
ಬೆಂಗಳೂರು (ನ.20) ದೇಶವನ್ನೇ ಬೆಚ್ಚಿ ಬೀಳಿಸಿದ ಬೆಂಗಳೂರಿನ 7 ಕೋಟ ರೂಪಾಯಿ ರಾಬರಿ ಪ್ರಕರಣದ ತನಿಖೆ ತೀವ್ರಗೊಂಡಿದೆ. ಆದರೆ ಚಾಲಾಕಿ ಕಳ್ಳರು ತನಿಖೆ ಹಾದಿ ತಪ್ಪಿಸಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಅನ್ನೋದು ಬಹಿರಂಗವಾಗಿದೆ. ಕಾರಣ 7 ನಿಮಿಷದಲ್ಲಿ 7 ಕೋಟಿ ರೂಪಾಯಿ ರಾಬರಿ ಮಾಡಿದ ಗ್ಯಾಂಗ್ ಹಂತ ಹಂತದಲ್ಲಿ ತನಿಖೆ ಹಾದಿ ತಪ್ಪಿಸಲು ಹಾಗೂ ಪೊಲೀಸರ ಕೈಗೆ ಸಿಕ್ಕಿ ಬೀಳದಂತೆ ನೋಡಿಕೊಳ್ಳಲು ಭಾರಿ ಪ್ಲಾನ್ ಮಾಡಿದೆ. ಸಿಎಂಎಸ್ ವಾಹನ ಅಡ್ಡಗಟ್ಟಿ ಕಳ್ಳರು ಇನ್ನೋವಾ ವಾಹನದಲ್ಲಿ ಹಣ ತುಂಬಿ ಪರಾರಿಯಾಗಿದ್ದರು. ಇದೀಗ ಪೊಲೀಸರ ಇನ್ನೋವಾ ವಾಹನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇನ್ನೋವಾ ವಾಹನ ಖಾಲಿ ಖಾಲಿ. ಕಳ್ಳರು ಹಣದೊಂದಿಗೆ ಅದಾಗಲೇ ಪರಾರಿಯಾಗಿದ್ದಾರೆ.
ತನಿಖೆ ತೀವ್ರಗೊಳಿಸಿದ ಬೆಂಗಳೂರು ಪೊಲೀಸರು ಕಳ್ಳರ ಜಾಡು ಹಿಡಿದು ಬೆಂಗಳೂರಿನಿಂದ ಚಿತ್ತೂರಿಗೆ ತೆರಳಿದ್ದಾರೆ. ಆಂಧ್ರ ಪ್ರದೇಶದ ಗುಡಿ ಪಾಲದಲ್ಲಿ ಇನ್ನೋವಾ ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಗುಡಿಪಾಲದಲ್ಲಿ ಕಳ್ಳರು ಇನ್ನೋವಾ ಕಾರು ನಿಲ್ಲಿಸಿ ಕಾರಿನಲ್ಲಿದ್ದ ಹಣದೊಂದಿದೆ ಪರಾರಿಯಾಗಿದ್ದಾರೆ. ಚಿತ್ತೂರು ಪೊಲೀಸರ ಸಮ್ಮುಖದಲ್ಲಿ ಬೆಂಗಳೂರು ಪೊಲೀಸರು ಕಾರ್ ಸೀಜ್ ಮಾಡಿದ್ದಾರೆ.
ಗುಡಿಪಾಲ ಗಡಿ ಭಾಗಾಗಿದೆ. ಇಲ್ಲಿಂದ ತಮಿಳುನಾಡ ಗಡಿ ಕೇವಲ 15 ಕಿಲೋಮೀಟರ್ ಮಾತ್ರ ದೂರವಿದೆ. ಹೀಗಾಗಿ ಆರೋಪಿಗಳು ಗುಡಿಪಾಲದಲ್ಲಿ ಕಾರು ನಿಲ್ಲಿಸಿ ಹಣವನ್ನು ವಿಂಗಡಿ ತಮಿಳುನಾಡಿನ ವೆಲ್ಲೂರು ಮಾರ್ಗವಾಗಿ ಎಸ್ಕೇಪ್ ಆಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಗುಡಿಪಾಲ ಸುತ್ತಮುತ್ತಲ ಗ್ರಾಮದ ಜನರನ್ನ ಪೊಲೀಸರು ವಿಚಾರಿಸಿದ್ದಾರೆ. ಕಾರು ಬಂದ ಸಮಯ, ಈ ಕಾರಿನ ಕುರಿತು ಅದರಲ್ಲಿ ಬಂದ ಆರೋಪಿಗಳ ಕುರಿತು ನೋಡಿದ್ದೀರಾ, ಗಮನಿಸಿದ್ದೀರಾ ಎಂದು ಮಾಹಿತಿ ಕಲೆ ಹಾಕುವ ಪ್ರಯತ್ನ ಮಾಡಿದ್ದಾರೆ.ನಿನ್ನೆ ರಾತ್ರಿಯೇ ಆಂಧ್ರದ ಗುಡಿಪಾಲದಲ್ಲಿ ಇನೋವಾ ಕಾರನ್ನ ಬಿಟ್ಟು ಎಸ್ಕೇಪ್ ಆಗಿರುವ ಮಾಹಿತಿ ಲಭ್ಯವಿದೆ.
ಇನೋವಾ ಕಾರಿಗೆ ಯುಪಿ ರಿಜಿಸ್ಟ್ರೇಷನ್ ನ ನಕಲಿ ನಂಬರ್ ಪ್ಲೇಟ್ ಹಾಕಿರುವ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಕಳ್ಳರು ಬೆಂಗಳೂರಿನ ಡೈರಿ ಸರ್ಕಲ್, ದೊಮ್ಮಲೂರು, ಓಲ್ಡ್ ಮದ್ರಾಸ್ ರಸ್ತೆ, ಕೆ.ಆರ್.ಪುರಂ, ಹೊಸಕೋಟೆ ಮಾರ್ಗವಾಗಿ ಬೆಂಗಳೂರು ಚೆನ್ನೈ ಎಕ್ಸ್'ಪ್ರೆಸ್ ಹೈ ವೇ ಮೂಲಕ ಚಿತ್ತೂರಿಗೆ ಪ್ರಯಾಣ ಮಾಡಿದ್ದಾರೆ. ಈ ಭಾಗದ ಸಿಸಿಟಿವಿಯಲ್ಲಿ ಪೊಲೀಸರು ಕಾರಿನ ಚಲನೆ ಪತ್ತೆ ಹಚ್ಚಿದ್ದಾರೆ.ತಮಿಳುನಾಡಿನ ವೆಲ್ಲೂರಿನಲ್ಲಿ ಹಣವನ್ನ ಎಕ್ಸ್'ಚೇಂಜ್ ಮಾಡಿ ಎಸ್ಕೇಪ್ ಆಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪ್ರತ್ಯೇಕ ತಂಡಗಳಾಗಿ ಬೇರೆ ಬೇರೆ ಕಾರುಗಳಲ್ಲಿ ಎಸ್ಕೇಪ್ ಆಗಿರೋ ಶಂಕೆ ವ್ಯಕ್ತವಾಗಿದೆ.
ಸದ್ಯ ಬೇರೆ ಬೇರೆ ಕಾರುಗಳಲ್ಲಿ ಎಸ್ಕೇಪ್ ಆಗಿರೋ ಆರೋಪಿಗಳನ್ನ ಪತ್ತೆ ಹಚ್ಚೋದೆ ದೊಡ್ಡ ಸವಾಲು. ಸೂಕ್ತ ಸುಳಿವು ಸಿಗದ ಕಾರಣ ತನಿಖೆ ಮತ್ತಷ್ಟು ಕಠಿಣವಾಗಿದೆ. ಆಂಧ್ರ ಪ್ರದೇಶ, ತಮಿಳುನಾಡು ಮೂಲಕ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ತಂಡಗಳಾಗಿ ಅಥವಾ ಒಬ್ಬೊಬ್ಬರಾಗಿ ಎಸ್ಕೇಪ್ ಆಗಿದ್ದಾರೋ, ಯಾವ ತಡೆ ತೆರಳಿದ್ದಾರೆ, ಎಲ್ಲಿ ತರೆಮರೆಸಿಕೊಂಡಿದ್ದಾರೆ ಅನ್ನೋ ಕುರಿತು ತನಿಖೆ ನಡೆಯುತ್ತಿದೆ.