ವಾಯು ಮಾಲಿನ್ಯಕ್ಕೆ ಬೆಂಗಳೂರು ಟೆಕ್ಕಿಯ ಸ್ಮಾರ್ಟ್ ಪರಿಹಾರ; 15 ಲಕ್ಷ ಜನರ ಉಸಿರಾಟಕ್ಕೆ ಆಸರೆಯಾದ ಹೊಸ ತಂತ್ರಜ್ಞಾನ

Published : Nov 14, 2026, 04:04 PM IST
Bengaluru Startup Converts Office ACs into Air Purifiers

ಸಾರಾಂಶ

ಬೆಂಗಳೂರಿನ 'ಕ್ಲೈರ್ಕೋ' (Clairco) ಸ್ಟಾರ್ಟ್ಅಪ್ ದುಬಾರಿ ಏರ್ ಪ್ಯೂರಿಫೈಯರ್‌ಗಳ ಬದಲು ಎಸಿಗಳನ್ನೇ ಸ್ಮಾರ್ಟ್ ಏರ್ ಪ್ಯೂರಿಫೈಯರ್‌ಗಳನ್ನಾಗಿ ಬದಲಾಯಿಸುತ್ತಿದೆ. ನ್ಯಾನೋ-ಫಿಲ್ಟರ್, IoT ಮತ್ತು AI ತಂತ್ರಜ್ಞಾನ ಬಳಸಿ ಶುದ್ಧ ಗಾಳಿ ನೀಡುವುದರ ಜೊತೆಗೆ ವಿದ್ಯುತ್ ಉಳಿತಾಯವನ್ನೂ ಮಾಡುತ್ತಿದೆ.

ಬೆಂಗಳೂರು: ಇವತ್ತು ದೊಡ್ಡ ದೊಡ್ಡ ಸಿಟಿಗಳಲ್ಲಿ ವಾಯು ಮಾಲೀನ್ಯ ದೊಡ್ಡ ತಲೆನೋವು ತಂದಿಟ್ಟಿದೆ. ಬೆಂಗಳೂರು, ದೆಹಲಿ ಹಾಗೂ ಮುಂಬೈನಂಥ ಸಿಟಿಗಳಲ್ಲಿ ವಾಯು ಮಾಲಿನ್ಯ ಕೆಟ್ಚ ಪರಿಣಾಮ ಬೀರುತ್ತಿದೆ. ಕೇವಲ ಬೀದಿಯ ಗಾಳಿ ಮಾತ್ರವಲ್ಲ, ದೊಡ್ಡ ದೊಡ್ಡ ಕಚೇರಿಗಳು, ಮಾಲ್‌ಗಳು ಮತ್ತು ಐಟಿ ಪಾರ್ಕ್‌ಗಳ ಒಳಗಿನ ಗಾಳಿಯೂ ಅನೇಕ ಬಾರಿ ಕಲುಷಿತಗೊಳ್ಳುತ್ತದೆ. ಇದನ್ನು ಶುದ್ಧೀಕರಿಸಲೆಂದೇ Air Purifiers ಮಾರುಕಟ್ಟೆಯಲ್ಲಿವೆ.

ಆದರೆ ದುಬಾರಿ ಬೆಲೆಯ ಏರ್ ಪ್ಯೂರಿಫೈಯರ್‌ಗಳನ್ನು ಖರೀದಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ಇದನ್ನು ಮನಗಂಡ ಬೆಂಗಳೂರಿನ ಸ್ಟಾರ್ಟ್‌ಅಪ್ ಒಂದು ಎಸಿಗಳನ್ನೇ (AC) ಸ್ಮಾರ್ಟ್ ಏರ್ ಪ್ಯೂರಿಫೈಯರ್‌ಗಳನ್ನಾಗಿ ಬದಲಿಸಿ ಸಕ್ಸಸ್ ಕಾಣ್ತಿದೆ. ವರದಿಗಳ ಪ್ರಕಾರ ಪ್ರತಿದಿನ ಬರೋಬ್ಬರಿ 15 ಲಕ್ಷ ಜನರಿಗೆ ಶುದ್ಧ ಗಾಳಿ ಉಸಿರಾಡಲು ಸಹಾಯ ಮಾಡುತ್ತಿದೆ.

ಯಾವುದು ಆ ಕಂಪನಿ?

ಆ ಕಂಪನಿಯ ಹೆಸರು ‘ಕ್ಲೈರ್ಕೋ’ (Clairco). ಇದನ್ನು ಆಯುಷ್ ಝಾ ಅನ್ನೋ ಬೆಂಗಳೂರಿನಲ್ಲಿ 2018ರಲ್ಲಿ ಹುಟ್ಟುಹಾಕಿದರು. ಈ ಕ್ಲೀನ್-ಟೆಕ್ ಸ್ಟಾರ್ಟ್‌ಅಪ್ ಪ್ರಾರಂಭಿಸಲು ಬಲವಾದ ಕಾರಣ ಕೂಡ ಇದೆ. ಆಯುಷ್ ಝಾ ಅವರು 2017ರಲ್ಲಿ ದೆಹಲಿಯಲ್ಲಿದ್ದರು. ಈ ವೇಳೆ ತೀವ್ರ ವಾಯು ಮಾಲಿನ್ಯದಿಂದಾಗಿ ಆಸ್ಪತ್ರೆ ಸೇರಿದ್ದರು. ಬಳಿಕ ಮನೆಗೆ ಏರ್ ಪ್ಯೂರಿಫೈಯರ್ ಹಾಕಿಸಲು ಮುಂದಾಗಿದ್ದರು. ಆದರೆ ಅದಕ್ಕೆ ಬರೋಬ್ಬರಿ ಎರಡು ಲಕ್ಷ ರೂಪಾಯಿ ಎಂದು ತಿಳಿಯಿತು. ಇಷ್ಟೊಂದು ದುಬಾರಿ ಆದರೆ ಜನ ಹೇಗೆ ಇದನ್ನು ಕೊಂಡುಕೊಳ್ಳುತ್ತಾರೆ? ಇದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಬೇಕಲ್ಲ ಎಂದು ಪ್ಲಾನ್ ಮಾಡಿದರು. ಅಂತೆಯೇ ಮನೆಯಲ್ಲಿದ್ದ ಎಸಿಗೆ ಗಾಳಿ ಶುದ್ಧೀಕರಿಸುವ ಫಿಲ್ಟರ್‌ಗಳನ್ನು ಜೋಡಿಸಿದರು. ಈ ಸರಳ ಪ್ರಯೋಗದಲ್ಲಿ ಅವರು ಯಶಸ್ಸು ಕಂಡರು. ನಂತರ Clairco ಹುಟ್ಟುಹಾಕಿದರು.

Clairco ಹೇಗೆ ಕೆಲಸ ಮಾಡುತ್ತದೆ?

Retrofit Nano-Filters: ಎಸಿ ಯುನಿಟ್‌ಗಳ ಒಳಗೆ ವಿಶೇಷವಾದ ‘ಲೋ-ಡ್ರ್ಯಾಗ್ ನ್ಯಾನೋ-ಟೆಕ್’ ಮತ್ತು ಸೂಕ್ಷ್ಮ ಧೂಳಿನ ಫಿಲ್ಟರ್‌ಗಳನ್ನು ಅಳವಡಿಸಲಾಗುತ್ತದೆ. ಇವು ಗಾಳಿಯ ಹರಿವಿಗೆ ಯಾವುದೇ ಅಡ್ಡಿಯಾಗದಂತೆ ಗಾಳಿಯಲ್ಲಿರುವ ಅಪಾಯಕಾರಿ PM2.5, PM10 ಧೂಳಿನ ಕಣಗಳು, ಹಾನಿಕಾರಕ ಅನಿಲಗಳು (VOCs) ಮತ್ತು ರೋಗಾಣುಗಳನ್ನು ಸಂಪೂರ್ಣವಾಗಿ ತಡೆದು ಶುದ್ಧ ಗಾಳಿ ನೀಡುತ್ತವೆ.

IoT ಮತ್ತು AI ಸ್ಮಾರ್ಟ್ ಸೆನ್ಸಾರ್‌ಗಳು: ಕೇವಲ ಗಾಳಿ ಶುದ್ಧಗೊಳಿಸುವುದು ಮಾತ್ರವಲ್ಲ. ಕಂಪನಿಯು ತನ್ನದೇ ಆದ ವಿಶೇಷ ಸೆನ್ಸಾರ್‌ಗಳನ್ನು ಬಳಸುತ್ತದೆ. ಗಾಳಿಯ ಗುಣಮಟ್ಟ ಅಳೆಯಲು sensi AIR, ಜನರ ಓಡಾಟವನ್ನು ಗಮನಿಸಲು ‘ಕ್ಲೈರ್ ಕೌಂಟ್’ (clair COUNT) ಹಾಗೂ ಜನರ ಇರುವಿಕೆಗೆ ತಕ್ಕಂತೆ ತಾಪಮಾನ ನಿಯಂತ್ರಿಸಲು clair POINT ತಂತ್ರಜ್ಞಾನ ಬಳಸಲಾಗುತ್ತದೆ. ಕಟ್ಟಡದ ಯಾವ ಭಾಗದಲ್ಲಿ ಎಷ್ಟು ಜನರಿದ್ದಾರೋ ಅಲ್ಲಿಗೆ ತಕ್ಕಂತೆ ತಂಪು ಮತ್ತು ಗಾಳಿಯ ಪ್ರಮಾಣವನ್ನು ಎಐ ಸ್ವಯಂಚಾಲಿತವಾಗಿ ಹೊಂದಾಣಿಕೆ ಮಾಡುತ್ತದೆ.

ವಿದ್ಯುತ್ ಉಳಿತಾಯ: ದೊಡ್ಡ ಕಟ್ಟಡಗಳ ಎಸಿ ವಿದ್ಯುತ್ ಬಳಕೆಯನ್ನು ಶೇಕಡಾ 35ರವರೆಗೆ ಕಡಿಮೆ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಕ್ಲೈರ್ಕೋದ ಇನ್ನೊಂದು ವಿಶೇಷತೆ ಏನೆಂದರೆ.. ಗ್ರಾಹಕರು ಯಂತ್ರೋಪಕರಣಗಳಿಗಾಗಿ ಆರಂಭದಲ್ಲಿ ಯಾವುದೇ ದೊಡ್ಡ ಮೊತ್ತದ ಹಣ ಪಾವತಿಸಬೇಕಾಗಿಲ್ಲ. ಕಂಪನಿಯು ಸಬ್‌ಸ್ಕ್ರಿಪ್ಷನ್ ಮತ್ತು ವಿದ್ಯುತ್ ಉಳಿತಾಯದ ಹಂಚಿಕೆ (Shared-savings) ಮಾದರಿಯಲ್ಲಿ ಸೇವೆ ನೀಡುತ್ತದೆ. ಇಂದು WeWork, CapitaLand, Brigade Group ಮತ್ತು JLL ನಂತಹ ದೇಶದ ಪ್ರಮುಖ ಐಟಿ ಪಾರ್ಕ್‌ಗಳು ಹಾಗೂ ಕಮರ್ಷಿಯಲ್ ಕಟ್ಟಡಗಳು ಕ್ಲೈರ್ಕೋ ತಂತ್ರಜ್ಞಾನವನ್ನು ಬಳಸುತ್ತಿವೆ. ದುಬಾರಿ ವೆಚ್ಚವಿಲ್ಲದೆ, ಇರುವ ವ್ಯವಸ್ಥೆಯಲ್ಲೇ ಶುದ್ಧ ಗಾಳಿ ಮತ್ತು ವಿದ್ಯುತ್ ಉಳಿತಾಯ ಎರಡನ್ನೂ ನೀಡುವ ಮೂಲಕ ಬೆಂಗಳೂರಿನ ಈ ಸ್ಟಾರ್ಟ್‌ಅಪ್ ಜರನ ಮೆಚ್ಚುಗೆಗೆ ಪಾತ್ರವಾಗಿದೆ.

PREV
Read more Articles on
click me!

Recommended Stories

ಬೆಂಗಳೂರಿನ ಕಸದಿಂದ ಶುದ್ಧ ಇಂಧನ ಮತ್ತು ಸಾವಯವ ಗೊಬ್ಬರ: ₹123 ಕೋಟಿ ವೆಚ್ಚದಲ್ಲಿ ಬೃಹತ್ ಬಯೋಗ್ಯಾಸ್ ಘಟಕ ಸ್ಥಾಪನೆಗೆ ಗೇಲ್ ಪ್ರಸ್ತಾಪ
ಟ್ರಾಫಿಕ್ ಫೈನ್ ತಪ್ಪಿಸಿಕೊಳ್ಳಲು ಹೊಸ ಕರಾಮತ್ತು; ಕ್ಯಾಮೆರಾದಿಂದ ಬಚಾವ್ ಆಗಲು ಚಾಲಾಕಿತನ