
ಬೆಂಗಳೂರು (ಜು.6): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ವಾಹನ ಟೋಯಿಂಗ್ (towing)ಪ್ರಕ್ರಿಯೆ ಮರುಆರಂಭವಾಗಿ ಮೂರು ತಿಂಗಳು ಕಳೆಯುತ್ತಾ ಬಂದಿದ್ದರೂ, ಸಾರ್ವಜನಿಕ ವಲಯದಲ್ಲಿ ಇದರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ನೋ-ಪಾರ್ಕಿಂಗ್ (No Parking) ಸ್ಥಳಗಳಲ್ಲಿ ನಿಲ್ಲಿಸುವ ವಾಹನಗಳಿಗೆ ವಿಧಿಸಲಾಗುತ್ತಿರುವ ಭಾರಿ ಪ್ರಮಾಣದ ದಂಡದ ಮೊತ್ತವು ಸದ್ಯ ಮಧ್ಯಮ ವರ್ಗದ ವಾಹನ ಸವಾರರ ಜೇಬಿಗೆ ಕತ್ತರಿ ಹಾಕುತ್ತಿದ್ದು, ಟೋಯಿಂಗ್ ಶುಲ್ಕವನ್ನು ತಕ್ಷಣವೇ ಪರಿಷ್ಕರಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಪ್ರಸ್ತುತ ಜಾರಿಯಲ್ಲಿರುವ ಹೊಸ ನಿಯಮಗಳ ಪ್ರಕಾರ, ನೋ-ಪಾರ್ಕಿಂಗ್ ವಲಯದಲ್ಲಿ ದ್ವಿಚಕ್ರ ವಾಹನ (ಟೂ-ವೀಲರ್) ನಿಲ್ಲಿಸಿದರೆ ಸವಾರರು ಒಟ್ಟು 1,150 ರೂಪಾಯಿ ದಂಡ ತೆರಬೇಕಾಗುತ್ತದೆ. ಇದರಲ್ಲಿ ಸಂಚಾರಿ ಪೊಲೀಸರ ಮೂಲ ದಂಡ 500 ರೂ. ಆಗಿದ್ದರೆ, ಬರೋಬ್ಬರಿ 650 ರೂ. ಟೋಯಿಂಗ್ ಚಾರ್ಜ್ ಒಳಗೊಂಡಿದೆ! ಇನ್ನು ಕಾರುಗಳಿಗೆ ಮೂಲ ದಂಡ 1,000 ರೂ. ಹಾಗೂ ಟೋಯಿಂಗ್ ಶುಲ್ಕ 1,000 ರೂ. ಸೇರಿ ಒಟ್ಟು 2,000 ರೂಪಾಯಿ ನಿಗದಿಪಡಿಸಲಾಗಿದೆ. ಹಿಂದೆ ದ್ವಿಚಕ್ರ ವಾಹನಗಳಿಗೆ ಕೇವಲ 200 ರೂ. ಮತ್ತು ಕಾರುಗಳಿಗೆ 300 ರೂ. ಟೋಯಿಂಗ್ ಶುಲ್ಕ ಇತ್ತು. ಆ ಲೆಕ್ಕಾಚಾರದಲ್ಲಿ ನೋಡಿದರೆ ಇದು ಭಾರೀ ಏರಿಕೆಯಾಗಿದೆ.
ಟ್ರಾಫಿಕ್ ದಂಡ 500 ರೂ. ಇದೆ, ಆದರೆ ಅದನ್ನು ಎಳೆದುಕೊಂಡು ಬರುವ ಟೋಯಿಂಗ್ ಚಾರ್ಜ್ 650 ರೂ. ಇದೆ. ಅಸಲಿ ತಪ್ಪು ಮಾಡಿದ್ದಕ್ಕಿಂತ ಇಲಾಖೆಯ ಸೇವಾ ಶುಲ್ಕವೇ ನಮಗೆ ದೊಡ್ಡ ಶಿಕ್ಷೆಯಂತೆ ಕಾಣುತ್ತಿದೆ," ಎಂದು ರಾಜಾಜಿನಗರದ ದ್ವಿಚಕ್ರ ವಾಹನ ಸವಾರರೊಬ್ಬರು ಆಕ್ರೋಶ ಹೊರಹಾಕಿದ್ದಾರೆ.
ನಗರದಲ್ಲಿ ಸೂಕ್ತ ಪಾರ್ಕಿಂಗ್ ಮೂಲಸೌಕರ್ಯಗಳನ್ನು ಕಲ್ಪಿಸದೆ ಕೇವಲ ದಂಡ ವಸೂಲಿ ಮಾಡುತ್ತಿರುವುದಕ್ಕೆ ನಾಗರಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ನಿಯಮ ಉಲ್ಲಂಘಿಸಿದರೆ ದಂಡ ಕಟ್ಟಲು ನಮ್ಮ ಅಭ್ಯಂತರವಿಲ್ಲ. ಆದರೆ ಸಾರ್ವಜನಿಕರಿಗೆ ಸರಿಯಾದ ಪಾರ್ಕಿಂಗ್ ಸೌಲಭ್ಯವನ್ನೇ ನೀಡದೆ ಇಷ್ಟು ದೊಡ್ಡ ಮೊತ್ತದ ಟೋಯಿಂಗ್ ಶುಲ್ಕ ವಸೂಲಿ ಮಾಡುವುದು ಎಷ್ಟು ನ್ಯಾಯ? ಇಂತಹ ಕಠಿಣ ಕ್ರಮಗಳನ್ನು ಜರುಗಿಸುವ ಮುನ್ನ ನಗರದಲ್ಲಿ ಅಗತ್ಯ ಪಾರ್ಕಿಂಗ್ ತಾಣಗಳನ್ನು ನಿರ್ಮಿಸಲಿ," ಎಂದು ವಾಹನ ಸವಾರರೊಬ್ಬರು ಆಗ್ರಹಿಸಿದ್ದಾರೆ.
ಮತ್ತೊಂದೆಡೆ, ಒಂದೇ ಟೋಯಿಂಗ್ ಲಾರಿಯಲ್ಲಿ ಹತ್ತಾರು ಬೈಕ್‌ಗಳನ್ನು ಒಟ್ಟಿಗೆ ತುಂಬಿಕೊಂಡು ಹೋಗಲಾಗುತ್ತದೆ. ಆದರೂ ಪ್ರತಿಯೊಬ್ಬ ಸವಾರನಿಂದಲೂ ತಲಾ 650 ರೂ. ವಸೂಲಿ ಮಾಡಲಾಗುತ್ತಿದೆ. ಆದರೆ ಇಡೀ ಟ್ರಕ್ ಅನ್ನು ಆಕ್ರಮಿಸಿಕೊಳ್ಳುವ ಒಂದು ಕಾರಿಗೆ ಕೇವಲ 350 ರೂ. ಹೆಚ್ಚುವರಿ (ಅಂದರೆ 1000 ರೂ.) ಪಡೆಯಲಾಗುತ್ತಿದೆ. ಈ ತಾರತಮ್ಯದ ಬೆಲೆ ವ್ಯವಸ್ಥೆಯು ಕೇವಲ ಹಣ ಲೂಟಿ ಮಾಡುವ ತಂತ್ರದಂತಿದೆ ಎಂದು ಕಾಲೇಜು ವಿದ್ಯಾರ್ಥಿ ಆನಂದ್ ಬೇಸರ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರಿಂದ ಇಷ್ಟೊಂದು ದೊಡ್ಡ ಪ್ರಮಾಣದ ಹಣ ವಸೂಲಾಗುತ್ತಿದ್ದರೂ, ಟೋಯಿಂಗ್ ಕಾರ್ಯಾಚರಣೆಯನ್ನು ಆರ್ಥಿಕವಾಗಿ ಲಾಭದಾಯಕವಾಗಿ ಮುನ್ನಡೆಸಲು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ತೀವ್ರವಾಗಿ ಹೆಣಗಾಡುತ್ತಿದೆ. ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್‌ನ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಟೋಯಿಂಗ್ ವಾಹನಗಳ ನಿರ್ವಹಣಾ ವೆಚ್ಚವು ಅದರಿಂದ ಬರುವ ಆದಾಯಕ್ಕಿಂತ ಹೆಚ್ಚಾಗಿದೆ. ಏಕೆಂದರೆ, ಕಾರ್ಯಾಚರಣೆಯ ವೇಳೆ ಬರುವ ಆದಾಯದಲ್ಲಿ ಕೇವಲ ಟೋಯಿಂಗ್ ಶುಲ್ಕ ಮಾತ್ರ ಪಾಲಿಕೆಗಳಿಗೆ ಸಿಗುತ್ತದೆ, ಆದರೆ ಅಸಲಿ ಸಂಚಾರಿ ದಂಡದ (Traffic Fine) ಹಣವೆಲ್ಲ ನೇರವಾಗಿ ಸಂಚಾರಿ ಪೊಲೀಸ್ ಇಲಾಖೆಯ ಖಾತೆಗೆ ಜಮೆಯಾಗುತ್ತದೆ. ಇದು ಪಾಲಿಕೆಯ ಆದಾಯಕ್ಕೆ ದೊಡ್ಡ ಮಿತಿಯನ್ನು ಹೇರಿದೆ.
ಏಪ್ರಿಲ್ 3 ರಿಂದ ಜೂನ್ 23 ರ ನಡುವಿನ ಅವಧಿಯಲ್ಲಿ ಬೆಂಗಳೂರು ವೆಸ್ಟ್ ಸಿಟಿ ಕಾರ್ಪೊರೇಷನ್ ಒಟ್ಟು 11.62 ಲಕ್ಷ ರೂಪಾಯಿಗಳನ್ನು ಟೋಯಿಂಗ್ ಶುಲ್ಕದ ರೂಪದಲ್ಲಿ ಸಂಗ್ರಹಿಸಿದೆ. ಈ ವಲಯದಲ್ಲಿ ಪ್ರಸ್ತುತ ಎರಡು ಟೋಯಿಂಗ್ ವಾಹನಗಳಿದ್ದು, ಇವುಗಳ ಒಪ್ಪಂದದ ಪ್ರಕಾರ ಪ್ರತಿ ತಿಂಗಳಿಗೆ 1.91 ಲಕ್ಷ ರೂಪಾಯಿ ನಿರ್ವಹಣಾ ವೆಚ್ಚ ತಗಲುತ್ತದೆ.
"ಮುಂದಿನ ತಿಂಗಳುಗಳಲ್ಲಿ ಆದಾಯ ಸುಧಾರಿಸುವ ಭರವಸೆ ಇದೆ. ಏಕೆಂದರೆ ಏಪ್ರಿಲ್ ಮತ್ತು ಜೂನ್ ನಡುವೆ ಟೋಯಿಂಗ್ ಮಾಡಲಾದ ಬಹುತೇಕ ವಾಹನಗಳು ರಸ್ತೆ ಬದಿಯಲ್ಲಿ ಕೈಬಿಡಲಾದ (Abandoned Vehicles) ಅನಾಥ ವಾಹನಗಳಾಗಿದ್ದವು. ಇಂತಹ ವಾಹನಗಳ ಮಾಲೀಕರು ಬಾರದ ಕಾರಣ ಟೋಯಿಂಗ್ ಶುಲ್ಕ ಸಂಗ್ರಹವಾಗುವುದಿಲ್ಲ. ಹೀಗಾಗಿ ಈ ಅವಧಿಯ ಕಲೆಕ್ಷನ್ ನಮಗೆ ಗುತ್ತಿಗೆದಾರರ ಹಣ ಪಾವತಿಸಲೂ ಸಾಲದಾಗಿತ್ತು," ಎಂದು ವೆಸ್ಟ್ ಕಮಿಷನರ್ ರಾಜೇಂದ್ರ ಕೆ.ವಿ. ಸ್ಪಷ್ಟಪಡಿಸಿದ್ದಾರೆ.
ನಗರದ ಇತರ ಪಾಲಿಕೆಗಳ ವ್ಯಾಪ್ತಿಯಲ್ಲಿ ಎರಡು ಟೋಯಿಂಗ್ ವಾಹನಗಳ ನಿರ್ವಹಣೆಗಾಗಿ ಪ್ರತಿ ಮೂರು ತಿಂಗಳಿಗೆ ಒಟ್ಟು 12.54 ಲಕ್ಷ ರೂಪಾಯಿಗಳನ್ನು ಪಾವತಿಸಲಾಗುತ್ತಿದೆ. ಅಂದರೆ ಸರಾಸರಿ ಲೆಕ್ಕದಲ್ಲಿ ಪ್ರತಿ ವಾಹನಕ್ಕೆ ತಿಂಗಳಿಗೆ ಸುಮಾರು 2.09 ಲಕ್ಷ ರೂಪಾಯಿ ವೆಚ್ಚವಾಗುತ್ತಿದೆ. ಅತ್ಯಂತ ಆಶ್ಚರ್ಯಕರ ವಿಷಯವೆಂದರೆ, ಈ ನಿಯಮದ ಪ್ರಕಾರ ದಿನವೊಂದಕ್ಕೆ ಎಷ್ಟು ವಾಹನಗಳನ್ನು ಟೋಯಿಂಗ್ ಮಾಡಲಾಗಿದೆ ಎಂಬುದು ಮುಖ್ಯವಾಗುವುದಿಲ್ಲ; ವಾಹನಗಳನ್ನು ಎತ್ತಲಿ ಅಥವಾ ಬಿಡಲಿ, ಗುತ್ತಿಗೆದಾರರಿಗೆ ಮಾತ್ರ ತಿಂಗಳ ನಿಗದಿತ ಮೊತ್ತವನ್ನು ಪಾಲಿಕೆಗಳು ಪಾವತಿಸಲೇಬೇಕು! ಇದು ಸಾರ್ವಜನಿಕರ ತೆರಿಗೆ ಹಣದ ಪೋಲಿಗೆ ಕಾರಣವಾಗುತ್ತಿದ್ದು, ಒಟ್ಟಾರೆ ಟೋಯಿಂಗ್ ವ್ಯವಸ್ಥೆಯೇ ಹಳ್ಳ ಹಿಡಿದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.