ. 100 ರಷ್ಟು ಹೆಚ್ಚಿಸಿ, ದರ ನಿಗದಿ ಸಮಿತಿ ಮತ್ತು ಬಿಎಂಆರ್‌ಸಿಎಲ್ ಸಂಪೂರ್ಣ ಜನ ವಿರೋಧಿ ಎಂದು ಸಾಬೀತಾಗಿದೆ. ಇದೀಗ ಈ ಸಮಿತಿಯ ವರದಿಯನ್ನೇ ಆಧರಿಸಿ ಶೇ. 5 ದರ ಹೆಚ್ಚಿಸುತ್ತಿರುವುದು ನಾಚಿಗೇಡಿನ ವರ್ತನೆಯಾಗಿದೆ. ಯಾವುದೇ ಕಾರಣಕ್ಕೂ ಮೆಟ್ರೋ ಪ್ರಯಾಣಿಕರು ಈ ದರ ಸಮಿತಿಯ ಶಿಫಾರಸ್ಸುಗಳನ್ನು ಒಪ್ಪುವುದಿಲ್ಲ ಎಂದು ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಘಟನೆ ಸದಸ್ಯ ರಾಜೇಶ್ ಭಟ್ ಹೇಳಿದ್ದಾರೆ.
ಬೆಂಗಳೂರು ಉಳಿಸಿ ಸಮಿತಿಯ ಸಂಚಾಲಕ ಶಶಿಕುಮಾರ್, ಜನರು ಅತ್ತ ದರಿ ಇತ್ತ ಪುಲಿ ಎಂಬಂತಹ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ ಎಂಬುದು ಸರ್ಕಾರಕ್ಕೆ ಮತ್ತು ನಮ್ಮ ಮೆಟ್ರೋಗೆ ತಿಳಿದಿದೆ. ಬೆಂಗಳೂರಿಗರು ಒಂದೋ ದುಬಾರಿ ಮತ್ತು ಅನ್ಯಾಯದ ಮೆಟ್ರೋ ದರವನ್ನು ಪಾವತಿಸಬೇಕು, ಇಲ್ಲವೇ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಳ್ಳಬೇಕು. ಸರ್ಕಾರ, ಬಿಎಂಆರ್‌ಸಿಎಲ್ ಬೆಂಗಳೂರಿಗರ ಅಸಹಾಯಕತೆಯ ದುರುಪಯೋಗ ಪಡಿಸಿಕೊಳ್ಳುತ್ತಿವೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಮುಂದಿನ ದರ ಏರಿಕೆಯನ್ನು ತಡೆಯಬೇಕು. ಜತೆಗೆ ಈಗಿರುವ ದರವನ್ನೂ ಸಹ ಕಡಿಮೆ ಮಾಡಬೇಕು ಎಂದು ಹೇಳಿದರು.
ನಮ್ಮ ಮೆಟ್ರೋ ಈಗಾಗಲೇ ಸಾಮಾನ್ಯ ಜನರ ಕೈಗೆಟುಕದಂತಾಗಿದೆ. ಮುಂದಿನ ಫೆಬ್ರವರಿ ನಿರೀಕ್ಷಿಸಲಾದ ದರ ಏರಿಕೆಯಿಂದಾಗಿ ಮತ್ತಷ್ಟು ದುಬಾರಿಯಾಗಲಿದೆ. ಮೆಟ್ರೋ ರೈಲು ಕಾಯ್ದೆಯಡಿ ದರ ಏರಿಕೆ ಕಡ್ಡಾಯವಾಗಿದೆ ಎಂಬ ಒಂದೇ ಕಾರಣಕ್ಕೆ ಪ್ರತಿ ವರ್ಷ ಶೇ. 5ರಷ್ಟು ದರ ಹೆಚ್ಚಿಸುವುದಕ್ಕೆ ಯಾವುದೇ ಸಮರ್ಥನೆ ಅಲ್ಲ ಎಂದು ಮೆಟ್ರೋ ಪ್ರಯಾಣಿಕರಾದ ಶ್ರೀಯಾ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂಬಂಧ ಕನ್ನಡಪ್ರಭ ಜತೆ ಮಾತನಾಡಿದ ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ನಿಗಮವು ಮೆಟ್ರೋ ದರ ಏರಿಕೆ ಮಾಡುವುದಿಲ್ಲ ಅಥವಾ ಮಾಡಲಿದೆ ಎಂದು ನಿಖರವಾಗಿ ಹೇಳಲು ನಿರಾಕರಿಸಿದರು. ಬದಲಾಗಿ ಬಿಎಂಆರ್‌ಸಿಎಲ್ ಮಂಡಳಿ ಸಭೆ ನಡೆಸಲಿದೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರಕ್ಕೆ ಬರಲಿದೆ ಎಂದಷ್ಟೇ ಪ್ರತಿಕ್ರಿಯಿಸಿದರು.