
ಬೆಂಗಳೂರು (ಸೆ.19): ಪ್ರಖ್ಯಾತ ಐಟಿ ಕಂಪನಿಯಲ್ಲಿ ಕೆಲಸ. ವರ್ಷಕ್ಕೆ 30 ಲಕ್ಷ ಸಂಬಳ ಹಾಗಿದ್ದರೂ ನೆಮ್ಮದಿ ಇಲ್ಲ. ಈ ಕಾರಣಕ್ಕಾಗಿ ಬೆಂಗಳೂರಿನ ಟೆಕ್ಕಿ ಒಬ್ಬರು ಹುಡುಕೊಂಡಿರುವ ಮಾರ್ಗ Rapido. ಮನುಷ್ಯ ಅದೆಷ್ಟೇ ದುಡಿದರೂ, ಶ್ರೀಮಂತಿಕೆ ಇದ್ದರೂ ಅದನ್ನು ಅನುಭವಿಸೋಕೆ ಜನ ಇಲ್ಲದೇ ಇದ್ದಾಗ ಆಗುವ ಯಾತನೆ ಹೇಳತೀರದು. ಬೆಂಗಳೂರಿನ ಟೆಕ್ಕಿ ಪಾಲಿಗೆ ಅದು ಅಕ್ಷರಶಃ ಸತ್ಯವಾಗಿದೆ. ಪ್ರತಿಷ್ಠಿತ ಒರಾಕಲ್ ಕಂಪನಿಯಲ್ಲಿ ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ (SDE-2) ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿ ಬೆಂಗಳೂರು ನಗರದ ಅಸ್ವಸ್ಥತೆಗೆ ಬಲಿಯಾಗಿದ್ದಾರೆ.
ಈ ಅಸ್ವಸ್ಥತೆ ಏನೆಂದರೆ, ಒಂಟಿತನ. ವಾರ್ಷಿಕವಾಗಿ 30 ಲಕ್ಷಕ್ಕೂ ಅಧಿಕ ವೇತನ ಪಡೆಯುವ ಈತ ಒಂಟಿತನದಿಂದ ದೂರವಾಗಲು ವೀಕೆಂಡ್‌ನಲ್ಲಿ ಬೈಕ್ ಟ್ಯಾಕ್ಸಿ ಸೇವೆ Rapido ಅಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರಂತೆ. Rapido ಮೂಲಕ ಹಣ ಸಂಪಾದನೆ ಮಾಡೋದು ನನ್ನ ಉದ್ದೇಶವಲ್ಲ. ಆದರೆ, ಮಾನವರ ಜೊತೆ ಸಂಪರ್ಕ ಇರಬೇಕು ಅನ್ನೋ ಕಾರಣಕ್ಕೆ ಈ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.
ಅಂದಾಜು 1.80 ಲಕ್ಷ ರೂಪಾಯಿ ವೆಚ್ಚದ ತಮ್ಮ ಟಿವಿಎಸ್ ರೊನಿನ್ ಬೈಕ್‌ನಲ್ಲಿ Rapido ಗ್ರಾಹಕರನ್ನು ಪಿಕ್ ಮಾಡಲು ಬಂದಾಗ ಈ ವಿಚಾರ ಗೊತ್ತಾಗಿದೆ. ದುಬಾರಿ ಬೈಕ್ ಹೊಂದಿದ್ದರೂ ರಾಪಿಡೋ ಡ್ರೈವರ್ ಆಗಿ ಕೆಲಸ ಮಾಡುತ್ತಿರೋದೇಕೆ ಎಂದು ಪ್ರಯಾಣಿಕ ಪ್ರಶ್ನೆ ಮಾಡಿದಾಗ ಟೆಕ್ಕಿಯ ಜೀವನ ವಿಚಾರ ಗೊತ್ತಾಗಿದೆ. ಕಂಪನಿಯಲ್ಲಿ ವಾರದ ಇಡೀ ದಿನ ಕೆಲಸವೇ ಇರುತ್ತದೆ. ತಮ್ಮ ವರ್ಕ್ ಶೆಡ್ಯುಲ್ ತುಂಬಾ ಡಿಮಾಂಡಿಂಗ್ ಆಗಿರುವ ಕಾರಣಕ್ಕೆ ನಾನು ಏಕಾಂಗಿಯಾಗಿದ್ದೇನೆ ಎಂದು ಹೇಳಿದ್ದಾರೆ. ಸ್ನೇಹಿತರನ್ನು, ಕುಟುಂಬದವರನ್ನು ಮೀಟ್ ಮಾಡಲು ಸಾಧ್ಯವಾಗುತ್ತಿಲ್ಲ. ಅದೇ ಕಾರಣಕ್ಕೆ ವೀಕೆಂಡ್‌ನಲ್ಲಿ ರಾಪಿಡೋ ಸವಾರಿ ಮಾಡುವ ಮೂಲಕ ಹೊಸ ಜನರನ್ನು ಭೇಟಿಯಾಗುತ್ತೇನೆ. ಅಪರಿಚಿತರಲ್ಲಿ ಸಂಭಾಷಣೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಹೇಳಿದ್ದಾರ. ರಾಪಿಡೋ ಡ್ರೈವರ್ ಆಗಿದ್ದರಿಂದ ಕಾರ್ಪೋರೇಟ್ ನಿರ್ಬಂಧಗಳಿಂದ ಮುಕ್ತರಾಗಲು ನನಗೆ ಅವಕಾಶ ಮಾಡಿಕೊಟ್ಟಿತು ಎಂದು ಹೇಳಿದ್ದಾರೆ.
ಆನ್‌ಲೈನ್‌ನಲ್ಲಿ ಹಂಚಿಕೊಂಡ ಪ್ರಯಾಣಿಕನ ಖಾತೆಯು ಕ್ವಿಕ್ ಆಗಿ ವೈರಲ್ ಆಗಿದ್ದರಿಂದ ಮಹತ್ವದ ಚರ್ಚೆಗೆ ಕಾರಣವಾಯಿತು. ಅನೇಕ ನೆಟ್ಟಿಗರು ಎಂಜಿನಿಯರ್ ಬಗ್ಗೆ ಅನುಕಂಪ ವ್ಯಕ್ತಪಡಿಸಿದರು, ಆರ್ಥಿಕವಾಗಿ ಯಶಸ್ವಿ ವ್ಯಕ್ತಿಗಳು ಸಹ ಒಂಟಿತನದ ಮೌನ ಹೋರಾಟದಿಂದ ಮುಕ್ತರಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೆಲವರು ತಮ್ಮ ವೃತ್ತಿಪರ ಜೀವನದ ಹೊರಗೆ ತೃಪ್ತಿಯನ್ನು ಕಂಡುಕೊಂಡ ರೀತಿಯ ಅನುಭವಗಳನ್ನು ಹಂಚಿಕೊಂಡರು. ಇನ್ನೂ ಕೆಲವರು ಟೆಕ್ ಉದ್ಯಮದಲ್ಲಿ ವೇಗವಾಗಿ ಚಾಲ್ತಿಗೆ ಬರುತ್ತಿರುವ ಸಾಮಾಜಿಕ ಪ್ರತ್ಯೇಕತೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಘಟನೆಯು ಆಧುನಿಕ ಜಗತ್ತಿನ ವಿರೋಧಾಭಾಸವನ್ನು ಒತ್ತಿಹೇಳುತ್ತದೆ: ವೃತ್ತಿಪರ ಜೀವನವು ಹೆಚ್ಚು ಡಿಜಿಟಲ್ ಆಗಿ ಸಂಯೋಜಿಸಲ್ಪಟ್ಟಂತೆ ಮತ್ತು ಬೇಡಿಕೆಯಿಡುತ್ತಿದ್ದಂತೆ, ಕೆಲಸದ ಹೊರಗೆ ನಿಜವಾದ ಮಾನವ ಸಂವಹನದ ಅವಕಾಶಗಳು ಕ್ಷೀಣಿಸುತ್ತಿವೆ. ಬೆಂಗಳೂರಿನ ಈ ಟೆಕ್ಕಿ ಬೈಕ್ ರೈಡ್ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳುವ ಮೂಲಕ ಮಾನವ ಸಂಪರ್ಕ ಕರೆನ್ಸಿಗಿಂತ ಹೆಚ್ಚು ಮೌಲ್ಯಯುತ ಅನ್ನೋದನ್ನು ಸಾಬೀತುಪಡಿಸಿದ್ದಾರೆ.
(ಈ ಲೇಖನವು ವೈರಲ್ ಆಗಿರುವ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಆಧರಿಸಿದೆ ಮತ್ತು ಅದರ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಿಲ್ಲ.)