
ಬೆಂಗಳೂರು (ಸೆ. 26): ಸಾಮಾನ್ಯವಾಗಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿ ವಾಹನಗಳು ನಿಲ್ಲುವುದು ಸಹಜ. ಆದರೆ, ರೈಲು ಬರುವ ವೇಳೆ ಗೇಟ್ ಹಾಕಲು ಬಿಡದೇ ವಾಹನ ಸವಾರರು ಹಳಿ ಮೇಲೆಯೇ ವಾಹನ ಚಲಾಯಿಸಿ, ಸ್ವತಃ ರೈಲನ್ನೇ 15 ನಿಮಿಷಗಳ ಕಾಲ ಹಳಿಯಲ್ಲಿ ನಿಲ್ಲಿಸಿದ ವಿಚಿತ್ರ ಹಾಗೂ ಆಘಾತಕಾರಿ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಉತ್ತರ ಭಾರತದ ಬಿಹಾರ ಮುಂತಾದ ರಾಜ್ಯಗಳಲ್ಲಿ ಕಂಡುಬರುತ್ತಿದ್ದ ಇಂತಹ ಬೇಜವಾಬ್ದಾರಿ ದೃಶ್ಯಗಳು ಈಗ ಸಿಲಿಕಾನ್ ಸಿಟಿ ಬೆಂಗಳೂರಿನ ಚಿಕ್ಕಬಾಣಾವರ ಬಳಿಯ ರೈಲ್ವೇ ಗೇಟ್‌ನಲ್ಲಿಯೂ ಬೆಳಕಿಗೆ ಬಂದಿವೆ.
ಬೆಂಗಳೂರಿನ ಚಿಕ್ಕಬಾಣಾವರ ಬಳಿ ರೈಲು ಬರುವ ಸಮಯವಾಗಿದ್ದರಿಂದ ರೈಲ್ವೇ ಸಿಬ್ಬಂದಿ ಗೇಟ್ ಹಾಕಲು ಮುಂದಾಗಿದ್ದಾರೆ. ಆದರೆ, ತುರ್ತಾಗಿ ಸಾಗುವ ಭರದಲ್ಲಿದ್ದ ಬೈಕ್ ಹಾಗೂ ಕಾರು ಸವಾರರು ಗೇಟ್ ಹಾಕಲು ಬಿಡದೇ ರೈಲು ಹಳಿಯ ಮೇಲೆಯೇ ತಮ್ಮ ವಾಹನಗಳನ್ನು ಸಾಲಾಗಿ ಚಲಾಯಿಸಲು ಶುರು ಮಾಡಿದ್ದಾರೆ.
ಅಷ್ಟರಲ್ಲಿ ಎದುರಿನಿಂದ ಬರುತ್ತಿದ್ದ ರೈಲಿನ ಲೋಕೋಪೈಲಟ್, ಹಳಿಯ ಮೇಲೆ ಸಿಲುಕಿಕೊಂಡಿದ್ದ ಸಾಲು ಸಾಲು ವಾಹನಗಳನ್ನು ಕಂಡು ತಕ್ಷಣ ಜಾಗರೂಕರಾಗಿ ರೈಲನ್ನು ಹಳಿಯ ಮೇಲೆಯೇ ನಿಲ್ಲಿಸಿದ್ದಾರೆ. ಬಳಿಕ ಹಳಿಯ ಮೇಲಿದ್ದ ವಾಹನ ಸವಾರರಿಗೆ "ದಯವಿಟ್ಟು ಜಾಗ ಬಿಡಿ (ಸೈಡ್ ಕೊಡಿ)" ಎಂದು ಸತತವಾಗಿ ರೈಲಿನ ಹಾರ್ನ್ ಬಾರಿಸಿ ಮನವಿ ಮಾಡಿದ್ದಾರೆ.
ಆದರೂ ವಾಹನಗಳ ದಟ್ಟಣೆ ಹೆಚ್ಚಿದ್ದರಿಂದ ಹಳಿಯನ್ನು ತೆರವುಗೊಳಿಸಲು ಸವಾರರು ಪರದಾಡಿದ್ದಾರೆ. ಪರಿಣಾಮವಾಗಿ ಲೋಕೋಪೈಲಟ್ ಸುಮಾರು 15 ನಿಮಿಷಗಳ ಕಾಲ ರೈಲನ್ನು ನಿಂತಲ್ಲೇ ನಿಲ್ಲಿಸಬೇಕಾಯಿತು. ಕೊನೆಗೆ ವಾಹನಗಳು ತೆರವುಗೊಂಡ ಬಳಿಕ ರೈಲು ಮುಂದೆ ಸಾಗಿದೆ. ರೈಲ್ವೇ ಗೇಟ್ ಬಿದ್ದಾಗ ನಿಯಮ ಮೀರಿ ಚಲಿಸುವುದು ಎಷ್ಟು ಅಪಾಯಕಾರಿ ಎಂಬುದನ್ನು ಮರೆತು ಸವಾರರು ನಡೆಸಿದ ಈ ಬೇಜವಾಬ್ದಾರಿ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಲೋಕೋಪೈಲಟ್ ಸಮಯಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.