ಈಜಿಪ್ಟ್‌ ಮಮ್ಮಿ ಮಾದರಿ ಬೆಂಗಳೂರಿನ ಡ್ಯಾಡಿ!

By Kannadaprabha News  |  First Published Nov 3, 2019, 8:18 AM IST

ಮೃತ ವ್ಯಕ್ತಿಯ ಶರೀರವನ್ನು ನೂರಾರು ವರ್ಷಗಳ ಕಾಲ ಸಂರಕ್ಷಿಸುವ ವಿಶ್ವದಲ್ಲೇ ವಿನೂತನವಾದ ‘ಮುಂಬಾಲ್ಮಿಂಗ್‌’ ಎಂಬ ವಿಧಾನವನ್ನು ಕನ್ನಡ ನಾಡಿನ ವೈದ್ಯರೊಬ್ಬರು ಆವಿಷ್ಕಾರ ಮಾಡಿದ್ದಾರೆ. 


ಬೆಂಗಳೂರು [ನ.03]:  ಮೃತ ವ್ಯಕ್ತಿಯ ಶರೀರವನ್ನು ನೂರಾರು ವರ್ಷಗಳ ಕಾಲ ಸಂರಕ್ಷಿಸುವ ವಿಶ್ವದಲ್ಲೇ ವಿನೂತನವಾದ ‘ಮುಂಬಾಲ್ಮಿಂಗ್‌’ ಎಂಬ ವಿಧಾನವನ್ನು ಕನ್ನಡ ನಾಡಿನ ವೈದ್ಯರೊಬ್ಬರು ಆವಿಷ್ಕಾರ ಮಾಡಿದ್ದಾರೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಕನ್ನಡ ನಾಡಿನ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಅವರು ಮತ್ಯಾರೂ ಅಲ್ಲ, ನಗರದ ಆಕ್ಸ್‌ಫರ್ಡ್‌ ಮೆಡಿಕಲ್‌ ಕಾಲೇಜಿನ ಫೊರೆನ್ಸಿಕ್‌ ವಿಭಾಗದ ಮುಖ್ಯಸ್ಥ ಡಾ.ದಿನೇಶ್‌ ರಾವ್‌. ಸತತ ಹದಿಮೂರು ವರ್ಷಗಳ ಸಂಶೋಧನೆಯ ಫಲವಾಗಿ ಈ ಸಾಧನೆ ಮೂಡಿಬಂದಿದೆ.

Tap to resize

Latest Videos

undefined

ಮೃತ ವ್ಯಕ್ತಿಯ ಶರೀರ ಸಂರಕ್ಷಣೆ ಹೊಸದೇನೂ ಅಲ್ಲ. ಈಜಿಪ್ಟ್‌, ಚಿಲಿ, ಇಟಲಿ ಸೇರಿದಂತೆ ವಿವಿಧ ದೇಶಗಳಲ್ಲಿ ಮೃತ ವ್ಯಕ್ತಿಯ ದೇಹವನ್ನು ನೂರಾರು ವರ್ಷಗಳಿಂದ ಸಂರಕ್ಷಿಸಲಾಗಿದೆ. ಭಾರತದಲ್ಲೂ ಗೋವಾ, ಶ್ರೀರಂಗಂ ಮೊದಲಾದ ಕಡೆ ಮೃತದೇಹಗಳ ಸಂರಕ್ಷಣೆ ಮಾಡಲಾಗಿದೆ. ಈಜಿಪ್ಟ್‌ ಉದಾಹರಣೆ ತೆಗೆದುಕೊಳ್ಳುವುದಾದರೆ ಅಲ್ಲಿ ಬೃಹತ್‌ ಗಾತ್ರದ ಪಿರಮಿಡ್‌ ಒಳಗೆ ಶವವನ್ನು ಇಡಲಾಗುತ್ತದೆ. ಇದು ಯಾರಿಗೂ ಗೋಚರಿಸುವುದಿಲ್ಲ. ಗೋಚರಿಸಿದರೂ, ಶವ ಯಥಾಸ್ಥಿತಿಯಲ್ಲಿರುವುದಿಲ್ಲ. ಮುಟ್ಟಿದರೆ ಪುಡಿಯಾಗುವಂತಿರುತ್ತದೆ. ಆದರೆ, ಡಾ

ದಿನೇಶ್‌ ರಾವ್‌ ಆವಿಷ್ಕರಿಸಿರುವ ಮುಂಬಾಲ್ಮಿಂಗ್‌ ವಿಧಾನದಲ್ಲಿ ಶವವನ್ನು ಎಲ್ಲಿ, ಹೇಗೆ ಬೇಕಾದರೂ ಸಂರಕ್ಷಿಸಿ ಇಡಬಹುದು. ಇದಕ್ಕೆ ಪ್ರತ್ಯೇಕವಾದ ವ್ಯವಸ್ಥೆಯೇನೂ ಅಗತ್ಯವಿಲ್ಲವೆಂಬುದು ವಿಶೇಷ.

ಈಗಾಗಲೇ ಎರಡು ವಿಧಾನ:

ಪ್ರಮುಖವಾಗಿ ಎರಡು ವಿಧಾನದಲ್ಲಿ ಮೃತದೇಹಗಳನ್ನು ಸಂರಕ್ಷಣೆ ಮಾಡಲಾಗುತ್ತದೆ. ಮೃತದೇಹಕ್ಕೆ ರಾಸಾಯನಿಕ ದ್ರಾವಣ ಸಿಂಪಡಿಸಿ ಕೋಲ್ಡ್‌ ಸ್ಟೋರೇಜ್‌ ಅಥವಾ ಕೋಲ್ಡ್‌ ಬಾಕ್ಸ್‌ನಲ್ಲಿ ಸಂರಕ್ಷಿಸುವುದು. ಇನ್ನೊಂದು ಫಾರ್ಮಾಲಿನ್‌ ದ್ರಾವಣದಲ್ಲಿ ಮುಳುಗಿಸುವ ಅಥವಾ ಶವಕ್ಕೆ ದ್ರಾವಣವನ್ನು ಸೇರಿಸಿ ಕಾಪಿಡುವುದು. ಇದಕ್ಕೆ ‘ಎಂಬಾಲ್ಮಿಂಗ್‌’ ಎಂದು ಕರೆಯಲಾಗುತ್ತದೆ.

ಈ ಎಲ್ಲ ಸಂರಕ್ಷಣಾ ವಿಧಾನಗಳಿಗೂ ಡಾ.ದಿನೇಶ್‌ ರಾವ್‌ ಆವಿಷ್ಕಾರ ಮಾಡಿದ ವಿಧಾನಕ್ಕೂ ಹಲವು ವ್ಯತ್ಯಾಸಗಳಿವೆ. ಎಂಬಾಲ್ಮಿಂಗ್‌ ವಿಧಾನದಲ್ಲಿ ಸಂರಕ್ಷಿತ ಮೃತದೇಹಗಳನ್ನು ಕೋಲ್ಡ್‌ ಸ್ಟೋರೇಜ್‌ ಅಥವಾ ಕೋಲ್ಡ್‌ ಬಾಕ್ಸ್‌ಗಳಲ್ಲಿ ಮಲಗಿದ ಭಂಗಿಯಲ್ಲಿ ಇರಿಸಲಾಗುತ್ತದೆ. ಆದರೆ, ಈ ವಿನೂತನ ವಿಧಾನ ಮುಂಬಾಲ್ಮಿಂಗ್‌ನಲ್ಲಿ ಕೋಲ್ಡ್‌ ಸ್ಟೋರೇಜ್‌ ಅಥವಾ ಕೋಲ್ಡ್‌ ಬಾಕ್ಸ್‌ ಅಗತ್ಯವಿಲ್ಲ. ಮೃತದೇಹವನ್ನು ಮಲಗಿಸಬಹುದು, ಗೊಂಬೆಯ ಹಾಗೆ ಕೂರಿಸಬಹುದು. ಮತ್ತೊಂದು ವಿಶೇಷವೆಂದರೆ, ಈ ವಿಧಾನದಲ್ಲಿ ಮೃತ ವ್ಯಕ್ತಿಯ ದೇಹದ ಎಲ್ಲ ಅಂಗಾಂಗಗಳನ್ನು ಇದ್ದ ಹಾಗೆ ಸಂರಕ್ಷಿಸಬಹುದು.

ಪ್ರಯೋಗ ನಿರೀಕ್ಷೆಗೂ ಮೀರಿ ಯಶಸ್ವಿ:

ಕಳೆದ ಹದಿಮೂರು ವರ್ಷಗಳಿಂದ ಮೃತದೇಹ ಸಂರಕ್ಷಣೆ ಕುರಿತಂತೆ ಪ್ರಾಣಿ, ಪಕ್ಷಿಗಳ ಮೇಲೆ ಪ್ರಯೋಗಗಳನ್ನು ಮಾಡುತ್ತಿದ್ದೆ. 2018ರ ಜನವರಿಯಲ್ಲಿ 60 ವಯಸ್ಸಿನ ಅನಾಥ ಶವವೊಂದು ಸಿಕ್ಕಿತು. ಆ ಶವದ ಮೇಲೆ ಆವಿಷ್ಕಾರ ಪ್ರಯೋಗಿಸಿದೆ. ಇದು ನಾನು ಅಂದುಕೊಂಡಿದ್ದಕ್ಕಿಂತ ಎರಡು ಪಟ್ಟು ಯಶಸ್ವಿಯಾಗಿದೆ. ಮೃತದೇಹಗಳನ್ನು ಸಾಮಾನ್ಯವಾಗಿ ಮಣ್ಣಿನಲ್ಲಿ ಹೂಳುತ್ತಾರೆ ಅಥವಾ ಸುಡುತ್ತಾರೆ. ತಮ್ಮ ಈ ನೂತನ ಆವಿಷ್ಕಾರದಿಂದ ಮಹಾನ್‌ ಸಾಧಕರ ಮೃತದೇಹಗಳನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಆ ವ್ಯಕ್ತಿಯನ್ನು ಪರಿಚಯಿಸಬಹುದು. ಅಂತೆಯೇ ತಮ್ಮ ಪ್ರೀತಿಪಾತ್ರರ ದೇಹಗಳನ್ನೂ ಜನರು ಸಂರಕ್ಷಿಸಬಹುದು. ಈ ವಿಧಾನದಲ್ಲಿ ದೇಹ ಕೊಳೆಯುವುದಿಲ್ಲ. ಕೆಟ್ಟವಾಸನೆ ಬರುವುದಿಲ್ಲ ಎಂದು ಹೇಳಿದ ಡಾ.ದಿನೇಶ್‌ ರಾವ್‌, ತಾವು ಕಳೆದ 11 ತಿಂಗಳಿಂದ ಸಂರಕ್ಷಿಸಿರುವ ಮೃತದೇಹವನ್ನು ತೋರಿಸಿದರು. ತಾವು ಸಂರಕ್ಷಿಸಿರುವ ಈ ಮೃತದೇಹ ತಮಗೆ ಸಿಕ್ಕಾಗ 42.5 ಕೆ.ಜಿ. ತೂಕವಿತ್ತು. ಪ್ರಸ್ತುತ ಅದು 40 ಕೆ.ಜಿ. ಇದೆ ಎಂದರು.

ಸತ್ತ ಹಾವು, ಪಾರಿವಾಳ ಶರೀರದ ಸಂರಕ್ಷಣೆ:

ಡಾ.ದಿನೇಶ್‌ ರಾವ್‌ ಅವರು ಕೇವಲ ವ್ಯಕ್ತಿಯ ಮೃತದೇಹ ಮಾತ್ರವಲ್ಲ ಪ್ರಾಣಿ, ಪಕ್ಷಿಗಳ ಶರೀರವನ್ನು ಸಂರಕ್ಷಿಸುವ ವಿಧಾನವನ್ನೂ ಆವಿಷ್ಕರಿಸಿದ್ದಾರೆ. ಮಂಡಲದ ಹಾವು ಹಾಗೂ ಪಾರಿವಾಳದ ಮೇಲೆ ಮಾಡಿರುವ ಪ್ರಯೋಗ ಯಶಸ್ವಿಯಾಗಿದೆ. ಪ್ರಾಣಿ, ಪಕ್ಷಿಗಳನ್ನು ಹೆಚ್ಚು ಪ್ರೀತಿಸುವವರು ಅವು ಸತ್ತಾಗ ಬಹಳ ನೋವು ವ್ಯಕ್ತಪಡಿಸುತ್ತಾರೆ. ಸತ್ತಾಗ ಸುಡುವ ಅಥವಾ ಹೂಳುವ ಬದಲು ಈ ನೂತನ ತಂತ್ರಜ್ಞಾನದ ಮೂಲಕ ಪ್ರಾಣಿ, ಪಕ್ಷಿಗಳ ಶರೀರವನ್ನು ಸಂರಕ್ಷಿಸಿ ಜತೆಯಲ್ಲೇ ಇರಿಸಿಕೊಳ್ಳಬಹುದು ಎನ್ನುತ್ತಾರೆ ಅವರು.

ಸುವರ್ಣ ನ್ಯೂಸ್‌ನಿಂದ ಬೆಳಕಿಗೆ

ವಿಶ್ವಮಟ್ಟದ ಸಾಧನೆ ಮಾಡಿಯೂ ಎಲೆಮರೆ ಕಾಯಿಯಂತಿದ್ದ ಹೆಮ್ಮೆಯ ಕನ್ನಡಿಗ ಡಾ.ದಿನೇಶ್‌ ರಾವ್‌ ಅವರನ್ನು ‘ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ’ ಗುರುತಿಸಿ, ವಿಶೇಷ ಕಾರ್ಯಕ್ರಮ ಮಾಡಿ ಪ್ರಸಾರ ಮಾಡುವ ಮುಖಾಂತರ ಸಾಧನೆಯನ್ನು ಜಗತ್ತಿಗೆ ಪರಿಚಯಿಸಿದೆ.

ಸಿದ್ಧಗಂಗಾ ಶ್ರೀಗಳ ದೇಹ ಸಂರಕ್ಷಣೆಗೆ ಪ್ರಯತ್ನ

ಸಿದ್ಧಗಂಗಾ ಶ್ರೀಗಳು ಶಿವೈಕ್ಯರಾದ ಸಂದರ್ಭದಲ್ಲಿ ವಿನೂತನ ವಿಧಾನ ಆವಿಷ್ಕಾರವಾಗಿತ್ತು. ಈ ವೇಳೆ ಶ್ರೀಗಳ ಪಾರ್ಥಿವ ಶರೀರ ಸಂರಕ್ಷಿಸಲು ಪ್ರಯತ್ನಿಸಿದ್ದೆ. ಆ ಸಂದರ್ಭದಲ್ಲಿ ಸಂಬಂಧಪಟ್ಟವರನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹಿಂದೆ ಸರಿದಿದ್ದೆ ಎಂದು ಡಾ.ದಿನೇಶ್‌ ರಾವ್‌ ಹೇಳಿದರು.

ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಸಂಶೋಧನೆ ನಡೆಸಿದ್ದೇನೆ. ನಿರೀಕ್ಷೆಗೂ ಮೀರಿದ ಯಶಸ್ಸು ಸಿಕ್ಕಿರುವುದರಿಂದ ಬಹಳ ಖುಷಿಯಾಗಿದೆ. ಈ ಸಂಶೋಧನೆಗೆ ಹಕ್ಕುಸ್ವಾಮ್ಯ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಪ್ರಯೋಗದ ಲಾಭ ಪಡೆಯಲು ಶ್ರೀಮಂತರು-ಬಡವರು ಎಂಬ ಭೇದವಿಲ್ಲ. ಅವರ ಅಗತ್ಯ, ಆರ್ಥಿಕ ಹಿನ್ನೆಲೆ ಎಲ್ಲವನ್ನೂ ಪರಿಗಣಿಸಿ ದರ ನಿಗದಿ ಮಾಡಲಾಗುವುದು.

- ಡಾ.ದಿನೇಶ್‌ ರಾವ್‌, ಮುಖ್ಯಸ್ಥ, ಫೊರೆನ್ಸಿಕ್‌ ವಿಭಾಗ, ಆಕ್ಸ್‌ಫರ್ಡ್‌ ಮೆಡಿಕಲ್‌ ಕಾಲೇಜು

ಏನಿದು ತಂತ್ರಜ್ಞಾನ?

ಸದ್ಯಕ್ಕೆ ಶವ ಸಂರಕ್ಷಿಸಿಡಲು ಎರಡು ತಂತ್ರ ಬಳಸಲಾಗುತ್ತದೆ. ಒಂದು, ಸೊನ್ನೆಯಿಂದ 4 ಡಿಗ್ರಿ ತಾಪದ ಶೀತಲೀಕರಣ ಘಟಕದಲ್ಲಿ ಇರಿಸುವುದು. ಇನ್ನೊಂದು, ಫಾರ್ಮಾಲಿನ್‌ ದ್ರಾವಣ ಹಾಕಿಡುವುದು. ಆದರೆ, ಈಗ ಆಕ್ಸ್‌ಫರ್ಡ್‌ ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ

ದಿನೇಶ್‌ ರಾವ್‌ ‘ಮುಂಬಾಲ್ಮಿಂಗ್‌’ ಎಂಬ ವಿನೂತನ ವಿಧಾನ ಆವಿಷ್ಕರಿಸಿದ್ದಾರೆ. ಇದಕ್ಕೆ ಯಾವುದೇ ರೀತಿಯ ವಿಶೇಷ ಪೆಟ್ಟಿಗೆ ಬೇಕಿಲ್ಲ. ಶವವನ್ನು ಮಲಗಿಸಬೇಕಿಲ್ಲ. ಶವದ ಎಲ್ಲ ಅಂಗಾಂಗಗಳನ್ನು ಇದ್ದ ಹಾಗೇ ಸಂರಕ್ಷಿಸಬಹುದು.

ಶವ ಸಂರಕ್ಷಣೆ ಹೇಗೆ?

ಮುಂಬಾಲ್ಮಿಂಗ್‌ ವಿಧಾನದಲ್ಲಿ ಮೃತದೇಹಗಳ ಸಂರಕ್ಷಣೆಗೆ ಕೆಲ ಗಿಡಮೂಲಿಕೆ ಜತೆಗೆ 16 ಬಗೆಯ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದರಲ್ಲಿ ವಿಷಕಾರಿ ರಾಸಾಯನಿಕಗಳು ಬಹಳ ಕಡಿಮೆ ಮಟ್ಟದಲ್ಲಿ ಇರುತ್ತವೆ. ಇದು ಅಂತಹ ದುಷ್ಪರಿಣಾಮ ಉಂಟುಮಾಡುವುದಿಲ್ಲ. ಇದರಲ್ಲಿ ಮನುಷ್ಯ, ಪ್ರಾಣಿ, ಪಕ್ಷಿಗಳ ಮೃತದೇಹಕ್ಕೆ ಪ್ರತ್ಯೇಕವಾದ ರಾಸಾಯನಿಕಗಳ ಮಿಶ್ರಣ ಬಳಕೆ ಮಾಡಲಾಗುತ್ತದೆ. ಮೃತದೇಹ ಸಂರಕ್ಷಣೆ ವೇಳೆ ನಾಲ್ಕು ಹಂತಗಳಲ್ಲಿ ರಾಸಾಯನಿಕ ಸಿಂಪಡಿಸಲಾಗುತ್ತದೆ. ಕೇವಲ ಅರ್ಧ ತಾಸಿನಲ್ಲಿ ಈ ಪ್ರಕ್ರಿಯೆ ಮುಗಿಯುತ್ತದೆ.

ಏನುಪಯೋಗ?

- ಮೃತದೇಹಗಳನ್ನು ದೀರ್ಘಕಾಲ ಅಂದರೆ ದಿನ, ತಿಂಗಳು, ವರ್ಷಗಳ ಕಾಲ ಸಂರಕ್ಷಿಸಬಹುದು

- ಮಹಾನ್‌ ಸಾಧಕರು, ಪ್ರೀತಿಪಾತ್ರರ ಮೃತದೇಹಗಳನ್ನು ದೀರ್ಘಕಾಲ ಸಂರಕ್ಷಿಸಬಹುದು

- ಮುಂದಿನ ಪೀಳಿಗೆಗೆ ಮಹಾನ್‌ ಸಾಧಕರನ್ನು ಅವರ ದೇಹಸಮೇತರಾಗಿ ಪರಿಚಯಿಸಬಹುದು

ನವೆಂಬರ್ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!