ದಿನಕ್ಕೆರಡು ಬಾರಿ ಚಿಕನ್‌ ರೈಸ್‌: ಬೆಂಗಳೂರು ಬೀದಿನಾಯಿಗಳ ಶೆಲ್ಟರ್‌ಗಾಗಿ ವಾರ್ಷಿಕ ₹18 ಕೋಟಿ ವೆಚ್ಚ!

Published : Jan 12, 2026, 06:14 AM IST
Indian Street Dogs

ಸಾರಾಂಶ

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿನ ಬೀದಿ ನಾಯಿಗಳನ್ನು ಶೆಲ್ಟರ್‌ಗಳಿಗೆ ಸ್ಥಳಾಂತರಿಸಲು ಸಿದ್ಧತೆ ನಡೆದಿದೆ. ಈ ನಾಯಿಗಳಿಗೆ ದಿನಕ್ಕೆರಡು ಬಾರಿ ಚಿಕನ್‌ ರೈಸ್‌ ಸೇರಿದಂತೆ ಅವುಗಳ ನಿರ್ವಹಣೆಗೆ ವಾರ್ಷಿಕ 16-18 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು: ರಾಜಧಾನಿ ಬೆಂಗಳೂರಿನ ಆಸ್ಪತ್ರೆ, ಶಾಲಾ-ಕಾಲೇಜು, ಬಸ್‌, ರೈಲ್ವೆ ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಗುರುತಿಸಲಾದ ಬೀದಿ ನಾಯಿಗಳಿಗೆ ದಿನಕ್ಕೆರಡು ಬಾರಿ ಚಿಕನ್‌ ರೈಸ್‌ ನೀಡಿ ಆಶ್ರಯ ಕಲ್ಪಿಸಲು ವಾರ್ಷಿಕ 16 ರಿಂದ 18 ಕೋಟಿ ರು, ಬೇಕಾಗಲಿದೆ ಎಂದು ಅಂದಾಜಿಸಲಾಗಿದೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಜನನಿಬಿಡ ಪ್ರದೇಶಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸಿ, ಅವುಗಳನ್ನು ನಿರ್ದಿಷ್ಟ ಡಾಗ್ ಶೆಲ್ಟರ್‌ಗಳಿಗೆ ಸ್ಥಳಾಂತರಿಸಬೇಕು. ನಾಯಿ ಕಡಿತ ತಡೆಯಲು ಆವರಣದಲ್ಲಿ ಬೇಲಿಗಳನ್ನು ಅಳವಡಿಸಬೇಕು ಎಂದು ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಹಾಗೂ ಐದು ನಗರ ಪಾಲಿಕೆಗಳು 7873 ಸಂಸ್ಥೆಗಳಿಗೆ ತಮ್ಮ ಆವರಣದಲ್ಲಿರುವ ಬೀದಿ ನಾಯಿಗಳ ಮಾಹಿತಿ ನೀಡುವಂತೆ ನೋಟಿಸ್‌ ಜಾರಿಗೊಳಿಸಲಾಗಿತ್ತು. ಈ ಪೈಕಿ 2816 ಸಂಸ್ಥೆಗಳು ತಮ್ಮ ಆವರಣದಲ್ಲಿರುವ ಬೀದಿ ನಾಯಿ ಸಂಖ್ಯೆಯನ್ನು ಆಯಾ ವ್ಯಾಪ್ತಿಯ ನಗರ ಪಾಲಿಕೆಗಳಿಗೆ ಸಲ್ಲಿಸಿವೆ.

ಈ ಬೀದಿ ನಾಯಿಗಳನ್ನು ಶೆಲ್ಟರ್‌ಗಳಿಗೆ ಸ್ಥಳಾಂತರಿಸಿ, ದಿನಕ್ಕೆ ಎರಡು ಬಾರಿ ಚಿಕನ್‌ ರೈಸ್‌ ಆಹಾರ ಪೂರೈಕೆ, ಔಷಧಿ, ಲಸಿಕೆ, ನಿರ್ವಹಣೆಗೆ ಒಂದು ವರ್ಷಕ್ಕೆ 16 ರಿಂದ 18 ಕೋಟಿ ರು. ಹಣ ಬೇಕಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಬೀದಿ ನಾಯಿಗಳ ಆಶ್ರಯ ತಾಣ ನಿರ್ವಹಣೆ ಆಹಾರ ಪೂರೈಕೆದಾರರು ಹೆಚ್ಚಿನ ದರ ವಿಧಿಸಿದರೆ, ನಿರ್ವಹಣೆಯ ಮೊತ್ತ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

4,428 ಬೀದಿ ನಾಯಿ ಗುರುತು

ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವ 7,873 ವಿವಿಧ ಸಂಸ್ಥೆಗಳ ಪೈಕಿ 2,816 ಸಂಸ್ಥೆಗಳು ತಮ್ಮ ಆವರಣದಲ್ಲಿ 4,428 ಬೀದಿ ನಾಯಿ ಇವೆ ಎಂಬ ಮಾಹಿತಿ ನೀಡಿವೆ. ಈ ಪೈಕಿ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 2,339, ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 1,223 , ಪಶ್ಚಿಮ ನಗರ ಪಾಲಿಕೆಯಲ್ಲಿ 525, ಪೂರ್ವ ನಗರ ಪಾಲಿಕೆಯಲ್ಲಿ 274 ಹಾಗೂ ದಕ್ಷಿಣ ನಗರ ಪಾಲಿಕೆಯಲ್ಲಿ ಕೇವಲ 131 ಬೀದಿ ನಾಯಿ ಇವೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಅಂಕಿ ಅಂಶವನ್ನು ರಾಜ್ಯ ಸರ್ಕಾರದ ಮೂಲಕ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದೆ.

19 ಶೆಲ್ಟರ್‌ ನಿರ್ಮಾಣಕ್ಕೆ ಸ್ಥಳ: ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಆಶ್ರಯ ನೀಡಲು 19 ಶೆಲ್ಟರ್‌ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಈ ಶೆಲ್ಟರ್‌ ನಿರ್ವಹಣೆಯ ಹೊಣೆಯನ್ನು 9 ಸ್ವಯಂ ಸೇವಾ ಸಂಸ್ಥೆಗೆ ನೀಡಲು ಚಿಂತನೆ ನಡೆಸಲಾಗಿದೆ.

184 ಕೋಟಿ ವೆಚ್ಚದ ನಾಯಿ ನಿರ್ವಹಣೆ ಪ್ಲಾನ್‌

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಒಟ್ಟು 2.79 ಲಕ್ಷ ಬೀದಿ ನಾಯಿಗಳಿವೆ. ಸಂತಾನ ಹರಣ ಶಸ್ತ್ರ ಚಿಕಿತ್ಸೆ ವ್ಯವಸ್ಥೆ, ಮೈಕ್ರೋ ಚಿಪ್ ಅಳವಡಿಕೆ, ಆಶ್ರಯ ತಾಣ, ನಿಗಾ ಕೇಂದ್ರದ ಸ್ಥಾಪನೆಗೆ 125.10 ಕೋಟಿ ರು, ಆ್ಯಂಟಿ ರೇಬಿಸ್‌ ಸೇರಿದಂತೆ ಔಷಧ ವೆಚ್ಚಕ್ಕೆ 17.14 ಕೋಟಿ ರು. ಸಿಬ್ಬಂದಿ ವೆಚ್ಚಕ್ಕೆ 37.14 ಕೋಟಿ ರು, ಸಾಗಾಣಿಕೆ, ಚಿಕನ್‌ ರೈಸ್‌ ಸೇರಿದಂತೆ ಆಹಾರ ನೀಡುವುದಕ್ಕೆ 3.90 ಕೋಟಿ ರು. ಸೇರಿದಂತೆ ಒಟ್ಟು 183,57,13,475 ರು. ಬೇಕಾಗಲಿದೆ ಎಂದು ಅಂದಾಜಿಸಲಾಗಿದೆ.

ನಗರ ಪಾಲಿಕೆವಾರು ಎಷ್ಟು ಬೀದಿ ನಾಯಿ ಗುರುತು, ಎಷ್ಟು ಶೆಲ್ಟರ್‌?

ನಗರ ಪಾಲಿಕೆ ಗುರುತಿಸಿದ ಬೀದಿ ನಾಯಿ ಶೆಲ್ಟರ್‌ಗೆ ಸ್ಥಳದ ಸಂಖ್ಯೆ

  • ಬೆಂ. ದಕ್ಷಿಣ 131 2
  • ಬೆಂ.ಪಶ್ಚಿಮ 525 5
  • ಬೆಂ.ಕೇಂದ್ರ 1223 7
  • ಬೆಂ.ಪೂರ್ವ 274 2
  • ಬೆಂ.ಉತ್ತರ 2339 3
  • ಒಟ್ಟು 4428 19

PREV
Read more Articles on
click me!

Recommended Stories

Bengaluru: ಬೆ*ತ್ತಲೆ ವಿಡಿಯೋ ಮುಂದಿಟ್ಟು ಬ್ಲ್ಯಾಕ್‌ಮೇಲ್‌ ಮಾಡಿ ಯುವಕನಿಂದ 1.5 ಲಕ್ಷ ರು. ಸುಲಿಗೆ
ರಾತ್ರಿ ಮನೆ ಮುಂದೆ ಬೈಕ್ ನಿಲ್ಲಿಸುವ ಬೆಂಗಳೂರಿಗರೇ ಎಚ್ಚರ! ನೀವು ಮಲಗೋದನ್ನ ಕಾಯ್ತಾರೆ ಕಳ್ಳರು!