ಬೆಂಗಳೂರಿನ 59,000 ಆಸ್ತಿ ಮಾಲೀಕರಿಗೆ ತೆರಿಗೆ ಕಟ್ಟುವಂತೆ 4.5 ಲಕ್ಷ ಬಾರಿ ಕರೆ ಮಾಡಿದ AI; ಹಣ ವಸೂಲಿಗೆ ಹೊಸ ದಾರಿ

Published : Oct 01, 2026, 10:33 AM IST
Bengaluru West City Corporation used AI powered voice calls to contact property owners about pending tax dues

ಸಾರಾಂಶ

ಬಾಕಿ ಉಳಿದಿರುವ ಆಸ್ತಿ ತೆರಿಗೆಯನ್ನು ವಸೂಲಿ ಮಾಡಲು ಬೆಂಗಳೂರು ಪಶ್ಚಿಮ ನಗರ ನಿಗಮವು ಇದೀಗ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೊರೆ ಹೋಗಿದೆ. , ಬಾಕಿ ಮೊತ್ತ, ಬಾಕಿ ಉಳಿದಿರುವ ಅವಧಿ ಹಾಗೂ ಆನ್‌ಲೈನ್‌ನಲ್ಲಿ ತೆರಿಗೆ ಪಾವತಿಸುವ ವಿಧಾನವನ್ನು ಕನ್ನಡದಲ್ಲೇ ತಿಳಿಸಲಾಗುತ್ತಿದೆ.

ಬಾಕಿ ಉಳಿದಿರುವ ಆಸ್ತಿ ತೆರಿಗೆಯನ್ನು ವಸೂಲಿ ಮಾಡಲು ಬೆಂಗಳೂರು ಪಶ್ಚಿಮ ನಗರ ನಿಗಮವು ಇದೀಗ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೊರೆ ಹೋಗಿದೆ. ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿ ಮಾಲೀಕರಿಗೆ ದಿನಕ್ಕೆ ಎರಡು ಬಾರಿ ಸ್ವಯಂಚಾಲಿತ ಧ್ವನಿ ಕರೆ ಮಾಡಿ, ಬಾಕಿ ಮೊತ್ತ, ಬಾಕಿ ಉಳಿದಿರುವ ಅವಧಿ ಹಾಗೂ ಆನ್‌ಲೈನ್‌ನಲ್ಲಿ ತೆರಿಗೆ ಪಾವತಿಸುವ ವಿಧಾನವನ್ನು ಕನ್ನಡದಲ್ಲೇ ತಿಳಿಸಲಾಗುತ್ತಿದೆ. ಹಲವು ಆಸ್ತಿ ಮಾಲೀಕರಿಗೆ ತಮ್ಮ ಹೆಸರಿನಲ್ಲಿ ಎಷ್ಟು ತೆರಿಗೆ ಬಾಕಿ ಇದೆ, ಅದು ಎಷ್ಟು ಸಮಯದಿಂದ ಬಾಕಿ ಉಳಿದಿದೆ ಮತ್ತು ಆನ್‌ಲೈನ್‌ನಲ್ಲಿ ಪಾವತಿ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲದಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಅಭಿಯಾನ ಆರಂಭಿಸಲಾಗಿದೆ.

4.54 ಲಕ್ಷ ಕರೆ, 59 ಸಾವಿರ ಮಾಲೀಕರ ಸಂಪರ್ಕ

ಮಾರ್ಚ್‌ನಿಂದ ಜೂನ್‌ವರೆಗೆ ನಡೆದ ಅಭಿಯಾನದಲ್ಲಿ ನಿಗಮದ AI ಧ್ವನಿ ಏಜೆಂಟ್‌ ಹಿಂದಿನ 198 ವಾರ್ಡ್‌ಗಳ ಪೈಕಿ 64 ವಾರ್ಡ್‌ಗಳಲ್ಲಿ 4.54 ಲಕ್ಷ ಕರೆಗಳನ್ನು ಮಾಡಿದೆ. ಈ ಪೈಕಿ 59,604 ಆಸ್ತಿ ಮಾಲೀಕರನ್ನು ಯಶಸ್ವಿಯಾಗಿ ಸಂಪರ್ಕಿಸಲಾಗಿದ್ದು, ಅವರಿಗೆ ಕನ್ನಡ ಭಾಷೆಯಲ್ಲಿ ತೆರಿಗೆ ಬಾಕಿಯ ಕುರಿತ ಮಾಹಿತಿ ನೀಡಲಾಗಿದೆ. ಕರೆಗಳ ವೇಳೆ ಬಾಕಿ ಇರುವ ತೆರಿಗೆ ಮೊತ್ತ, ಅದು ಎಷ್ಟು ಅವಧಿಯಿಂದ ಬಾಕಿಯಿದೆ ಹಾಗೂ ಆನ್‌ಲೈನ್‌ನಲ್ಲಿ ಪಾವತಿ ಮಾಡುವ ಪ್ರಕ್ರಿಯೆಯನ್ನು ವಿವರಿಸಲಾಗಿದೆ.

₹35.1 ಕೋಟಿ ತೆರಿಗೆ ವಸೂಲಿಗೆ ದಾರಿ

AI ಕರೆಗಳ ನಂತರ 26,962 ಆಸ್ತಿ ಮಾಲೀಕರು ತಮ್ಮ ಬಾಕಿ ತೆರಿಗೆಯನ್ನು ಪಾವತಿಸಲು ಒಪ್ಪಿಕೊಂಡಿದ್ದಾರೆ. ಇದರಿಂದ ನಿಗಮಕ್ಕೆ ಸುಮಾರು ₹35.1 ಕೋಟಿ ಬಾಕಿ ತೆರಿಗೆ ವಸೂಲಿ ಮಾಡುವ ಅವಕಾಶ ಸಿಕ್ಕಿದೆ. ಇವರಲ್ಲಿ 10,303 ಮಂದಿ ಪಾವತಿ ಮಾಡುವ ನಿರ್ದಿಷ್ಟ ದಿನಾಂಕವನ್ನೂ ತಿಳಿಸಿದ್ದಾರೆ. ಮತ್ತೊಂದೆಡೆ, 5,747 ಆಸ್ತಿ ಮಾಲೀಕರು ಶೀಘ್ರದಲ್ಲೇ ತಮ್ಮ ಬಾಕಿ ಮೊತ್ತ ಪಾವತಿಸುವುದಾಗಿ ತಿಳಿಸಿದ್ದಾರೆ.

ಅಧಿಕಾರಿಗಳ ಕೆಲಸದ ಹೊರೆ ಕಡಿಮೆ

ಸಾವಿರಾರು ತೆರಿಗೆ ಬಾಕಿದಾರರನ್ನು ಸಿಬ್ಬಂದಿ ಮೂಲಕ ಪ್ರತ್ಯೇಕವಾಗಿ ಸಂಪರ್ಕಿಸುವುದು ನಿಗಮದ ಆದಾಯ ವಿಭಾಗದ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡುತ್ತಿತ್ತು. ಒಂದೇ ತೆರಿಗೆ ಚಕ್ರದಲ್ಲಿ ಲಕ್ಷಾಂತರ ಕರೆಗಳನ್ನು ಮಾಡಲು ದೊಡ್ಡ ಮಟ್ಟದ ಕಾಲ್‌ ಸೆಂಟರ್‌ ವ್ಯವಸ್ಥೆ ಅಗತ್ಯವಾಗುತ್ತಿತ್ತು. ಇದರಿಂದ ಸಹಾಯಕ ಕಂದಾಯ ಅಧಿಕಾರಿಗಳು (ARO) ಸಮೀಕ್ಷೆ ಹಾಗೂ ಸ್ಥಳೀಯ ಮಟ್ಟದ ತೆರಿಗೆ ವಸೂಲಿ ಕಾರ್ಯಗಳಿಂದ ಬೇರೆಡೆಗೆ ನಿಯೋಜನೆಯಾಗುವ ಪರಿಸ್ಥಿತಿಯೂ ಎದುರಾಗುತ್ತಿತ್ತು. AI ಮೂಲಕ ಆರಂಭಿಕ ಹಂತದಲ್ಲೇ ತೆರಿಗೆ ಬಾಕಿದಾರರನ್ನು ಸಂಪರ್ಕಿಸುವುದರಿಂದ, ಅಧಿಕಾರಿಗಳು ನೇರ ಹಸ್ತಕ್ಷೇಪ ಅಗತ್ಯವಿರುವ ಪ್ರಕರಣಗಳತ್ತ ಹೆಚ್ಚು ಗಮನ ಹರಿಸಲು ಸಾಧ್ಯವಾಗಿದೆ ಎಂದು ನಿಗಮ ತಿಳಿಸಿದೆ.

ತೆರಿಗೆ ದಾಖಲೆಗಳಲ್ಲೂ ಹಲವು ದೋಷ ಪತ್ತೆ

ಈ ಅಭಿಯಾನದಿಂದ ನಿಗಮದ ಆಸ್ತಿ ತೆರಿಗೆ ದಾಖಲೆಗಳನ್ನು ನವೀಕರಿಸಲು ಸಹ ಸಹಾಯವಾಗಿದೆ. ಕರೆ ಮಾಡುವ ಸಂದರ್ಭದಲ್ಲಿ 17,314 ನಿಷ್ಕ್ರಿಯ ಮೊಬೈಲ್‌ ಸಂಖ್ಯೆಗಳು ಹಾಗೂ ಹಿಂದಿನ ಆಸ್ತಿ ಮಾಲೀಕರಿಗೆ ಸೇರಿದ 6,315 ಸಂಖ್ಯೆಗಳು ಪತ್ತೆಯಾಗಿವೆ. ಇದರಿಂದ ದಾಖಲೆಗಳನ್ನು ಸರಿಪಡಿಸಲು ನಿಗಮಕ್ಕೆ ಅವಕಾಶ ದೊರೆತಿದೆ. ಇದಲ್ಲದೆ, 4,577 ಆಸ್ತಿಗಳಿಗೆ ಯಾವುದೇ ತೆರಿಗೆ ಬಾಕಿ ಇಲ್ಲ ಎಂಬುದೂ ಅಭಿಯಾನದ ವೇಳೆ ದೃಢಪಟ್ಟಿದೆ. ಹೀಗಾಗಿ ಇಂತಹ ಆಸ್ತಿ ಮಾಲೀಕರಿಗೆ ಅನಗತ್ಯವಾಗಿ ತೆರಿಗೆ ವಸೂಲಿ ಕರೆಗಳು ಹೋಗುವುದನ್ನು ತಡೆಯಲು ಸಾಧ್ಯವಾಗಿದೆ.

ಬೆಂಗಳೂರಿನ ಸ್ಟಾರ್ಟಪ್ ಅಭಿವೃದ್ಧಿಪಡಿಸಿದ AI ವ್ಯವಸ್ಥೆ

ಈ AI ತಂತ್ರಜ್ಞಾನವನ್ನು ಬೆಂಗಳೂರು ಮೂಲದ ವೋಕಲ್ ಲ್ಯಾಬ್ಸ್ ಎಂಬ ಸ್ಟಾರ್ಟಪ್ ಅಭಿವೃದ್ಧಿಪಡಿಸಿದೆ. ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿಗಳಾದ ನೀಲೇಶ್ ಕುಮಾರ್, ಮೃತ್ಯುಂಜಯ್ ದಾಸ್ ಮತ್ತು ರಾಗ್ ಸನಿಲ್ ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ನಾಗರಿಕ ಸಂಸ್ಥೆಗಳ ಆದಾಯ ಸಂಗ್ರಹಣೆಯಲ್ಲಿರುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಈ ಪರಿಹಾರವನ್ನು ಅಭಿವೃದ್ಧಿಪಡಿಸಲಾಗಿದ್ದು, ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸುವಂತೆ AI ಧ್ವನಿ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಬೆಂಗಳೂರು ಪಶ್ಚಿಮ ನಗರ ನಿಗಮದ ಆಯುಕ್ತ ರಾಜೇಂದ್ರ ಕೆ.ವಿ. ಅವರ ಪ್ರಕಾರ, ತೆರಿಗೆ ಬಾಕಿದಾರರು ಯಾರೆಂದು ತಿಳಿದಿದ್ದರೂ, ಪ್ರತಿಯೊಬ್ಬರನ್ನೂ ಪ್ರತ್ಯೇಕವಾಗಿ ಸಂಪರ್ಕಿಸಿ, ಅವರದೇ ಭಾಷೆಯಲ್ಲಿ ಮನವೊಲಿಸುವುದು ದೊಡ್ಡ ಸವಾಲಾಗಿತ್ತು. AI ತಂತ್ರಜ್ಞಾನದಿಂದ ಇದೀಗ ಇದು ಸಾಧ್ಯವಾಗಿದೆ.

‘ಮಾಹಿತಿ ನೀಡುವುದಕ್ಕಿಂತ ಸಂಭಾಷಣೆ ಹೆಚ್ಚು ಪರಿಣಾಮಕಾರಿ’

ಕೇವಲ ತೆರಿಗೆ ಬಾಕಿಯ ಬಗ್ಗೆ ನೋಟಿಸ್‌ ಅಥವಾ ಬೇಡಿಕೆ ಸೂಚನೆ ನೀಡುವುದರಿಂದ ನಾಗರಿಕರಿಗೆ ಮಾಹಿತಿ ಸಿಗುತ್ತದೆ. ಆದರೆ ಅವರೊಂದಿಗೆ ನೇರ ಸಂಭಾಷಣೆ ನಡೆಸಿ, ಬಾಕಿ ಮೊತ್ತ ಮತ್ತು ಆನ್‌ಲೈನ್ ಪಾವತಿ ವಿಧಾನವನ್ನು ವಿವರಿಸುವುದರಿಂದ ಪಾವತಿಗೆ ಪ್ರೇರಣೆ ಸಿಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಭಿಯಾನದ ವೇಳೆ ಹಲವು ತೆರಿಗೆದಾರರಿಗೆ ತಮ್ಮ ಬಾಕಿ ಮೊತ್ತದ ಬಗ್ಗೆ ಹಾಗೂ ತೆರಿಗೆಯನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಪಾವತಿಸಬಹುದು ಎಂಬುದರ ಬಗ್ಗೆ ತಿಳಿದಿರಲಿಲ್ಲ ಎಂಬುದು ಗೊತ್ತಾಗಿದೆ.

ವಂಚನೆ ಕರೆಗಳ ಬಗ್ಗೆ ಎಚ್ಚರಿಕೆ

AI ಕರೆಗಳ ಹಿನ್ನೆಲೆಯಲ್ಲಿ ವಂಚನೆ ಕರೆಗಳ ಬಗ್ಗೆ ಆಸ್ತಿ ಮಾಲೀಕರಿಗೆ ನಿಗಮ ಎಚ್ಚರಿಕೆ ನೀಡಿದೆ. ನಿಗಮವು ಫೋನ್ ಮೂಲಕ ತೆರಿಗೆ ಪಾವತಿಸಲು ಕೇಳುವುದಿಲ್ಲ. ಅಲ್ಲದೆ, ಕರೆ ವೇಳೆ OTP, ಕಾರ್ಡ್ ಸಂಖ್ಯೆ, UPI PIN ಅಥವಾ ಬ್ಯಾಂಕ್‌ ಖಾತೆಯ ವಿವರಗಳನ್ನು ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆಸ್ತಿ ತೆರಿಗೆ ಬಾಕಿ ಇರುವವರು ಅಧಿಕೃತ ಕರ್ನಾಟಕ ಆಸ್ತಿ ತೆರಿಗೆ ಪೋರ್ಟಲ್‌ ಮೂಲಕ ಅಥವಾ ತಮ್ಮ ವ್ಯಾಪ್ತಿಯ ವಾರ್ಡ್‌ ಕಚೇರಿ / ಸಹಾಯಕ ಕಂದಾಯ ಅಧಿಕಾರಿ (ARO) ಕಚೇರಿಯಲ್ಲಿ ಮಾತ್ರ ತೆರಿಗೆ ಪಾವತಿಸುವಂತೆ ಸೂಚಿಸಲಾಗಿದೆ.

PREV
Read more Articles on
click me!

Recommended Stories

ಬೆಂಗಳೂರಲ್ಲಿ ಮಳೆ ಬಂದರೆ ಗಗನಕ್ಕೇರುವ ಕ್ಯಾಬ್ ರೇಟ್; ಇಷ್ಟೊಂದು ಹಣಕೊಟ್ಟರೆ ರೈಲಲ್ಲಿ ಮುಂಬೈಗೆ ಹೋಗಿ ಬರಬಹುದು!
ಹಿಂದಿಗಿಂತ ಈ ಸರ್ಕಾರದಲ್ಲೇ ಲಂಚ ಹೆಚ್ಚು: ಗುತ್ತಿಗೆದಾರರಿಂದ 75% ಕಮಿಷನ್ ಬಾಂಬ್, ಸಿಎಂ ಕ್ರಮಕ್ಕೆ ಸಿದ್ಧರಿದ್ದಾರಾ?