
ಬೆಂಗಳೂರು(ಜೂ.15) ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇದರ ಜೊತೆಗೆ ಅನಾಹುತಗಳು ಸಂಭವಿಸುತ್ತಿದೆ. ಇದೀಗ ಬೆಂಗಳೂರಿನ ಬನಶಂಕರಿ 2ನೇ ಹಂತದ ಶ್ರೀನಿವಾಸ ನಗರದಲ್ಲಿ ಗಾಳಿ ಮಳೆಯಿಂದ ಮರದ ಕೊಂಬೆ ಮುರಿದು ಬಿದ್ದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಬೈಕ್ ಸವಾರ ಅಕ್ಷಯ್ ಮೇಲೆ ಮರದ ಕೊಂಬೆ ಮುರಿದು ಬಿದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಅಕ್ಷಯನನ್ನು ಸ್ಥಳೀಯ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಅಕ್ಷಯ್ ಚಿಕಿತ್ಸೆ ಹಣ ಹೊಂದಿಸಲು ಕುಟುಂಬಸ್ಥರು ಪರದಾಡಿದ್ದಾರೆ.
ಅಕ್ಷಯ್ ತಂದೆಯ ಹುಟ್ಟುಹಬ್ಬದ ಕಾರಣ ಮಟನ್ ತರಲು ಬೈಕ್‌ನಲ್ಲಿ ಮಾರುಕಟ್ಟೆಗೆ ತೆರಳಿದ್ದ. ಈ ವೇಳೆ ಮರದ ಕೊಂಬೆ ಮುರಿದು ಬಿದ್ದಿದೆ. ದೋಬಿ ಘಾಟ್ ಬೃಂದಾವನ ನಗರದ ನಿವಾಸಿಯಾಗಿರುವ ಅಕ್ಷಯ್ ತೀವ್ರವಾಗಿ ಗಾಯಗೊಂಡಿದ್ದಾನೆ. ಮರದ ಕೊಂಬೆ ಸರಿಸಿ ಅಕ್ಷಯನ್ ರಕ್ಷಿಸಲು ಕೆಲ ಸಮಯ ಹಿಡಿದಿದೆ. ಸ್ಥಳೀಯರು ಅಕ್ಷಯ್‌ನ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಗಾಯದ ಪ್ರಮಾಣ ಹಾಗೂ ರಕ್ರ ಸ್ರಾವ ಹೆಚ್ಚಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಜಯನಗರದ ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಚಿಂತಾಜನಕ ಸ್ಥಿತಿಯಲ್ಲಿರುವ ಗಾಯಾಳು ಅಕ್ಷಯ್
ಅಕ್ಷಯ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅಪೋಲೋ ಆಸ್ಪತ್ರೆಯಲ್ಲಿ ಈಗಾಗಲೇ 1.5 ಲಕ್ಷ ರೂಪಾಯಿ ಪಾವತಿ ಮಾಡಿರುವ ಕುಟುಂಬ ಇದೀಗ ಹಣ ಹೊಂದಿಸಲು ಹೆಣಗಾಡುತ್ತಿದೆ. ಅಕ್ಷಯ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಕೊನೆಗೂ ಆಸ್ಪತ್ರೆಗೆ ಬಂದ ಬಿಬಿಎಂಪಿ ಅಧಿಕಾರಿ
ತೀವ್ರವಾಗಿ ಗಾಯಗೊಂಡ ಅಕ್ಷಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇತ್ತ ಕುಟಂಬಸ್ಥರು ಬಿಲ್ ಪಾವತಿಸಲು ತೀವ್ರ ಪರದಾಡಿದ್ದಾರೆ. ಆದರೆ ಬಿಬಿಎಂಪಿ ಅಧಿಕಾರಿಗಳಾಗಲಿ, ಇತರ ಅಧಿಕಾರಿಗಳಾಗಲಿ ಆಸ್ಪತ್ರೆಗ ಬಂದಿಲ್ಲ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದರು. ಕೊನೆಗೂ ಬಿಬಿಎಂಪಿ ಅರಣ್ಯಾಧಿಕಾರಿ ರಂಗನಾಥ್ ಸ್ವಾಮಿ ಜಯನಗರ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಅಕ್ಷಯ್ ಆರೋಗ್ಯ ವಿಚಾರಿಸಿದ್ದಾರೆ.
ಅಕ್ಷಯ್ ಗುಣಮುಖರಾಗುವ ವರೆಗೆ ನಮ್ಮ ಜೊತೆಗಿರಬೇಕು
ಅಕ್ಷಯ್ ಆರೋಗ್ಯ ಚಿಂತಾಜನಕವಾಗಿದೆ. ಅಕ್ಷಯ್ ಆರೋಗ್ಯವಾಗಿ ಬಿಡುಗಡೆಯಾಗುವವರೆಗೆ ಅಧಿಕಾರಿ ರಂಗನಾಥ್ ಸ್ವಾಮಿ ನಮ್ಮ ಜೊತೆಗಿರಬೇಕು. ಅರ್ಧದಲ್ಲಿ ನಮ್ಮನ್ನು ಕೈಬಿಟ್ಟರೆ ನಾವು ಸುಮ್ಮನಿರೋದಿಲ್ಲ ಎಂದು ಬಿಬಿಎಂಪಿ ಅರಣ್ಯಾಧಿಕಾರಿಗೆ ಅಕ್ಷಯ್ ಅಜ್ಜಿ ಸಾವಿತ್ರಮ್ಮ ಎಚ್ಚರಿಕೆ ನೀಡಿದ್ದಾರೆ.
ಚಿಕಿತ್ಸಾ ವೆಚ್ಚ ಬಿಬಿಎಂಪಿ ಭರಿಸಲಿದೆ
ಅಕ್ಷಯ್ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಬಿಬಿಎಂಪಿ ಅರಣ್ಯಾಧಿಕಾರಿ ರಂಗನಾಥ್ ಸ್ವಾಮಿ, ಅಕ್ಷಯ್ ತಂದೆ ಹುಟ್ಟು ಹಬ್ಬದ ಕಾರಣ ಮಟನ್ ತರಲು ಮನೆಯಿಂದ ಹೊರಗೆ ಹೋದಾಗ ಈ ಘಟನೆ ನಡೆದಿದೆ. ತಲೆಗೆ ಗಂಭೀರ ಗಾಯವಾಗಿರುವ ಕಾರಣ ವೈದ್ಯರು ಸರ್ಜರಿ ಮಾಡಿದ್ದಾರೆ. 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅಕ್ಷಯ್ ಚಿಕಿತ್ಸಾ ವೆಚ್ಚನ್ನು ಬಿಬಿಎಂಪಿ ಭರಿಸಲಿದೆ. ಕುಟುಂಬದ ಜೊತೆ ಬಿಬಿಎಂಪಿ ಇದೆ. ಗಾಳಿ ಬಂದ ಕಾರಣ ಒಣಗಿದ ಕೊಂಬೆ ಬಿದ್ದು ಅವಘಡ ನಡೆದಿದೆ ಎಂದು ರಂಗನಾಥ್ ಸ್ವಾಮಿ ಹೇಳಿದ್ದಾರೆ.