ಅಕ್ರಮ 6 ಅಂತಸ್ತಿನ ಕಟ್ಟಡ: GBA, BESCOM ಅಧಿಕಾರಿಗಳಿಗೆ ಸಮನ್ಸ್ ನೀಡಿದ ಲೋಕಾಯುಕ್ತ

Published : Nov 14, 2026, 08:26 AM IST
Bengaluru

ಸಾರಾಂಶ

ಬೆಂಗಳೂರಿನ ಕಲ್ಯಾಣನಗರದಲ್ಲಿ ಯಾವುದೇ ಪರವಾನಗಿ ಹಾಗೂ ನಕ್ಷೆ ಇಲ್ಲದೆ 6 ಅಂತಸ್ತಿನ ಬೃಹತ್ ಕಟ್ಟಡ ನಿರ್ಮಿಸಲಾಗಿದೆ. ಈ ಅಕ್ರಮಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ ಬೆಸ್ಕಾಂ ಹಾಗೂ ಜಿಬಿಎ ಅಧಿಕಾರಿಗಳಿಗೆ ಲೋಕಾಯುಕ್ತರು ಸಮನ್ಸ್ ಜಾರಿ ಮಾಡಿದ್ದಾರೆ. ನವೆಂಬರ್ 18ರಂದು ವಿಚಾರಣೆಗೆ ಖುದ್ದಾಗಿ ಹಾಜರಾಗಲು ಸೂಚಿಸಲಾಗಿದೆ.

ಬೆಂಗಳೂರು: ಯಾವುದೇ ಅನುಮತಿಯನ್ನು ಪಡೆಯದೆ ಕಲ್ಯಾಣನಗರದಲ್ಲಿ 6 ಅಂತಸ್ತಿನ ಬೃಹತ್‌ ಕಟ್ಟಡವನ್ನು ನಿರ್ಮಿಸಲಾಗಿದ್ದು, ಅಧಿಕಾರಿಗಳ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಿಬಿಎ ಮತ್ತು ಬೆಸ್ಕಾಂ ಅಧಿಕಾರಿಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ್‌ ಅವರು ಸಮನ್ಸ್‌ ಜಾರಿ ಮಾಡಿದ್ದಾರೆ.

ಮಂಜೂರಾದ ನಕ್ಷೆಯನ್ನು ಪಡೆಯದೆ 6 ಅಂತಸ್ತಿನ ಕಟ್ಟಡ

ನಗರದ ಚೆಳಕೆರೆ ಗ್ರಾಮದ, ಕಲ್ಯಾಣನಗರ ಅಂಚೆ ವ್ಯಾಪ್ತಿಯ ಆಸ್ತಿ ಸಂಖ್ಯೆ-3, ಖಾತಾ ಸಂಖ್ಯೆ 89/1/3ರಲ್ಲಿ ಯಾವುದೇ ಕಟ್ಟಡ ನಿರ್ಮಾಣ ಪರವಾನಗಿ ಹಾಗೂ ಮಂಜೂರಾದ ನಕ್ಷೆಯನ್ನು ಪಡೆಯದೆ 6 ಅಂತಸ್ತಿನ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಕಟ್ಟಡ ನಿರ್ಮಾಣಕ್ಕೆ ಯಾವುದೇ ಮಂಜೂರಾದ ಕಟ್ಟಡದ ನಕ್ಷೆ ಇಲ್ಲ ಎಂಬುದನ್ನು ಜಿಬಿಎ ಎಂಜಿನಿಯರ್‌ ಅರ್ಪಿತಾ ಅವರು ಲೋಕಾಯುಕ್ತರ ಮುಂದೆ ಒಪ್ಪಿಕೊಂಡಿದ್ದಾರೆ. ಅಲ್ಲದೇ ಕಟ್ಟಡದ ನಿರ್ಮಾಣ ಕಾರ್ಯವನ್ನು ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದನ್ನು ತಿಳಿಸಿದ್ದಾರೆ.

ಬೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ ಹಾಗೂ ಸಹಾಯಕ ಅಭಿಯಂತರ ಮುನಿರಾಜು ಅವರು ಸೆ.28 ರಂದು ಆ ಕಟ್ಟಡದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿರುವುದಾಗಿ ತಿಳಿಸಿದ್ದಾರೆ. ಆದರೆ, ಕಟ್ಟಡದ ಮಾಲೀಕರು ನ್ಯಾಯಾಲಯದಿಂದ ಮಧ್ಯಂತರ ಆದೇಶವನ್ನು ಪಡೆದು ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ತಡೆಯಾಜ್ಞೆ ತಂದಿರುವುದಾಗಿ ಅವರು ತಿಳಿಸಿದ್ದಾರೆ.

ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಪರವಾನಗಿ ಅಥವಾ ಮಂಜೂರಾದ ನಕ್ಷೆಯನ್ನು ಪರಿಶೀಲಿಸದೆ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಲ್ಪಿಸಿರುವುದು ಸಹ ಲೋಕಾಯುಕ್ತರ ಗಮನಕ್ಕೆ ಬಂದಿದೆ. ಈ ಪ್ರಕರಣದಲ್ಲಿ ಜಿಬಿಎ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇತರ ಅಧಿಕಾರಿಗಳು ಶಾಮೀಲಾತಿ ಇರುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಜಿಬಿಎ ಮಹದೇವಪುರ ವಿಭಾಗದ ಆಯುಕ್ತರು, ಕೆ.ಆರ್.ಪುರ ವಲಯದ ಮುಖ್ಯ ಅಭಿಯಂತರರು, ಬೆಸ್ಕಾಂನ ಉತ್ತರ ವಲಯದ ಮುಖ್ಯ ಅಭಿಯಂತರರು ಹಾಗೂ ಪ್ರಸ್ತುತ ಹೆಣ್ಣೂರು ಉಪವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್ ಗಿರಿ ಮತ್ತು ಸಹಾಯಕ ಅಭಿಯಂತರ ಅಕ್ಷಯ್ ಅವರಿಗೆ ಸಮನ್ಸ್ ಜಾರಿಗೊಳಿಸಿ, ನ.18ರಂದು ಲೋಕಾಯುಕ್ತರ ಮುಂದೆ ಖುದ್ದಾಗಿ ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಆದೇಶಿಸಿದ್ದಾರೆ. ಪ್ರಕರಣದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯಲೋಪ ಹಾಗೂ ಆಡಳಿತಾತ್ಮಕ ವೈಫಲ್ಯದ ಕುರಿತು ಮುಂದಿನ ವಿಚಾರಣೆ ಕೈಗೊಳ್ಳಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಲೋಕಾಯುಕ್ತರು ತಿಳಿಸಿದ್ದಾರೆ.

PREV
Read more Articles on
click me!

Recommended Stories

ಮಗಳಿಗೆ ಮೋದಿ ತೋರಿಸಲು, ತಲೆ ಮೇಲೆ ನಿಲ್ಲಿಸಿಕೊಂಡ ಅಪ್ಪ! ಈ ದಿನದ ಬೆಂಗಳೂರಿನ ಬೆಸ್ಟ್ ವಿಡಿಯೋ!
ಸಂತ ಸೇವಾಲಾಲ್ ಮಹಾಮಠಕ್ಕೆ ಹೊಸ ಸಾರಥಿ: ಅವಿರೋಧವಾಗಿ ಅಧ್ಯಕ್ಷರಾದ ಶಾಸಕ ಪ್ರಭು ಚವ್ಹಾಣ!