
ಬೆಂಗಳೂರಿನಲ್ಲಿ ಈಗ ನಾಯಿಗಳದ್ದೇ ಸುದ್ದಿ! ರಾಜಕೀಯ ಚುನಾವಣೆಗಳಂತೆ ಪ್ರಚಾರ, ಬೆಂಬಲಿಗರ ಮನವಿ, ಮತಗಳ ಲೆಕ್ಕಾಚಾರ—ಆದರೆ ಇಲ್ಲಿ ಅಭ್ಯರ್ಥಿಗಳು ರಾಜಕಾರಣಿಗಳಲ್ಲ, ಮುದ್ದಾದ ನಾಯಿಗಳು! ನಗರದ ಅತ್ಯಂತ ಚೊಂಕಿ ಅಂದರೆ ದಪ್ಪನೆಯ ನಾಯಿಯನ್ನು ಆಯ್ಕೆ ಮಾಡುವ ವಿಶೇಷ ಸ್ಪರ್ಧೆ ಈಗ ಕುತೂಹಲದ ಘಟ್ಟ ತಲುಪಿದೆ. ಬರೋಬ್ಬರಿ 64 ನಾಯಿಗಳೊಂದಿಗೆ ಆರಂಭವಾದ ಈ ಸ್ಪರ್ಧೆಯಲ್ಲಿ ಇದೀಗ ಅಂತಿಮ ಸುತ್ತಿಗೆ ಉಳಿದಿರುವುದು ಕೇವಲ ಎರಡು ನಾಯಿಗಳು ಮಾತ್ರ!
64 ನಾಯಿಗಳ ನಡುವೆ ಭರ್ಜರಿ ಪೈಪೋಟಿ!
ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ವಿಶೇಷ ಸ್ಪರ್ಧೆಯ ಹೆಸರು 'ಫ್ಯಾಟ್ ಡಾಗ್ಸ್ ಆಫ್ ಬಿಎಲ್ಆರ್' (Fat Dogs of BLR). ನಗರದ ಅತ್ಯಂತ ದಪ್ಪ ನಾಯಿಗೆ ಕಿರೀಟ ತೊಡಿಸುವ ಉದ್ದೇಶದಿಂದ ಅಕ್ಟೋಬರ್ 1ರಂದು ಈ ಸ್ಪರ್ಧೆ ಆರಂಭವಾಯಿತು. ಒಟ್ಟು 64 ನಾಯಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ನಾಕೌಟ್ ಮಾದರಿಯಲ್ಲಿ ಸ್ಪರ್ಧೆ ನಡೆಯುತ್ತಿದ್ದು, ಪ್ರತಿ ಸುತ್ತಿನಲ್ಲೂ ಬೆಂಬಲಿಗರು ತಮ್ಮ ನೆಚ್ಚಿನ ನಾಯಿಗೆ ಮತ ಚಲಾಯಿಸುತ್ತಾರೆ. ಹೀಗೆ ಸ್ಪರ್ಧಿಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿದ್ದು, ಇದೀಗ ಕೇವಲ ಇಬ್ಬರು ಸ್ಪರ್ಧಿಗಳು ಮಾತ್ರ ಉಳಿದಿದ್ದಾರೆ. ಈ ಸ್ಪರ್ಧೆಯ ವಿಶೇಷವೆಂದರೆ, ನಾಯಿಗಳ ಪರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವೂ ಜೋರಾಗಿದೆ. ತಮ್ಮ ನೆಚ್ಚಿನ ನಾಯಿಯೇ ಗೆಲ್ಲಬೇಕು ಎಂದು ಹಲವರು ಮತ ಹಾಕುವಂತೆ ಮನವಿ ಮಾಡುತ್ತಿದ್ದಾರೆ. ಪ್ರಚಾರದ ಪೋಸ್ಟರ್ಗಳು ಮತ್ತು ಬೆಂಬಲಿಗರ ಉತ್ಸಾಹದಿಂದಾಗಿ ಈ ಸ್ಪರ್ಧೆಗೆ ಚುನಾವಣೆಯ ಕಳೆ ಬಂದಿದೆ.
ನಾಯಿಗಳಿಗೂ ಈಗ ಚುನಾವಣೆಯ ಕಾವು!
ಸಾಮಾನ್ಯವಾಗಿ ಚುನಾವಣೆ ಎಂದರೆ ರಾಜಕೀಯ ನಾಯಕರು, ಪ್ರಚಾರ ಸಭೆಗಳು, ಭರವಸೆಗಳು ಮತ್ತು ಮತಗಳ ಲೆಕ್ಕಾಚಾರ ನೆನಪಾಗುತ್ತದೆ. ಆದರೆ ಬೆಂಗಳೂರಿನ ಈ ಸ್ಪರ್ಧೆಯಲ್ಲಿ ನಾಯಿಗಳೇ ಅಭ್ಯರ್ಥಿಗಳು!
ಯಾವ ನಾಯಿಗೆ ಹೆಚ್ಚು ಬೆಂಬಲ ಸಿಗುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ನಡೆಯುತ್ತಿರುವ ಈ ಮತದಾನದ ಪ್ರಕ್ರಿಯೆ, ಸಾಕುಪ್ರಾಣಿಗಳ ಮೇಲಿನ ಪ್ರೀತಿ ಜನರನ್ನು ಹೇಗೆ ಒಗ್ಗೂಡಿಸಬಹುದು ಎಂಬುದಕ್ಕೂ ಉದಾಹರಣೆಯಾಗಿದೆ. ಈ ಉಪಕ್ರಮದ ಹಿಂದೆ ಪ್ರಾಣಿ ಕಲ್ಯಾಣ ಸಂಸ್ಥೆಯಾದ ಚಾರ್ಲೀಸ್ ಅನಿಮಲ್ ರೆಸ್ಕ್ಯೂ ಸೆಂಟರ್ (CARE), ಯುಪಿಐ ಪಾವತಿ ಅಪ್ಲಿಕೇಶನ್ ಫೇವ್ ಮತ್ತು ಸ್ಪರ್ಧೆಯ ವೆಬ್ಸೈಟ್ ನಿರ್ಮಿಸಲು ನೆರವಾದ ಎಮರ್ಜೆಂಟ್ ಸಂಸ್ಥೆ ಕೈಜೋಡಿಸಿವೆ.
ದೆಹಲಿಯಲ್ಲೂ ನಡೆದಿತ್ತು ಇದೇ ರೀತಿಯ ಸ್ಪರ್ಧೆ!
ಬೆಂಗಳೂರಿನಲ್ಲಿ ಈ ಸ್ಪರ್ಧೆ ಆರಂಭವಾಗುವುದಕ್ಕೂ ಮುನ್ನ ದೆಹಲಿಯಲ್ಲೂ 'ಫ್ಯಾಟ್ ಡಾಗ್ಸ್ ಆಫ್ ದೆಹಲಿ' ಎಂಬ ಸ್ಪರ್ಧೆ ಗಮನ ಸೆಳೆದಿತ್ತು. ರಾಷ್ಟ್ರ ರಾಜಧಾನಿ ಪ್ರದೇಶದ 64 ನಾಯಿಗಳು ಇದರಲ್ಲಿ ಭಾಗವಹಿಸಿದ್ದವು. ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ನೆಚ್ಚಿನ ನಾಯಿಗಳ ಪರವಾಗಿ ಪ್ರಚಾರ ನಡೆಸಿದ ಜನರು, ಅವುಗಳನ್ನು ಇಂಟರ್ನೆಟ್ ಸೆಲೆಬ್ರಿಟಿಗಳನ್ನಾಗಿ ಮಾಡಿದ್ದರು. ದೆಹಲಿಯ ಸ್ಪರ್ಧಿಗಳಲ್ಲಿ ಸಾಕೇತ್ನ 46 ಕೆಜಿ ತೂಕದ ಮಿಶ್ರ ತಳಿಯ ನಾಯಿ ಗೂಗೂ, ಯೂಸುಫ್ ಸರಾಯ್ನ ಚೋಂಕಿ ಎಂದೂ ಕರೆಯಲ್ಪಡುವ ರಾಂಬಾಬು, ಸರೋಜಿನಿ ನಗರದ ಮೋತಿ, ನೋಯ್ಡಾದ ಮಹಾಕುಟ್ಟೇಶ್ವರ ಮತ್ತು ರೋಹಿಣಿಯ ಕುಟ್ಟಾ ಸಿಂಗ್ ಸೇರಿದ್ದರು.
ಈ ಸ್ಪರ್ಧೆಯ ಕಲ್ಪನೆಗೆ ಅಲಾಸ್ಕಾದ ಪ್ರಸಿದ್ಧ 'ಫ್ಯಾಟ್ ಬೇರ್ ವೀಕ್' ಕೂಡ ಸ್ಫೂರ್ತಿಯಾಗಿದೆ. ಚಳಿಗಾಲಕ್ಕೆ ಸಿದ್ಧವಾಗುವ ಕಂದು ಕರಡಿಗಳ ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ಆಚರಿಸುವ ಈ ಕಾರ್ಯಕ್ರಮಕ್ಕೆ ನಗರ ಪ್ರದೇಶದ ನಾಯಿಗಳ ಸ್ಪರ್ಧೆಗಳು ಹೊಸ ರೂಪ ನೀಡಿವೆ.
ನಾಯಿಗಳ ಮೇಲಿನ ಪ್ರೀತಿಯೇ ಸ್ಪರ್ಧೆಯ ಉದ್ದೇಶ
ಈ ಸ್ಪರ್ಧೆ ಕೇವಲ ಯಾವ ನಾಯಿ ಹೆಚ್ಚು ದಪ್ಪವಾಗಿದೆ ಎಂದು ನಿರ್ಧರಿಸುವುದಕ್ಕೆ ಸೀಮಿತವಾಗಿಲ್ಲ. ನಾಯಿಗಳ ಮೇಲಿನ ಪ್ರೀತಿಯ ಮೂಲಕ ಜನರನ್ನು ಒಗ್ಗೂಡಿಸುವುದು ಮತ್ತು ಪ್ರಾಣಿ ಕಲ್ಯಾಣದ ಬಗ್ಗೆ ಗಮನ ಸೆಳೆಯುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಒಟ್ಟಿನಲ್ಲಿ, 64 ನಾಯಿಗಳೊಂದಿಗೆ ಆರಂಭವಾದ ಬೆಂಗಳೂರಿನ ಈ ವಿಶಿಷ್ಟ ಸ್ಪರ್ಧೆ ಈಗ ಅಂತಿಮ ಘಟ್ಟ ತಲುಪಿದೆ. ಇನ್ನೇನು ಇಬ್ಬರು ಸ್ಪರ್ಧಿಗಳಲ್ಲಿ ಯಾವ ನಾಯಿ ನಗರದ 'ಅತ್ಯಂತ ಚೊಂಕಿ ನಾಯಿ' ಎಂಬ ಪಟ್ಟ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.