
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ನಗರದ ಹಲವು ಭಾಗಗಳಲ್ಲಿ ವಾಹನ ಸವಾರರು ಹಾಗೂ ಕಚೇರಿ ಮುಗಿಸಿ ಮನೆಗೆ ತೆರಳುತ್ತಿದ್ದವರು ಪರದಾಡುವಂತಾಗಿದೆ. ಭಾರೀ ಮಳೆಯ ನಡುವೆಯೇ ಟ್ರಾಫಿಕ್ ದಟ್ಟಣೆ ಹೆಚ್ಚಾಗಿದ್ದು, ಕ್ಯಾಬ್ ಮತ್ತು ಆಟೋ ದರಗಳೂ ಏರಿಕೆಯಾಗಿರುವುದಾಗಿ ನಗರದ ನಿವಾಸಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಮಳೆಯ ನಡುವೆ ನಗರದ ವಿವಿಧ ಪ್ರದೇಶಗಳ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕೆಲವರು ಮಳೆಯ ತೀವ್ರತೆಯನ್ನು ಹಂಚಿಕೊಂಡರೆ, ಇನ್ನೂ ಕೆಲವರು ಮಳೆಯಿಂದ ಉಂಟಾದ ಟ್ರಾಫಿಕ್ ಸಮಸ್ಯೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
15 ನಿಮಿಷದಲ್ಲೇ ಟ್ರಾಫಿಕ್ ಸ್ಥಿತಿ ಬದಲು!
ಮಳೆ ಆರಂಭವಾದ ಕೇವಲ 15 ನಿಮಿಷಗಳಲ್ಲೇ ಬೆಂಗಳೂರಿನ ಹಲವು ಕಡೆಗಳಲ್ಲಿ ಟ್ರಾಫಿಕ್ ಪರಿಸ್ಥಿತಿ ಹದಗೆಡಲು ಆರಂಭಿಸಿತು ಎಂದು ಎಕ್ಸ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. ಟ್ರಾಫಿಕ್ ಪರಿಸ್ಥಿತಿಯನ್ನು ತೋರಿಸುವ ನಕ್ಷೆಯೊಂದನ್ನು ಹಂಚಿಕೊಂಡಿರುವ ಅವರು, ಮಳೆ ಇನ್ನೂ ಮುಂದುವರಿಯುತ್ತಿದೆ ಎಂದು ತಿಳಿಸಿದ್ದಾರೆ. ಮತ್ತೊಬ್ಬರು ಮಳೆಯ ವಿಡಿಯೋ ಹಂಚಿಕೊಂಡು, ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಕಚೇರಿಯಿಂದ ಮನೆಗೆ ತೆರಳುವ ಎಲ್ಲರೂ ಸುರಕ್ಷಿತವಾಗಿ ಪ್ರಯಾಣಿಸುವಂತೆ ಮನವಿ ಮಾಡಿದ್ದಾರೆ.
‘ಮನೆಯಿಂದ ಹೊರಗೆ ಹೋಗುವುದೇ ಕಷ್ಟ’
ಮಳೆಯಿಂದಾಗಿ ಕೆಲವರಿಗೆ ಮನೆಗೆ ತಲುಪುವುದೇ ದೊಡ್ಡ ಸವಾಲಾಗಿದೆ. “ಇಂದು ಕಚೇರಿಯಲ್ಲಿಯೇ ಇರಬೇಕಾಗಿದೆ. ಮಳೆಯ ಬಗ್ಗೆ ಚಿಂತೆ ಇಲ್ಲ, ಆದರೆ ಟ್ರಾಫಿಕ್ ಸಮಸ್ಯೆ ಇದೆ” ಎಂದು ಬೆಂಗಳೂರಿನ ನಿವಾಸಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಬೆಂಗಳೂರಿನಲ್ಲಿ ತಾವು ಅನುಭವಿಸಿದ ಭಾರೀ ಮಳೆಯ ಬಗ್ಗೆ ಪೋಸ್ಟ್ ಮಾಡಿದ್ದು, ಮಳೆಯ ತೀವ್ರತೆಯಿಂದ ವಾಹನ ಚಲಾಯಿಸುವುದು ಕಷ್ಟವಾಗಿತ್ತು ಎಂದು ತಿಳಿಸಿದ್ದಾರೆ.
ಮಳೆಗೆ ಕ್ಯಾಬ್, ಆಟೋ ದರವೂ ಏರಿಕೆ!
ಭಾರೀ ಮಳೆಯ ಪರಿಣಾಮ ಕ್ಯಾಬ್ ಮತ್ತು ಆಟೋ ದರಗಳಲ್ಲೂ ಏರಿಕೆಯಾಗಿರುವುದಾಗಿ ಕೆಲವರು ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಒಂದು ಸ್ಕ್ರೀನ್‌ಶಾಟ್‌ನಲ್ಲಿ ಬೈಕ್ ರೈಡ್‌ಗೆ ₹668–₹673, ಆಟೋಗೆ ₹1,279 ದರ ತೋರಿಸಲಾಗಿದೆ. ಇನ್ನು AC ಇಲ್ಲದ ಕ್ಯಾಬ್‌ಗೆ ₹1,203, AC ಕ್ಯಾಬ್‌ಗೆ ₹1,285, ಪ್ರೀಮಿಯಂ ಕ್ಯಾಬ್‌ಗೆ ₹1,566, ಕ್ಯಾಬ್ XLಗೆ ₹1,831 ದರ ತೋರಿಸಿರುವುದು ಕಂಡುಬಂದಿದೆ. ಇದನ್ನು ಹಂಚಿಕೊಂಡಿರುವ ಬಳಕೆದಾರರೊಬ್ಬರು ಬೆಂಗಳೂರಿನಲ್ಲಿ ಮಳೆಯ ಸಂದರ್ಭದಲ್ಲಿ ಸರ್‌ಚಾರ್ಜ್‌ಗಳು ಇಷ್ಟು ಸಾಮಾನ್ಯವಾಗಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
‘ಇದು ನಾನು ನೋಡಿದ ಅತಿ ಹೆಚ್ಚು ಮಳೆ’
ಹಳೆ ಮದ್ರಾಸ್ ರಸ್ತೆಯಿಂದ ಹೊಸ ಏರ್‌ಪೋರ್ಟ್ ರಸ್ತೆಯ ಕಡೆಗೆ ವಾಹನದಲ್ಲಿ ತೆರಳುತ್ತಿದ್ದ ಮತ್ತೊಬ್ಬ ಬೆಂಗಳೂರಿನ ನಿವಾಸಿ, ಮಾರ್ಗದುದ್ದಕ್ಕೂ ಭಾರೀ ಮಳೆ ಸುರಿಯುತ್ತಿತ್ತು ಎಂದು ಹೇಳಿದ್ದಾರೆ. “ನಾನು ಚಾಲನೆ ಮಾಡಿದ ಸಂದರ್ಭಗಳಲ್ಲಿ ಕಂಡ ಅತ್ಯಂತ ಭಾರೀ ಮಳೆಗಳಲ್ಲಿ ಇದೂ ಒಂದು. ಹಳೆ ಮದ್ರಾಸ್ ರಸ್ತೆಯಿಂದ ಹೊಸ ಏರ್‌ಪೋರ್ಟ್ ರಸ್ತೆಯವರೆಗೂ ಮಳೆ ಮುಂದುವರಿದಿತ್ತು” ಎಂದು ಅವರು ತಿಳಿಸಿದ್ದಾರೆ.
ಮಳೆಯ ನಡುವೆ ಮೂಡಿದ ಮಳೆಬಿಲ್ಲು
ಭಾರೀ ಮಳೆಯಿಂದಾಗಿ ಟ್ರಾಫಿಕ್ ಹಾಗೂ ಪ್ರಯಾಣದ ಸಮಸ್ಯೆ ಎದುರಾದರೂ, ನಗರದ ನಿವಾಸಿಗಳಿಗೆ ಮಳೆಯ ನಡುವೆ ಸುಂದರ ದೃಶ್ಯವೊಂದು ಕಂಡಿದೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ಪೂರ್ಣ ಮಳೆಬಿಲ್ಲು ಕಾಣಿಸಿಕೊಂಡಿದ್ದು, ಅದರ ಫೋಟೋಗಳನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕಪ್ಪು ಮೋಡಗಳ ನಡುವೆ ಮೂಡಿದ ಮಳೆಬಿಲ್ಲು ಬೆಂಗಳೂರಿನ ಮಳೆಯ ದಿನಕ್ಕೆ ಮತ್ತಷ್ಟು ಸೊಬಗು ತಂದಿದೆ. ನಗರದ ಹಲವು ಭಾಗಗಳಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ನಿವಾಸಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಸಲಹೆ ನೀಡುತ್ತಿದ್ದಾರೆ.