'ಮದ್ವೆಯಾಗಿ 4 ತಿಂಗಳ ಆಗಿತ್ತು ಸಾರ್..' ಬೆಂಗಳೂರಲ್ಲಿ ಮಗಳ ಕಳೆದುಕೊಂಡು ತಾಯಿ ಕಣ್ಣೀರು..

Published : Jul 13, 2026, 09:45 AM IST
teacher shweta died in bengaluru

ಸಾರಾಂಶ

ನಾಲ್ಕು ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಶಿಕ್ಷಕಿಯೊಬ್ಬರು ಬೆಂಗಳೂರಿನಲ್ಲಿ ದುರಂತ ಅಂತ್ಯಕಂಡಿದ್ದಾರೆ. ಶಿಕ್ಷಕಿಯ ಸಾವಿನ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಆಕೆಯ ತಾಯಿ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು: ರಾಜಧಾನಿಯ ಸುಂಕದಕಟ್ಟೆಯಲ್ಲಿ ನಡೆದ ನವವಿವಾಹಿತೆ ಶ್ವೇತಾ (25) ಅವರ ಆತ್ಮಹ*ತ್ಯೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಪ್ರೀತಿಸಿ ಮದುವೆಯಾದ ನಾಲ್ಕೇ ತಿಂಗಳಿಗೆ ಶಿಕ್ಷಕಿ ಶ್ವೇತಾ ನೇಣಿಗೆ ಶರಣಾಗಿದ್ದು, ಈ ಸಾವಿನ ಹಿಂದೆ ಪತಿ ಹಾಗೂ ಆತನ ಅಕ್ಕನ ಕ್ರೌರ್ಯ ಅಡಗಿದೆ ಎಂಬ ಆರೋಪ ಕೇಳಿಬಂದಿದೆ. ನನ್ನ ಮಗಳ ಸಾವಿಗೆ ಆಕೆಯ ಗಂಡನೇ ಕಾರಣ, ಆತನನ್ನು ಸುಮ್ಮನೆ ಬಿಡಬೇಡಿ ಎಂದು ಮೃತಳ ತಾಯಿ ಕಣ್ಣೀರು ಹಾಕುತ್ತಿದ್ದಾರೆ.

ಪ್ರತಿ ದಿನವೂ ಹೊಡೆತ, ಬಡಿತ, ಟಾರ್ಚರ್?

ಮೂಲತಹ ಚಿಕ್ಕಮಗಳೂರು ಜಿಲ್ಲೆ ತರೀಕೆಯವರಾದ ಶ್ವೇತಾ, ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ನಾಲ್ಕು ತಿಂಗಳ ಹಿಂದೆ ಕುಣಿಗಲ್ ಮೂಲದ ಮೂರ್ತಿ ಎಂಬಾತನನ್ನು ಪ್ರೀತಿಸಿ, ಕಮಲನಗರದ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಮದುವೆಯಾದ ಹೊಸತರಲ್ಲಿ ಹೆಗ್ಗನಹಳ್ಳಿ ಕ್ರಾಸ್ ಬಳಿಯ ಲಕ್ಷ್ಮಣ ನಗರದಲ್ಲಿ ವಾಸವಿದ್ದರು. ಸುಖವಾಗಿರಬೇಕಿದ್ದ ಸಂಸಾರದಲ್ಲಿ ಕೆಲವೇ ದಿನಗಳಲ್ಲಿ ಬಿರುಗಾಳಿ ಎದ್ದಿತ್ತು ಎನ್ನಲಾಗಿದೆ.

ಹಣಕ್ಕಾಗಿ ಪೀಡಿಸುತ್ತಿದ್ದ ಆರೋಪ

ಮೃತಳ ತಾಯಿ ಪುಷ್ಪಾ ಅವರು ಪೊಲೀಸರ ಮುಂದೆ ನೀಡಿರುವ ಹೇಳಿಕೆ ಪ್ರಕಾರ, ನನ್ನ ಮಗಳಿಗೆ ಪ್ರತಿದಿನ ಹೊಡೆಯುತ್ತಿದ್ದ, ಬಡಿಯುತ್ತಿದ್ದ. ಅವಳ ಇಬ್ಬರು ಅಕ್ಕಂದಿರ ಮದುವೆಯನ್ನು ನಾವು ಅದ್ಧೂರಿಯಾಗಿ ಮಾಡಿದ್ದೆವು. ಅದನ್ನು ಮುಂದಿಟ್ಟುಕೊಂಡು, ನಿಮ್ಮ ತಾಯಿ ಅವರಿಗೆ ಅಷ್ಟು ಹಣ ಖರ್ಚು ಮಾಡಿದ್ದಾರೆ. ಈಗ ನಿನಗೂ ಏನಾದರೂ ಕೊಡಲು ಹೇಳು ಎಂದು ಪೀಡಿಸುತ್ತಿದ್ದನಂತೆ. ಮಗಳು ಫೋನ್ ಮಾಡಿ ಅಮ್ಮ ನನ್ನಿಂದ ಇಲ್ಲಿ ಇರೋಕೆ ಆಗುತ್ತಿಲ್ಲ ಎಂದು ಅಳುತ್ತಿದ್ದಳು ಎಂದು ತಾಯಿ ವಿವರಿಸಿದ್ದಾರೆ.

ಪಿಜಿಗೆ ಹೋಗುವಂತೆ ಹೇಳಿದ್ದ ತಾಯಿ

ಪತಿಯ ಕಿರುಕುಳ ತಾಳಲಾರದೆ ಶ್ವೇತಾ ತನ್ನ ತಾಯಿಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದರು. ಆಗ ತಾಯಿ, ಮಗಳೇ ಅಲ್ಲಿ ನಿನಗೆ ತೊಂದರೆಯಾಗುತ್ತಿದ್ದರೆ ಮನೆ ಬಿಟ್ಟು ಬಂದು ಯಾವುದಾದರೂ ಪಿಜಿಯಲ್ಲಿ (PG) ಇರು ಎಂದು ಧೈರ್ಯ ತುಂಬಿದ್ದರು. ತಾಯಿಯ ಸಲಹೆಯಂತೆ ಮನೆ ಬಿಡುವ ಮೊದಲೇ ಶ್ವೇತಾ ಮನನೊಂದು ಫ್ಯಾನ್‌ಗೆ ನೇಣು ಬಿಗಿದುಕೊಂಡು ದುರಂತ ಅಂತ್ಯಕಂಡಿದ್ದಾರೆ.

ದುಡುಕಿನ ನಿರ್ಧಾರಕ್ಕೂ ಮುನ್ನ ಶ್ವೇತಾ ಬರೆದಿಟ್ಟಿರುವ ನೋಟ್‌ನಲ್ಲಿ ಪತಿ ಮೂರ್ತಿ ಮತ್ತು ಆತನ ಅಕ್ಕನ ಅಸಲಿ ಮುಖ ಬಯಲಾಗಿದೆ. ಅಮ್ಮ ನನ್ನ ಕ್ಷಮಿಸಿಬಿಡು.. ಇವರಿಂದ ನನಗೆ ಹಿಂಸೆ ಆಗುತ್ತಿದೆ, ಬದುಕೋಕೆ ಆಸೆಯೇ ಇಲ್ಲದಂತೆ ಮಾಡಿದ್ದಾರೆ. ನಾನು ಸತ್ತ ಮೇಲೆ ಅವರನ್ನು ಮಾತ್ರ ಸುಮ್ಮನೆ ಬಿಡಬೇಡಿ ಎಂದು ಬರೆದಿದ್ದಾರೆ. ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಳ ತಾಯಿಯ ದೂರಿನ ಮೇರೆಗೆ ಪತಿ ಮೂರ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಲವ್ ಮ್ಯಾರೇಜ್ ಆಗಿದ್ದರಿಂದ ಮೂರ್ತಿ ಬಗ್ಗೆ ನಮಗೆ ಹೆಚ್ಚು ತಿಳಿದಿರಲಿಲ್ಲ, ಆತ ಫೈನಾನ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಒಬ್ಬ ಶಿಕ್ಷಕಿಯಾಗಿ ಸಮಾಜಕ್ಕೆ ಮಾದರಿಯಾಗಬೇಕಿದ್ದ ಯುವತಿ, ಪತಿಯ ಕಿರುಕುಳಕ್ಕೆ ಬಲಿಯಾಗಿರುವುದು ಇಡೀ ಸುಂಕದಕಟ್ಟೆ ಭಾಗದಲ್ಲಿ ವಿಷಾದ ಮೂಡಿಸಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

PREV
Read more Articles on
click me!

Recommended Stories

'ಅಮ್ಮ ನನ್ನನ್ನು ಕ್ಷಮಿಸು..' ಪ್ರೀತಿಸಿ ಮದುವೆಯಾಗಿ ನಾಲ್ಕೇ ತಿಂಗಳಿಗೆ ದುರಂತ ಅಂತ್ಯಕಂಡ ಶಿಕ್ಷಕಿ..!
Karnataka Cabinet expansion: ವಿದೇಶದಿಂದ ರಾಹುಲ್ ಗಾಂಧಿ ವಾಪಸ್; ಸಂಪುಟ ವಿಸ್ತರಣೆ ಚರ್ಚೆಗೆ ಡಿಕೆ, ಬಿಕೆ, ಸಿದ್ದು ನಾಳೆ ದಿಲ್ಲಿಗೆ?