ಮಳೆ-ಗಾಳಿಗೆ ಧರೆಗೆ ಉರುಳುವುದನ್ನುತಿಳಿಯಲು 1500 ಮರಗಳ ಅಧ್ಯಯನಕ್ಕೆ 4.45 ಕೋಟಿ ರು. ವೆಚ್ಚದ ಪ್ರಸ್ತಾವನೆ

Published : Jun 06, 2026, 05:58 AM IST
Bengaluru Rain

ಸಾರಾಂಶ

ಬೆಂಗಳೂರಿನಲ್ಲಿ ಮರಗಳು ಉರುಳುವುದನ್ನು ತಡೆಯಲು, 1,500 ಮರಗಳ ಆರೋಗ್ಯವನ್ನು ಜರ್ಮನ್ ತಂತ್ರಜ್ಞಾನ ಬಳಸಿ ಪರೀಕ್ಷಿಸಲು ರಾಷ್ಟ್ರೀಯ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯು 4.45 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಿದೆ. ಈ ದುಬಾರಿ ತಂತ್ರಜ್ಞಾನವು ಮರಗಳ ಆಂತರಿಕ ಸ್ಥಿತಿಯನ್ನು ನಿಖರವಾಗಿ ಅರಿಯಲು ಸಹಾಯ ಮಾಡಲಿದ್ದು, ವೆಚ್ಚವನ್ನು ಕಡಿಮೆ ಮಾಡುವಂತೆ ಜಿಬಿಎ ಕೋರಿದೆ.

ಬೆಂಗಳೂರು: ನಗರದಲ್ಲಿ ಗಾಳಿ, ಮಳೆಗೆ ಸಾವಿರಾರು ಮರಗಳು ಬೀಳುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿನ 1,500 ಮರಗಳ ಆರೋಗ್ಯವನ್ನು ಜರ್ಮನ್ ತಂತ್ರಜ್ಞಾನದೊಂದಿಗೆ ಪರೀಕ್ಷೆ ನಡೆಸಲು ಜಿಬಿಎಗೆ ನಗರದ ರಾಷ್ಟ್ರೀಯ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಐಡಬ್ಲ್ಯುಎಸ್‌ಟಿ) 4.45 ಕೋಟಿ ರು. ವೆಚ್ಚದ ಪ್ರಸ್ತಾವನೆ ಸಲ್ಲಿಸಿದೆ.

ಜರ್ಮನ್ ತಂತ್ರಜ್ಞಾನ ಬಳಸಿಕೊಂಡು ನಡೆಸುವ ಮರಗಳ ವೈಜ್ಞಾನಿಕ ಅಧ್ಯಯನದಿಂದ ಮರಗಳ ಆರೋಗ್ಯ ಅರಿತು ಅವುಗಳನ್ನು ಉಳಿಸುವ, ಬೆಳೆಸುವ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿದೆ. ಗಾಳಿ, ಮಳೆ ವೇಳೆ ಉರುಳಿ ಬಿದ್ದ ಜನರ ಜೀವಕ್ಕೆ ಅಪಾಯ ಹಾಗೂ ಆಸ್ತಿ ಪಾಸ್ತಿಯ ಹಾನಿಯನ್ನು ತಪ್ಪಿಸಲು ಸಾಧ್ಯವಾಗಲಿದೆ. ಭವಿಷ್ಯದಲ್ಲಿ ಬೆಳೆಸಬೇಕಾದ ಮರಗಳ ಕುರಿತು ಸೂಕ್ತ ನಿರ್ಧಾರ, ನೀತಿಗಳನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದು ಪ್ರಸ್ತಾವನೆಯಲ್ಲಿ ಐಡಬ್ಲ್ಯುಎಸ್‌ಟಿ ತಿಳಿಸಿದೆ.

ತಂತ್ರಜ್ಞಾನ ಬಳಕೆ

ಮೇಲ್ನೋಟಕ್ಕೆ ಅಪಾಯಕಾರಿ ಎನಿಸುವ ಮರಗಳಿಗೆ ಹಾನಿ ಮಾಡದೆಯೇ, ಅವುಗಳ ಆಂತರಿಕ ಸ್ಥಿತಿಯನ್ನು ಅರಿಯಲು ರೆಸಿಸ್ಟೋಗ್ರಾಫ್, ಸೋನಿಕ್ ಟೊಮೊಗ್ರಫಿ ಹಾಗೂ ಎಲೆಕ್ಟ್ರಿಕಲ್ ರೆಸಿಸ್ಟೆನ್ಸ್ ಟೊಮೊಗ್ರಫಿ ತಂತ್ರಜ್ಞಾನ ಬಳಸಲಾಗುತ್ತದೆ. ಇದರಿಂದ ಮರದ ಕಾಂಡದ ಒಳಗೆ ಪೊಳ್ಳಾಗಿದೆಯೇ ಅಥವಾ ದುರ್ಬಲವಾಗಿದೆಯೇ ಎಂಬುದನ್ನು ನಿಖರವಾಗಿ ತಿಳಿಯಲು ಸಾಧ್ಯವಾಗಲಿದೆ ಎಂದು ಜಿಬಿಎ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಸುದರ್ಶನ್ ತಿಳಿಸಿದರು.

5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ತಲಾ 300 ಮರಗಳಂತೆ ಆಯ್ದ 1500 ಮರಗಳ ಪರೀಕ್ಷೆ ನಡೆಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಮರಗಳ ಪರೀಕ್ಷೆಗೆ ಆಗುವ ವೆಚ್ಚ ದುಬಾರಿಯಾಗಿದೆ. ಹೀಗಾಗಿ, ಅದನ್ನು ಗಣನೀಯವಾಗಿ ಕಡಿಮೆ ಮಾಡಬೇಕು ಎಂದು ಕೋರಲಾಗಿದೆ. ಈ ವಿಚಾರವಾಗಿ ಆಯಾ ಪಾಲಿಕೆಗಳೇ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತವೆ ಎಂದು ಸುದರ್ಶನ್ ಹೇಳಿದರು.

ಮರಕ್ಕೆ 30,000 ರು. ವೆಚ್ಚ

ಒಂದು ಮರದ ಪರೀಕ್ಷೆಗೆ ಸರಾಸರಿ 30,000 ರು. ವೆಚ್ಚವಾಗುತ್ತದೆ. ಇದು ಅತ್ಯಂತ ದುಬಾರಿಯಾಗುತ್ತದೆ. ಹೀಗಾಗಿ, ಈ ವೆಚ್ಚವನ್ನು ಕಡಿಮೆ ಮಾಡಿಕೊಳ್ಳುವಂತೆ ಮರ ವಿಜ್ಞಾನ ಸಂಸ್ಥೆಗೆ ಜಿಬಿಎ ಅರಣ್ಯ ಇಲಾಖೆಯಿಂದ ಕೋರಲಾಗಿದೆ.

ನಗರದಲ್ಲಿ 15 ಲಕ್ಷ ಮರಗಳು

ನಗರದಲ್ಲಿ ಸಾರ್ವಜನಿಕ ರಸ್ತೆಗಳು, ಉದ್ಯಾನಗಳಲ್ಲಿ ಸುಮಾರು ಏಳುವರೆ ಲಕ್ಷ ಮರಗಳು ಇರುವುದನ್ನು ಮರ ಗಣತಿ ಮೂಲಕ ಪತ್ತೆ ಮಾಡಲಾಗಿದ್ದು, ಗಣತಿ ಕಾರ್ಯ ಪ್ರಗತಿಯಲ್ಲಿದೆ. ಇದರ ಜೊತೆಗೆ ಖಾಸಗಿ ಸ್ಥಳಗಳು, ಸೇನಾ ಸ್ಥಳಗಳನ್ನು ಪರಿಗಣಿಸಿದರೆ ಸುಮಾರು 15 ಲಕ್ಷ ಮರಗಳು ಇರಬಹುದು ಎಂದು ಅಂದಾಜಿಸಲಾಗಿದೆ ಎಂದು ಡಿಸಿಎಫ್‌ ಸುದರ್ಶನ್ ತಿಳಿಸಿದರು.

PREV
Read more Articles on
click me!

Recommended Stories

ಬೆಂಗಳೂರು: ಹಲಸಿನ ಹಣ್ಣಿನ ಆಸೆಗಾಗಿ ಮರ ಹತ್ತಿದ ಪ್ರಶಸ್ತಿ ವಿಜೇತ ಬಳ್ಳಾರಿ ಮೂಲದ ಜಿಕೆವಿಕೆ ಕೃಷಿ ವಿದ್ಯಾರ್ಥಿ ಸಾವು!
ಸಿಮ್ ಸ್ವಾಪ್ ವಂಚನೆ, ಬಿಎಸ್‌ಎನ್‌ಎಲ್‌ಗೆ ₹55.5 ಲಕ್ಷ ದಂಡ: ಕರ್ನಾಟಕ ಹೈಕೋರ್ಟ್ ಐತಿಹಾಸಿಕ ತೀರ್ಪು!