
ಬೆಂಗಳೂರು (ಜೂ. 29) ಬೆಂಗಳೂರಲ್ಲಿ ಬಾಡಿಗೆ ಮನೆ ಪಡೆಯುವುದಕ್ಕಿಂತ ಮಹೀಂದ್ರ ಥಾರ್ ಕಾರು ಖರೀದಿಸಿ ಅದರಲ್ಲೇ ಜೀವನ ಸಾಗಿಸಬಹುದು ಎಂದು ಕೆನಡಾ ಪ್ರಜೆ ಹೇಳಿದ ಘಟನೆ ಇದೀಗ ಭಾರಿ ವೈರಲ್ ಆಗಿದೆ. ಕಾರಣ ಮಿಜೋರಾಂನಲ್ಲಿ ಕೆಲಸ ಮಾಡುತ್ತಿರುವ ಈತ ಇದೀಗ ಬೆಂಗಳೂರಿಗೆ ಸ್ಥಳಾಂತರಗೊಳ್ಳುತ್ತಿದ್ದಾನೆ. ಹೀಗಾಗಿ ಬೆಂಗಳೂರಿಗೆ ಬಂದು ಮನೆ ಹುಡುಕಾಟ ಶುರು ಮಾಡಿದ್ದಾನೆ. ಆದರೆ ಬೆಂಗಳೂರಿನಲ್ಲಿ ಬಾಡಿಗೆ ಮನೆಯ ಬಾಡಿಗೆ ಹಾಗೂ ಅಡ್ವಾನ್ಸ್ ನೋಡಿ ದಂಗಾಗಿದ್ದಾನೆ. ಇಷ್ಟೊಂದು ಹಣ ನೀಡಿ ಬಾಡಿಗೆ ಮನೆಗಿಂತ ಹೊಸ ಮಹೀಂದ್ರ ಥಾರು ಕಾರು ಖರೀದಿಸಬಹುದು ಎಂದು ಪ್ರತಿಕ್ರಿಯಿಸಿದ್ದಾನೆ.
ಅಚ್ಚರಿಗೊಂಡ ಕೆನಡಾ ಪ್ರಜೆ
ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕುವುದು, ಮನೆ ಬಾಡಿಗೆ ಪಡೆಯುವುದು ಸುಲಭದ ಮಾತಲ್ಲ ಅನ್ನೋದು ಪದೇ ಪದೇ ಸಾಬೀತಾಗುತ್ತಿದೆ. ಬೆಂಗಳೂರಿನ ಬಾಡಿಗೆ, ಅಡ್ವಾನ್ಸ್ ನೋಡಿದ ಹಲವರು ಜಾಗ ಖಾಲಿ ಮಾಡಿದ್ದಾರೆ. ಇನ್ನು ಹಲವರು ಲಕ್ಷ ಲಕ್ಷ ರೂಪಾಯಿ ಸಂಬಳ ಸಾಲುತ್ತಿಲ್ಲ ಎಂದು ಹೇಳುತ್ತಿರುವ ಘಟನೆಗಳು ನಡೆದಿದೆ. ಇದೀಗ ಕೆನಡಾ ಪ್ರಜೆ ಈಗಾಗಲೇ ಮಿಜೋರಾಂನ ಐಜ್ವಾಲ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ಈತ ಇದೀಗ ಬೆಂಗಳೂರಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಆದರೆ ಈತನಿಗೆ ಇನ್ನುಳಿದ ಎಲ್ಲಾ ಕೆಲಸ ಮುಗಿದಿದೆ. ಆದರೆ ಬೆಂಗಳೂರಿನಲ್ಲಿ ಮನೆ ಮಾತ್ರ ಸಿಕ್ಕಿಲ್ಲ. ಮನೆ ಹಡುಕಾಟದಲ್ಲಿ ನೋಡಿದ ಬಾಡಿಗೆ ಹಾಗೂ ಅಡ್ವಾನ್ಸ್ ಈತನಿಗೆ ಹಲವು ಶಾಕ್ ನೀಡಿದೆ.
19 ಲಕ್ಷ ರೂ ಅಡ್ವಾನ್ಸ್, 1.75 ಲಕ್ಷ ರೂ ಬಾಡಿಗೆ
ಬಾಡಿಗೆ ಮನೆ ಹುಡುಕಾಟದ ಅನುಭ ಹಂಚಿಕೊಂಡಿರುವ ಕೆನಡಾ ಪ್ರಜೆ ಸೆಲೆಬ್ ಫ್ರೈಸೆನ್ ಬೆಂಗಳೂರಲ್ಲಿ ಮನೆ ಮಾಲೀಕರು ಏನು ಬಯಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾನೆ. ಈತ ಎಕ್ಸ್ ಮೂಲಕ ಬೆಂಗಳೂರಿನ ಬಾಡಿಗೆ ಕತೆ ಬಿಚ್ಚಿಟ್ಟಿದ್ದಾನೆ. ಆನ್‌ಲೈನ್ ಮೂಲಕ ಮನೆ ಬಾಡಿಗೆ ಹುಡುಕುತ್ತಿರುವ ಈತನಿಗೆ ಮನೆಯೊಂದು ಕಣ್ಣಿಗೆ ಬಿದ್ದಿದೆ. ಆದರೆ ಇದರ ಅಡ್ವಾನ್ಸ್ ಬರೋಬ್ಬರಿ 19 ಲಕ್ಷ ರೂಪಾಯಿ. ಇನ್ನು ತಿಂಗಳ ಬಾಡಿಗೆ 1.75 ಲಕ್ಷ ರೂಪಾಯಿ. ಈ ಮನೆ ಮಾಲೀಕರು ಏನು ಮಾಡುತ್ತಿದ್ದಾರೆ, ಏನು ಬಯಸುತ್ತಿದ್ದಾರೆ. ಈ ಅಡ್ವಾನ್ಸ್ ಬೆಲೆಯಲ್ಲಿ ನಾನು ಮಹೀಂದ್ರ ಥಾರ್ ಕಾರು ಖರೀದಿಸಬಹುದು ಎಂದು ಈ ಕೆನಾಡ ಪ್ರಜೆ ಹೇಳಿದ್ದಾನೆ.
ಮನೆ ಬಾಡಿಗೆಗೆ ಇದ್ದರೆ ತಿಳಿಸಿ
ಇದೇ ವೇಳೆ ಬೆಂಗಳೂರಿಗರಲ್ಲಿ ಈತ ಮನವಿ ಮಾಡಿದ್ದಾನೆ. ಇಂದಿರಾನಗರದ ಸುತ್ತ ಮುತ್ತ ಯಾವುದಾದರು ಬಾಡಿಗೆ ಮನೆ ಇದೆಯಾ 2 ರಿಂದ 3 ತಿಂಗಳ ಅಡ್ವಾನ್ಸ್ ಹಾಗೂ 80 ರಿಂದ 1 ಲಕ್ಷ ರೂಪಾಯಿ ತಿಂಗಳ ಬಾಡಿಗೆ ಇರುವಂತ ಮನೆ ಇದ್ದರೆ ತಿಳಿಸಿ ಎಂದು ಮನವಿ ಮಾಡಿದ್ದಾನೆ.
ಹಲವರು ಈ ಕೆನಡಾ ಪ್ರಜೆ ತಮ್ಮ ಜೊತೆ ಉಳಿದುಕೊಳ್ಳುವಂತೆ ಸೂಚಿಸಿದ್ದಾರೆ. ಯಾವುದೇ ಬಾಡಿಗೆ ಬೇಡ ಎಂದಿದ್ದಾರೆ. ಆದರೆ ಈ ಸೆಲೆಬ್ ಪತ್ನಿ, ಮಕ್ಕಳು, ಮನೆಗೆಲಸದವರು ಜೊತೆ ಬೆಂಗಳೂರಿಗೆ ಸ್ಥಳಾಂತರಗೊಳ್ಳುತ್ತಿದ್ದಾನೆ ಎಂದು ಸ್ಪಪ್ಟಪಡಿಸಿದ್ದಾರೆ.ಇತ್ತ ಹಲವರು ಈ ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮನೆ ಮಾಲೀಕರು ತಮಗೆ ಇಷ್ಟಬಂದ ರೀತಿಯಲ್ಲಿ ಬಾಡಿಗೆ,ಅಡ್ವಾನ್ಸ್ ಹೇಳುತ್ತಾರೆ. ಇಲ್ಲಿ ಹಲವರು ನಿಯಮ ಪಾಲಿಸುತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.