
ಬೆಂಗಳೂರು: ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಾಜರಹಳ್ಳಿಯಲ್ಲಿ ಅತೀವ ನೋವಿನ ಘಟನೆಯೊಂದು ಸಂಭವಿಸಿದೆ. ಹೆತ್ತ ತಾಯಿಯೇ ತನ್ನ ಮಗುಳನ್ನು ಕೊಂದು ತಾನೂ ಪ್ರಾಣ ಬಿಡಲು ಮುಂದಾಗಿದ್ದಾಳೆ. ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಮಹಿಳೆ ತನ್ನಿಬ್ಬರು ಅವಳಿ ಹೆಣ್ಣು ಮಕ್ಕಳನ್ನು ಹ*ಗೈದು, ತಾನೂ ಆ*ಹತ್ಯೆಗೆ ಯತ್ನಿಸಿದ ಘೋರ ಕೃತ್ಯವಿದು.
ಮೃತ ಮಕ್ಕಳ ತಾಯಿ ಉಮಾದೇವಿ (42 ವರ್ಷ) ಮತ್ತು ಆಕೆಯ ಪತಿ ದೀರ್ಘಕಾಲದವರೆಗೆ ಮಕ್ಕಳಿಲ್ಲದೆ ಹಪಹಪಿಸಿದ್ದರು. ಕೊನೆಗೆ ಐವಿಎಫ್ (IVF) ತಂತ್ರಜ್ಞಾನದ ಮೂಲಕ ಈ ದಂಪತಿಗೆ ಅವಳಿ ಹೆಣ್ಣು ಮಕ್ಕಳು ಜನಿಸಿದ್ದರು. ಇಷ್ಟು ವರ್ಷಗಳ ನಂತರ ಸಿಕ್ಕ ಮಕ್ಕಳನ್ನು ಕಂಡು ದಂಪತಿ ಹರ್ಷಗೊಂಡಿದ್ದರು. ಆದರೆ ಹೆರಿಗೆಯ ನಂತರ ಉಮಾದೇವಿ ಅವರ ಮಾನಸಿಕ ಸ್ಥಿತಿ ಹದಗೆಟ್ಟಿತ್ತು ಎನ್ನಲಾಗಿದೆ.
ಮಕ್ಕಳ ಜನನದ ನಂತರ ಉಮಾದೇವಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು. ಇಂದು ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಉಮಾದೇವಿ ತನ್ನಿಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದಿದ್ದಾರೆ. ಬಳಿಕ ತಾನೂ ಆ*ಹ*ತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದೇ ವೇಳೆ ಕೆಲಸ ಮುಗಿಸಿ ಮನೆಗೆ ಬಂದ ಪತಿ, ಪತ್ನಿಯನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟರಲ್ಲೇ ಪುಟಾಣಿ ಕಂದಮ್ಮಗಳು ಪ್ರಾಣ ಬಿಟ್ಟಿದ್ದವು.
ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ತಲಘಟ್ಟಪುರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮಕ್ಕಳನ್ನು ಕೊಂದ ತಾಯಿ ಉಮಾದೇವಿ ಅವರನ್ನು ಹೆಚ್ಚಿನ ಚಿಕಿತ್ಸೆ ಮತ್ತು ಮಾನಸಿಕ ತಪಾಸಣೆಗಾಗಿ ಬೆಂಗಳೂರಿನ ನಿಮಾನ್ಸ್ (NIMHANS) ಆಸ್ಪತ್ರೆಗೆ ದಾಖಲಿಸಲಾಗಿದೆ.
ತಮ್ಮ ಮಕ್ಕಳು ದೊಡ್ಡವರಾಗಿ ಆಸರೆಯಾಗುತ್ತಾರೆ ಎಂದು ಕನಸು ಕಂಡಿದ್ದ ಪತಿಗೆ ಈಗ ಪತ್ನಿಯೂ ಇಲ್ಲ, ಮಕ್ಕಳೂ ಇಲ್ಲ ಎಂಬಂತಾಗಿದೆ. ಪತಿಯ ದೂರಿನ ಮೇರೆಗೆ ತಲಘಟ್ಟಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಹೆರಿಗೆಯ ನಂತರ ಮಹಿಳೆಯರಲ್ಲಿ ಉಂಟಾಗುವ ಮಾನಸಿಕ ಬದಲಾವಣೆಗಳು ಅಥವಾ ಖಿನ್ನತೆ ಇಂತಹ ಘಟನೆಗಳಿಗೆ ಕಾರಣವಾಯಿತೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.